ದೆಹಲಿ ಚಲೋಗೆ ಹೊರಟಿದ್ದ ರಾಜ್ಯದ ನೂರಾರು ರೈತರು ಭೋಪಾಲ್‌ನಲ್ಲಿ ಪೊಲೀಸರ ವಶಕ್ಕೆ-ಮುಂದಾಗಿದ್ದೇನು?
ಚಾಮರಾಜನಗರ, ಫೆಬ್ರವರಿ, 12: ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಸಂಯುಕ್ತ ಕಿಸಾನ್ ಮೋರ್ಚಾ ಕರೆ ಕೊಟ್ಟಿದ್ದ ಫೆಬ್ರವರಿ 13ರ ದೆಹಲಿ ಚಲೋ ಪ್ರತಿಭಟನೆಗೆ ತೆರಳಿದ್ದ ರಾಜ್ಯದ ರೈತರನ್ನು ಮಧ್ಯಪ್ರದೇಶದ ಪೊಲೀಸರು ಸೋಮವಾರ ಮುಂಜಾನೆ ವಶಕ್ಕೆ ಪಡೆದಿದ್ದಾರೆ.
ಚಾಮರಾಜನಗರ ಹಾಗೂ ಮೈಸೂರು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಿಂದ ನವದೆಹಲಿಗೆ ಪ್ರಯಾಣ ಬೆಳೆಸಿದ್ದ 130ಕ್ಕೂ ಅಧಿಕ ರೈತ ಹೋರಾಟಗಾರರನ್ನು ಮುನ್ನೆಚ್ಚರಿಕೆ ಕ್ರಮವಾಗಿ ಇಂದು (ಫೆಬ್ರವರಿ 12) ಮಧ್ಯಪ್ರದೇಶದ ಭೋಪಾಲ್ ರೈಲ್ವೆ ನಿಲ್ದಾಣದಲ್ಲಿ ವಶಕ್ಕೆ ಪಡೆದಿದ್ದಾರೆ.

ಚಾಮರಾಜನಗರದಿಂದ ಕಬ್ಬು ಬೆಳೆಗಾರರ ಸಂಘದ ಮೂಕಹಳ್ಳಿ ಮಹಾದೇವಸ್ವಾಮಿ, ಮೂಡ್ಲುಪುರ ಶಿವಮೂರ್ತಿ, ರೇವಣ್ಣ, ಉಡಿಗಾಲ ಲೋಕೇಶ್, ಬಸವಣ್ಣ, ಶೀಲಾ, ಪುಷ್ಪಾ, ಕಲಾವತಿ ಸೇರಿದಂತೆ 30ಕ್ಕೂ ಅಧಿಕ ಮಂದಿ ತೆರಳಿದ್ದರು. ಮೈಸೂರಿನಿಂದಲೂ 70ಕ್ಕೂ ಹೆಚ್ಚು ಮಂದಿ ನವದೆಹಲಿಗೆ ಪ್ರಯಾಣ ಬೆಳೆಸಿದ್ದರು. ಇವರೆಲ್ಲರನ್ನೂ ಇಂದು ಮಧ್ಯಪ್ರದೇಶ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ರೈತರ ಸಾಲಮನ್ನಾ ಮಾಡಬೇಕು, ಸ್ವಾಮಿನಾಥನ್ ವರದಿ ಜಾರಿಯಾಗಬೇಕು, ಎಂಎಸ್ಪಿ ನಿಗದಿಯಾಗಬೇಕು. 60 ವರ್ಷ ತುಂಬಿದ ರೈತರಿಗೆ ಪಿಂಚಣಿ ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ದೇಶದ ಬಹುಪಾಲು ರೈತ ಸಂಘಟನೆಗಳು ರಾಷ್ಟ್ರೀಯ ಕಿಸಾನ್ ಒಕ್ಕೂಟ ರಚನೆ ಮಾಡಿಕೊಂಡು ಫೆಬ್ರವರಿ 13ರಂದು ಹೋರಾಟಕ್ಕೆ ಕರೆ ಕೊಟ್ಟಿದ್ದವು.
ಇನ್ನು, ಚಾಮರಾಜನಗರ ಕಬ್ಬು ಬೆಳೆಗಾರ ಸಂಘದ ಕಾರ್ಯದರ್ಶಿ ಎಚ್.ಮೂಕಹಳ್ಳಿ ಮಹದೇವಸ್ವಾಮಿ ಈ ಕುರಿತು ಪ್ರತಿಕ್ರಿಯಿಸಿದ್ದು, ಮುಂಜಾನೆ ಮಲಗಿದ್ದವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪೊಲೀಸರು ವಶಕ್ಕೆ ಪಡೆಯುವ ವೇಳೆ ಕುರುಬೂರು ಶಾಂತಕುಮಾರ್ ಅವರ ಪತ್ನಿ ಪದ್ಮಾ ಶಾಂತಕುಮಾರ್ ಅವರಿಗೆ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ. ನಮ್ಮ ರೈಲಿನಲ್ಲಿದ್ದ 150ಕ್ಕೂ ಅಧಿಕ ಮಂದಿಯನ್ನು ಛತ್ರವೊಂದರಲ್ಲಿ ಇಟ್ಟಿದ್ದಾರೆ ಎಂದು ಅಸಮಾಧಾನ ಹೊರಹಾಕಿದರು.












Click it and Unblock the Notifications