ತುಮಕೂರು : ಕಟ್ಟಿಗೇನಹಳ್ಳಿಯಲ್ಲಿ ರೈತನ ಅಂತ್ಯಕ್ರಿಯೆ
ತುಮಕೂರು, ಡಿ.22 : ತುಮಕೂರಿನ ಅಜ್ಜಗೊಂಡನಹಳ್ಳಿ ಘನತ್ಯಾಜ್ಯ ವಿಲೇವಾರಿ ಘಟಕ ವಿರೋಧಿ ಹೋರಾಟಗಾರ ಕಟ್ಟಿಗೇನಹಳ್ಳಿ ಶಿವಕುಮಾರ್ ಶವದ ಅಂತ್ಯ ಸಂಸ್ಕಾರವನ್ನು ಭಾನುವಾರ ರಾತ್ರಿ ನಡೆಸಲಾಗಿದೆ. ಗ್ರಾಮಸ್ಥರೊಂದಿಗೆ ನಡೆದ ಸಂಧಾನ ಸಭೆಯಲ್ಲಿ ಅಂತ್ಯಸಂಸ್ಕಾರ ನಡೆಸಲು ಅವಕಾಶ ನೀಡಲಾಗಿದೆ. ಮೃತರ ಅಂತ್ಯ ಸಂಸ್ಕಾರವನ್ನು ಗ್ರಾಮದ ತೋಟದಲ್ಲಿ ನೆರವೇರಿಸಲಾಗಿದೆ.
ಶಿವಕುಮಾರ್ ಶವದ ಅಂತ್ಯ ಸಂಸ್ಕಾರ ಮಾಡಲು ಬಿಡುವುದಿಲ್ಲ, ಡಿಸಿ ಸ್ಥಳಕ್ಕೆ ಬರಬೇಕು, ಅಜ್ಜಗೊಂಡನಹಳ್ಳಿ ಘಟಕ ಸ್ಥಗಿತ ಘೋಷಣೆ ಮಾಡುವ ತನಕ ಮತ್ತು ಮೃತ ಶಿವಕುಮಾರ್ ಕುಟುಂಬದವರಿಗೆ ಪರಿಹಾರ, ಉದ್ಯೋಗ ಭದ್ರತೆ ಒದಗಿಸುವವರೆಗೂ ಅಂತ್ಯ ಸಂಸ್ಕಾರ ಮಾಡಲು ಬಿಡುವುದಿಲ್ಲ ಎಂದು ಗ್ರಾಮಸ್ಥರು ಶನಿವಾರ ರಾತ್ರಿಯಿಂದ ಪಟ್ಟು ಹಿಡಿದು ಕುಳಿತಿದ್ದರು. [ರೈತನ ಬಲಿ ಪಡೆದ ತ್ಯಾಜ್ಯ ಘಟಕ]

ಭಾನುವಾರ ಸಂಜೆ ರೈತ ಸಂಘದ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್, ಎಎಸ್ಪಿ ಲಕ್ಷ್ಮಣ್, ಎಸಿ ಆನಂದ್, ಗ್ರಾಮಸ್ಥರು, ಘಟಕ ವಿರೋಧಿ ಹೋರಾಟಗಾರರ ನಡುವೆ ನಡೆದ ಸಂಧಾನ ಸಭೆಯಲ್ಲಿ ಶಿವಕುಮಾರ್ ಅಂತ್ಯಕ್ರಿಯೆಗೆ ಒಪ್ಪಿಗೆ ನೀಡಲಾಯಿತು. ಪ್ರಕರಣದ ಸಂಪೂರ್ಣ ತನಿಖೆ ನಡೆಸಿ ಮೃತರ ಕುಟುಂಬಕ್ಕೆ ಪರಿಹಾರ ಮತ್ತು ಘಟಕ ಸ್ಥಗಿತ ಕುರಿತು ಭರವಸೆ ದೊರೆತ ನಂತರ ಬಿಗಿ ಭದ್ರತೆಯಲ್ಲಿ ಅಂತ್ಯ ಸಂಸ್ಕಾರ ನಡೆಯಿತು.
ಶನಿವಾರ ಬೆಳಗ್ಗೆಯಿಂದಲೂ ಉದ್ವಿಗ್ನಗೊಂಡಿದ್ದ ಕಟ್ಟಿಗೇನಹಳ್ಳಿ ಗ್ರಾಮದಲ್ಲಿ ಮಧ್ಯಾಹ್ನ ಕಟ್ಟಿಗೇನಹಳ್ಳಿ ಶಿವಕುಮಾರ್ ರೈಲಿಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡ ವಿಷಯ ತಿಳಿದಾಗಿನಿಂದ ಹಿಂಸಾಚಾರ ನಡೆದಿತ್ತು. ಕಸವಿಲೇವಾರಿ ಘಟಕ ತನ್ನ ಜಮೀನಿನ ಪಕ್ಕದಲ್ಲೇ ಸ್ಥಾಪನೆಯಾಗುತ್ತಿದ್ದು, ಇದನ್ನು ತಡೆಯಲಾಗಲಿಲ್ಲ ಎಂದು ಶಿವಕುಮಾರ್ ಆತ್ಮಹತ್ಯೆ ಮಾಡಿಕೊಂಡಿದ್ದರು.
ಡಿಸಿ ಕಚೇರಿ ಮುಂದೆ ಶವದೊಂದಿಗೆ ಪ್ರತಿಭಟನೆ ನಡೆಸುತ್ತಿದ್ದ ಗ್ರಾಮಸ್ಥರನ್ನು ಪೊಲೀಸರು ಒತ್ತಾಯಪೂರ್ವಕವಾಗಿ ಶವದೊಂದಿಗೆ ಗ್ರಾಮಕ್ಕೆ ಕಳುಹಿಸಿಕೊಟ್ಟಿದ್ದರು. ಈ ವೇಳೆ, ಗ್ರಾಮದಲ್ಲಿ ಸೇರಿದ್ದ ಜನ ವ್ಯಾನ್‌ನತ್ತ ಕಲ್ಲು ತೂರಿದರು, ಲಾಠಿ ಪ್ರಹಾರ ನಡೆಯಿತು. ಪೊಲೀಸ್ ವಾಹನಕ್ಕೆ ಗ್ರಾಮಸ್ಥರು ಬೆಂಕಿ ಹಚ್ಚಿದ್ದರು. ಇದರಿಂದ ಗ್ರಾಮದಲ್ಲಿ ಬಿಗುವಿನ ವಾತಾವರಣ ನಿರ್ಮಾಣಗೊಂಡಿತ್ತು.












Click it and Unblock the Notifications