ಚಿಕ್ಕಮಗಳೂರು: ಭೀಕರ ಬರಕ್ಕೆ ತತ್ತರಿಸಿದ ಕಾಫಿನಾಡಿನ ರೈತರು, ತಾಲೂಕುವಾರು ಬೆಳೆ ನಾಶದ ವಿವರ ಇಲ್ಲಿ
ಚಿಕ್ಕಮಗಳೂರು, ಅಕ್ಟೋಬರ್, 13: ಮಲೆನಾಡಲ್ಲಿ ಮಳೆಗೆ ಈ ವರ್ಷ ಬರ ಬಂದಿದೆ. ವಾರ್ಷಿಕ ದಾಖಲೆ ಮಳೆ ಸುರಿಯುವ ಮಲೆನಾಡಲ್ಲಿ ಈ ಬಾರಿ ಶೇಕಡ 39ರಷ್ಟು ಮಳೆ ಕೊರತೆ ಎದುರಾಗಿದ್ದು, ರೈತ ಸಮುದಾಯವೇ ಆತಂಕದಲ್ಲಿದೆ. ಇನ್ನು ಬೆಳೆದ ಬೆಳೆಗಳು ಒಣಗಿ ಹೋಗಿದ್ದು ರೈತರು ಕಣ್ಣೀರಿಡುವಂತಹ ಪರಿಸ್ಥಿತಿ ಚಿಕ್ಕಮಗಳೂರು ಜಿಲ್ಲೆಯಲ್ಲಿ ನಿರ್ಮಾಣವಾಗಿದೆ.
ಚಿಕ್ಕಮಗಳೂರು ಜಿಲ್ಲೆಯ ಅಪ್ಪಟ ಮಲೆನಾಡು, ಅರೆ ಮಲೆನಾಡು, ಬಯಲುಸೀಮೆ ಭಾಗವನ್ನು ಹೊಂದಿದೆ. ಈ ಬಾರಿ ಮೂರು ಭಾಗದಲ್ಲೂ ಮಳೆ ಕೈಕೊಟ್ಟಿದ್ದು, ಮಳೆಗಾಗಿ ಜನ ಆಕಾಶ ನೋಡುತ್ತಾ ಇದ್ದಾರೆ. ವಾರ್ಷಿಕ ದಾಖಲೆ ಮಳೆ ಬೀಳುವ ಮೂಡಿಗೆರೆಯಲ್ಲಿ ಈ ವರ್ಷ ಅರ್ಧಕರ್ಧ ಮಳೆ ಕೊರತೆ ಎದುರಾಗಿದೆ. ಅದರಲ್ಲೂ ಈ ವರ್ಷ ಮಳೆ ಕೊರತೆಯಿಂದ ಮಲೆನಾಡಿಗರು ಇತಿಹಾಸದಲ್ಲಿ ಕಾಣದ ಬರವನ್ನು ಕಂಡಿದ್ದಾರೆ. ಈಗಾಗಲೇ ಸರ್ಕಾರ ಜಿಲ್ಲೆಯ 8 ತಾಲೂಕನ್ನು ಬರ ಪೀಡಿತ ಪ್ರದೇಶ ಘೋಷಣೆ ಮಾಡಿದೆ.

ಜಿಲ್ಲೆಯ ಕಡೂರು, ತರೀಕೆರೆ, ಅಜ್ಜಂಪುರ, ಎನ್.ಆರ್.ಪುರ, ಶೃಂಗೇರಿ,ಮೂಡಿಗೆರೆ, ಕೊಪ್ಪ, ಕಳಸ ತಾಲೂಕನ್ನು ಬರ ಎಂದು ಘೋಷಿಸಿದೆ. ಜಿಲ್ಲೆಯಲ್ಲಿ ಹನಿ ನೀರಿಗೂ ಹಾಹಾಕಾರ ಅನುಭವಿಸುವಂತಾಗಿದೆ. ಭತ್ತದ ಗದ್ದೆಗಳನ್ನು ಪಾಳುಬಿಟ್ಟಿದ್ದು, ಇದ್ದ ಭತ್ತದ ಗದ್ದೆಗಳು ಒಣಗಿ ಹೋಗ್ತಿವೆ, ಇನ್ನು ರಾಗಿ, ಮೆಕ್ಕೆ ಜೋಳ, ಭತ್ತ, ಹತ್ತಿ, ಸೂರ್ಯಕಾಂತಿ, ಈರುಳ್ಳಿ, ಆಲೂಗೆಡ್ಡೆ, ಮೆಣಸಿನಕಾಯಿ, ಕಡ್ಲೇಕಾಯಿ ಸೇರಿದಂತೆ ವಿವಿಧ ಬೆಳೆಗಳು ಸಾವಿರಾರು ಹೆಕ್ಟೇರ್ ಪ್ರದೇಶದಲ್ಲಿ ಹಾನಿಯಾಗಿವೆ.
ನಾಡಿಗೆ ನೀರು ನೀಡುವ ಮಲೆನಾಡಿಗರಿಗೆ ನೀರಿಲ್ಲದ ಸ್ಥಿತಿ ನಿರ್ಮಾಣವಾಗಿದ್ದು, ರೈತರ ಬದುಕು ಹೇಳತೀರದಂತಾಗಿದೆ. ಕಾಫಿನಾಡಲ್ಲಿ ಈ ವರ್ಷ ಭೀಕರ ಬರ ಎದುರಾಗಿದೆ. ಅದರಲ್ಲೂ ಮಲೆನಾಡಿನಲ್ಲೂ ಮಳೆ ಇಲ್ಲದೆ ಇರೋದು ನಿಜಕ್ಕೂ ಆಶ್ಚರ್ಯ ತರಿಸಿದೆ. ಭೀಕರ ಬರಕ್ಕೆ ತತ್ತರಿಸಿದ ರೈತರು ತತ್ತರಿಸಿ ಹೋಗಿದ್ದಾರೆ. ಮಳೆ ಕೊರತೆಯಿಂದ ಬೆಳೆ ಒಣಗಿ ಹೋಗುತ್ತಿದ್ದು, ರೈತರ ಬದುಕು ಶೋಚನೀಯವಾಗಿದೆ.
ಭೀಕರ ಬರಕ್ಕೆ ಚಿಕ್ಕಮಗಳೂರು ಜನ ತತ್ತರಿಸಿ ಹೋಗಿದ್ದಾರೆ. ಇನ್ನು ಅನ್ನದಾತರು ಮಳೆರಾಯನ ನಂಬಿ ಆಶಾವಾದದಲ್ಲಿ ಲಕ್ಷಾಂತರ ಖರ್ಚು ಮಾಡಿ ಬೆಳೆದ ಬೆಳೆಗಳು ಬಿಸಿಲಿನ ಜಳಕ್ಕೆ ಸುಟ್ಟು ಹೋಗಿವೆ. ಮಳೆರಾಯ ಕೈಕೊಟ್ಟ ಹಿನ್ನೆಲೆ ಸಾವಿರಾರು ರೈತರು ಬೀದಿಗೆ ಬೀಳುವಂತಾಗಿದೆ ಎಂದು ರೈತ ಮುಖಂಡ ಗುರುಶಾಂತಪ್ಪ ಆತಂಕ ವ್ಯಕ್ತಪಡಿಸಿದ್ದಾರೆ.
ಜಿಲ್ಲೆಯಲ್ಲಿ ಬೆಳೆಗಳು ನಾಶ ವಿವರ
1. ರಾಗಿ - ಕಡೂರಿನಲ್ಲಿ 34831 ಹೆಕ್ಟೇರ್ ನಷ್ಟು ಹಾನಿ, ಅಜ್ಜಂಪುರದಲ್ಲಿ 7820 ಹೆಕ್ಟೇರ್‌ನಷ್ಟು ಬೆಳೆ ಹಾನಿ
2. ಮೆಕ್ಕೆಜೋಳ- ಕಡೂರಿನಲ್ಲಿ 2855 ಹೆಕ್ಟೇರ್, ಅಜ್ಜಂಪುರದಲ್ಲಿ 1469 ಹೆಕ್ಟೇರ್ ಬೆಳೆ ಹಾನಿ
3. ಹತ್ತಿ - ಕಡೂರಿನಲ್ಲಿ 846 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿ
4. ಭತ್ತ -ಕಳಸದಲ್ಲಿ 515 ಹೆಕ್ಟೇರ್, ಕೊಪ್ಪ 2450 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿ, ಶೃಂಗೇರಿಯಲ್ಲಿ 1296 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿ, ಎನ್.ಆರ್.ಪುರದಲ್ಲಿ 2009 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿ
5. ಈರುಳ್ಳಿ- ಕಡೂರು 1906 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿ, ಅಜ್ಜಂಪುರದಲ್ಲಿ 3150 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿ
6. ಆಲೂಗಡ್ಡೆ- ಕಡೂರು 593 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿ, ಅಜ್ಜಂಪುರದಲ್ಲಿ 70 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿ
* ವಾರ್ಷಿಕ ಮಳೆಯಾಗಬೇಕಾಗಿದ್ದ ಮಳೆ : 1677 ಮಿ.ಮೀ.
* ಈವರೆಗೂ ಆಗಿರುವ ಮಳೆ : 1030 ಮಿ.ಮೀ.
* ಮಳೆ ಕೊರತೆ : 39 ರಷ್ಟು ಮಳೆ ಕೊರೆತೆ












Click it and Unblock the Notifications