ಮುಂಗಾರು ಹಂಗಾಮು; ಬೀಜೋಪಚಾರ ವಿಧಾನ, ರೈತರಿಗೆ ಸಲಹೆಗಳು
ಧಾರವಾಡ, ಜೂನ್ 04; ಧಾರವಾಡ ಜಿಲ್ಲೆಯಲ್ಲಿ 2023-24ನೇ ಸಾಲಿನ ಮುಂಗಾರು ಹಂಗಾಮಿನ ಸಿದ್ಧತೆಗಳು ನಡೆದಿವೆ. ಬೆಳೆಯುವ ಪ್ರಮುಖ ಬೆಳೆ ಹಾಗೂ ಬೀಜೋಪಚಾರ ವಿಧಾನದ ರೈತರಿಗೆ ಮಾಹಿತಿ ನೀಡಲಾಗಿದೆ. ಬಿತ್ತನೆ ಪೂರ್ವದಲ್ಲಿ ಬೀಜೋಪಚಾರ ಹಾಗೂ ಬರ ನಿರೋಧಕ ಸೂಕ್ತ ತಳಿಗಳನ್ನು ಆಯ್ಕೆ ಮಾಡಿಕೊಂಡು ಬಿತ್ತನೆ ಮಾಡಬೇಕು ಎಂದು ಸಲಹೆ ನೀಡಲಾಗಿದೆ.
ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಶಿವನಗೌಡ ಪಾಟೀಲ 2023-24ನೇ ಸಾಲಿನಲ್ಲಿ ಜಿಲ್ಲೆಯ ಮುಂಗಾರು ಹಂಗಾಮಿನಲ್ಲಿ ರೈತರು ಬಿತ್ತನೆ ಪೂರ್ವದಲ್ಲಿ ಕೃಷಿ ವಿಶ್ವವಿಧ್ಯಾಲಯ ಧಾರವಾಡದಿಂದ ವಲಯವಾರು ಸೂಚಿಸಿರುವ ರೋಗ ಹಾಗೂ ಬರ ನಿರೋದಕ ಸೂಕ್ತ ತಳಿಗಳ ಬೀಜಗಳನ್ನು ಆಯ್ಕೆ ಮಾಡಿಕೊಳ್ಳಬೇಕು ಎಂದು ಕರೆ ನೀಡಿದ್ದಾರೆ.

ಬಿತ್ತನೆಗೆ ಮೊದಲು ರೈತರು, ಬೀಜ ಹಾಗೂ ಮಣ್ಣಿನಿಂದ ಬರಬಹುದಾದ ರೋಗ ಹತೋಟಿ ಮಾಡಲು ಬೀಜೋಪಚಾರ ಕಡ್ಡಾಯವಾಗಿ ಮಾಡಬೇಕು ಎಂದು ಹೇಳಿದ್ದಾರೆ. ಬಿತ್ತನೆ ಪೂರ್ವದಲ್ಲಿ ಬೀಜೋಪಚಾರ ವಿಧಾನಗಳ ಕುರಿತು ರೈತರಿಗೆ ಸಲಹೆಗಳನ್ನು ನೀಡಿದ್ದಾರೆ.
ಬೀಜೋಪಚಾರ ವಿಧಾನಗಳು; ಗೋವಿನ ಜೋಳದಲ್ಲಿ ಉರಿಜಿಂಗಿ ರೋಗಕ್ಕೆ ಪ್ರತಿ ಕಿ. ಗ್ರಾಂ ಬೀಜಕ್ಕೆ 25 ಗ್ರಾಂ ಅಝೋಸ್ಪಿರಿಲ್ಲಂ (ಎಸಿಡಿ 15 ಅಥವಾ ಎಸಿಡಿ 20 ತಳಿ) ಹಾಗೂ 6 ಗ್ರಾಂ. ಟ್ರೈಕೊಡರ್ಮಾ ಹಾರ್ಜಿಯಾನಮ್ ಶಿಲೀದ್ರದಿಂದ ಬೀಜೋಪಚಾರ ಮಾಡಿ ಬಿತ್ತನೆ ಮಾಡಬೇಕು.
ಕೇದಿಗೆ ರೋಗಕ್ಕೆ ಬಿತ್ತನೆಯ ಬೀಜವನ್ನು ಪ್ರತಿ ಕಿ. ಗ್ರಾಂ ಬೀಜಕ್ಕೆ 2ಗ್ರಾಂ. ಮೆಟಲಾಕ್ಸಿಲ್ (4%)+ ಮ್ಯಾಂಕೊಜೆಬ್(64%) ಎಮ್.ಜೆಡ್ 72 ಡಬ್ಲೂ.ಪಿ ಅಂತರವ್ಯಾಪಿ ಶಿಲೀಂಧ್ರನಾಶಕದಿಂದ ಉಪಚರಿಸಬೇಕು ಹಾಗೂ ರೋಗಗ್ರಸ್ಥ ಗಿಡಗಳನ್ನು ಬೇರುಸಹಿತ ಕಿತ್ತು ಸುಡಬೇಕು ಎಂದು ಸಲಹೆ ನೀಡಲಾಗಿದೆ.

ಸೋಯಾ ಅವರೆ, ಹೆಸರು ಹಾಗೂ ಶೇಂಗಾ ಬೆಳೆಗಳಿಗೆ ಪ್ರತಿ ಕಿ. ಗ್ರಾಂ ಬಿತ್ತನೆ ಬೀಜವನ್ನು 3 ಗ್ರಾಮ ಥೈರಾಮ (75 WP) ಅಥವಾ ಕ್ಯಾಪ್ಟನ್ (80 WP) ಅಥವಾ ಕಾರ್ಬಾಕ್ಸಿನ್‌ನಿಂದ (75 WP) ಉಪಚರಿಸಬೇಕು. ನಂತರ 1 ಲೀ. ನೀರಿಗೆ 100 ಗ್ರಾಂ ಬೆಲ್ಲ ಹಾಕಿ ಕರಗಿಸಿ ಪಾಕವನ್ನು ತಯಾರಿಸಿಕೊಳ್ಳಬೇಕು, ಬಿತ್ತುವ ಬೀಜಗಳನ್ನು ಹರಡಿ ಅದರಮೇಲೆ ತಯಾರಿಸಿದ ಬೆಲ್ಲದ ಪಾಕವನ್ನು ಸರಿಯಾಗಿ ಎಲ್ಲ ಕಾಳುಗಳಿಗೆ ಹತ್ತುವಂತೆ ಸಿಂಪಡಿಸಿ 10 ಗ್ರಾಮ ಟ್ರೈಕೊಡ್ರಮಾ 10 ಗ್ರಾಂ ರೈಜೋಬಿಯಮ್ ಹಾಗೂ 10 ಗ್ರಾಂ ರಂಜಕ ಕರಗಿಸುವ ಅಣುಜೀವಿಯನ್ನು (PSB) ಬೀಜಕ್ಕೆ ಉಪಚರಿಸಿ ನೆರಳಿನಲ್ಲಿ ಒಣಗಿಸಿ ಬಿತ್ತಬೇಕು ಎಂದು ಹೇಳಿದ್ದಾರೆ.
ಆಸಕ್ತ ರೈತರು ಹೆಚ್ಚಿನ ಮಾಹಿತಿಗಾಗಿ ಹತ್ತಿರದ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಬಹುದು ಎಂದು ಕೃಷಿ ಇಲಾಖೆಯ ಜಂಟಿ ಕೃಷಿ ನಿರ್ದೇಶಕ ಶಿವನಗೌಡ ಪಾಟೀಲ ತಿಳಿಸಿದ್ದಾರೆ.
ವೈಜ್ಞಾನಿಕ ಹೈನುಗಾರಿಕೆ ತರಬೇತಿ; ಧಾರವಾಡ ಜಿಲ್ಲೆಯ ಪಶುಪಾಲನಾ ಮತ್ತು ಪಶುವೈದ್ಯಕೀಯ ತರಬೇತಿ ಕೇಂದ್ರದಲ್ಲಿ ಜೂನ್ ಹಾಗೂ ಜುಲೈ 2023ರಲ್ಲಿ ಪಶುಪಾಲನ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ ವತಿಯಿಂದ ಧಾರವಾಡ, ಗದಗ, ಹಾವೇರಿ, ಕಾರವಾರ ಜಿಲ್ಲೆಯ ರೈತ ಹಾಗೂ ರೈತ ಮಹಿಳೆಯರಿಗೆ 2 ದಿನಗಳ ಅವಧಿಗೆ ತಂಡವಾರು ಉಚಿತವಾಗಿ ವೈಜ್ಞಾನಿಕ ಹೈನುಗಾರಿಕೆ ಮತ್ತು ಕುರಿ, ಮೇಕೆ ಸಾಕಾಣಿಕೆಯ ತರಬೇತಿ ನೀಡಲಾಗುತ್ತಿದೆ.
ಆಸಕ್ತಿಯುಳ್ಳ ರೈತರು ತಮ್ಮ ಹೆಸರನ್ನು ಎಸ್‍ಎಂಎಸ್ ಸಂದೇಶದ ಮೂಲಕ, ಕಚೇರಿಗೆ ದೂರವಾಣಿ ಕರೆ ಮೂಲಕ ಅಥವಾ ಖುದ್ದಾಗಿ ಭೇಟಿ ನೀಡಿ ನೋಂದಾಯಿಸಬಹುದು.
ಆಸಕ್ತರು ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 0836-2443743, 9591024499, 8618022108 ಸಂಪರ್ಕಿಸಬಹುದು ಎಂದು ಪಶುಪಾಲನಾ ಮತ್ತು ಪಶು ವೈದ್ಯಕೀಯ ತರಬೇತಿ ಕೇಂದ್ರದ ಮುಖ್ಯ ಪಶು ವೈದ್ಯಾಧಿಕಾರಿಗಳು ತಿಳಿಸಿದ್ದಾರೆ.












Click it and Unblock the Notifications