ಮಿಶ್ರ ಬೆಳೆ ಬೆಳೆದು ನೆಮ್ಮದಿ ಕಂಡ ಮೈಸೂರು ಜಿಲ್ಲೆಯ ರೈತ
ಮೈಸೂರು, ಸೆಪ್ಟೆಂಬರ್ 18: ಕೃಷಿಗೆ ಹೆಚ್ಚು ರಾಸಾಯನಿಕ ಔಷಧಿಗಳನ್ನು ಸಿಂಪಡಿಸುವ ಈ ಕಾಲದಲ್ಲಿ ಮೈಸೂರು ಜಿಲ್ಲೆಯ ರೈತರೊಬ್ಬರು
ಯಾವುದೇ ಕ್ರಿಮಿನಾಶಕದ ಸಿಂಪಡಣೆ ಮಾಡದೇ, ರಾಸಾಯನಿಕ ಗೊಬ್ಬರವನ್ನು ಬಳಕೆ ಮಾಡದೆ ಸಾವಯವ ಗೊಬ್ಬರದ ಮೂಲಕ ಬೆಳೆ ಬೆಳೆದು ಇತರೆ ರೈತರಿಗೆ ಮಾದರಿಯಾಗಿದ್ದಾರೆ.
ಜಿಲ್ಲೆಯ ಬನ್ನೂರಿನ ರಂಗಸಮುದ್ರ ಗ್ರಾಮದ ಚೇರ್ಮನ್ ರೇವಣ್ಣರ ಎಂಬುವರ ಪುತ್ರ ಚಿಕ್ಕ ರೇವಣ್ಣ ಎಂಬುವರೇ ಹಲವು ರೀತಿಯ ಬೆಳೆ ಬೆಳೆದು ಪ್ರಗತಿಪರ ರೈತರಾಗಿ ಗಮನಸೆಳೆದಿದ್ದಾರೆ. ಚಿಕ್ಕ ರೇವಣ್ಣ ಅವರು, ತಮಗಿರುವ 15 ಎಕರೆ ಭೂಮಿಯಲ್ಲಿ ಕೃಷಿ ಮಾಡಿಕೊಂಡು ಹಲವು ರೀತಿಯ ಬೆಳೆಯನ್ನು ಬೆಳೆಯುತ್ತಾ ಕೃಷಿಯನ್ನೇ ಉಸಿರಾಗಿಸಿಕೊಂಡು ಜೀವನ ಸಾಗಿಸುತ್ತಿದ್ದಾರೆ.
ಬೆಲೆಯಲ್ಲಿನ ಏರುಪೇರು, ಹವಾಮಾನ ವೈಪರೀತ್ಯ ಹೀಗೆ ಹತ್ತು ಹಲವು ಕಾರಣಗಳಿಂದ ಬಾಳೆ ಬೆಳೆಯಲು ಹಿಂದೇಟು ಹಾಕುತ್ತಿರುವ ಈ ದಿನಗಳಲ್ಲಿ ರೇವಣ್ಣ ತಮ್ಮ ಎರಡೂವರೆ ಎಕರೆ ಪ್ರದೇಶದಲ್ಲಿ ಬಾಳೆಯನ್ನು ಬೆಳೆದು ಮಾದರಿಯಾಗಿದ್ದಾರೆ.

ಬಾಳೆಯ ಜತೆ ಮೆಣಸಿನಕಾಯ,ಕಲ್ಲಂಗಡಿ
ಬಾಳೆಯ ನಡುವೆ 12 ಅಡಿಯ ಅಂತರ ಕಾಯ್ದುಕೊಂಡು ಮೆಣಸಿನಕಾಯಿ, ಹಾಗೂ ಕಲ್ಲಂಗಡಿಯನ್ನು ಬೆಳೆದಿದ್ದಾರೆ. ಇನ್ನು ಎರಡೂವರೆ ಎಕರೆ ಭೂಮಿಯಲ್ಲಿ ಪರಂಗಿಯನ್ನು ಬೆಳೆದಿದ್ದು, ಪ್ರತಿ ಗಿಡದಲ್ಲೂ 25 ರಿಂದ 30 ಕಾಯಿಗಳು ಬಿಟ್ಟಿವೆ.

ಚಿಕ್ಕ ರೇವಣ್ಣ ಸಿಂಪಡಿಸುವ ಔಷಧಿಗಳಾವುವು?
ಬೇವಿನಔಷಧಿ, ಜೀವಾಮೃತ, ಕೊಟ್ಟಿಗೆ ಗೊಬ್ಬರ, ಎರಹುಳು ಗೊಬ್ಬರದ ಬಳಕೆಯ ಮೂಲಕ ಪರಂಗಿಯನ್ನು ಸುಮಾರು 1.50 ಲಕ್ಷದ ವೆಚ್ಚದಲ್ಲಿ ಬೆಳೆದಿದ್ದು, ಪ್ರತಿ ಎಂಟು ದಿನಗಳಿಗೊಮ್ಮೆ 1,500 ಕೆಜಿ ಹಣ್ಣನ್ನು ಮಾರಾಟ ಮಾಡುತ್ತಿದ್ದಾರೆ. ಇವರು ಬೆಂಗಳೂರು ಸೇರಿದಂತೆ ನಾನಾ ಭಾಗಗಳಿಗೆ ಪರಂಗಿಯನ್ನು ಸಾಗಿಸುತ್ತಿದ್ದಾರೆ. ಇದು ಇವರಿಗೆ ಲಾಭ ತಂದುಕೊಟ್ಟಿದೆ.

ಚಿಕ್ಕ ರೇವಣ್ಣ ಬೆಳೆದ ನಾನಾ ಬೆಳೆಗಳು
ತಮ್ಮ ಹದಿನೈದು ಎಕರೆ ಜಮೀನಿನಲ್ಲಿ ಕೃಷಿ ವಿವಿಧ ವಾಣಿಜ್ಯ ಬೆಳೆಯಾದ ಸಪೋಟ, ಸೀಬೆಹಣ್ಣು, ಕಬ್ಬು ಅಲ್ಲದೆ ಆಹಾರ ಬೆಳೆಗಳಾದ ಭತ್ತದ ತಳಿಗಳನ್ನು ಅಲ್ಲದೆ, ಟಮೋಟೋ, ಬೀನ್ಸ್, ಹಿರೇಕಾಯಿ, ಮೆಣಸಿನಕಾಯಿ, ಚೆಂಡು ಹೂ ಹಾಗೂ ಸೂರ್ಯಕಾಂತಿಯನ್ನು ಬೆಳೆದಿದ್ದಾರೆ.

ಕೃಷಿ ಜೊತೆಗೆ ಹೈನುಗಾರಿಕೆಗೂ ಸೈ
ಹೈನುಗಾರಿಕೆಯನ್ನು ಮಾಡುತ್ತಿದ್ದು, 4 ಹಸುಗಳನ್ನು ಸಾಕಿಕೊಂಡು ನೆಮ್ಮದಿಯ ಜೀವನ ಸಾಗಿಸುತ್ತಿದ್ದಾರೆ. ಚಿಕ್ಕ ರೇವಣ್ಣ ಅವರ ಅನುಭವಗಳನ್ನು ಸಲಹೆ ರೂಪದಲ್ಲಿ ಪಡೆಯಲು ದೂರವಾಣಿ ಸಂಖ್ಯೆ 9880755754 ನಂಬರ್ ಗೆ ಕರೆ ಮಾಡಬಹುದು.












Click it and Unblock the Notifications