ಒಂದು ಹಣ್ಣಿಗೆ 10,000 ರೂ: ವಿದೇಶಿ ಮಾವು ಬೆಳೆದು ಯಶಸ್ಸು ಕಂಡ ಉಡುಪಿ ಕೃಷಿಕ
ಉಡುಪಿ, ಮೇ. 18: ಹಣ್ಣುಗಳ ರಾಜ ಮಾವಿನ ಹಣ್ಣು, ಬೆಳೆದ ಬೆಳೆಗಾರನ ಕೈ ಎಂದೂ ಬಿಟ್ಟಿಲ್ಲ. ಎಲ್ಲಾ ಕೃಷಿಯಲ್ಲೂ ಸೋಲು ಕಂಡ ಬಳಿಕ ಮಾವಿನ ಕೃಷಿ ಕೈ ಹಿಡಿದು ಜೀವನ ಕಟ್ಟಿಕೊಂಡ ಅನೇಕ ರೈತರನ್ನು ನಾವು ಕಾಣಬಹುದು. ವರ್ಷಕ್ಕೊಮ್ಮೆ ಬರುವ ಈ ಮಾವಿನ ಸೀಜನ್ ಬೆಳೆಗಾರರಿಗೆ ಸುಗ್ಗಿ ಕಾಲ. ಮಾವು ಬೆಳೆದು ಯಶ್ವಸಿಯಾದ ನೂರಾರು ರೈತರ ಪೈಕಿ ಉಡುಪಿಯ ಶಂಕರಪುರ ನಿವಾಸಿ ಜೋಸೆಫ್ ಲೋಬೋ ಒಬ್ಬರಾಗಿದ್ದಾರೆ.
ಪ್ರಾಯೋಗಾರ್ಥವಾಗಿ ಕೇರಳದಿಂದ ತಂದು ಬೆಳೆಸಿದ ವಿದೇಶಿ ತಳಿಯ ಮಾವಿನ ಹಣ್ಣು ಮಾರುಕಟ್ಟೆಯಲ್ಲಿ ಲಕ್ಷ ಲಕ್ಷ ಸಂಪಾದನೆ ಮಾಡುತ್ತದೆ. ಕೃಷಿಯಿಂದಲೇ ಬದುಕು ಕಟ್ಟಿಕೊಂಡ ಈ ಕೃಷಿಕ ಹಲವು ಬಗೆಯ ಕೃಷಿ ಮಾಡುವ ಮೂಲಕ ಗುರುತಿಸಿಕೊಂಡವರು. ತಮ್ಮ ಮನೆಯ ಟೆರೀಸ್ ಮೇಲೆ ಕೃಷಿ ಮಾಡುವ ಇವರು ಜಪಾನಿ ತಳಿಗೆ ಲಕ್ಷ ಲಕ್ಷ ಮಾರುಕಟ್ಟೆ ಬೆಲೆ ಇದೆ.

ಪಕ್ಕದ ಕೇರಳ ರಾಜ್ಯದಿಂದ ಪ್ರಯೋಗಾರ್ಥವಾಗಿ ವಿದೇಶಿ ತಳಿಯ ಮಾವಿನ ಗಿಡವನ್ನ ತಂದಿದ್ದ ಈ ಕೃಷಿಕ ತಮ್ಮ ಮಹಡಿಯ ಮೇಲೆ ಈ ಗಿಡವನ್ನು ನೆಟ್ಟಿದ್ದರು. ಮೂರು ವರ್ಷಗಳ ಹಿಂದೆ ನೆಟ್ಟಿದ್ದ ಮಾವಿನ ಗಿಡ ಈ ಬಾರಿ ಮಾವಿನ ಫಸಲನ್ನು ನೀಡಿದ್ದು ಉತ್ತಮ ಆದಾಯ ನೀಡಿದೆ. ಇದು ಉಡುಪಿಯ ಶಂಕರಪುರ ನಿವಾಸಿ ಜೋಸೆಫ್ ಲೋಬೋ ಅವರ ಮಾವಿನ ಹಣ್ಣಿನ ಬೆಳೆಯ ಕಥೆ.
ಜೋಸೆಫ್ ಲೋಗೋ ಅವರು ನೆಟ್ಟಿದ್ದು ಜಪಾನಿ ಮಾವಿನಹಣ್ಣಿನ ತಳಿಯಾದ ಮಿಯಾಯೋಕಿ. ಈ ಮಿಯಾಯೋಕಿ ತಳಿ ಮಾವಿನಹಣ್ಣಿಗೆ ಪ್ರತಿ ಕಿಲೋಗೆ 2 ಲಕ್ಷ ಎಪ್ಪತ್ತು ಸಾವಿರ ಬೆಲೆ ಇದೆ. ಕೇವಲ ಒಂದು ಹಣ್ಣಿನ ಬೆಲೆ 10,000ಯಾಗಿದೆ.

ನೋಡಲು ಮಲ್ಲಿಕಾ ಮಾವಿನ ಹಣ್ಣಿನ ತಳಿಯಂತೆ ಕಾಣುವ ಈ ಜಪಾನಿ ತಳಿ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆಯನ್ನು ಹೊಂದಿದೆ. ಕಳೆದ ವರ್ಷ ಹವಾಮಾನ ವೈಪರಿತ್ಯದಿಂದ ಲೋಭ ಅವರ ಮಾವಿನ ಗಿಡ ಯಾವುದೇ ಫಸಲನ್ನು ಕೂಡ ನೀಡಿರಲಿಲ್ಲ. ಈ ಬಾರಿ ಸಣ್ಣ ಮಟ್ಟದ ಫಸಲು ಬಂದಿದ್ದು ಈಗಾಗಲೇ ಆ ಹಣ್ಣುಗಳನ್ನು ಮಾರುಕಟ್ಟೆಗೆ ಮಾರಾಟ ಮಾಡಿ ಲಾಭ ಪಡೆದುಕೊಂಡಿದ್ದಾರೆ ಲೋಬೋ.
ಲೋಬೋ ಅವರ ಟೆರೇಸ್ ಗಾರ್ಡನ್‌ನಲ್ಲಿ ಬಿಳಿ ಜಾವಾ ಪ್ಲಮ್, ಬ್ರೆಜಿಲಿಯನ್ ಚೆರ್ರಿಗಳು, ತೈವಾನ್ ಕಿತ್ತಳೆ ಜೊತೆಗೆ ವಿಶ್ವಪ್ರಸಿದ್ಧ ಶಂಕರಪುರ ಮಲ್ಲಿಗೆಯನ್ನ ಕೂಡ ಬೆಳೆಯುತ್ತಾರೆ. ಕೃಷಿಯ ಜೊತೆಗೆ ವಿವಿಧ ಗಿಡಗಳನ್ನು ಕಸಿಮಾಡಿ ಮಾರಾಟವನ್ನು ಕೂಡ ಮಾಡುತ್ತಿರುವ ಲೋಬೋ ಅವರು, ಕರ್ನಾಟಕದಲ್ಲೂ ಕೂಡ ಜಪಾನಿ ತಳಿಯ ಮಾವಿನಹಣ್ಣಿಗೆ ಮಾರುಕಟ್ಟೆ ಸಿಗಬೇಕು ಎಂದು ಆಶಿಸುತ್ತಿದ್ದಾರೆ.
ಮೌಲ್ಯವರ್ಧಿತ ಕೃಷಿ ಮಾಡುವುದರಿಂದ ಕೃಷಿಕನ ಶ್ರಮಕ್ಕೆ ಬೆಲೆ ಸಿಗುತ್ತದೆ ಎನ್ನುವುದು ಕೂಡ ಸತ್ಯ. ಇವೆಲ್ಲದರ ಜೊತೆಗೆ ವಾತಾವರಣವೂ ಕೂಡ ಕೃಷಿಕನಿಗೆ ಸಹಕಾರಿಯದರೆ ಕೃಷಿಕ ಅನ್ನದ ಜೊತೆ ಚಿನ್ನವನ್ನು ಬೆಳೆಯುವ ಅವಕಾಶವಿದೆ ಎನ್ನುವುದಕ್ಕೆ ಲೋಬೋ ಅವರೇ ಸಾಕ್ಷಿಯಾಗಿದ್ದಾರೆ. ಲಕ್ಷಾಂತರ ರೂಪಾಯಿ ಬೆಲೆಬಾಳುವ ಜಪಾನಿ ಮಾವಿನಹಣ್ಣಿನ ತಳಿಯಾದ ಮಿಯಾಯೋಕಿ ನೋಡಲು ಸ್ಥಳೀಯರು ಕೂಡ ಲೋಬೋ ಅವರ ನಿವಾಸಕ್ಕೆ ಭೇಟಿ ನೀಡುತ್ತಿದ್ದಾರೆ. ಲೋಬೋ ಅವರು ಇನ್ನಷ್ಟು ಹೊಸ ತಳಿಗಳನ್ನು ಬೆಳೆಯುವ ಮೂಲಕ ಕೃಷಿಯಲ್ಲಿ ಮತ್ತಷ್ಟು ಸಾಧನೆ ಮಾಡಲಿ ಎನ್ನುವುದು ಸ್ಥಳೀಯರ ಆಶಯವಾಗಿದೆ.












Click it and Unblock the Notifications