ಅಡಿಕೆಯಲ್ಲಿ ಕೊಳೆ ರೋಗ ಹತೋಟಿಗೆ ರೈತರಿಗೆ ಸಲಹೆಗಳು
ಶಿವಮೊಗ್ಗ, ಆಗಸ್ಟ್ 11 : ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಭಾರಿ ಮಳೆಯಾಗುತ್ತಿದೆ. ಅಡಿಕೆ ಬೆಳೆಯುವ ರೈತರು ಗಾಳಿಯಿಂದ ಮರಗಳನ್ನು ಕಳೆದುಕೊಳ್ಳುತ್ತಿದ್ದಾರೆ. ಮತ್ತೊಂದು ಕಡೆ ಮಳೆಗಾಲದಲ್ಲಿ ಕೊಳೆ ರೋಗ ಅಡಿಕೆ ಮರಗಳನ್ನು ಕಾಡುತ್ತದೆ.
ಕೃಷಿ ಇಲಾಖೆ ಅಡಿಕೆ ಮರಗಳಲ್ಲಿ ಕೊಳೆ ರೋಗ ಹತೋಟಿಗೆ ರೈತರಿಗೆ ಹಲವು ಸಲಹೆಗಳನ್ನು ನೀಡಿದೆ.
ಪ್ರಸ್ತುತ ಹೆಚ್ಚು ಮಳೆ, ಮೋಡಕವಿದ ಮಾತಾವರಣದಿಂದಾಗಿ ತೋಟದಲ್ಲಿ ನೀರು ನಿಲ್ಲುತ್ತಿದೆ. ಹೆಚ್ಚಾದ ಮಣ್ಣಿನ ತೇವಾಂಶ, ಸೂರ್ಯನ ಬೆಳಕಿನ ಕೊರತೆಯಿಂದ ಕೊಳೆ ರೋಗವು ಹೆಚ್ಚಾಗುವ ಸಾಧ್ಯತೆ ಇದೆ.
ಕೊಳೆ ರೋಗವನ್ನು ಹತೋಟಿಗೆ ತರಲು ರೈತರು ಕೆಲವು ಮುಂಜಾಗ್ರತ ಕ್ರಮಗಳನ್ನು ಅನುಸರಿಸಬೇಕು ಎಂದು ಶಿವಮೊಗ್ಗದ ನವಿಲೆ ಅಡಿಕೆ ಸಂಶೋಧನಾ ಕೇಂದ್ರದ ಮುಖ್ಯಸ್ಥ ಡಾ. ನಾಗರಾಜಪ್ಪ ಅವರು ಮಾಹಿತಿ ನೀಡಿದ್ದಾರೆ.

ಕೆಳಗೆ ಬಿದ್ದಿರುವ ರೋಗ ಪೀಡಿತ ಕಾಯಿ ಹಾಗೂ ಒಣಗಿದ ಹಿಂಗಾರಗಳನ್ನು ಆರಿಸಿ ತೆಗೆದು ಸುಡಬೇಕು. ತೋಟಗಳಲ್ಲಿ ಹೆಚ್ಚಾಗಿ ನೀರು ನಿಲ್ಲದಂತೆ ಬಸಿಗಾಲುವೆ ಚೊಕ್ಕ ಮಾಡಿ ನೀರು ಹರಿದು ಹೋಗಲು ವ್ಯವಸ್ಥೆ ಮಾಡಬೇಕು ಎಂದು ಸಲಹೆ ನೀಡಿದ್ದಾರೆ.
ಗಾಳಿ ಆಡುವಂತೆ ಮಾಡಲು ಅಂತರ ಬೆಳೆಗಳ ಅಥವಾ ಕಾಡು ಮರಗಳ ಹೆಚ್ಚುವರಿ ರೆಂಬೆಗಳನ್ನು ಕತ್ತರಿಸಿ ತೆಗೆಯಬೇಕು. ಮುಂಜಾಗ್ರತವಾಗಿ ಶೇ.1ರ ಬೋರ್ಡೋದ್ರಾವಣ ಅಥವಾ ಶೇ.0.2 ರ ಮೆಟಲಾಕ್ಸಿಲ್ ಎಂ.ಜಡ್ (2 ಗ್ರಾಂ 1 ಲೀ ನೀರಿನಲ್ಲಿ ಕರಗಿಸಿ) ಅಥವಾ ಶೇ. 0.3 ರ ತಾಮ್ರದ ಆಕ್ಸಿಕ್ಲೋರೈಡ್ (3 ಗ್ರಾಂ 1.0 ಲೀ ನೀರಿನಲ್ಲಿ ಕರಗಿಸಿ) ದಿಂದ ಗೊನೆಗಳಿಗೆ ಹಾಗೂ ಎಲೆ ತೊಟ್ಟು, ಹೊಡೆ ಭಾಗ ಮತ್ತು ಸುಳಿಭಾಗಗಳು ಚೆನ್ನಾಗಿ ನೆನೆಯುವಂತೆ ಸೂಕ್ತ ಅಂಟಿನೊಂದಿಗೆ (ರಾಳ) ಸಿಂಪರಣೆ ಮಾಡಬೇಕು ಎಂದು ಹೇಳಿದ್ದಾರೆ.
ಈ ಮೇಲಿನ ಕ್ರಮಗಳನ್ನು ಸಾಮೂಹಿಕವಾಗಿ ಏಕಕಾಲದಲ್ಲಿ ಅನುಸರಿಸಿದಲ್ಲಿ ಮರಗಳನ್ನು ಸುಳಿಕೊಳೆ ಅಥವಾ ಶಿರಕೊಳೆಯಿಂದ ಸಾಯುವುದನ್ನು ತಪ್ಪಿಸಬಹುದಾಗಿದೆ ಎಂದು ತಿಳಿಸಿದ್ದಾರೆ.












Click it and Unblock the Notifications