ಮಾವಿನ ತೋಟದ ನಿರ್ವಹಣೆ; ರೈತರಿಗೆ ಸಲಹೆಗಳು
ಬೆಂಗಳೂರು, ಜೂನ್ 26 : ಮಾವಿನ ಬೆಳೆಯ ಕಟಾವು ಮುಗಿಯುತ್ತಾ ಬಂದಿದೆ. ರೈತರು ಮುಂದಿನ ವರ್ಷದ ಬೆಳೆಗೆ ಈಗಿನಿಂದಲೇ ಸಿದ್ಧತೆ ಮಾಡಿಕೊಳ್ಳಬೇಕು. ಮಾವಿನ ತೋಟದ ನಿರ್ವಹಣೆಗಾಗಿ ತೋಟಗಾರಿಕಾ ಇಲಾಖೆ ರೈತರಿಗೆ ಹಲವು ಸಲಹೆಗಳನ್ನು ನೀಡಿದೆ.
Recommended Video
ಮಾವಿನ ತೋಟದಲ್ಲಿನ ಕಸ ಕಡ್ಡಿ ತೆಗೆದು ಹಾಕಿ ಚೆನ್ನಾಗಿ ಮಡಿ ಮಾಡಬೇಕು. ನಂತರ ಕಟಾವು ಮಾಡಿ ಉಳಿದ ಒಣಕಡ್ಡಿಗಳನ್ನು ಕತ್ತರಿಸಿ ತೆಗೆದು ಹಾಕಬೇಕು. ಇದರ ಜೊತೆಗೆ ಒಣಗಿದ ರೋಗ ಅಂಟಿದ ರೆಂಬೆ ಕೊಂಬೆಗಳನ್ನು ಕತ್ತರಿಸಿ ತೆಗೆದು ಹಾಕಬೇಕು ಎಂದು ರೈತರಿಗೆ ನಿರ್ದೇಶನ ನೀಡಲಾಗಿದೆ.
ಅತಿ ಒತ್ತಾಗಿ ಬೆಳೆದ ರೆಂಬೆಗಳನ್ನು, ಮಧ್ಯದಲ್ಲಿ ಬೆಳೆದ ಕೊಂಬೆಗಳನ್ನು ಬೆಳಕು/ ಗಾಳಿಗೆ ಅಡ್ಡ ಬರುವ ಕೊಂಬೆಗಳನ್ನು ಗರಗಸದಿಂದ ತೆಗೆದು ಹಾಕಬೇಕು. ನೆಲದಿಂದ 3 ಅಡಿ ಎತ್ತರದವರೆಗೂ ಯಾವುದೇ ರೆಂಬೆಗಳು ಇರದಂತೆ ಎಚ್ಚರ ವಹಿಸಬೇಕು.
ಮರದ ಮಧ್ಯದಭಾಗದ ರೆಂಬೆಯನ್ನು ತೆಗೆದು ಉಳಿದೆಲ್ಲಾ ಕೊಂಬೆಗಳಿಗೆ ಸೂರ್ಯನ ಕಿರಣಗಳು/ ಬೆಳಕು ಮತ್ತು ಗಾಳಿ ಆಡುವಂತೆ ಮಾಡಿದಲ್ಲಿ ಆಹಾರ ಉತ್ಪಾದನೆ ಹೆಚ್ಚಾಗಿ ಹಣ್ಣಿನ ಉತ್ಪಾದಕತೆ ಹೆಚ್ಚುತ್ತದೆ ಎಂದು ಇಲಾಖೆಯ ಅಧಿಕಾರಿಗಳು ಹೇಳಿದ್ದಾರೆ.

ಹೊಸ ಚಿಗುರುಗಳು
ಹೊಸ ಚಿಗುರುಗಳನ್ನು 15ಸೆಂ. ಮೀ. ಹಿಂಭಾಗ ಮತ್ತು ಬಲಿತ ಭಾಗದವರೆಗೂ ಕತ್ತರಿಸುವುದರಿಂದ ಹೂ ಕಚ್ಚಲು ಹಾಗೂ ಮರದ ಎತ್ತರವನ್ನು ನಿಯಂತ್ರಿಸಲು ಸಹಕಾರಿಯಾಗುತ್ತದೆ. ಕತ್ತರಿಸುವಾಗ ರೆಂಬೆಯ ಬುಡದ ಪ್ರದೇಶವನ್ನು ಕನಿಷ್ಟ 1 ಅಂಗುಲ ಬಿಟ್ಟು ಕತ್ತರಿಸಬೇಕು. ಇದರಿಂದಾಗಿ ಗಾಯ ಬೇಗ ಮಾಗಿ ಕ್ರಿಮಿ ಕೀಟಗಳು ಪ್ರವೇಶಿಸಿ ರೋಗ ಉಂಟಾಗುವುದನ್ನು ತಡೆಗಟ್ಟುತ್ತದೆ.

ಉತ್ತಮ ಫಸಲು ಪಡೆಯಲು ಸಲಹೆ
ಯಾವಾಗಲೂ ರೆಂಬೆಗಳು ಮೇಲ್ಮುಖವಾಗಿ ಕಪ್‌ನ ಆಕಾರದಲ್ಲಿ ಇರುವಂತೆ ನೋಡಿಕೊಳ್ಳಬೇಕು. ಗಿಡಗಳನ್ನು ಶೇ.25 ಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಕತ್ತರಿಸಬಾರದು. ಇದರಿಂದಾಗಿ ಮುಂದೆ ಬರುವ ಹೊಸ ಚಿಗುರಿಗೆ 5 ರಿಂದ 6 ತಿಂಗಳಲ್ಲಿ ಹೂ ಕಚ್ಚಿ ಉತ್ತಮ ಗುಣಮಟ್ಟದ ಫಸಲು ಪಡೆಯಲು ಸಾಧ್ಯ.

ಶಿಲೀಂಧ್ರನಾಶಕ ಲೇಪನ
ಪ್ರತಿ ಲೀಟರ್ ನೀರಿಗೆ 50-100 ಗ್ರಾಂ. ಸಿ.ಓ.ಸಿ. ಪುಡಿ ಬೆರೆಸಿ ಸ್ವಲ್ಪ ಗಟ್ಟೆ ಮುಲಾಮು ತಯಾರಿಸಿ ಬಟ್ಟೆ ಅಥವಾ ಬ್ರಶ್‌ನಿಂದ ಗಿಡಗಳಿಗೆ ಲೇಪಿಸಬೇಕು. ನಂತರ ಗೊಬ್ಬರ, ಕೊಟ್ಟಿಗೆ ಗೊಬ್ಬರ, ಎರೆಹುಳ ಗೊಬ್ಬರ ನೀಡಿ, ನೀರು ಹರಿಸಬೇಕು. ಮಳೆಗಾಲದಲ್ಲಿ ಸಾವಯವ ಗೊಬ್ಬರ ಕೊಡುವುದು ಸೂಕ್ತ.

ವೈಜ್ಞಾನಿಕ ನಿರ್ವಹಣೆ
ಸೆಪ್ಟೆಂಬರ್ ತಿಂಗಳಲ್ಲಿ ಶಿಫಾರಸು ಮಾಡಿದ ರಾಸಾಯನಿಕ ಗೊಬ್ಬರ ಹಾಗೂ ಜಿಂಕ್, ಬೋರಾನ್ ಮಿಶ್ರಣ ನೀಡಿ ನೀರು ಹರಿಸಬೇಕು. ನವೆಂಬರ್ ತಿಂಗಳಿನಿಂದ ನೀರು ಹರಿಸುವುದನ್ನು ನಿಲ್ಲಿಸಬೇಕು. ಮತ್ತೆ ಕಡಲೆ ಕಾಳಿನ ಗಾತ್ರದ ಕಾಯಿಗಳಾದಾಗ ನಿಯಮಿತವಾಗಿ ನೀರು ಹರಿಸಬೇಕು. ವೈಜ್ಞಾನಿಕವಾಗಿ ಗಿಡಗಳನ್ನು ನಿರ್ವಹಣೆ ಮಾಡಿದಲ್ಲಿ ಉತ್ತಮ ಗುಣಮಟ್ಟದ ಇಳುವರಿ ಪಡೆಯಬಹುದು.












Click it and Unblock the Notifications