ಮಂಡ್ಯದ ಮೈಷುಗರ್ ಕಾರ್ಖಾನೆಯಲ್ಲಿ ಕಬ್ಬು ಅರೆಯುವ ಕಾರ್ಯಕ್ಕೆ ಚಾಲನೆ
ಮಂಡ್ಯ, ಜುಲೈ, 06: ಜಿಲ್ಲೆಯ ಆರ್ಥಿಕ ಜೀವನಾಡಿ ಮೈಷುಗರ್ ಕಾರ್ಖಾನೆಯಲ್ಲಿ ಕಬ್ಬು ನುರಿಸುವ ಕಾರ್ಯ ಗುರುವಾರದಿಂದ ವಿದ್ಯುಕ್ತವಾಗಿ ಆರಂಭಗೊಂಡಿದೆ. ಸಕ್ಕರೆ ಸಚಿವ ಶಿವಾನಂದ ಎಸ್.ಪಾಟೀಲ್ ಅವರು ಕಾರ್ಖಾನೆ ಯಂತ್ರಕ್ಕೆ ಕಬ್ಬು ನೀಡುವುದರೊಂದಿಗೆ ಅರೆಯುವಿಕೆ ಕಾರ್ಯಕ್ಕೆ ಚಾಲನೆ ನೀಡಿದರು.
ನಾಲ್ಕು ವರ್ಷಗಳಿಂದ ಸ್ಥಗಿತಗೊಂಡಿದ್ದ ಮೈಷುಗರ್ ಕಾರ್ಖಾನೆ ಕಳೆದ ವರ್ಷದಿಂದ ಕಬ್ಬು ಅರೆಯುವಿಕೆಯನ್ನು ಆರಂಭಿಸಿದೆ. ನೂತನವಾಗಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ಕಾರ್ಖಾನೆಗೆ 50 ಕೋಟಿ ರೂಪಾಯಿ ನೀಡಿದ್ದರಿಂದ ಶೀಘ್ರಗತಿಯಲ್ಲಿ ಯಂತ್ರೋಪಕರಣಗಳ ದುರಸ್ತಿ ಕಾರ್ಯ ನಡೆಸಿ ಜೂನ್ ಅಂತ್ಯದ ವೇಳೆಗೆ ಕಬ್ಬು ಅರೆಯುವಿಕೆಗೆ ಸಜ್ಜುಗೊಳಿಸಲಾಗಿತ್ತು.

ಸಚಿವ ಶಿವರಾಜ್ ಪಾಟೀಲ್ ಈ ಬಗ್ಗೆ ಮಾತನಾಡಿ, ಮೈಷುಗರ್ ಕಾರ್ಖಾನೆಯಲ್ಲಿ ನಿತ್ಯ 3 ಸಾವಿರ ಟನ್ ಕಬ್ಬು ಅರೆಯುವ ಗುರಿ ಹೊಂದಲಾಗಿದೆ. ಕಾಲಾನುಕ್ರಮದಲ್ಲಿ ಈ ಪ್ರಮಾಣವನ್ನು ಹೆಚ್ಚಿಸುವ ಕೆಲಸವಾಗಲಿದೆ ಎಂದು ವಿಶ್ವಾಸದಿಂದ ಹೇಳಿದರು.
ಜೂನ್ 24ಕ್ಕೆ ಕಾರ್ಖಾನೆ ಆರಂಭವಾಗಬೇಕಿತ್ತು. ಟರ್ಬೈನ್ ಸಮಸ್ಯೆಯಿಂದ ಸ್ವಲ್ಪ ತಡವಾಗಿದೆ. ಇದಕ್ಕಾಗಿ ರೈತರಲ್ಲಿ ಕ್ಷಮೆ ಕೋರುತ್ತೇನೆ. ಈಗ ಕಂಪನಿಯೊಳಗೆ ಕಬ್ಬು ಅರೆಯುವಿಕೆ ಆರಂಭಗೊಂಡಿದ್ದು, ಋತುಮಾನ ಮುಗಿಯುವವರೆಗೂ ನಡೆಯುತ್ತದೆ. ಕಾರ್ಖಾನೆ ನಿಲುಗಡೆಯಾಗುವ ಪ್ರಶ್ನೆಯೇ ಇಲ್ಲ ಎಂದು ತಿಳಿಸಿದರು.
ದಿನಕ್ಕೆ 3 ಸಾವಿರ ಟನ್ ಕಬ್ಬು ಅರೆಯುವ ಕಾರ್ಯ
ದಿನಕ್ಕೆ ಮೂರು ಸಾವಿರ ಟನ್ ಅರೆಯುವ ಕಾರ್ಯ ನಡೆಯಲಿದೆ. ಇವತ್ತು ಮತ್ತು ನಾಳೆ ಎರಡರಿಂದ ಮೂರು ಸಾವಿರ ಟನ್ ಆಗುತ್ತದೆ. ನಂತರದಲ್ಲಿ ಈ ಪ್ರಮಾಣವನ್ನು ಹೆಚ್ಚಿಸಲಾಗುವುದು. ಈ ವರ್ಷ ಕಾರ್ಖಾನೆ ಲಾಭದತ್ತ ಮುನ್ನಡೆಯಲಿದ್ದು, ರೈತರು ಪೂರೈಸುವ ಕಬ್ಬಿಗೆ ಉತ್ತಮ ಬೆಲೆಯನ್ನು ಕೊಡುತ್ತೇವೆ ಎಂದು ಭರವಸೆ ನೀಡಿದರು.
ಕಳೆದ ಬಾರಿ ಕಾರ್ಖಾನೆ ಕಬ್ಬು ಅರೆಯುವಿಕೆಯನ್ನು ಸಮರ್ಪಕವಾಗಿ ನಡೆಸದಿದ್ದರಿಂದ ರಿಕವರಿ ಕಡಿಮೆ ಇತ್ತು. ಈ ವರ್ಷ 3 ಲಕ್ಷ ಟನ್ ಅರೆಯುವ ಗುರಿಯೊಂದಿಗೆ ಮುನ್ನಡೆದಿದ್ದು, ನಿಗದಿತ ಗುರಿ ತಲುಪುವ ಮೂಲಕ ಸಾಧನೆ ಮಾಡುತ್ತೇವೆ. ನಾಲ್ಕು ವರ್ಷಗಳಿಂದ ಸ್ಥಗಿತಗೊಂಡಿದ್ದ ಕಾರ್ಖಾನೆಯನ್ನು ಕಬ್ಬು ಅರೆಯುವ ಸ್ಥಿತಿಗೆ ತಂದಿದ್ದೇವೆ. ಈ ವರ್ಷ ಯಾವುದೇ ಸಮಸ್ಯೆಯಿಲ್ಲದೆ ಸಮರ್ಥವಾಗಿ ಕಾರ್ಖಾನೆ ಮುನ್ನಡೆಯಲಿದೆ. ಹೊಸ ಕಾರ್ಖಾನೆ ಬಗ್ಗೆಯೂ ಮುಂದಿನ ದಿನಗಳಲ್ಲಿ ಕ್ರಮ ವಹಿಸುತ್ತೇವೆ ಎಂದು ಆಶ್ವಾಸನೆ ನೀಡಿದರು.
ಮೈಷುಗರ್ ಕಾರ್ಖಾನೆಯ ಸಾಲ ಬಹಳಷ್ಟು ಬಾಕಿ ಇದೆ. ಕಾರ್ಖಾನೆ ಪ್ರಾರಂಭವಾಗಿ ಸಮರ್ಥವಾಗಿ ನಡೆದು ಗುಣಮಟ್ಟದ ಸಕ್ಕರೆ ಉತ್ಪಾದನೆಯಾದರೆ ಸಮಸ್ಯೆಗಳಿಗೆಲ್ಲಾ ಪರಿಹಾರ ಸಿಗಲಿದೆ ಎಂದು ತಿಳಿಸಿದರು.
ಕಾರ್ಖಾನೆಗೆ ಖರ್ಚಾದ ಹಣ ಎಷ್ಟು?
ನಂತರ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಮಾತನಾಡಿ, ಮೈಷುಗರ್ ಕಾರ್ಖಾನೆ ಖಾಸಗೀಕರಣಕ್ಕೆ ಜನರ ವಿರೋಧ ಇತ್ತು. ನಮ್ಮ ಸರ್ಕಾರ ಮಾತು ಕೊಟ್ಟಂತೆ ಕಾರ್ಖಾನೆಗೆ 50 ಕೋಟಿ ರೂಪಾಯಿ ಕೊಟ್ಟು ಚಾಲನೆ ನೀಡಿದ್ದೇವೆ. ಈ ಸಾಲಿನಲ್ಲಿ ಹೆಚ್ಚು ಕಬ್ಬು ಅರೆಯುವ ಕಾರ್ಯ ನಡೆಯುತ್ತದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಇನ್ನು ಯಾವತ್ತೂ ಈ ಕಾರ್ಖಾನೆ ಮುಚ್ಚುವುದಿಲ್ಲ. ಕಬ್ಬು ಅರೆಯುವಿಕೆ ನಿರಂತರವಾಗಿ ನಡೆಯಲಿದೆ. ಕಾರ್ಖಾನೆಗೆ ಯಾವುದೇ ಸಮಸ್ಯೆ ಆಗದಂತೆ ನೋಡಿಕೊಳ್ಳುವ ಜವಾಬ್ದಾರಿ ತೆಗೆದುಕೊಂಡಿದ್ದೇವೆ. ಆ ಬಗ್ಗೆ ಯಾರಿಗೂ ಆತಂಕ ಬೇಡ. ಹೊಸ ಕಾರ್ಖಾನೆ ಕೂಡ ಶೀಘ್ರದಲ್ಲೇ ಆರಂಭ ಆಗಲಿದೆ ಎಂದು ತಿಳಿಸಿದರು.












Click it and Unblock the Notifications