ತುಂಗಭದ್ರಾ ಡ್ಯಾಂನಲ್ಲಿ ನೀರಿನ ಕೊರತೆ; ರೈತರಿಗೆ ಆತಂಕ ಬೇಡ

ಕೊಪ್ಪಳ, ಆಗಸ್ಟ್ 17: ಈ ಬಾರಿ ನೈಋತ್ಯ ಮುಂಗಾರು ಕೈಕೊಟ್ಟಿದೆ. ರಾಜ್ಯದ ಜಲಾಶಯಗಳಲ್ಲಿ ನೀರಿನ ಕೊರತೆ ಉಂಟಾಗಿದೆ. ಇದು ಕೃಷಿ ಚಟುವಟಿಕೆಗಳ ಮೇಲೆ ಸಹ ಪರಿಣಾಮ ಬೀರಿದೆ. ತುಂಗಭದ್ರಾ ಯೋಜನೆ ನೀರಾವರಿ ಸಲಹಾ ಸಮಿತಿ ಸಭೆ ಬುಧವಾರ ನಡೆದಿದೆ.

ಮುನಿರಾಬಾದ್ ಕಾಡಾ ಕಚೇರಿಯ ಸಭಾಂಗಣದಲ್ಲಿ ನೀರಾವರಿ ಸಲಹಾ ಸಮಿತಿಯ ಅಧ್ಯಕ್ಷರು ಆಗಿರುವ ಹಿಂದುಳಿದ ವರ್ಗಗಳ ಕಲ್ಯಾಣ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವ ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಅವರ ಅಧ್ಯಕ್ಷತೆಯಲ್ಲಿ ತುಂಗಭದ್ರಾ ಯೋಜನೆ ಮತ್ತು ವಿಜಯನಗರ ಕಾಲುವೆಗಳ 119ನೇ ನೀರಾವರಿ ಸಲಹಾ ಸಮಿತಿ ಸಭೆ ನಡೆಯಿತು.

Tungabhadra Dam Water To Be Released For Agriculture Till November 30

ಈ ಸಭೆಗೂ ಮೊದಲು ಸಚಿವರು ನೀರಾವರಿ ಸಲಹಾ ಸಮಿತಿ ಸಭೆಯ ಸದಸ್ಯರ ಸಮ್ಮುಖದಲ್ಲಿ ಕೊಪ್ಪಳ, ಬಳ್ಳಾರಿ, ರಾಯಚೂರು, ಬಳ್ಳಾರಿ, ವಿಜಯನಗರ ಜಿಲ್ಲೆಗಳ ರೈತ ಮುಖಂಡರೊಂದಿಗೆ ಸಭೆ ನಡೆಸಿ ಅವರ ಸಲಹೆ ಪಡೆದುಕೊಂಡರು. ತುಂಗಭದ್ರಾ ಜಲಾಶಯದ ನೀರಿನ ಮಟ್ಟ, ಮುಂಗಾರು ಹಂಗಾಮಿಗೆ ನೀರು ಬಿಡುವ ಕಾಲಾವಧಿ, ಬೆಳೆಗಳು ಹಾಗೂ ಕ್ಷೇತ್ರಗಳ ವಿವರಗಳ ಕುರಿತು ಸಭೆಯಲ್ಲಿ ಚರ್ಚೆ ನಡೆಯಿತು.

ಸಭೆಯಲ್ಲಿ ಮಾತನಾಡಿದ ರೈತ ಮುಖಂಡರು. ಜನರಿಗೆ ಆಹಾರ ಪೂರೈಕೆಗೆ ಕೃಷಿಯೇ ಮೂಲಧಾರವಾಗಿದೆ. ಇದನ್ನು ಗಮನದಲ್ಲಿರಿಸಿ ಈ ಭಾಗದ ರೈತರ ಹಿತರಕ್ಷಣೆ ಕಾಪಾಡಬೇಕು. ತುಂಗಭದ್ರಾ ನದಿಯ ನೀರನ್ನೇ ನಂಬಿ ಬದುಕು ಸಾಗಿಸುವ ಈ ಭಾಗದ ರೈತರಿಗೆ ಅನ್ಯಾಯವಾಗದ ಹಾಗೆ ಕೊನೆಯ ಅಂಚಿನ ಪ್ರದೇಶದವರೆಗೆ ಜಲಾಶಯದಿಂದ ನೀರು ಸಮರ್ಪಕ ಪೂರೈಕೆಯಾಗಬೇಕು. ಕಾಲುವೆಗಳಿಂದ ಅಕ್ರಮವಾಗಿ ನೀರು ಎತ್ತುವವರ ಮೇಲೆ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.

ನೀರಿನ ಸಂಗ್ರಹದಲ್ಲಿ ಏರುಪೇರು; ಸಭೆಯಲ್ಲಿ ಮಾತನಾಡಿದ ಶಿವರಾಜ ತಂಗಡಗಿ, "ಕಳೆದ 10 ವರ್ಷಗಳಲ್ಲಿ ಜಲಾಶಯದಲ್ಲಿನ ನೀರಿನ ಸಂಗ್ರಹಣೆ ಪ್ರಮಾಣದಲ್ಲಿ ಏರುಪೇರಾಗಿದೆ. ಆಗಸ್ಟ್ ಮಾಹೆವರೆಗೆ ನೀರಿನ ಸಂಗ್ರಹಣೆಯು 2014ರಲ್ಲಿ 100.85 ಟಿಎಂಸಿನಷ್ಟು ಇತ್ತು. 2022ರಲ್ಲಿ 104.222 ಟಿಎಂಸಿ ದಾಖಲಾಗಿತ್ತು. ಇದೀಗ 2023ರ ಆಗಸ್ಟ್ 16ರವರೆಗೆ ಕೇವಲ 88.25 ಟಿಎಂಸಿ ನೀರು ಮಾತ್ರ ಸಂಗ್ರಹಣೆಯಾಗಿದೆ" ಎಂದರು.

"2023-24ನೇ ಸಾಲಿನಲ್ಲಿ ರಾಯ ಮತ್ತು ಬಸವಣ್ಣ ಕಾಲುವೆಗಳಿಗೆ 2023ರ ಜೂನ್ 1ರಿಂದಲೇ ನೀರು ಹರಿಸಲಾಗುತ್ತಿದೆ. ಮುಂಗಾರು ಹಂಗಾಮಿನ ಮಳೆ ವಿಳಂಬವಾಗಿದ್ದರಿಂದ ಜನಪ್ರತಿನಿಧಿಗಳು ಮತ್ತು ರೈತರ ಬೇಡಿಕೆಯಂತೆ ಆಗಸ್ಟ್ 3ರಿಂದಲೇ ಎಲ್ಲಾ ಕಾಲುವೆಗಳಿಗೆ ನೀರು ಬಿಡಲಾಗಿದೆ. ಮಳೆ ಕೊರತೆಯಿಂದಾಗಿ ಜನ ಜಾನುವಾರುಗಳಿಗೆ ಅನುಕೂಲವಾಗಲು 0.50 ಟಿಎಂಸಿ ನೀರನ್ನು ನದಿಗೆ ಬಿಡಲಾಗಿದೆ. ಸಾರ್ವಜನಿಕರಿಗೆ ಕುಡಿಯುವ ನೀರು ಸರಬರಾಜು ಮಾಡಲು ಬಳ್ಳಾರಿ ಜಿಲ್ಲೆಗೆ 0.018 ಟಿಎಂಸಿ, ರಾಯಚೂರು ಜಿಲ್ಲೆಗೆ 1.801 ಟಿಎಂಸಿ ನೀರು ಬಿಡಲಾಗಿದೆ" ಎಂದು ಹೇಳಿದರು.

ತುಂಗಭದ್ರಾ ಜಲಾಯಶಯದಿಂದ ಲಭ್ಯವಾಗುವ ನೀರಿನ ಪ್ರಮಾಣ ಆಧರಿಸಿ ಕಾಲುವೆಗಳಿಗೆ ನೀರು ಹರಿಸಲಾಗುತ್ತದೆ. ಯಾವುದೇ ಭಾಗದ ರೈತರು ಆತಂಕಪಡಬಾರದು. ಕುಡಿಯುವ ನೀರು ಪೂರೈಕೆಗೆ ಯಾವುದೇ ರೀತಿಯ ಕೊರತೆ ಇಲ್ಲ. ಆಯಾ ಭಾಗದ ರೈತರ ಬೇಡಿಕೆಯನುಸಾರ ನೀರು ಸಿಗುವಂತಾಗಬೇಕು. ಮುಂಗಾರು ಹಂಗಾಮಿಗೆ ವಿವಿಧ ಕಾಲುವೆಯಡಿ ಬರುವ ನೀರಾವರಿ ಕ್ಷೇತ್ರಕ್ಕೆ ಬೆಳೆಯಬಹುದಾದ ಬೆಳೆಗಳನ್ನು, ಈಗಾಗಲೇ ಹರಿಬಿಡಲಾದ ಪ್ರಮಾಣಕ್ಕೆ ಅನುಗುಣವಾಗಿಯೇ ನೀರಾವರಿ ವೇಳಾಪಟ್ಟಿ ಸಿದ್ಧವಾಗಬೇಕು ಎಂದು ಸಭೆಯಲ್ಲಿ ಸಲಹೆ ನೀಡಲಾಯಿತು.

1962-1963ನೇ ಸಾಲಿನಿಂದ 2022-23ನೇ ಸಾಲಿನವರೆಗೆ 60 ವರ್ಷಗಳಲ್ಲಿ ಜಲಾಶಯಕ್ಕೆ ವಾರ್ಷಿಕವಾಗಿ ಹರಿದು ಬಂದ ನೀರಿನ ಪ್ರಮಾಣ ಶೇ.75ರ ಅವಲಂಬನೆ ಆಧಾರದ ಮೇಲೆ ಪರಿಗಣಿಸಿ 2023-24ನೇ ಸಾಲಿನಲ್ಲಿ 175.00 ಟಿಎಂಸಿ ನೀರು ಲಭ್ಯವಾಗಬಹುದೆಂದು ಅಂದಾಜಿಸಲಾಗಿದೆ. 175.00 ಟಿಎಂಸಿ ಎದುರಾಗಿ ಕರ್ನಾಟಕಕ್ಕೆ 114.732 ಟಿಎಂಸಿ ಹಾಗೂ ಆಂಧ್ರಪ್ರದೇಶಕ್ಕೆ 54.894 ಟಿಎಂಸಿ ಮತ್ತು ತೆಲಂಗಾಣಕ್ಕೆ 5.374 ಟಿಎಂಸಿ ಲಭ್ಯವಾಗಬಹುದೆಂದು ಲೆಕ್ಕಾಚಾರ ಮಾಡಲಾಗಿದೆ ಎಂದು ಸಭೆಯಲ್ಲಿ ಚರ್ಚೆ ನಡೆಯಿತು.

ಸದ್ಯ ಆಗಸ್ಟ್ 16 ಕೊನೆಗೊಂಡಂತೆ ತುಂಗಭದ್ರಾ ಜಲಾಯಶಯದಲ್ಲಿ ನೀರಿನ ಮಟ್ಟ 1628.42 ಅಡಿಯಿದೆ. 88.25 ಟಿಎಂಸಿಯಷ್ಟು ನೀರಿದೆ. ಒಳ ಹರಿವಿನ ಪ್ರಮಾಣ 5,160 ಕ್ಯೂಸೆಕ್ ಮತ್ತು ಹೊರ ಹರಿವಿನ ಪ್ರಮಾಣ 9797 ಕ್ಯೂಸೆಕ್ ಇದೆ ಎಂದು ಕರ್ನಾಟಕ ರಾಜ್ಯ ನೀರಾವರಿ ನಿಗಮ ನಿಯಮಿತದ ತುಂಗಭದ್ರಾ ಯೋಜನಾ ವೃತ್ತ ಮುನಿರಾಬಾದ್‌ನ ಅಧೀಕ್ಷಕ ಅಭಿಯಂತರ ಮತ್ತು ನೀರಾವರಿ ಸಲಹಾ ಸಮಿತಿಯ ಸದಸ್ಯ ಕಾರ್ಯದರ್ಶಿಯಾದ ಎಲ್. ಬಸವರಾಜ ಹೇಳಿದರು.

ಸಭೆಯಲ್ಲಿ ಅಂತಿಮವಾಗಿ ನವೆಂಬರ್ 30ರವರೆಗೆ ತುಂಗಭದ್ರಾ ಎಡದಂಡೆ ಮುಖ್ಯ ಕಾಲುವೆ, ಬಲದಂಡೆ ಮೇಲ್ಮಟ್ಟದ ಕಾಲುವೆ, ಬಲದಂಡೆ ಕೆಳಮಟ್ಟದ ಕಾಲುವೆ, ರಾಯ ಬಸವಣ್ಣ ಕಾಲುವೆ, ಎಡದಂಡೆ ಮೇಲ್ಮಟ್ಟದ ಕಾಲುವೆಗಳಿಗೆ ನೀರಲು ಹರಿಸಲು ನಿರ್ಣಯ ಕೈಗೊಳ್ಳಲಾಯಿತು.

ಆಗಸ್ಟ್ 3ರಿಂದ ನವೆಂಬರ್ 30ರವರೆಗೆ ತುಂಗಭದ್ರಾ ಎಡದಂಡೆ ಮುಖ್ಯ ಕಾಲುವೆಗೆ 4100 ಕ್ಯೂಸೆಕ್‌ನಂತೆ, ತುಂಗಭದ್ರಾ ಬಲದಂಡೆ ಮೇಲ್ಮಟ್ಟದ ಕಾಲುವೆಗೆ 1300 ಕ್ಯುಸೆಕ್‌ನಂತೆ, ತುಂಗಭದ್ರಾ ಬಲದಂಡೆ ಕೆಳಮಟ್ಟದ ಕಾಲುವೆಗೆ 850 ಕ್ಯೂಸೆಕ್‌ನಂತೆ, ತುಂಗಭದ್ರಾ ಎಡದಂಡೆ ಮೇಲ್ಮಟ್ಟದ ಕಾಲುವೆಗೆ 25 ಕ್ಯೂಸೆಕ್‌ನಂತೆ ಅಥವಾ ಈ ಕಾಲುವೆಗಳಡಿ ನೀರಿನ ಲಭ್ಯತೆಯು ಇರುವವರೆಗೆ ಮಾತ್ರ ಇದರಲ್ಲಿ ಯಾವುದು ಮೊದಲು ಅದು ಅನ್ವಯಿಸುತ್ತದೆ.

ಸಚಿವರು ಮಾತನಾಡಿ, "ತುಂಗಭದ್ರಾ ಜಲಾಶಯವು ಈ ಭಾಗದ ರೈತರಿಗೆ ಜೀವನದಿಯಾಗಿದೆ. ಸದ್ಯ ಜಲಾಶಯದಲ್ಲಿ 88.25 ಟಿಎಂಸಿ ನೀರು ಲಭ್ಯವಿದೆ. ನೀರಿನ ಲಭ್ಯತೆ ಆಧರಿಸಿ ಆಯಾ ಕಾಲುವೆಗೆ ನೀರು ಹರಿಸಲು ಸಭೆಯಲ್ಲಿ ನಿರ್ಧರಿಸಲಾಗಿದೆ. ಎರಡನೇ ಬೆಳೆಗು ಸಹ ನೀರು ಬಿಡುವ ಬಗ್ಗೆ ಯೋಜಿಸಬೇಕಿದೆ. ಈ ಭಾಗದ ಸಚಿವರು, ಸಂಸದರು, ಶಾಸಕರು ಸೇರಿ ಬೆಂಗಳೂರಿನಲ್ಲಿ ನೀರಾವರಿ ಸಚಿವರೊಂದಿಗೆ ಸಭೆ ನಿಗದಿಪಡಿಸಿ, ರೈತ ಮುಖಂಡರು ನೀಡಿದ ಸಲಹೆಗಳ ಬಗ್ಗೆ ವಿಸ್ತೃತವಾಗಿ ಚರ್ಚೆ ನಡೆಸೋಣ" ಎಂದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+