ಒಣಗಿದ ಕಬ್ಬು, ಅಡಿಕೆ, ತೆಂಗಿನ ತೋಟಗಳು: ದಾವಣಗೆರೆ ಜಿಲ್ಲೆ ರೈತರಿಗೆ ತಪ್ಪದ ಸಂಕಷ್ಟ
ದಾವಣಗೆರೆ, ಮೇ, 12: ಜಿಲ್ಲೆಯಲ್ಲಿ ಸಾವಿರಾರು ಹೆಕ್ಟೇರ್‌ನಲ್ಲಿ ಬೆಳೆದಿದ್ದ ಕಬ್ಬು, ಅಡಿಕೆ, ತೆಂಗಿನ ತೋಟಗಳು ನೀರಿಲ್ಲದೆ ಬಿರು ಬೇಸಿಗೆಯಿಂದ ಒಣಗಿವೆ. ಇದರಿಂದ ರೈತರು ತೀವ್ರ ಆರ್ಥಿಕ ಸಂಕಷ್ಟ ಅನುಭವಿಸುತ್ತಿದ್ದಾರೆ. ಜೀವನ ನಡೆಸುವುದು ಬಹಳ ಕಷ್ಟವಾಗಿದೆ. ಸರ್ಕಾರ ಒಣಗಿರುವ ಬೆಳೆ ಸಮೀಕ್ಷೆ ನಡೆಸಿ ಪರಿಹಾರ ನೀಡಬೇಕು ಎಂಬ ಆಗ್ರಹ ಕೇಳಿ ಬರುತ್ತಿದೆ.
ಅವೈಜ್ಞಾನಿಕ ವೇಳಾಪಟ್ಟಿಯಿಂದ ಭದ್ರಾ ನೀರು ಹರಿಯದಿರುವುದು ಒಂದೆಡೆಯಾದರೆ, ಬಿಸಿಲಿನ ತಾಪಮಾನ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಬಿಸಿಲಿನ ಝಳಕ್ಕೆ ತತ್ತರಿಸುತ್ತಿರುವ ರೈತ ಒಣಗಿರುವ ಬೆಳೆ ಕಂಡು ಕಣ್ಣೀರಿಡುತ್ತಿದ್ದಾನೆ.

ಮಳೆ ಬರುತ್ತದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೋಡಿ ನೋಡಿ ಅನ್ನದಾತ ಹೈರಣಾಗಿದ್ದಾನೆ. ಅಂತರ್ಜಲ ಮಟ್ಟ ಸಂಪೂರ್ಣ ಕುಸಿದು ಹೋಗಿದೆ. ಕೊಳವೆ ಬಾವಿಗಳು ನೀರಿಲ್ಲದೆ ಬತ್ತಿ ಹೋಗಿವೆ. ಹೀಗಾಗಿ ಬೆಳೆಗಳಿಗೆ ನೀರುಣಿಸಲು ಸಾಧ್ಯವಾಗಿಲ್ಲ. ಇದರಿಂದ ಬೆಳೆ ಸಂಪೂರ್ಣ ಒಣಗಿ ಸುಟ್ಟಂತೆ ಕಾಣುತ್ತಿದೆ.
ಇತಿಹಾಸದಲ್ಲಿ ಕಂಡರಿಯದ ಭೀಕರ ಬರದಿಂದ ಜನರು ಕಂಗೆಟ್ಟಿದ್ದಾರೆ. ಆದ್ದರಿಂದ ರೈತರ ಇಂತಹ ಹೀನಾಯ ಪರಿಸ್ಥಿತಿಯನ್ನು ಸರ್ಕಾರ ಕಣ್ತೆರೆದು ನೋಡಬೇಕು. ರೈತರ ಜಮೀನುಗಳಿಗೆ ಭೇಟಿ ನೀಡಿ ಒಣಗಿರುವ ಮತ್ತು
ಒಣಗುತ್ತಿರುವ ಬೆಳೆ ಸಮೀಕ್ಷೆ ನಡೆಸಿ ಪರಿಹಾರ ನೀಡಬೇಕು ಎಂಬ ಒತ್ತಾಯವೂ ಕೇಳಿ ಬರುತ್ತಿದೆ.
ಬಿಸಿಲಿನ ಬೇಗೆಗೆ ತತ್ತರಿಸಿರುವ ರೈತರು ಬೇಸಿಗೆಯಲ್ಲಿ ಬೆಳೆ ಉಳಿಸಿಕೊಳ್ಳುವುದು ತುಂಬಾನೇ ಕಷ್ಟವಾಗಿದೆ. ಭದ್ರಾ ನೀರು ಇಲ್ಲದೆ ಬಿಸಿಲಿನ ಝಳದಿಂದ ಒಣಗಿರುವ ಕಬ್ಬು, ಅಡಿಕೆ, ತೆಂಗು, ಬಾಳೆ ಬೆಳೆಗಳ ನಾಶದ ಅಂದಾಜನ್ನು ಅಧಿಕಾರಿಗಳು ರೈತರ ಹೊಲಗಳಿಗೆ ಭೇಟಿ ನೀಡಿ ಸಮೀಕ್ಷೆ ನಡೆಸಬೇಕೆಂದು ರೈತರು ಆಗ್ರಹಿಸಿದ್ದಾರೆ.
ಬೆಳೆ ನಾಶದಿಂದಾಗಿರುವ ನಷ್ಟದ ಅಂದಾಜು ಮಾಡುವ ಸಮೀಕ್ಷೆಯಲ್ಲಿ ರೈತರು ಸಾಲ ಸೋಲ ಮಾಡಿ ಖರೀದಿಸಿ ಬಿತ್ತಿದ ಬೀಜ, ಹಾಕಿದ ಗೊಬ್ಬರ, ಕ್ರಿಮಿನಾಶಕಗಳ ವೆಚ್ಚ ಸೇರಿದಂತೆ ಜಮೀನು ಉಳುಮೆ, ರೈತನ ಕುಟುಂಬದ
ಶ್ರಮ ಮತ್ತು ಕೂಲಿ ವೆಚ್ಚ ಸೇರಿಸಬೇಕು. ಅಂತರ್ಜಲ ಮಟ್ಟ ಕುಸಿದು ಬತ್ತಿರುವ ಕೊಳವೆ ಬಾವಿಗಳ ಸಮೀಕ್ಷೆ ನಡೆಸಿ ಅವುಗಳ ಅಂತರ್ಜಲ ಮಟ್ಟ ಮರುಪೂರಣ ಮಾಡುವ ಮೂಲಕ ಪುನರ್ಜೀವಗೊಳಿಸಬೇಕು.
ದನ, ಕರುಗಳು, ಕುರಿ-ಮೇಕೆಗಳು ಬಿಸಿಲಿನ ಝಳದಿಂದ ನರಳುತ್ತಿವೆ. ಇವು ಮೇವಿಲ್ಲದೆ, ಕುಡಿಯಲು ನೀರಿಲ್ಲದೆ ಬಡಕಲಾಗಿವೆ. ಈಗಾಗಲೇ ಕೆಲವು ಜಾನುವಾರುಗಳು ಸತ್ತಿವೆ. ಕೆಲವನ್ನು ರೈತರು ಸಾಕಾಲಾಗದೆ ಕೈಗೆ ಸಿಕ್ಕ ದರಕ್ಕೆ ಮಾರಾಟ ಮಾಡಿದ್ದಾರೆ. ಈ ಎಲ್ಲಾ ಅಂಶಗಳನ್ನು ಪರಿಗಣಿಸಿ ನಷ್ಟದ ಸಮೀಕ್ಷೆ ನಡೆಸಿ, ಸೂಕ್ತ ಪರಿಹಾರ ನೀಡಬೇಕೆಂದು ಒತ್ತಾಯಿಸಿದರು.
ಎಲ್ಲಾ ನಷ್ಟದ ಸಮೀಕ್ಷೆ ನಡೆಸಲು ಕೃಷಿ, ತೋಟಗಾರಿಕೆ, ಪಶುಸಂಗೋಪನೆ, ಕರ್ನಾಟಕ ನೀರಾವರಿ ನಿಗಮ ನಿಯಮಿತ, ಗ್ರಾಮೀಣ ಕುಡಿಯುವ ನೀರು ಸರಬರಾಜು ಮತ್ತು ನೈರ್ಮಲ್ಯ ಇಲಾಖೆ, ಸಣ್ಣ ನೀರಾವರಿ ಮತ್ತು
ಅಂತರ್ಜಲ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳ ಸಭೆಯನ್ನು ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯವರು ಜಂಟಿ ಜವಾಬ್ದಾರಿಯಿಂದ ಕರೆದು, ಪ್ರತಿ ಗ್ರಾಮ ಪಂಚಾಯಿತಿಗೆ ಒಂದರಂತೆ ಅಧಿಕಾರಿಗಳ ಸಮಿತಿ ರಚಿಸಬೇಕು.
ದಿನದಿಂದ ದಿನಕ್ಕೆ ಬಿಸಿಲಿನ ತೀವ್ರತೆ ಹೆಚ್ಚುತ್ತಿದೆ. ಚುನಾವಣೆ ಮುಗಿಸಿ ರಿಲ್ಯಾಕ್ಸ್ ಮೂಡಿನಲ್ಲಿರುವ ರಾಜ್ಯ ಸರ್ಕಾರ ಮತ್ತು ಜಿಲ್ಲಾಡಳಿತ ಸಮರೋಪಾದಿಯಲ್ಲಿ ಕಾರ್ಯಾರೂಪಕ್ಕೆ ಕ್ರಮ ವಹಿಸಬೇಕು ಎಂದು ಆಗ್ರಹಿಸಿದರು.
ಜನ ಜಾನುವಾರುಗಳು ಬಿಸಿಗಾಳಿಯಿಂದ ಬಳಲಿ ಬೆಂಡಾಗಿ ಹೋಗಿದ್ದು, ರೈತರದ್ದು ಕಾದ ಹೆಂಚಿನ ಮೇಲೆ ಬದುಕು ಎಂಬಂತಾಗಿದೆ. ಆದರೆ, ರಾಜ್ಯ ಸರ್ಕಾರದ ಅಧಿಕಾರಿಗಳು ಸದಾ ಫ್ಯಾನ್ ಮತ್ತು ಹವಾನಿಯಂತ್ರಿತದ ತಣ್ಣನೆ ಗಾಳಿ ಸೇವನೆ ಮಾಡುತ್ತಾ ಬಸವ ಜಯಂತಿ, 2ನೇ ಶನಿವಾರ, ಭಾನುವಾರವೆಂದು ರಜೆಯ ಮೂಡ್‌ನಲ್ಲಿ ತಮ್ಮ ಕುಟುಂಬಸ್ಥರೊಂದಿಗೆ ವಿಶ್ರಾಂತಿ ಜೀವನ ನಡೆಸುತ್ತಿದ್ದಾರೆ.
ಸಿಎಂ-ಡಿಸಿಎಂರವರು ರೆಸಾರ್ಟ್‌ನಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ. ಇವರಿಗೆ ರೈತರು ಬದುಕಿದರೇನು, ಬಿಟ್ಟರೇನು, ಚಿಂತೆ ಇಲ್ಲ ಎಂದು ರೈತ ಮುಖಂಡ ಸತೀಶ್ ಕೊಳೇನಹಳ್ಳಿ ಆಕ್ರೋಶ ವ್ಯಕ್ತಪಡಿಸಿದರು.
ನೀರಿಲ್ಲದೆ ಒಣಗಿರುವ ಕಬ್ಬಿನ ಬೆಳೆಯನ್ನು ರೈತ ಮುಖಂಡ ಕೊಳೇನಹಳ್ಳಿ ಬಿ.ಎಂ.ಸತೀಶ್, ಕನಗೊಂಡನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಜಲಜಾಕ್ಷಮ್ಮ ಸ್ವಾಮಿಲಿಂಗಪ್ಪ, ಕೊಳೇನಹಳ್ಳಿ ಕೆ ಶರಣಪ್ಪ, ಎಸ್.ಸಿ.ಸಿದ್ದಪ್ಪ,ಮಂಜುನಾಥ ಗುತ್ನಾಳ, ದೊಡ್ಮನೆ ಹಾಲಸಿದ್ದಪ್ಪ, ಬಿ.ನಾಗೇಂದ್ರಪ್ಪ, ಕನಗೊಂಡನಹಳ್ಳಿ ಕೆ.ಎನ್. ಮಂಜುನಾಥ್ ಮುಂತಾದವರು ವೀಕ್ಷಣೆ ಮಾಡಿದರು.












Click it and Unblock the Notifications