ವಿದ್ಯಾರ್ಥಿಗಳಿಗೆ ಕೃಷಿ, ತೋಟಗಾರಿಕೆ ಆಧಾರಿತ ಉದ್ಯಮ ಪ್ರಾರಂಭಿಸಲು ಶಾಸಕ ಚರಂತಿಮಠ ಸಲಹೆ
ಬಾಗಲಕೋಟೆ, ಅಕ್ಟೋಬರ್ 18: ''ಕೃಷಿ ಮತ್ತು ತೋಟಗಾರಿಕೆ ಆಧಾರಿತ ಉದ್ಯಮ ಪ್ರಾರಂಭವಾದಲ್ಲಿ ರೈತರ ಆರ್ಥಿಕ ಮಟ್ಟ ಹೆಚ್ಚಳವಾಗುವುದರ ಜೊತೆಗೆ ಉದ್ಯೋಗ ಸೃಷ್ಟಿಸಲು ಸಾಧ್ಯವಾಗುತ್ತದೆ'' ಎಂದು ಶಾಸಕ ವೀರಣ್ಣ ಚರಂತಿಮಠ ತಿಳಿಸಿದ್ದಾರೆ.
ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಸಭಾಭವನದಲ್ಲಿ ಸೋಮವಾರ ಹಮ್ಮಿಕೊಂಡ 3 ದಿನಗಳ ಅಗ್ರಿ ಸ್ಟಾರ್ಟ್‌ಅಪ್ ಸಮಾವೇಶವ ಮುಖ್ಯ ಅತಿಥಿಗಳಾಗಿ ಅವರು ಮಾತನಾಡಿದರು. ದೇಶದ ಪ್ರಧಾನ ಮಂತ್ರಿಗಳು ಕಿಸಾನ್ ಸಮ್ಮಾನ್ ಯೋಜನೆಯಡಿ ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಕೃಷಿ ಮತ್ತು ತೋಟಗಾರಿಕೆಯಲ್ಲಿ ಪದವಿ ಹಾಗೂ ಡಿಪ್ಲೋಮಾ ಮಾಡಿದಂತಹ ವಿದ್ಯಾರ್ಥಿಗಳು ಅಗ್ರಿ ಸ್ಟಾರ್ಟ್‌ಅಪ್ ಮೂಲಕ ಕೃಷಿ ಮತ್ತು ತೋಟಗಾರಿಕೆ ಆಧಾರಿತ ಉದ್ಯಮಗಳನ್ನು ಪ್ರಾರಂಭಿಸಲು ಮುಂದಾಗಬೇಕು ಎಂದರು.
ಕೃಷಿ ಪ್ರಧಾನವಾದ ನಮ್ಮ ದೇಶದಲ್ಲಿ ಕೃಷಿಯೇ ಮೂಲ ಉದ್ಯೋಗವಾಗಿದ್ದರಿಂದ ಕೃಷಿಯಲ್ಲಿ ವೈಜ್ಞಾನಿಕ, ಲಾಭದಾಯಕ ಹಾಗೂ ಆದಾಯ ಹೆಚ್ಚಳವಾಗುವಂತಹ ಗುಣಮಟ್ಟದ ಸಂಶೋದನೆಗಳು ಆಗಬೇಕು. ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಆರ್ಥಿಕ ಮಟ್ಟದ ಹೆಚ್ಚಿಸುವ ಕಾರ್ಯವಾಗಬೇಕು. ಮಣ್ಣಿನ ಗುಣಮಟ್ಟದ ಆಧಾರಿತ ವ್ಯವಸಾಯ, ಹನಿ ನೀರಾವರಿ, ನೀರಿನ ಸದ್ಬಳಕೆ, ನ್ಯಾನೋ ಯೂರಿಯಾ ಬಳಕೆ, ರಸ ನೀರಾವರಿಗಳನ್ನು ಅಳವಡಿಸಿಕೊಂಡಲ್ಲಿ ಉತ್ತಮ ಬೆಳೆ ಬೆಳೆಯಲು ಸಾಧ್ಯವಾಗುತ್ತದೆ ಎಂದು ತಿಳಿಸಿದ್ದಾರೆ.

ಈ ಯೋಜನೆಯಡಿ ವಿದೇಶದಲ್ಲಿ ತರಬೇತಿ ಪಡೆಯಲು ತೋಟಗಾರಿಕಾ ವಿಶ್ವವಿದ್ಯಾಲಯದ 28 ವಿದ್ಯಾರ್ಥಿಗಳನ್ನು ಆಯ್ಕೆಯಾಗಿದ್ದು, ತರಬೇತಿ ಪಡೆದುಕೊಂಡು ದೇಶದಲ್ಲಿ ಸ್ವಾವಲಂಬಿಯಾಗಿ ಬದುಕುವ ಮೂಲಕ ಇತರರನ್ನು ಸ್ವಾವಲಂಬಿಗಳನ್ನಾಗಿ ಮಾಡಬೇಕು. ಸಂಶೋಧನೆಗಳಿಗೆ ವಿಶ್ವವಿದ್ಯಾಲಯಗಳು ಹೆಚ್ಚು ಒತ್ತು ಕೊಡಬೇಕು ಎಂದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಮಾತನಾಡಿದ ದೆಹಲಿಯ ಭಾರತೀಯ ಅನುಸಂಧಾನ ಕೃಷಿ ಪರಿಷತ್ತಿನ ಉಪ ಮಹಾನಿರ್ದೇಶಕ ಡಾ.ಆರ್.ಸಿ.ಅಗರವಾಲ್ "ರಾಷ್ಟ್ರದ ಅಭಿವೃದ್ದಿಯ ವಿಷಯದಲ್ಲಿ ಕೃಷಿ ಮತ್ತು ತೋಟಗಾರಿಕೆ ಆಧಾರಿತ ಉದ್ಯಮಿಗಳ ಪಾತ್ರ ಅಪಾರವಾಗಿದೆ. ವಿದ್ಯಾರ್ಥಿಗಳು ಇಂತಹ ಉದ್ಯಮಗಳನ್ನು ಸ್ಥಾಪಿಸಲು ಮುಂದಾಗಬೇಕು. ಇದರಿಂದ ರೈತರು ಬೆಳೆದ ಬೆಳೆ ಒಳ್ಳೆಯ ಬೆಳೆ ಬರುವುದಲ್ಲದೇ ಉದ್ಯೋಗ ಸೃಷ್ಟಿಯಾಗಲು ಸಾಧ್ಯವೆಂದು" ತಿಳಿಸಿದರು.
ವಿಧಾನ ಪರಿಷತ್ ಸದಸ್ಯ ಪಿ.ಎಚ್. ಪೂಜಾರ ಮಾತನಾಡಿ, ''ಉತ್ತಮ ರಾಷ್ಟ್ರ ನಿರ್ಮಾಣ ಮಾಡುವ ನಿಟ್ಟಿನಲ್ಲಿ ದೇಶದ ಪ್ರಧಾನ ಮಂತ್ರಿಗಳು ಕರೆ ನೀಡಿದಂತೆ ಅಗ್ರಿ ಸ್ಟಾರ್ಟ್‌ಅಪ್‍ನಲ್ಲಿ ವಿಶಾಲವಾದ ಅವಕಾಶ ನೀಡಿದ್ದು, ಅದರ ಸದುಪಯೋಗವಾಗಬೇಕು. ವಿಜ್ಞಾನದ ಹೊಸ ಹೊಸ ಅವಿಷ್ಕಾರಗಳು ದೇಶದ ಜನರಿಗೆ ತಲುಪಿಸುವ ಕೆಲಸವಾಗಬೇಕು. ರೈತ ದೇಶದ ಬೆನ್ನೆಲುಬಾಗಿದ್ದು, ವಿದ್ಯಾರ್ಥಿಗಳು ಭವಿಷ್ಯದ ವಿಜ್ಞಾನಿಗಳಾಗಬೇಕು'' ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಕೃಷಿ ಆಧಾರಿತ ಉದ್ಯಮಿಗಳು ಹೊರತಂದ ಉತ್ಪನ್ನಗಳನ್ನು ಬಿಡುಗಡೆ ಮಾಡಲಾಯಿತು. ವಿವಿಯ ಪ್ರಧಾನ ಸಂಶೋಧಕ ಡಾ.ಆರ್.ಕೆ.ಮೇಸ್ತಾ ತೋಟಗಾರಿಕೆ ವಿವಿಯ ಕುಲಪತಿ ಡಾ.ಕೆ.ಎಂ.ಇಂದಿರೇಶ, ಶಿವಮೊಗ್ಗದ ಉಪ ಕುಲಪತಿ ಡಾ.ಆರ್.ಸಿ.ಜಗದೀಶ, ಐಸಿಎಆರ್ ಬೋರ್ಡನ ಸದಸ್ಯ ಡಾ.ಎಂ.ಶಿವಮೂರ್ತಿ, ತೋವಿವಿಯ ರಿಜಿಸ್ಟರ ಡಾ.ಟಿ.ಬಿ.ಅಲ್ಲೋಳ್ಳಿ, ಸಹ ಪ್ರಧಾನ ಸಂಶೋಧಕರಾದ ಡಾ.ಐ.ಬಿ.ಬಿರಾದಾರ ಸೇರಿದಂತೆ ಇತರರು ಉಪಸ್ಥಿತರಿದ್ದರು.












Click it and Unblock the Notifications