ರೈತ ನಾಯಕರು ಮತ್ತು ಸಾಮೂಹಿಕ ನಾಯಕತ್ವದ ಅನಿವಾರ್ಯತೆ
ಇಸವಿ 2015, ಅದೊಂದು ದಿನ ಖ್ಯಾತ ಕೃಷಿ ಮತ್ತು ಆಹಾರ ನೀತಿಗಳ ತಜ್ಞ ಡಾ.ದೇವಿಂದರ್ ಶರ್ಮಾ ಕರೆ ಮಾಡಿ ದೇಶದ ರೈತ ಸಂಘಗಳನ್ನೆಲ್ಲಾ ಒಂದು ವೇದಿಕೆಯಡಿ ತರಬೇಕು. ಕರ್ನಾಟಕ ಮತ್ತು ದಕ್ಷಿಣದ ಇತರೆ ರಾಜ್ಯಗಳಲ್ಲಿ ರೈತ ಸಂಘಟನೆಗಳನ್ನು ಸಂಪರ್ಕಿಸಿ ಈ ಕೆಲಸಕ್ಕೆ ಚಾಲನೆ ಕೊಡುವ ಕೆಲಸ ನೀ ವಹಿಸಿಕೊಳ್ಳಬೇಕೆಂದರು.
ಇದು ಕೊಂಚ ಪ್ರಯಾಸದ ಕೆಲಸವೆಂದು ನನಗೆ ಗೊತ್ತಿದ್ದರೂ ಆಗಲಿ ಪ್ರಯತ್ನ ಮಾಡುವೆ ಎಂದೆ. ಅಂತೆಯೇ ಎಲ್ಲ ಸಂಘಟನೆಗಳು, ವಿವಿಧ ಬಣಗಳನ್ನು ಸಂಪರ್ಕಿಸಿದೆ. ನಾನು ಸಂಪರ್ಕಿಸಿದ ಬಹುತೇಕ ಸಂಘಟನೆಗಳು ಒಂದು ವೇದಿಕೆಯಡಿ ಬರಲು ಸಮ್ಮತಿ ಸೂಚಿಸಿದವು. ಕರ್ನಾಟಕದಿಂದ ಕೋಡಿಹಳ್ಳಿ ಚಂದ್ರಶೇಖರ್, ಪಚ್ಚೆ ನಂಜುಂಡಸ್ವಾಮಿ, ಕುರುಬೂರು ಶಾಂತಕುಮಾರ್, ತೊಗರಿ ಬೆಳೆಗಾರರ ಸಂಘದ ಬಸವರಾಜ್ ಇಂಗಿನ್, ತಮಿಳುನಾಡಿನ ನಲ್ಲಗೌಂಡರ್, ಆಂಧ್ರಪ್ರದೇಶದ ಪ್ರಭಾಕರ್ ರೆಡ್ಡಿ, ಕೇರಳದ ಬೆನ್ನಿ ಆಂಟೊನಿ ಹೀಗೆ ಅನೇಕರು ಈ ಕೆಲಸಕ್ಕೆ ಜೊತೆಯಾದರು.

ಕಿಸಾನ್ ಏಕ್ತಾ ಹೆಸರಿನ ಒಂದು ವೇದಿಕೆ
ಆ ಬಗ್ಗೆ ದೇವಿಂದರ್ ಅವರಿಗೆ ಮಾಹಿತಿ ಮುಟ್ಟಿಸಿದೆ. ಅವರು "ಕಿಸಾನ್ ಏಕ್ತಾ" ಹೆಸರಿನ ಒಂದು ವೇದಿಕೆ ಆರಂಭಿಸಿ ರೈತ ಮುಖಂಡರ ಮೂರು ದಿನಗಳ ಸಮಾವೇಶವೊಂದನ್ನು ಚಂಡೀಘಡದಲ್ಲಿ ಆಯೋಜಿಸಿದರು. ನಾವೆಲ್ಲಾ ಹೋದೆವು. ಮಧ್ಯ ಭಾರತ ಮತ್ತು ಉತ್ತರ ಭಾರತದ ಸುಮಾರು 60 ಕ್ಕೂ ಹೆಚ್ಚು ರೈತ ಸಂಘಟನೆಗಳು ಆ ಸಭೆಯಲ್ಲಿ ಭಾಗಿಯಾದವು. ಸಭೆಯಲ್ಲಿ ಕೃಷಿ ಬಿಕ್ಕಟ್ಟುಗಳ ಬಗ್ಗೆ ಮಾತನಾಡಿದುದಲ್ಲದೆ ಸಂಘಟಿತ ಹೋರಾಟದ ಅನಿವಾರ್ಯತೆಯ ಬಗ್ಗೆ ಅರ್ಥ ಮಾಡಿಕೊಳ್ಳುವ ಪ್ರಯತ್ನ ನಡೆಯಿತು. ಎರಡನೆಯ ಸಮಾವೇಶ ಬೆಂಗಳೂರಿನಲ್ಲಿ ಆಯೋಜನೆಯಾಯಿತು. ಮೂರನೆಯದು ಶಿಮ್ಲಾದಲ್ಲಿ. ನಂತರದ ದಿನಗಳಲ್ಲ್ ಈ ಒಕ್ಕೂಟ ನಿಗಧಿತ ವೇಳಾಪಟ್ಟಿಯೊಂದಿಗೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ವಿಫಲವಾಯಿತು.

ರೈತ ಚಳುವಳಿಗಳನ್ನು ಸೇರಿಸುವ ಕೆಲಸ
ಈಗ ನಾನು ಹೇಳಬೇಕಾಗಿರುವುದಿಷ್ಟೇ. ಹಿಂದೆ ಪ್ರೊ.ಎಂಡಿಎನ್ ಸಂಘಟಿತ ಹೋರಾಟದ ಬಗ್ಗೆ ಸ್ಪಷ್ಟ ಕಲ್ಪನೆ ಇಟ್ಟುಕೊಂಡಿದ್ದರು. ಹಾಗಾಗಿಯೇ ಇಂಡಿಯನ್ ಕೋಆರ್ಡಿನೇಶನ್ ಕಮಿಟಿ ಫಾರ್ ಫಾರ್ಮರ್ಸ್ (ICC) ಎಂಬ ವೇದಿಕೆ ಮಾಡಿದ್ದರು. ಅದರಲ್ಲಿ ಭಾರತದ ಎಲ್ಲಾ ಪ್ರಮುಖ ರೈತ ಸಂಘಗಳು ಸದಸ್ಯತ್ವ ಪಡೆದಿದ್ದವು. ಈಗಲೂ ಆ ವೇದಿಕೆ ಇದೆ. ಅದೇ ರೀತಿ ದಕ್ಷಿಣ ಭಾರತದ ರೈತ ಸಂಘಟನೆಗಳ ಒಕ್ಕೂಟವನ್ನೂ ಮಾಡಿದ್ದರು. ಅದೂ ಕೂಡಾ ಈಗಲೂ ಇದೆ. ಇನ್ನೂ ಮುಂದುವರೆದು ಜಾಗತಿಕ ಮಟ್ಟದಲ್ಲಿ 'ಲಾ ವಯಾಕ್ಯಾಂಪೆಸಿನಾ' ಹೆಸರಿನ ವೇದಿಕೆಯೊಂದರಡಿ ಜಗತ್ತಿನ ಎಲ್ಲಾ ರೈತ ಚಳುವಳಿಗಳನ್ನು ಸೇರಿಸುವ ಕೆಲಸ ಮಾಡಿದ್ದರು. ಈ ವೇದಿಕೆಯೂ ಕೂಡಾ ಕಾರ್ಯನಿರತವಾಗಿದೆ. ಇವಿಷ್ಟೂ ವೇದಿಕೆಗಳಲ್ಲಿ ನಾನೂ ಕೂಡಾ ಕೆಲಕಾಲ ಕೆಲಸ ಮಾಡಿದೆ.

ಒಬ್ಬ ನಾಯಕ ಕರೆದರೆ ಮತ್ತೊಬ್ಬನಿಗೆ ಸಮಸ್ಯೆ
ಈ ಬರಹದ ಆರಂಭದಲ್ಲಿ 2015 ರಲ್ಲಿ ದೇವಿಂದರ್ ಶರ್ಮಾ ಪ್ರಸ್ತಾಪಿಸಿದ "ಕಿಸಾನ್ ಏಕ್ತಾ" ವೇದಿಕೆಯ ಬಗ್ಗೆ ಮತ್ತೊಮ್ಮೆ ನಿಮ್ಮ ಗಮನ ಸೆಳೆಯಬೇಕಿದೆ. ದೇವಿಂದರ್ ಶರ್ಮಾರಿಗೆ ಇಪ್ಪತ್ತು ವರ್ಷಗಳ ಹಿಂದೆ (1995) ಎಂಡಿಎನ್ ಈ ಬಗ್ಗೆ ಹೇಳಿದ್ದರಂತೆ. ಅದಕ್ಕೆ ಎಂಡಿಎನ್ ಕೊಟ್ಟ ಲಾಜಿಕ್ ಕೂಡಾ ಸ್ಪಷ್ಟವಾಗಿದೆ. ನೋಡಿ ಶರ್ಮಾ ನೀವು ಯಾವುದೇ ಸಂಘಟನೆಯ ಭಾಗವಲ್ಲ. ರೈತ ಸಮುದಾಯದ ಬಿಕ್ಕಟ್ಟುಗಳ ಬಗ್ಗೆ ಸ್ಪಷ್ಟ ನೋಟ ಇಟ್ಟುಕೊಂಡಿದ್ದೀರಿ. ನಿಮ್ಮಂಥವರು ಎಲ್ಲಾ ಸಂಘಟನೆಗಳನ್ನು ಸೇರಿಸುವ ಕೆಲಸ ಮಾಡೋದು ಸರಿಯಾದ ಕ್ರಮ. ಇಲ್ಲವೇ ಒಂದು ಸಂಘಟನೆ ಅಥವಾ ಒಬ್ಬ ನಾಯಕ ಕರೆದರೆ ಮತ್ತೊಬ್ಬನಿಗೆ ಸಮಸ್ಯೆ ಬರಬಹುದು. ಇಂದಲ್ಲಾ ನಾಳೆ ಈ ಕೆಲಸ ಆಗಲೇ ಬೇಕು ಯೋಚಿಸಿ ಎಂದು ಹೇಳಿದ್ದರಂತೆ. ಆ ಬಗ್ಗೆ ಚಂಡೀಘಡದಲ್ಲಿ ದೇವಿಂದರ್ ನಮಗೆ ಹೇಳಿದ್ದರು.

ರೈತ ಚಳುವಳಿಗೆ ತಾಲೀಮಿನಂತೆ ನನಗೆ ಗೋಚರ
ಹೀಗೆ ರೈತ ಸಂಘಟನೆಗಳನ್ನು ಒಂದು ವೇದಿಕೆಯಡಿ ತರುವುದು ಮತ್ತು ಸಂಘಟಿತ ಹೋರಾಟಕ್ಕೆ ಚಾಲನೆ ನೀಡುವುದು ಕಾಲಾನು ಕಾಲದಿಂದ ನಡೆದುಕೊಂಡು ಬರುತ್ತಲೇ ಇದೆ. ಆ ಕೆಲಸವನ್ನು ಆಗುಮಾಡಲು ಕೆಲವು ಅಭಿವೃದ್ಧಿ ಸಂಸ್ಥೆಗಳೂ ನೆರವಾಗಿವೆ. ಇಷ್ಟೆಲ್ಲಾ ಹಿನ್ನೆಲೆಯಿರುವ ರೈತ ಸಂಘಟನೆಗಳ ಒಕ್ಕೂಟ ತನ್ನಾಳದ ನೋವನ್ನೆಲ್ಲಾ ಒಂದೇ ಉಸಿರಿಗೆ ಬಸಿದಂತೆ ಇದೀಗ 'ಸಂಯುಕ್ತ ಕಿಸಾನ್ ಮೋರ್ಚಾ' ಜನ್ಮ ಪಡೆದದ್ದು. ಇದರ ಹಿಂದಿರುವ ಎಲ್ಲಾ ಮಹನೀಯರು ಹಿಂದೆ ಸಂಘಟಿಸಿದ್ದ ಎಲ್ಲಾ ವೇದಿಕೆಗಳ ಭಾಗವಾಗಿಯೇ ಇದ್ದವರು. ಈಗ ಹೊಸ ಹುರುಪಿನಲ್ಲಿ -ದೃಡ ನಿಲುವಿನಲ್ಲಿ ಚಳವಳಿಯಲ್ಲಿ ತೊಡಗಿದ್ದಾರೆ. ಕಳೆದ ಮೂರು ದಶಕಗಳ, ಅಂದರೆ 1995 ರಿಂದ ಈಚೆಗೆ ದೇಶದಲ್ಲಾದ ಎಲ್ಲಾ ರೈತ ಚಳವಳಿ ಮಾದರಿಗಳಾದ ಜಾಥಾಗಳು, ಸಮಾವೇಶಗಳು, ಸತ್ಯಾಗ್ರಹಗಳನ್ನು ನೆನಪಿಸಿಕೊಂಡರೆ ಈಗ ದಿಲ್ಲಿಯಲ್ಲಿ ನಡೆಯುತ್ತಿರುವ ರೈತ ಚಳುವಳಿಗೆ ಅವೆಲ್ಲಾ ತಾಲೀಮಿನಂತೆ ನನಗೆ ಗೋಚರವಾಗುತ್ತಿದೆ.

common enemy ಯನ್ನು ಎದುರಿಸಲು ಒಗ್ಗೂಡು
ಇನ್ನೊಂದು ವಿಷಯ, ಕರ್ನಾಟಕ ರಾಜ್ಯದಲ್ಲಿಯೂ ಇತರೆ ರಾಜ್ಯಗಳಂತೆ, ವಿಶೇಷವಾಗಿ ಪಂಜಾಬ್, ಹರಿಯಾಣ ರಾಜ್ಯಗಳಂತೆ ರೈತ ಸಂಘ ಚದುರಿ ಹೋಗಿದೆ. ಹಲವು ಬಣಗಳು ಹುಟ್ಟಿಕೊಂಡಿವೆ. ಇದಕ್ಕೆ ಕಾರಣಗಳನ್ನು ಹುಡುಕುತ್ತಾ ಹೋದರೆ ಘಾಸಿಗೆ ಒಳಗಾಗುವವರು ನಾವೇ ಹೊರತು ಚದುರಿ ಹೋಗಿರುವುದಕ್ಕೆ ಕಾರಣರಾದವರು ಆರಾಮವಾಗಿಯೇ ಇರುತ್ತಾರೆ. ಹಾಗಾಗಿ ಸಂಘಟನೆಗಳು ತಾತ್ಕಾಲಿಕವಾಗಿ ಚದುರಿಹೋಗಿವೆ. ಮುಂದೊಂದು ದಿನ common enemy ಯನ್ನು ಎದುರಿಸಲು ಒಗ್ಗೂಡುತ್ತವೆ ಎಂಬ ನಂಬಿಕೆ ಇಟ್ಟುಕೊಳ್ಳೊಣ. ಆ ಬಗ್ಗೆ ಭರವಸೆ ಇಡೋಣ. Let it happen.

ಸಾಮೂಹಿಕ ನಾಯಕತ್ವ ಎಲ್ಲ ಕಡೆ ಬರಲಿ
ಜಾಗತೀಕರಣದ ನಂತರ ದೇಶಾದ್ಯಂತ ವ್ಯಾಪಕವಾದ ರೈತ ಚಳವಳಿಗಳು, ಅಂದರೆ 1995 ರಿಂದ ಈ ದೇಶದಲ್ಲಿ ನಡೆದು ಬಂದ ಬಿಡಿ ಬಿಡಿ ರೈತ ಚಳುವಳಿಗಳ ಒಟ್ಟು ಮೊತ್ತವೇ ಈಗಿನ ದಿಲ್ಲಿ ಚಲೋ ಎಂಬುದು ಸ್ವಯಂ ವೇಧ್ಯ. ಇದನ್ನು ಮಾದರಿಯಾಗಿಟ್ಟುಕೊಂಡು "ಒಗ್ಗಟ್ಟಿನಲ್ಲಿ ಭಲವಿದೆ" ಎಂಬ ಮಾತನ್ನು ಮತ್ತೊಮ್ಮೆ ಅವಲೋಕಿಸಿ ಮುಂದಡಿ ಇಡುವಲ್ಲಿ ರೈತ ನಾಯಕರೆಲ್ಲಾ ಜೊತೆಯಾಗಲಿ ಎಂದು ಆಶಿಸುತ್ತೇನೆ. ಕಡೆಯದಾಗಿ ಆಳಿಗೊಂದು ಮಾತನಾಡುವುದು ಬಿಟ್ಟು ಈಗ ದಿಲ್ಲಿಯಲ್ಲಿ ನಡೆಯುತ್ತಿರುವ ಹಾಗೆ ಸಾಮೂಹಿಕ ನಾಯಕತ್ವ ಎಲ್ಲ ಕಡೆ ಬರಲಿ. ಯಾವುದೇ ಹೇಳಿಕೆಯು ವ್ಯಕ್ತಿಯದ್ದಾಗದೆ ಸಂಘಟನೆಗಳ ಒಟ್ಟು ಧ್ವನಿಯಾಗಿ ಹೊರಹೊಮ್ಮಬೇಕು. ಇದೀಗ ದೊಡ್ಡ ಶತ್ರುಗಳನ್ನು ಎದುರಿಸಬೇಕಿದೆ. ಹಾಗಾಗಿ ವ್ಯಕ್ತಿ ಪ್ರತಿಷ್ಟೆಗಳನ್ನು ಕೈ ಬಿಟ್ಟು ಸಾಮೂಹಿಕ ನಾಯಕತ್ವದ ಕಡೆ ನಡೆದರೆ ಒಳ್ಳೆಯದೆಂಬುದು ನನ್ನ ವಿನಮ್ರ ತಿಳುವಳಿಕೆ.












Click it and Unblock the Notifications