ಚಾಮರಾಜನಗರದಲ್ಲಿ ರೈತರ ಕಷ್ಟ ಆಲಿಸದ ಅಧಿಕಾರಿಗಳು: ಸಚಿವ ವಿ.ಸೋಮಣ್ಣ ತರಾಟೆ
ಚಾಮರಾಜನಗರ, ನವೆಂಬರ್, 18: ನಗರದ ಸಭಾಂಗಣದಲ್ಲಿ ರೈತರಿಗೆ ಸಂಬಂಧಿಸಿದ ವಿಷಯಗಳು ಹಾಗೂ ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಕುರಿತು ಸಭೆ ನಡೆಯಿತು. ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಅಧ್ಯಕ್ಷತೆಯಲ್ಲಿ ಮೂರುವರೆ ತಾಸುಗಳ ಕಾಲ ಸಭೆ ನಡೆದಿದ್ದು, ಈ ವೇಳೆ ಸಚಿವ ಸೋಮಣ್ಣ ಅಧಿಕಾರಿಗಳಿಗೆ ತರಾಟೆ ತೆಗೆದುಕೊಂಡಿದ್ದಾರೆ.
ಜಿಲ್ಲೆಯಲ್ಲಿ ಎಗ್ಗಿಲ್ಲದೇ ಅಕ್ರಮ ಗಣಿಗಾರಿಕೆ ನಡೆಯುತ್ತಿದೆ. ರೈತರ ಭೂಮಿ, ರಸ್ತೆಗಳು ಹಾಳಾಗುತ್ತಿದ್ದು, ಅಧಿಕಾರಿಗಳು ಇದಕ್ಕೆ ಸ್ಪಂದಿಸುತ್ತಿಲ್ಲ. ಸ್ಥಗಿತಗೊಂಡ ಗಣಿಗಳಲ್ಲೂ ಲೂಟಿ ನಡೆಯುತ್ತಿದೆ ಎಂದು ರೈತರು ದೂರಿನ ಸುರಿಮಳೆಗೈದರು. ಇದರಿಂದ ಆಕ್ರೋಶಗೊಂಡ ಸಚಿವ ಸೋಮಣ್ಣ, ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಡಿಡಿ ನಂಜುಂಡಸ್ವಾಮಿ ಅವರಿಗೆ ಹಿಗ್ಗಾಮುಗ್ಗಾ ತರಾಟೆ ತೆಗೆದುಕೊಂಡರು. "ಈತ ಬಹಳ ಖತರ್ನಾಕ್ ಅಂತಾ ಗೊತ್ತಿದೆ, ನನ್ನ ಬಳಿ ಮಾಹಿತಿ ಇದೆ. ಕೋರ್ಟ್‌ಲ್ಲಿ ಸ್ಟೇ ತಂದು ನೀವೆ ಗಣಿ ಆರಂಭಿಸುತ್ತೀರಾ? ಏಜೆಂಟ್ ರೀತಿ ಕೆಲಸ ಮಾಡುತ್ತೀರಾ?," ಎಂದು ಪ್ರಶ್ನಿಸುವ ಮೂಲಕ ಕಿಡಿಕಾರಿದ್ದು, ಇಂದೇ ಅವರನ್ನು ಕರ್ತವ್ಯದಿಂದ ಬಿಡುಗಡೆಗೊಳಿಸಿ ಎಂದು ಜಿಲ್ಲಾಧಿಕಾರಿಗೆ ನಿರ್ದೇಶನ ನೀಡಿದರು. ಹಾಗೂ ಸೂಕ್ತ ರೀತಿಯಲ್ಲಿ ರೈತರಿಗೆ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳಬೇಕು ಎಂದರು.

ರೈತರಿಗೆ ಫೈನಾನ್ಸ್‌ನವರಿಂದ ಕಿರುಕುಳ
ನಮಗೆ ಫೈನಾನ್ಸ್‌ನವರಿಂದ ಕಿರುಕುಳ ಹೆಚ್ಚಾಗುತ್ತಿದೆ. ರೈತರಿಗೆ ಹಿಂಸೆ ನೀಡುತ್ತಿದ್ದಾರೆ ಎಂದು ರೈತ ಮುಖಂಡರು ಅಳಲು ತೋಡಿಕೊಂಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಸೋಮಣ್ಣ ಅವರು, ಎಷ್ಟು ಬಾರಿ ಎಚ್ಚರಿಸಿದರೂ ಕೂಡ ಇವರಿಗೆ ಬುದ್ಧಿ ಬರುವುದಿಲ್ಲ. ಇವರಿಗೆ ಬಿಸಿ ಮುಟ್ಟಿಸುವ ಕೆಲಸವನ್ನು ಮಾಡುತ್ತೇನೆ. ಫೈನಾನ್ಸ್‌ನವರ ಕಿರುಕುಳ ಈಗಿನಿಂದಲ್ಲ, ಹತ್ತಾರು ವರ್ಷಗಳಿಂದಲೂ ಇದೆ ಎಂದು ಅಸಮಾಧಾನ ಹೊರಹಾಕಿದರು. ಇನ್ನು ಅಕ್ರಮ ಗಣಿಗಾರಿಕೆಗೆ ವಿರುದ್ಧ ರೈತರ ಹೋರಾಟಕ್ಕೆ ನಾನು ಬೆಂಬಲವಾಗಿರುತ್ತೇನೆ. ಭೂಮಿಯನ್ನು ಬಗೆದು ಲೂಟಿ ಹೊಡೆಯುವವರು ಯಾರೂ ನಮ್ಮ ಜಿಲ್ಲೆಯವರಲ್ಲ. ಪರವಾನಗಿ ಪಡೆದು ಉಪಗುತ್ತಿಗೆ ನೀಡುವುದನ್ನು ಮಟ್ಟ ಹಾಕುತ್ತೇವೆ ಎಂದು ಗುಡುಗಿದರು.

ಮರ ಕಟಾವಿಗೆ ಅನುಮತಿ ವಿಳಂಬ ಬೇಡ
ಸಂಪುಟ ಸಭೆಯಲ್ಲಿ ಮಲೆಮಹದೇಶ್ವರ ವನ್ಯಜೀವಿಧಾಮವನ್ನು ಹುಲಿ ಸಂರಕ್ಷಿತ ಪ್ರದೇಶ ಮಾಡಬೇಕೆ ಎಂಬ ವಿಚಾರಕ್ಕೆ ಪ್ರತಿಕ್ರಿಸಿಯಿದ ಅವರು, ಮಾಡಬಾರದು ಎಂದು ನೇರವಾಗಿ ಹೇಳಿದ್ದೇನೆ. ಮಲೆಮಹದೇಶ್ವರ ವನ್ಯಜೀವಿಧಾಮ ಹುಲಿ ಸಂರಕ್ಷಿತ ಪ್ರದೇಶ ಆಗಲ್ಲ ಎಂದು ಸ್ಪಷ್ಟಪಡಿಸಿದರು. ಇನ್ನು ಇದೇ ವೇಳೆ ರೈತರು ಅರಣ್ಯ ಕೃಷಿ ಕೈಗೊಂಡು ಮರ ಕಟಾವಿಗೆ ಅಧಿಕಾರಿಗಳು ಸತಾಯಿಸುವುದು ಸರ್ಕಾರದ ಗಮನಕ್ಕೆ ಬಂದಿದೆ. ನೂತನ ಮಾರ್ಗಸೂಚಿ ಶೀಘ್ರವೇ ಬಿಡುಗಡೆ ಆಗಲಿದೆ. ರೈತರು ತಂದುಕೊಟ್ಟ ಅರ್ಜಿ ಹಾಗೂ ನೀಡಿದ ಮಾಹಿತಿಯನ್ನು ಅರಣ್ಯ ಇಲಾಖೆ ಪಡೆದು ಕೂಡಲೇ ಕಟಾವಿಗೆ ಅನುಮತಿ ಕೊಡಬೇಕು ಎಂದು ಅರಣ್ಯಾಧಿಕಾರಿಗಳಿಗೆ ಸೂಚಿಸಿದರು.

ಎಪಿಎಂಸಿ ಅಧಿಕಾರಿಗಳ ವಿರುದ್ಧ ರೈತರ ಆಕ್ರೋಶ
ಎಪಿಎಂಸಿಯಲ್ಲಿ ಡೀಲರ್‌ಗಳು ಶೇಕಡಾ 10ರಷ್ಟು ಕಮಿಷನ್ ಪಡೆಯುತ್ತಾರೆ ಎಂಬ ಆರೋಪ ಕೇಳಿಬಂದಿದ್ದು, ಸಚಿವರು ಎಪಿಎಂಸಿ ಅಧಿಕಾರಿಗಳಿಗೆ ತರಾಟೆ ತೆಗೆದುಕೊಂಡರು. ಆ ರೀತಿ ಕಮಿಷನ್ ಪಡೆಯುತ್ತಿಲ್ಲ ಎಂದು ಅಧಿಕಾರಿಗಳು ಮಾಹಿತಿ ಕೊಡುತ್ತಿದ್ದಂತೆ ರೈತರು ಅಧಿಕಾರಿಗೆ ಸಭೆಯಲ್ಲೇ ತರಾಟೆಗೆ ತೆಗೆದುಕೊಂಡರು. ಆಗ ಜಿಲ್ಲಾಧಿಕಾರಿ ವಾರಕ್ಕೆ ಒಂದು ದಿನದಲ್ಲಿ 3 ತಾಸು ರೈತರ ಸಭೆ ಕರೆಯಬೇಕು ಎಂದು ಸೋಮಣ್ಣ ಸೂಚನೆ ಕೊಟ್ಟರು.

ಕ್ಯಾರೆ ಅನ್ನದ ಅಧಿಕಾರಿಗಳು, ಸಂಕಷ್ಟ
ರೈತರ ಸಮಸ್ಯೆ ಒಂದೆರಡು ಜಿಲ್ಲೆಯಲ್ಲಿ ಇಲ್ಲ. ಬದಲಾಗಿ ರಾಜ್ಯಾದ್ಯಂತ ರೈತರು ಪ್ರತಿನಿತ್ಯ ಒಂದಲ್ಲ ಒಂದು ಸಮಸ್ಯೆಯನ್ನು ಎದುರಿಸುತ್ತಲೇ ಇದ್ದಾರೆ. ಒಂದು ಕಡೆ ತಮ್ಮ ಜಮೀನುಗಳಲ್ಲಿ ಬೆಳೆಗಳನ್ನು ಬೆಳೆಯಲು ಸಾಲ ಮಾಡಿ ಬೀಜ, ಗೊಬ್ಬರಗಳನ್ನು ತಂದಿರುತ್ತಾರೆ. ಆದರೆ ಫಸಲು ಬಂತಂತಹ ಸದರ್ಭದಲ್ಲಿ ಬೆಳೆಗಳಿಗೆ ಸೂಕ್ತ ಬೆಲೆ ಸಿಗದೇ ರೈತರು ಕಂಗಾಲಾಗಿ ಹೋಗುತ್ತಿದ್ದಾರೆ. ಕಷ್ಟದ ಸಂದರ್ಭದಲ್ಲಿ ಮಾತ್ರ ಯಾವ ಜನಪ್ರತಿನಿಧಿಗಳು, ಅಧಿಕಾರಿಗಳು ರೈತರ ನೆರವಿಗೆ ನಿಲ್ಲುವುದಿಲ್ಲ. ಬದಲಾಗಿ ಚುನಾವಣೆ ಬಂದಂತಹ ಸಂದರ್ಭದಲ್ಲಿ ಮಾತ್ರ ಜನಪ್ರತಿನಿಧಿಗಳು ಜನರ ಬಳಿ ಬರುವುದು ಸಾಮಾನ್ಯವಾಗಿಬಿಟ್ಟಿದೆ. ಹಾಗೆಯೇ ಚಾಮರಾಜನಗರದಲ್ಲೂ ಕೂಡ ಇಷ್ಟು ದಿನ ರೈತರ ಸಮಸ್ಯೆ ಸ್ಪಂದಿಸದ ಅಧಿಕಾರಿಗಳು, ಚುನಾವಣೆ ಹತ್ತಿರ ಬರುತ್ತಿದ್ದಂತೆಯೇ ಎಚ್ಚುತ್ತುಕೊಳ್ಳುವಂತಹ ಕೆಲಸವನ್ನು ಮಾಡುತ್ತಿದ್ದಾರೆ. ಹೀಗೆ ಸಭೆ, ಸಮಾರಂಭಗಳಲ್ಲಿ ಅಧಿಕಾರಿಗಳು, ಜನಪ್ರತಿನಿಧಿಗಳು ರೈತರ ಮತ ಗಳಿಸಲು ಇನ್ನಿಲ್ಲದ ಪ್ರಯತ್ನಗಳನ್ನು ಮಾಡುತ್ತಿದ್ದಾರೆ.
ಈ ಸಂದರ್ಭದಲ್ಲು ಶಾಸಕರಾದ ಪುಟ್ಟರಂಗಶೆಟ್ಟಿ, ಮಹೇಶ್, ಕಾಡಾ ಅಧ್ಯಕ್ಷ ನಿಜಗುಣರಾಜು ಹಾಗೂ ಉನ್ನತ ಅಧಿಕಾರಿಗಳಿದ್ದರು.












Click it and Unblock the Notifications