ಕಬ್ಬು ಮಾರಾಟಕ್ಕೆ ರೈತ, ಸಕ್ಕರೆ ಕಾರ್ಖಾನೆ ನಡುವೆ ಒಪ್ಪಂದ ಕಡ್ಡಾಯ
ಕಲಬುರಗಿ, ಅಕ್ಟೋಬರ್ 13; ಕಲಬುರಗಿ ಜಿಲ್ಲೆಯಲ್ಲಿ ಕಬ್ಬು ಬೆಳೆಯುವ ರೈತರು ಅದನ್ನು ಸಕ್ಕರೆ ಕಾರ್ಖಾನೆಗಳಿಗೆ ಮಾರಾಟ ಮಾಡಲು ದ್ವಿಪಕ್ಷೀಯ ಒಪ್ಪಂದ ಮಾಡಿಕೊಳ್ಳುವುದು ಕಡ್ಡಾಯವಾಗಿದೆ. ಜಿಲ್ಲಾಧಿಕಾರಿ ಯಶವಂತ ವಿ. ಗುರುಕರ್ ಒಪ್ಪಂದ ಮಾಡಿಕೊಳ್ಳುವಂತೆ ರೈತರಿಗೆ ಮನವಿ ಮಾಡಿದ್ದಾರೆ.
ರೈತರು ಸಕ್ಕರೆ ಕಾರ್ಖಾನೆಗಳೊಂದಿಗೆ ಎಫ್. ಆರ್. ಪಿ. ದರದನ್ವಯ ಮಾರಾಟ ಮಾಡಲು ಮತ್ತು ಸಕ್ಕರೆ ಆಯುಕ್ತರ ಆದೇಶದಂತೆ ಪ್ರತಿ ಕಿ. ಮೀ. ಅನ್ವಯ ಸಾರಿಗೆ ಮತು ಕಟಾವಿನ ವೆಚ್ಚ ಕಡಿತದೊಂದಿಗೆ ಹಣ ಪಾವತಿಸುವ ಷರತ್ತಿಗೊಳಪಟ್ಟು ದ್ವಿಪಕ್ಷೀಯ ಒಪ್ಪಂದ ಮಾಡಿಕೊಳ್ಳಬೇಕು.
ಸಕ್ಕರೆ ಕಾರ್ಖಾನೆ ಮತ್ತು ರೈತರೊಂದಿಗೆ ಜಿಲ್ಲಾಧಿಕಾರಿಗಳು ಸಭೆ ನಡೆಸಿದರು. ಕಬ್ಬು ನಿಯಂತ್ರಣ ಆದೇಶ-1966ರ ನಿಯಮ 6ರ ಪ್ರಕಾರ ದ್ವಿಪಕ್ಷೀಯ ಒಪ್ಪಂದ ಕಡ್ಡಾಯವಾಗಿದೆ. ಇದನ್ನು ಕಲಬುರಗಿ ಜಿಲ್ಲೆಯಲ್ಲಿ ಪ್ರಥಮವಾಗಿ ಕಟ್ಟುನಿಟ್ಟಾಗಿ ಅನುಷ್ಠಾನಕ್ಕೆ ತರಲು ರೈತರ ಸಹಮತದೊಂದಿಗೆ ನಿರ್ಧರಿಸಲಾಗಿದೆ. ಒಪ್ಪಂದದ ನಮೂನೆಯನ್ನು ಡಿಸಿ ಕಚೇರಿಯಿಂದಲೆ ತಯಾರಿಸಿ ತಹಶೀಲ್ದಾರ್ ಮೂಲಕ ರೈತರಿಗೆ ಮತ್ತು ಕಾರ್ಖಾನೆಗಳಿಗೆ ನೀಡಲಾಗುವುದು ಎಂದು ಜಿಲ್ಲಾಧಿಕಾರಿಗಳು ಹೇಳಿದರು.
"ಕಬ್ಬು ಬೆಳೆಗಾರರ ಅನೇಕ ಸಮಸ್ಯೆಗಳಿಗೆ ಪರಿಹಾರ ಹುಡುಕಲು ರೈತರು ಮತ್ತು ಸಕ್ಕರೆ ಕಾರ್ಖಾನೆ ನಡುವಿನ ಸಭೆ ಫಲಪ್ರಧವಾಗಿದೆ. ಕಬ್ಬು ಬೆಳೆಗಾರರ ಹಿತದಲ್ಲಿ ಜಿಲ್ಲೆಯ ಮಟ್ಟಿಗೆ ಹಲವು ನಿರ್ಧಾರಗಳನ್ನು ಕೈಗೊಳ್ಳಲಾಗಿದೆ. ಇದರಿಂದ ಕಂಪನಿಗಳಲ್ಲಿ ಲಂಚಾವತಾರಕ್ಕೆ ತಡೆ ಬೀಳಲಿದ್ದು, ಅನ್ನದಾತ ರೈತನಿಗೆ ಕಿರಿಕಿರಿ ತಪ್ಪಲಿದೆ. ಒಪ್ಪಂದದಂತೆ ಕಾಲಮಿತಿಯಲ್ಲಿ ಹಣ ಸಿಗಲಿದೆ" ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.

ಸಿಬ್ಬಂದಿಗಳ ಮೇಲ್ವಿಚಾರಣೆ
ರೈತರು ಬೆಳೆದ ಕಬ್ಬನ್ನು ಸಕಾಲದಲ್ಲಿ ಕಟಾವು ಮಾಡಿಕೊಂಡು ಹೋಗಲು ಆಯಾ ಸಕ್ಕರೆ ಕಾರ್ಖಾನೆಗಳಿಂದ ಪ್ರದೇಶವಾರು ಇಬ್ಬರು ಸಿಬ್ಬಂದಿಗಳು ಮೇಲ್ವಿಚಾರಣೆ ಮಾಡಲಿದ್ದಾರೆ. ಕಬ್ಬು ಕಟಾವು ಮಾಡುವ ಮುನ್ನ ಗ್ರಾಮಸ್ಥರಿಗೆ ಮೊದಲೇ ಮಾಹಿತಿ ನೀಡಲಾಗುತ್ತದೆ. ಈ ನಿಟ್ಟಿನಲ್ಲಿ ಮೊಬೈಲ್ ತಂತ್ರಾಂಶ ಸಹ ಸಿದ್ಧಪಡಿಸಲಾಗುತ್ತಿದೆ.
ಕಬ್ಬು ತೂಕದ ದೂರುಗಳ ನಿವಾರಣೆಗೆ ಕಾನೂನು ಮಾಪನಶಾಸ್ತ್ರ ಇಲಾಖೆಯಿಂದ 2 ತಪಾಸಣಾ ತಂಡಗಳನ್ನು ರಚಿಸಲಾಗಿದೆ. ಅಲ್ಲದೆ ಇದೇ ಇಲಾಖೆಯಡಿ ಕಬ್ಬು ಕಟಾವು ಮತ್ತು ಮಾರಾಟ ಕುರಿತಂತೆ ರೈತರು ದೂರು ಸಲ್ಲಿಸಲು ಸಹಾಯವಾಣಿ ಸ್ಥಾಪಿಸಲಾಗುತ್ತಿದೆ. ರೈತರು ದೂರು ಸಲ್ಲಿಸಿದ 24 ಗಂಟೆಯಲ್ಲಿ ಅಧಿಕಾರಿಗಳ ತಂಡ ಹೊಲಕ್ಕೆ ಭೇಟಿ ನೀಡಲಿದೆ.

ರೈತರಿಗೆ ಶೇ 10-15ರಷ್ಟು ಹೆಚ್ಚಿನ ಲಾಭ
ಪ್ರಸ್ತುತ ಕಬ್ಬನ್ನು ಮಶೀನ್‍ಗಳಿಂದ ಕಟಾವು ಮಾಡಿದಲ್ಲಿ ಸಾರಿಗೆ ಮತ್ತು ಕಟಾವು ವೆಚ್ಚದ ಜೊತೆಗೆ ಹೆಚ್ಚುವರಿಯಾಗಿ ಶೇ 5ರಷ್ಟು ಮೊತ್ತವನ್ನು ಕಾರ್ಖಾನೆಯವರು ರೈತರಿಂದ ಪಡೆಯುತ್ತಿದ್ದಾರೆ. ದ್ವಿಪಕ್ಷೀಯ ಒಪ್ಪಂದಕ್ಕೆ ಸಹಿ ಮಾಡಿದಲ್ಲಿ ರೈತರು ಶೇ 5ರಷ್ಟು ಹೆಚ್ಚುವರಿ ಹಣ ನೀಡಬೇಕಿಲ್ಲ.
ನಿಯಮದಂತೆ ಇದನ್ನು ಸಾರಿಗೆ ಮತ್ತು ಕಟಾವು ವೆಚ್ಚದಲ್ಲಿಯೇ ಸೇರಿಸಲಾಗಿದೆ. ಇದರಿಂದ ರೈತರಿಗೆ ಶೇ10-15ರಷ್ಟು ಹೆಚ್ಚಿನ ಹಣ ಸಿಗಲಿದೆ. ಕಿ. ಮೀ. ಅನ್ವಯ ಸಾರಿಗೆ ವೆಚ್ಚ ನಿಗದಿಪಡಿಸಿದ್ದು, ಇದು ಸಹ ಕಾರ್ಖಾನೆ ಸಮೀಪದ ರೈತರಿಗೆ ಹೆಚ್ಚಿನ ಲಾಭ ದೊರೆಯಲಿದೆ ಎಂದು ಜಿಲ್ಲಾಡಳಿತ ಹೇಳಿದೆ.

ಕಾರ್ಖಾನೆಗಳಲ್ಲಿ ಕುಂದುಕೊರತೆ ಕೋಶ
ಕಲಬುರಗಿ ಜಿಲ್ಲೆಯ ಪ್ರತಿ ಸಕ್ಕರೆ ಕಾರ್ಖಾನೆಯಲ್ಲಿ ರೈತರಿಗೆ ಕಬ್ಬು ಕಟಾವಿನ ವಿವರದ ಜೊತೆಗೆ ಹಣ ಪಾವತಿ ಕುರಿತಂತೆ ಮಾಹಿತಿ ನೀಡಲು ಸಾರ್ವಜನಿಕ ಕುಂದುಕೊರತೆ ಕೋಶ ತೆರೆಯಲು ಕಾರ್ಖಾನೆ ಆಡಳಿತ ಮಂಡಳಿಗೆ ನಿರ್ದೇಶನ ನೀಡಲಾಗಿದೆ.
2021-22ನೇ ಸಾಲಿಗೆ ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ಎನ್. ಎಸ್. ಎಲ್. ಸುಗರ್ ಲಿ. ಕಾರ್ಖಾನೆಯು ಎಫ್. ಆರ್. ಪಿ. ದರ 2,915 ರೂ. ಗಳಂತೆ ರೈತರಿಂದ 8,95,193 ಮೆಟ್ರಿಕ್ ಟನ್ ಕಬ್ಬು ಖರೀದಿಸಿ 26,095 ಲಕ್ಷ ರೂ., ಹವಳಗಾದ ರೇಣುಕಾ ಶುಗರ್ಸ್ ಲಿ. ಕಾರ್ಖಾನೆಯು ಎಫ್. ಆರ್. ಪಿ. ದರ 2,964 ರೂ. ಗಳಂತೆ 13,50,279 ಮೆಟ್ರಿಕ್ ಟನ್ ಕಬ್ಬು ಖರೀದಿಸಿ 41,495.87 ಲಕ್ಷ ರೂ. ಹಾಗೂ ಜೇವರ್ಗಿ ತಾಲೂಕಿನ ಮಳ್ಳಿಯ ಉಗರ್ ಶುಗರ್ಸ್ ಲಿ. ಕಾರ್ಖಾನೆಯು ಎಫ್. ಆರ್. ಪಿ. ದರ 3,109 ರೂ. ಗಳಂತೆ 5,29,217 ಮೆಟ್ರಿಕ್ ಟನ್ ಕಬ್ಬು ಖರೀದಿಸಿ 16,453.37 ಲಕ್ಷ ರೂ. ಹಣ ಪಾವತಿಸಿದೆ.

ರೈತರಿಗೆ ಹಣ ಪಾವತಿಯಾಗಿದೆ
ಯಾದಗಿರಿ ಜಿಲ್ಲೆಯ ಕೋರ್ ಗ್ರೀನ್ ಸಕ್ಕರೆ ಕಾರ್ಖಾನೆಯು ಎಫ್. ಆರ್. ಪಿ. ದರ 2,926 ರೂ. ಗಳಂತೆ ರೈತರಿಂದ 6,44,276 ಮೆಟ್ರಿಕ್ ಟನ್ ಕಬ್ಬು ಖರೀದಿಸಿ 18,851.52 ಲಕ್ಷ ರೂ. ಪಾವತಿಸಿದೆ.
ಒಟ್ಟಿನಲ್ಲಿ ಈ 4 ಕಾರ್ಖಾನೆಯಿಂದ ಕಳೆದ 2021-22ನೇ ಸಾಲಿನಲ್ಲಿ 34,18,965 ಮೆಟ್ರಿಕ್ ಟನ್ ಕಬ್ಬು ಖರೀದಿಸಿ 1028.95 ಕೋಟಿ ರೂ. ಹಣ ರೈತರಿಗೆ ಪಾವತಿಸಿದ್ದು, ಶೇ.100ರಷ್ಟು ಕಬ್ಬು ಹಣ ಪಾವತಿಯಾಗಿದೆ ಎಂದು ಜಿಲ್ಲಾಧಿಕಾರಿ ಯಶವಂತ ವಿ. ಗುರುಕರ್ ಅಂಕಿ-ಸಂಖ್ಯೆಯೊಂದಿಗೆ ಮಾಹಿತಿ ನೀಡಿದರು.











Click it and Unblock the Notifications