Agricultural loans: ನಬಾರ್ಡ್ ಸಾಲ ಕಡಿತ: ಕರ್ನಾಟಕದ 35 ಲಕ್ಷ ಜನ ರೈತರಿಗೆ ಈ ಕಾರಣಕ್ಕೆ ಆಘಾತ!
ಸಹಕಾರಿ ಸಂಸ್ಥೆಗಳಿಗೆ ರಿಯಾಯಿತಿ ದರದಲ್ಲಿ ಕೊಡುತ್ತಿರುವ ಸಾಲದ ಮೊತ್ತವನ್ನು ಕಡಿಮೆ ಮಾಡುತ್ತಿರುವುದರಿಂದ ಕೃಷಿ ಕ್ಷೇತ್ರಕ್ಕೆ ಹಿನ್ನಡೆಯಾಗುತ್ತಿದೆ. ಹೀಗಾಗಿ, ಈ ಹಿಂದೆ ನೀಡುತ್ತಿದ್ದಷ್ಟೇ ಸಾಲ ಕೊಡಬೇಕು ಎಂದು ಕಬ್ಬು ಅಭಿವೃದ್ಧಿ, ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಆಗ್ರಹಪಡಿಸಿದರು. ನಬಾರ್ಡ್ ಕೊಡುವ ರಿಯಾಯಿತಿ ಬಡ್ಡಿ ದರದ ಸಾಲದ ಮೊತ್ತದಿಂದಲೇ ಡಿಸಿಸಿ ಬ್ಯಾಂಕುಗಳು ರೈತರಿಗೆ ಕೃಷಿ ಸಾಲ ಕೊಡ್ತಿವೆ. ಆದರೆ, ಏಕಾಏಕಿ ಇದರಲ್ಲಿ ಬದಲಾವಣೆ ಮಾಡಲಾಗಿದೆ. ಇದನ್ನು ಸರಿಪಡಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಕರ್ನಾಟಕದಲ್ಲಿ ಅಂದಾಜು 63 ಲಕ್ಷ ರೈತರಿದ್ದಾರೆ. ಇವರಲ್ಲಿ ಅಂದಾಜು 30 ಲಕ್ಷದಷ್ಟು ರೈತರು ಕೃಷಿ ಸಾಲಕ್ಕೆ ಡಿಸಿಸಿ ಬ್ಯಾಂಕುಗಳನ್ನು ಅವಲಂಬಿಸಿದ್ದಾರೆ. ನಬಾರ್ಡ್ ರಿಯಾಯಿತಿ ದರದ ಸಾಲದ ಮೊತ್ತ ಕಡಿಮೆ ಮಾಡಿದರೆ, ಡಿಸಿಸಿ ಬ್ಯಾಂಕ್‌ಗಳು ಕೃಷಿ ಸಾಲ ವಿತರಣೆಯ ಸಾಮರ್ಥ್ಯ ಕಡಿಮೆಯಾಗಲಿದೆ. ಅಲ್ಲದೇ ಇದರಿಂದ ಕೃಷಿ ಕ್ಷೇತ್ರಕ್ಕೆ ಹಾಗೂ ರೈತರಿಗೆ ಹಿನ್ನಡೆ ಆಗಲಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ನಬಾರ್ಡ್ ನೀಡುವ ರಿಯಾಯಿತಿ ಬಡ್ಡಿ ದರದ ಸಾಲದಿಂದಲೇ ಡಿಸಿಸಿ ಬ್ಯಾಂಕ್‌ಗಳು ರೈತರಿಗೆ ಕೃಷಿ ಸಾಲ ಕೊಡ್ತಿವೆ. ಡಿಸಿಸಿ ಬ್ಯಾಂಕ್‌ಗಳು ನಬಾರ್ಡ್ ನೆರವನ್ನೇ ನಂಬಿವೆ. ಆದರೆ, ಇದೀಗ ಅದರಲ್ಲಿ ಬದಲಾವಣೆ ಮಾಡುವುದು ಸರಿಯಲ್ಲ. ಕರ್ನಾಟಕದಲ್ಲಿ ಕೆಲವೇ ಕೆಲವು ಡಿಸಿಸಿ ಬ್ಯಾಂಕ್‌ಗಳು ಮಾತ್ರ ಆರ್ಥಿಕವಾಗಿ ಸುಸ್ಥಿತಿಯಲ್ಲಿವೆ.
ಇತರ ಡಿಸಿಸಿ ಬ್ಯಾಂಕ್‌ಗಳು ನಬಾರ್ಡ್ ನೀಡುವ ಹಣದಲ್ಲೇ ರೈತರಿಗೆ ಕೃಷಿಸಾಲ ನೀಡುತ್ತವೆ. ನಬಾರ್ಡ್ ಸಾಲದ ಮೊತ್ತ ಕಡಿಮೆ ಮಾಡಿದರೆ ಡಿಸಿಸಿ ಬ್ಯಾಂಕ್‌ಗಳ ಕೃಷಿ ಸಾಲದ ಮೇಲೆ ಪರಿಣಾಮ ಬೀರಲಿದೆ. ಇದರಿಂದ ಕೃಷಿಗೆ ಹಿನ್ನಡೆ ಆಗುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ.
ರಾಜ್ಯದಲ್ಲಿ 30ರಿಂದ 35 ಲಕ್ಷ ಜನ ರೈತರು ಮಾತ್ರ ಕೃಷಿ ಸಾಲಕ್ಕೆ ಡಿಸಿಸಿ ಬ್ಯಾಂಕ್‌ಗಳ ಮೂಲಕ ನೆರವು ಪಡೆದಿದ್ದಾರೆ. ಅಲ್ಲದೇ ಅಂದಾಜು 35 ಲಕ್ಷ ರೈತರು ಕಮರ್ಷಿಯಲ್ ಬ್ಯಾಂಕ್‌ಗಳಲ್ಲಿ ಸಾಲ ತೆಗೆದುಕೊಂಡಿದ್ದಾರೆ. ಎಲ್ಲಾ ರೈತರಿಗೂ ಸಹಕಾರಿ ಬ್ಯಾಂಕ್‌ಗಳ ಮೂಲಕವೇ ಕೃಷಿ ಸಾಲ ಸಿಗುವಂತೆ ಆಗಬೇಕು ಎನ್ನುವುದು ನಮ್ಮ ಆಶಯವಾಗಿದೆ. ಆದರೆ, ನಬಾರ್ಡ್ ಸಾಲದ ಮೊತ್ತ ಕಡಿಮೆ ಮಾಡುತ್ತಿರುವುದರಿಂದ ಈ ಉದ್ದೇಶಕ್ಕೆ ಹಿನ್ನಡೆ ಆಗಲಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ನಬಾರ್ಡ್ ಇತ್ತೀಚಿನ ವರ್ಷಗಳಲ್ಲಿ ಪ್ರತಿ ವರ್ಷವೂ ರಿಯಾಯಿತಿ ಬಡ್ಡಿ ದರದ ಸಾಲ ಕಡಿಮೆ ಮಾಡುತ್ತ ಬಂದಿದೆ. ಇದೀಗ ಅಂದಾಜು 20 ಸಾವಿರ ಕೋಟಿ ರೂಪಾಯಿ ಕಡಿಮೆಯಾಗಿದೆ. ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಈ ರೀತಿ ಸಮಸ್ಯೆ ಸೃಷ್ಟಿಯಾಗಿದೆ. ಶೇಕಡ 40ರಷ್ಟಿದ್ದ ಸಾಲದ ಪ್ರಮಾಣ ಇದೀಗ ಶೇ20ಕ್ಕೆ ಕುಸಿದಿದೆ. ಕೃಷಿ ವಲಯದ ಮೇಲೆ ನಿಜವಾಗಿಯೂ ಆಸಕ್ತಿ ಇದ್ದರೆ ಸಾಲದ ಮೊತ್ತವನ್ನು ಯಾವುದೇ ಕಾರಣಕ್ಕೂ ಕಡಿಮೆ ಮಾಡಬಾರದು ಎಂದು ಹೇಳಿದ್ದಾರೆ.
ಸಹಕಾರ ಸಚಿವಾಲಯದಿಂದ ಲಾಭವಿಲ್ಲ: ಇನ್ನು ಕೇಂದ್ರ ಸರ್ಕಾರವು ಈಚೆಗೆ ಸಹಕಾರ ಸಚಿವಾಲಯವನ್ನು ಪ್ರಾರಂಭಿಸಿದೆ. ಆದರೆ, ಯಾವ ಕಾರಣಕ್ಕಾಗಿ ಇದನ್ನು ಪ್ರಾರಂಭಿಸಲಾಗಿದೆ ಎನ್ನುವುದೇ ಅರ್ಥವಾಗುತ್ತಿಲ್ಲ. ಇದರಿಂದ ಯಾವುದೇ ರಾಜ್ಯಗಳಿಗೂ ಅನುಕೂಲವಾಗಿಲ್ಲ ಎಂದು ದೂರಿದ್ದಾರೆ.
ಇನ್ನು ಕರ್ನಾಟಕದಲ್ಲಿ ಈಗಾಗಲೇ ಕೃಷಿ ಚಟುವಟಿಕೆ ಚುರುಕಾಗಿದೆ. ರೈತರಿಗೆ ಬಿತ್ತನೆ ಬೀಜ, ರಸಗೊಬ್ಬರ ಹಾಗೂ ಕೃಷಿ ಚಟುವಟಿಕೆಗೆ ಹಣದ ಅಗತ್ಯವಿದೆ. ರೈತರು ಸಹಕಾರಿ ಬ್ಯಾಂಕ್‌ಗಳಿಂದ ಕೃಷಿ ಸಾಲ ಸಿಗುವ ನಿರೀಕ್ಷೆಯಲ್ಲಿದ್ದಾರೆ. ಆದರೆ, ನಬಾರ್ಡ್ ಸಾಲದ ಮೊತ್ತ ಕಡಿಮೆ ಮಾಡಲು ಮುಂದಾಗಿದೆ.

ಇದರಿಂದ ಮುಂಗಾರು ಹಂಗಾಮಿನಲ್ಲಿ ಮಾತ್ರವಲ್ಲ ಹಿಂಗಾರು ಹಂಗಾಮಿನ ಅವಧಿಯ ಕೃಷಿ ಸಾಲದ ಮೇಲೂ ಪರಿಣಾಮ ಆಗಲಿದೆ. ಎಲ್ಲ ರೈತರೂ ಸಹ ವಾಣಿಜ್ಯ ಬ್ಯಾಂಕ್‌ಗಳಲ್ಲಿ ಸಾಲ ತೆಗೆದುಕೊಳ್ಳುವ ಪರಿಸ್ಥಿತಿಯಲ್ಲಿ ಇಲ್ಲ. ಹೀಗಾಗಿ, ಹೆಚ್ಚು ಷರತ್ತು ವಿಧಿಸದೆ ಕೃಷಿ ಸಾಲ ಕೊಡುತ್ತಿರುವುದು ಸಹಕಾರಿ ಬ್ಯಾಂಕ್‌ಗಳು ಮಾತ್ರ ಎಂದು ಸಚಿವ ಶಿವಾನಂದ ಪಾಟೀಲ ಅವರು ಹೇಳಿದ್ದಾರೆ.












Click it and Unblock the Notifications