ವರುಣನ ರೌದ್ರಾವತಾರದಿಂದ ಮಂಡ್ಯ ಜಿಲ್ಲೆಯ ಹಲವೆಡೆ ಭತ್ತದ ಬೆಳೆ ನಾಶ, ಸಂಕಷ್ಟಕ್ಕೆ ಸಿಲುಕಿದ ಅನ್ನದಾತ
ಮಂಡ್ಯ, ಮೇ, 31: ರಾಜ್ಯದ ಹಲವೆಡೆ ಮುಂಗಾರು ಪೂರ್ವ ಮಳೆ ದೊಡ್ಡ ದೊಡ್ಡ ಅನಾಹುತಗಳನ್ನೇ ಸೃಷ್ಟಿಸಿದೆ. ಇನ್ನು ಕೃಷಿ ಬೆಳೆಗಳನ್ನ ಕಳೆದುಕೊಂಡ ರೈತರ ಪಾಡಂತೂ ಹೇಳತೀರದಾಗಿದೆ. ಅದೇ ರೀತಿ ಮಂಡ್ಯ ಜಿಲ್ಲೆಯ ಹಲವೆಡೆ ಮಳೆರಾಯನ ಆರ್ಭಟದಿಂದ ಭತ್ತ ಬೆಳೆ ನಾಶವಾಗಿದ್ದು, ಇದರಿಂದ ರೈತರು ಕಂಗಾಗಲಾಗಿದ್ದಾರೆ.
ಪಾಂಡವಪುರ ತಾಲೂಕಿನಲ್ಲಿ ಸುರಿದ ಬಿರುಗಾಳಿ ಸಹಿತ ಆಲಿಕಲ್ಲು ಮಳೆಗೆ ಮನೆಯ ಮೇಲ್ಛಾವಣಿ ಹಾರಿದ್ದು, ಮತ್ತೊಂದೆಡೆ ಬಾಳೆ, ಭತ್ತ ಸೇರಿದಂತೆ ಅಪಾರ ಬೆಳೆ ಹಾನಿಯಾಗಿದೆ. ತಾಲೂಕಿನ ಚಿಕ್ಕಯಾರಹಳ್ಳಿ, ಕಟ್ಟೇರಿ, ಭಾಗದಲ್ಲಿ ಮಳೆರಾಯ ತಂಪೆರೆದಿದ್ದಾನೆ. ಈ ಮೂಲಕ ಇಷ್ಟು ದಿನ ಬಿಸಿಲಿನ ಬೇಗೆಗೆ ಬೆಂದಿದ್ದ ಇಲ್ಲಿನ ವಾತವರಣವನ್ನು ತಣ್ಣಗಾಗಿಸಿದೆ.

ಮತ್ತೊಂದೆಡೆ ಸುರಿದ ಆಲಿಕಲ್ಲು ಸಹಿತ ಮಳೆಗೆ ಅಪಾರ ಪ್ರಮಾಣದ ಬೆಳೆ ನಾಶವಾಗಿ ರೈತರಿಗೆ ಸಂಕಷ್ಟ ತಂದೊಡ್ಡಿದೆ. ಗ್ರಾಮದ ಶಂಭೂಲಿಂಗಯ್ಯ, ಪುಟ್ಟಸಿದ್ದಮ್ಮ, ವೀರೂಪಾಕ್ಷ, ಶಿವು, ಜವರಾಯಿ, ಶ್ರೀಮಂತಿ , ಚಂದ್ರಶೇಖರ್, ನಾಗಮ್ಮ, ಚಂದ್ರಶೇಖರ್ ನಿಂಗಪ್ಪ ಪ್ರಭುದೇವಯ್ಯ, ಲಿಂಗರಾಜಮ್ಮ, ಸಣ್ಣತಾಯಮ್ಮ ಸೇರಿದಂತೆ ಅನೇಕರ ಮನೆಯ ಮೇಲ್ಛಾವಣಿಗಳು ಗಾಳಿಯ ರಭಸಕ್ಕೆ ಹಾರಿಹೋಗಿದ್ದು, ಇದರಿಂದ ಅಪಾರ ಪ್ರಮಾಣದಲ್ಲಿ ನಷ್ಟ ಉಂಟಾಗಿದೆ.
ಇನ್ನು ರೈತ ಸೋಮಶೇಖರ್ ಅವರ ಜಮೀನಿನಲ್ಲಿ ಬೆಳೆದಿದ್ದ 35 ತೆಂಗಿನ ಮರ ಧರೆಗುರುಳಿವೆ. ಹಾಗೆಯೆ ಸಿ.ಎಸ್.ಲಿಂಗಪ್ಪ, ದಯಾನಂದ, ಷಡಕ್ಷರಿ, ಶಂಭೂಲಿಂಗಯ್ಯ, ನಾಗಾರಾಜು, ರಮೇಶ್ ವಿಷಕಂಠೇಗೌಡ ಅವರಿಗೆ ಸೇರಿದ ನೂರಾರು ಹೆಕ್ಟೇರ್‌ಗೂ ಹೆಚ್ಚು ಭತ್ತ ಬೆಳೆ ನಾಶವಾಗಿದೆ. ಜೊತೆಗೆ ರಾಜಯ್ಯ ಬಸಪ್ಪ ಅವರ ಒಂದು ಹೆಕ್ಟೇರ್‌ನಲ್ಲಿ ಬೆಳೆದಿದ್ದ ಬಾಳೆ ಬೆಳೆ ಸಂಪೂರ್ಣವಾಗಿ ನಾಶವಾಗಿದ್ದು, ಇದರಿಂದ ಲಕ್ಷಾಂತರ ರೂಪಾಯಿ ನಷ್ಟವಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಮಾಹಿತಿ ತಿಳಿದ ಮೇಲುಕೋಟೆ ಕ್ಷೇತ್ರದ ಶಾಸಕ ದರ್ಶನ್ ಪುಟ್ಟಣ್ಣಯ್ಯ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಲ್ಲದೆ ಇದೇ ವೇಳೆ ರೈತರು, ಜನರಿಗೆ ಧೈರ್ಯ ತುಂಬಿದರು. ಇನ್ನು ತಹಶೀಲ್ದಾರ್ ಕೆ.ಸಿ.ಸೌಮ್ಯ ಸರ್ಕಾರದಿಂದ ಸೂಕ್ತ ಪರಿಹಾರ ಕೊಡಿಸುವುದಾಗಿ ಭರವಸೆ ನೀಡಿದರು.
ದಾವಣಗೆರೆ ಜಿಲ್ಲೆಯ ಹಲವೆಡೆ ಕೃಷಿ ಬೆಳೆ ನಾಶ
ದಾವಣಗೆರೆ ಜಿಲ್ಲೆಯ ಹಲವೆಡೆ ಮಳೆರಾಯ ಆರ್ಭಟಿಸಿ ಸಾಕಷ್ಟು ಅನಾಹುತಗಳನ್ನು ಸೃಷ್ಟಿಸಿದ್ದಾನೆ. ಮತ್ತೊಂದೆಡೆ ರೈತರು ಬೆಳೆದ ಭತ್ತದ ಬೆಳೆಗಳು ಕೂಡ ಜಲಾವೃತವಾಗಿರುವ ಘಟನೆಗಳು ಸಂಭವಿಸಿವೆ. ಮಳೆ ಸುರಿದ ಕಾರಣ ಬತ್ತದ ಬೆಳೆ ನೀರು ಪಾಲಾಗಿದೆ. 200ರಿಂದ 250 ಕಾಳು ಉದುರಿ ಹೋಗಿವೆ. ಇರುವುದು ಕೇವಲ ಹತ್ತರಿಂದ ಹದಿನೈದು ಕಾಳು ಮಾತ್ರ. ಇದರಿಂದ ಕಟಾವು ಮಾಡಲು ಯಂತ್ರಕ್ಕೆ ನೀಡುವ ಹಣ ಕೂಡ ಸಿಗುವುದಿಲ್ಲ ಎಂದರು ರೈತರು ಇತ್ತೀಚೆಗಷ್ಟೇ ಗೋಳು ತೋಡಿಕೊಂಡಿದ್ದರು.
ಕೈಗೆ ಬಂದಿದ್ದ ಫಸಲು ಹೇಗೆ ನೀರು ಪಾಲಾಗಿದೆ ಎಂಬುದನ್ನು ರೈತರೊಬ್ಬರು ಜಿಲ್ಲಾಧಿಕಾರಿ ಸೇರಿದಂತೆ ಸ್ಥಳಕ್ಕೆ ಭೇಟಿ ನೀಡಿದ ತಂಡಕ್ಕೆ ವಿವರಿಸಿದ್ದು, ಭತ್ತದ ಬಿತ್ತನೆ ಬೀಜ, ಗೊಬ್ಬರ ಸೇರಿದಂತೆ ಸಾವಿರಾರು ರೂಪಾಯಿ ಖರ್ಚು ಮಾಡಿದ್ದೇವೆ. ಒಂದೆಡೆ ಬಿಸಿಲಿನ ಶಾಖ, ಮತ್ತೊಂದೆಡೆ ಭಾರೀ ಗಾಳಿ, ಮಳೆಯಿಂದ ಆದ ಅನಾಹುತದಿಂದ ನಷ್ಟ ಅನುಭವಿಸಿದ್ದೇವೆ ಎಂದು ಅಳಲು ತೋಡಿಕೊಂಡಿದ್ದರು.
ಜಿಲ್ಲಾಧಿಕಾರಿ ಶಿವಾನಂದ ಕಾಪಶಿ ಮತ್ತು ಜಂಟಿ ಕೃಷಿ ನಿರ್ದೇಶಕ ಶ್ರೀನಿವಾಸ ಚಿಂತಾಲ್ ಅವರು ದಾವಣಗೆರೆ ತಾಲೂಕಿನ ಚಿಕ್ಕತೊಗಲೇರಿ ಮತ್ತು ಹಿರೇತೊಗಲೇರಿ ಗ್ರಾಮಕ್ಕೆ ಭೇಟಿ ನೀಡಿ, ಮಳೆಯಿಂದ ಹಾನಿಯಾದ ಭತ್ತದ ಬೆಳೆಯನ್ನು ವೀಕ್ಷಿಸಿ ರೈತರ ಅಳಲನ್ನು ಆಲಿಸಿದರು. ಈ ವೇಳೆ ತಹಶೀಲ್ದಾರ್ ಅಶ್ವತ್ಥ್, ಕೃಷಿ ಸಹಾಯಕ ನಿರ್ದೇಶಕ ಶ್ರೀಧರ್ ಮೂರ್ತಿ ಅವರು ಇದ್ದರು.
ಸಾವಿರಾರು ಹೆಕ್ಟೇರ್‌ನಲ್ಲಿ ಬೆಳೆದಿದ್ದ ಭತ್ತ ಫಸಲಿಗೆ ಬಂದಿತ್ತು. ಈ ಬಾರಿ ಬೆಳೆಯೂ ಸಮೃದ್ಧವಾಗಿತ್ತು. ಇನ್ನೇನೂ ಕೊಯ್ಲು ಮಾಡಬೇಕು ಎನ್ನುವಷ್ಟರಲ್ಲಿ ಬೀಸಿದ ಭಾರೀ ಗಾಳಿ ಹಾಗೂ ಮಳೆಗೆ ಭತ್ತ ನೀರುಪಾಲಾಯಿತು. ಅಲ್ಲದೆ ಭತ್ತದ ಬೆಳೆ ಕೆಲವೆಡೆ ಹಾಸುಹೊದ್ದು ಮಲಗಿದಂತೆ ಕಾಣುತ್ತಿದೆ.
ಭತ್ತ ಬೆಳೆಯಲು ರೈತರು ಸಾಕಷ್ಟು ಬೆವರು ಸುರಿಸಿದ್ದರು. ಬಿತ್ತನೆ ಬೀಜ, ಗೊಬ್ಬರ, ಕೂಲಿ ಕಾರ್ಮಿಕರಿಗೆ ಹಣ ಸೇರಿದಂತೆ ನಾನಾ ಬಗೆಯಲ್ಲಿ ಖರ್ಚು ಮಾಡಿದ್ದರು. ಇನ್ನೇನೂ ಫಸಲು ಚೆನ್ನಾಗಿ ಬಂದಿದೆ. ಈ ಬಾರಿಯಾದರೂ ಸಾಲ ತೀರಿಸಬಹುದು ಎಂಬ ಬಯಕೆಯನ್ನು ಹೊಂದಿದ್ದರು. ಆದರೆ ಇದೀಗ ಭತ್ತದ ಬೆಳೆ ಸಂಪೂರ್ಣವಾಗಿ ನಾಶವಾಗಿದ್ದು, ಕೈಗೆ ಬಂದದ್ದು ಬಾಯಿಗೆ ಬರಲಿಲ್ಲ ಎಂಬ ಸ್ಥಿತಿಯಲ್ಲಿ ಅನ್ನದಾತರು ಗೋಳಾಡುವಂತಾಗಿದೆ.












Click it and Unblock the Notifications