ಕೊಬ್ಬರಿ ದರ ಅಲ್ಪ ಏರಿಕೆ: ಇತ್ತೀಚಿನ ಮಾರುಕಟ್ಟೆ ದರ ತಿಳಿಯಿರಿ
ಕೊಬ್ಬರಿ ಬೆಲೆ ಕುಸಿತದಿಂದ ಕಂಗಾಲಾಗಿದ್ದ ರೈತನಿಗೆ ಸಣ್ಣ ಭರವಸೆಯೊಂದು ಸಿಕ್ಕಿದೆ. ಕಳೆದ ವಾರ ಪ್ರತಿ ಕ್ವಿಂಟಾಲ್ ಕೊಬ್ಬರಿ ಬೆಲೆ 8000 ರೂಪಾಯಿಗಿಂತ ಕೆಳಗೆ ಕುಸಿದಿದ್ದ ಕೊಬ್ಬರಿ ದರ ಈ ವಾರ ಚೇತರಿಸಿಕೊಂಡಿದ್ದು ಏರಿಕೆಯ ಹಾದಿಗೆ ಮರಳಿದೆ. ಕನಿಷ್ಠ ಒಂದು ಸಾವಿರ ರೂಪಾಯಿ ಏರಿಕೆಯಾಗಿದೆ.
ಏಷ್ಯಾದ ಅತಿ ದೊಡ್ಡ ಕೊಬ್ಬರಿ ಮಾರುಕಟ್ಟೆ ಎನಿಸಿಕೊಂಡಿರು ತಿಪಟೂರು ಕೊಬ್ಬರಿ ಮಾರುಕಟ್ಟೆಯಲ್ಲಿ ಕೊಬ್ಬರಿ ದರ ಪ್ರತಿ ಕ್ವಿಂಟಾಲ್‌ಗೆ 9000 ರೂಪಾಯಿ ತಲುಪಿದೆ. ಕಳೆದ ವರ್ಷ 18,000 ರೂಪಾಯಿ ಇದ್ದ ಕ್ವಿಂಟಾಲ್ ಕೊಬ್ಬರಿ ದರ ಈ ವರ್ಷ ಭಾರಿ ಕುಸಿತ ಕಂಡಿದೆ.

ಕಳೆದ 7 ತಿಂಗಳಿನಿಂದ ಕಡಿಮೆಯಾಗುತ್ತಲೇ ಬಂದಿದ್ದ ಕೊಬ್ಬರಿ ದರ ಸದ್ಯ ಅಲ್ಪ ಚೇತರಿಕೆ ಕಂಡಿದ್ದು ತೆಂಗು ಬೆಳೆಗಾರರಿಗೆ ಭರವಸೆ ಮೂಡಿಸಿದೆ. ಜುಲೈ 12 ರಂದು ತಿಪಟೂರು ಕೊಬ್ಬರಿ ಮಾರುಕಟ್ಟೆಯಲ್ಲಿ ಉತ್ತಮ ದರ್ಜೆ ಕೊಬ್ಬರಿ ದರ ಕ್ವಿಂಟಾಲ್‌ಗೆ ಗರಿಷ್ಠ 9009ವರೆಗೂ ತಲುಪಿದೆ.
ವಿವಿಧ ಮಾರುಕಟ್ಟೆಗಳಲ್ಲಿ ಕೊಬ್ಬರಿ ದರ
ಅರಸೀಕೆರೆ ಕೊಬ್ಬರಿ ಮಾರುಕಟ್ಟೆಯಲ್ಲಿ ಕೂಡ ಕೊಬ್ಬರಿ ಬೆಲೆ ಏರಿಕೆ ಕಂಡಿದೆ. 7800 ರೂಪಾಯಿ ಕನಿಷ್ಠ ದರ ಇದ್ದರೆ, 8908 ಗರಿಷ್ಠ ದರ ಮತ್ತು ಸರಾಸರಿ ದರ 8775 ರೂಪಾಯಿ ಆಗಿದೆ. ಗುಬ್ಬಿಯಲ್ಲಿ ಕೊಬ್ಬರಿ ದರ 8200 ರೂಪಾಯಿ ಆಗಿದೆ. ತುರುವೇಕೆರೆಯಲ್ಲಿ ಕೊಬ್ಬರಿ ಬೆಲೆ 9000 ರೂಪಾಯಿ ತಲುಪಿದೆ.
ಬೆಂಬಲ ಬೆಲೆ ಘೋಷಿಸಿದ ರಾಜ್ಯ ಸರ್ಕಾರ
ರೈತರ ಬೇಡಿಕೆ, ಹಲವು ಶಾಸಕರ ಒತ್ತಾಯದ ಬಳಿಕ ಕರ್ನಾಟಕ ಸರ್ಕಾರ ತೆಂಗು ಬೆಳೆಗಾರರ ನೆರವಿಗೆ ಬಂದಿದೆ. ಜುಲೈ 12ರಿಂದ ಜಾರಿಗೆ ಬರುವಂತೆ 1,250 ರೂಪಾಯಿ ಪ್ರೋತ್ಸಾಹ ಧನ ಘೋಷಿಸಿದೆ. ಕೇಂದ್ರ ಸರ್ಕಾರ ಈಗಾಗಲೇ 11,750 ರೂಪಾಯಿ ಕನಿಷ್ಠ ಬೆಂಬಲ ಬೆಲೆ ಘೋಷಿದೆ, ರಾಜ್ಯ ಸರ್ಕಾರದ ಪ್ರೋತ್ಸಾಹ ಧನ ಘೋಷಣೆ ಬಳಿಕ ಕ್ವಿಂಟಾಲ್ ಕೊಬ್ಬರಿಗೆ ಒಟ್ಟಾರೆ 13,000 ರೂ. ಸಿಗಲಿದೆ.
ವಿಧಾನಸಭೆಯಲ್ಲಿ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ್ ಈ ಬಗ್ಗೆ ಉತ್ತರ ನೀಡಿ ಬೆಂಬಲ ಬೆಲೆ ಬಗ್ಗೆ ಮಾಹಿತಿ ನೀಡಿದ್ದರು. ಉಂಡೆ ಕೊಬ್ಬರಿಗೆ ಕ್ವಿಂಟಾಲ್‌ಗೆ 1,250 ರೂ. ಪ್ರೋತ್ಸಾಹ ಧನ ನೀಡಲಾಗಿದ್ದು, ಕೇಂದ್ರ ಸರ್ಕಾರ ಎಂಎಸ್‌ಪಿಯಡಿ ಕೊಬ್ಬರಿ ಪ್ರಮಾಣ ಹೆಚ್ಚಿಸುವುದರ ಜೊತೆಗೆ, ಖರೀದಿ ಅವಧಿ ವಿಸ್ತರಿಸಲು ಮನವಿ ಮಾಡಲಾಗಿದೆ" ಎಂದು ಹೇಳಿದ್ದರು.
ತೆಂಗಿನ ಕಾಯಿ ಬೆಲೆಯೂ ಕುಸಿತ
ಕೊಬ್ಬರಿ ದರ ಕುಸಿತದ ಪರಿಣಾಮ ತೆಂಗಿನಕಾಯಿ ಬೆಲೆ ಕೂಡ ತೀವ್ರ ಕುಸಿತವಾಗಿದೆ. 12-20 ರೂಪಾಯಿ ಇದ್ದ ತೆಂಗಿನಕಾಯಿ ಬೆಲೆ ಕೆಲವು ಮಾರುಕಟ್ಟೆಗಳಲ್ಲಿ 7-12 ರೂಪಾಯಿಗೆ ಕುಸಿತ ಕಂಡಿದ್ದು, ಬೆಳೆಗಾರರನ್ನು ನಷ್ಟದ ಭೀತಿಗೆ ತಳ್ಳಿದೆ. ಕೊಬ್ಬರಿ ದರ ಕುಸಿತದಿಂದ ತೆಂಗಿನ ಕಾಯಿಗೆ ಕೂಡ ಬೇಡಿಕೆ ಕಡಿಮೆಯಾಗಿದೆ.












Click it and Unblock the Notifications