ಕೃಷಿ ಕಾಯ್ದೆ ವಿರುದ್ಧದ ಹೋರಾಟಕ್ಕೆ 6 ತಿಂಗಳು: ಕರಾಳ ದಿನಾಚರಣೆ
ಮೈಸೂರು, ಮೇ 26: ಕೃಷಿ ಕಾಯ್ದೆ ವಿರೋಧಿಸಿ ನಡೆಯುತ್ತಿರುವ ರೈತರ ಹೋರಾಟ ಮೇ 26ಕ್ಕೆ ಆರು ತಿಂಗಳು ಪೂರೈಸಲಿದ್ದು, ಈ ಹಿನ್ನೆಲೆಯಲ್ಲಿ ಬುಧವಾರ ಕರಾಳ ದಿನಾಚಾರಣೆ ಆಚರಿಸಲು ರೈತ ಸಂಘಟನೆ ನಿರ್ಧರಿಸಿದೆ.
ಈ ಕುರಿತು ಮಾಹಿತಿ ನೀಡಿರುವ ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ, ""ದೆಹಲಿಯ ಸುತ್ತಮುತ್ತ, ದೇಶದಾದ್ಯಂತ ರೈತ ಚಳವಳಿ ವಿಸ್ತರಿಸಿದ್ದು, ಪ್ರಪಂಚದ ಹಲವಾರು ದೇಶಗಳಿಂದಲೂ ರೈತರ ಹೋರಾಟಕ್ಕೆ ಬೆಂಬಲ ಸಿಕ್ಕಿದೆ'' ಎಂದಿದ್ದಾರೆ.
ರೈತರ ಹೋರಾಟ ಬುಧವಾರಕ್ಕೆ 6 ತಿಂಗಳು ಪೂರೈಸಲಿದ್ದು, ಹೀಗಾಗಿ ಕೇಂದ್ರದ ವಿರುದ್ಧ ಮೇ 26ರಂದು ದೇಶದಾದ್ಯಂತ ಕರಾಳ ದಿನಾಚರಣೆ ಆಚರಿಸಲು ಸಂಯುಕ್ತ ಕಿಸಾನ್ ಮೋರ್ಚಾ ಕರೆ ನೀಡಿದೆ.

ಹೀಗಾಗಿ ರಾಜ್ಯದಲ್ಲೂ ಕರಾಳ ದಿನ ಆಚರಿಸಲು ಸಂಯುಕ್ತ ಹೋರಾಟ- ಕರ್ನಾಟಕ ತೀರ್ಮಾನ ಮಾಡಿದ್ದು, ಕಾರ್ಮಿಕರು, ದಲಿತರು, ಪ್ರಗತಿಪರ ಸಂಘಟನೆಗಳಿಂದ ತಮ್ಮ ತಮ್ಮ ಮನೆ, ಕಚೇರಿಗಳ ಮೇಲೆ ಕಪ್ಪು ಬಾವುಟವನ್ನು ಹಾರಿಸುವುದರ ಮೂಲಕ ಕರಾಳ ದಿನ ಆಚರಣೆ ಮಾಡಲಿದ್ದಾರೆ ಎಂದು ತಿಳಿಸಿದ್ದಾರೆ.
ಹಾಗೆಯೇ ರೈತ ಸಮೂಹ ಹೊಲಗಳಲ್ಲಿ ಕಪ್ಪು ಬಟ್ಟೆ ಧರಿಸಿ ಹೊಲಗದ್ದೆಗಿಳಿದು ಕೃಷಿ ಚಟುವಟಿಕೆಯಲ್ಲಿ ತೊಡಗಿಕೊಳ್ಳಲಿದ್ದಾರೆ ಎಂದು ಬಡಗಲಪುರ ನಾಗೇಂದ್ರ ಹೇಳಿದ್ದಾರೆ.












Click it and Unblock the Notifications