• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮೈಸೂರು: ರಾಗಿ ಬೆಳೆದ ರೈತರನ್ನು ಕಾಡಿದ ಅಕಾಲಿಕ ಮಳೆ!

|
Google Oneindia Kannada News

ಮೈಸೂರು, ಡಿಸೆಂಬರ್ 1: ಅದ್ಯಾಕೋ ಗೊತ್ತಿಲ್ಲ ಈ ಬಾರಿ ಸಾಕೆಂದು ದೇವರಲ್ಲಿ ಪ್ರಾರ್ಥಿಸುತ್ತಿದ್ದರೂ ಮಳೆ ಮಾತ್ರ ಸುರಿಯುತ್ತಲೇ ಇದೆ. ಹಿಂಗಾರು ಮಳೆ ಈ ಪ್ರಮಾಣದಲ್ಲಿ ಸುರಿದದ್ದು ಅಪರೂಪವೇ. ಥೇಟ್ ಮುಂಗಾರು ಮಳೆಯಂತೆಯೇ ಸುರಿಯುತ್ತಿದ್ದು, ರೈತರು ಸಂಕಷ್ಟಕ್ಕೀಡಾಗಿದ್ದಾರೆ.

ಸಾಮಾನ್ಯವಾಗಿ ಹಿಂಗಾರು ಮಳೆ ಎಂದರೆ ಆಗೊಮ್ಮೆ ಈಗೊಮ್ಮೆ ಸುರಿಯುತ್ತದೆ. ಅದರಲ್ಲೂ ಸೋನೆ ಮಳೆ ಜಾಸ್ತಿ. ಹೀಗಾಗಿ ಈ ಮಳೆಗೆ ಹೊಂದಿಕೊಂಡಂತೆ ಹೊಲಗಳಲ್ಲಿ ರೈತರು ರಾಗಿ ಬೆಳೆದಿದ್ದರು. ಅದು ಈಗಾಗಲೇ ಕೊಯ್ಲಿಗೆ ಬಂದಿದೆ. ಉತ್ತಮ ಫಸಲು ಬಂದಿತ್ತಾದರೂ ಈಗ ಭಾರೀ ಮಳೆಯಿಂದಾಗಿ ನೆಲಕಚ್ಚಿದ್ದು, ಮೊಳಕೆ ಬರಲಾರಂಭಿಸಿರುವುದು ರೈತರ ಕಣ್ಣಲ್ಲಿ ನೀರು ತರಿಸುತ್ತಿದೆ.

 ರೈತರ ನಿರೀಕ್ಷೆ ಹುಸಿ ಮಾಡಿದ ಮಳೆ

ರೈತರ ನಿರೀಕ್ಷೆ ಹುಸಿ ಮಾಡಿದ ಮಳೆ

ಹಾಗೆ ನೋಡಿದರೆ ಮೈಸೂರು ಜಿಲ್ಲೆಯಲ್ಲಿ ಬಹುತೇಕ ರೈತರು ರಾಗಿ ಬೆಳೆದಿದ್ದಾರೆ. ಅದರಲ್ಲೂ ಹುಣಸೂರು ವ್ಯಾಪ್ತಿಯಲ್ಲಿ ಶುಂಠಿ ಬೆಳೆದಿದ್ದ ರೈತರು ಮಳೆಗಾಲದಲ್ಲಿ ಮಳೆಯಿಂದ ಶುಂಠಿ ಬೆಳೆ ನಾಶವಾಗಿದ್ದರಿಂದ ಅದನ್ನು ತೆಗೆದು ಅಲ್ಲಿ ರಾಗಿ ಬೆಳೆ ಬೆಳೆದಿದ್ದರು. ಬೆಳೆ ಹುಲುಸಾಗಿ ಬಂದಿತ್ತಲ್ಲದೆ, ಉತ್ತಮ ಇಳುವರಿಯನ್ನು ರೈತರು ನಿರೀಕ್ಷೆ ಮಾಡಿದ್ದರು. ಆದರೆ ಈ ಬಾರಿ ಆಗಿದ್ದೇ ಬೇರೆ.

ಈ ವರ್ಷ ಆರಂಭದಿಂದಲೂ ಮಳೆ ಉತ್ತಮವಾಗಿಯೇ ಸುರಿದಿತ್ತು. ಹೀಗಾಗಿ ರೈತರ ಮೊಗದಲ್ಲಿ ಮಂದಹಾಸ ಮೂಡಿತ್ತು. ಕಳೆದೆರಡು ವರ್ಷಗಳಿಗೆ ಹೋಲಿಸಿದರೆ ಪ್ರವಾಹ ಕಡಿಮೆಯಿತ್ತು. ಮಳೆಯಿಂದ ಕೆರೆಕಟ್ಟೆಗಳು ತುಂಬಿದ್ದು, ಅಂತರ್ಜಲ ವೃದ್ಧಿಸಿತ್ತು. ಹೀಗಾಗಿ ರೈತರು ಕೊರೊನಾ ಸಂಕಷ್ಟದ ನಡುವೆಯೂ ಹುಮ್ಮಸ್ಸಿನಿಂದ ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದರು. ಹುಣಸೂರು ವ್ಯಾಪ್ತಿಯಲ್ಲಿ ಈ ಹಿಂದೆ ತಂಬಾಕು ಬೆಳೆಯುತ್ತಿದ್ದ ರೈತರು ಇತ್ತೀಚೆಗೆ ಪರ್ಯಾಯ ಬೆಳೆಯತ್ತ ಮುಖ ಮಾಡಿದ್ದಲ್ಲದೆ, ನೀರಿನಾಶ್ರಯವಿಲ್ಲದ ಜಮೀನುಗಳಲ್ಲಿ ಹಿಂಗಾರು ಮಳೆಯನ್ನು ನಂಬಿ ರಾಗಿ ಬೆಳೆದಿದ್ದರು.

 ಬೆಳೆದ ಬೆಳೆ ಮಣ್ಣುಪಾಲಾದ ಚಿಂತೆ

ಬೆಳೆದ ಬೆಳೆ ಮಣ್ಣುಪಾಲಾದ ಚಿಂತೆ

ರಾಗಿ ಸಾಮಾನ್ಯವಾಗಿ ದೀಪಾವಳಿ ವೇಳೆಗೆ ಕೊಯ್ಲಿಗೆ ಬರುತ್ತದೆ. ಹಾಗಾಗಿ ಹಬ್ಬ ಮುಗಿಸಿಕೊಂಡು ರೈತರು ಕೊಯ್ಲು ಆರಂಭಿಸುತ್ತಿದ್ದರು. ಆದರೆ ಈ ಬಾರಿ ಆಗಿದ್ದೇ ಬೇರೆ. ಮಳೆ ಬಿಡುವು ಕೊಡದೆ ಆಗಾಗ್ಗೆ ಸುರಿಯುತ್ತಲೇ ಇದ್ದುದರಿಂದ ರಾಗಿ ಬೆಳೆಯ ಮೇಲೆ ಪರಿಣಾಮ ಬೀರಿದ್ದು, ಕೆಲವೆಡೆ ಬೆಳೆ ಎತ್ತರಕ್ಕೆ ಬೆಳೆದಿದ್ದು, ಬಲಿತು ಒಣಗಬೇಕಾಗಿತ್ತಾದರೂ ಬಿಸಿಲು ಇಲ್ಲದೆ ಮಳೆ ಸುರಿದ ಕಾರಣ ತೆನೆ ಒಣಗದೆ ಹಸಿಯಾಗಿಯೇ ಉಳಿದಿದ್ದು, ಇದರಿಂದ ಮಳೆ ಬೀಳುತ್ತಿದ್ದಂತೆಯೇ ತೆನೆ ಭಾರವಾಗಿ ನೆಲಕಚ್ಚಿದೆ. ಈಗ ಮೇಲಿಂದ ಮೇಲೆ ಮಳೆ ಸುರಿಯುತ್ತಿರುವುದರಿಂದ ಮೊಳಕೆ ಬರುತ್ತಿದ್ದು, ಬೆಳೆ ಸಂಪೂರ್ಣ ನಷ್ಟವಾಗುತ್ತಿದೆ. ಇದರಿಂದ ಹಣ ಖರ್ಚು ಮಾಡಿ ಶ್ರಮವಹಿಸಿ ಬೆಳೆದ ಬೆಳೆ ಮಣ್ಣು ಪಾಲಾಯಿತಲ್ಲ ಎಂಬ ನೋವು ರೈತರನ್ನು ಕಾಡಲಾರಂಭಿಸಿದೆ.

 ಕೈಹಿಡಿಯುತ್ತಿದ್ದ ಬೆಳೆಗಳು ಕೈಕೊಟ್ಟಿವೆ

ಕೈಹಿಡಿಯುತ್ತಿದ್ದ ಬೆಳೆಗಳು ಕೈಕೊಟ್ಟಿವೆ

ಬಹಳಷ್ಟು ವರ್ಷಗಳಿಂದ ಅನಾವೃಷ್ಠಿಯಿಂದ ರೈತರು ಬೆಳೆ ಕಳೆದುಕೊಳ್ಳುತ್ತಿದ್ದರು. ಆದರೆ ಈ ಬಾರಿ ಅತಿವೃಷ್ಠಿಯಿಂದ ರಾಗಿ ಮಾತ್ರವಲ್ಲದೆ ಭತ್ತಕ್ಕೂ ಹಾನಿಯಾಗಿದೆ. ಪ್ರತಿವರ್ಷವೂ ರೈತರ ಕೈಹಿಡಿಯುತ್ತಿದ್ದ ಹಿಂಗಾರು ಬೆಳೆಗಳು ಮಳೆಯಿಂದಾಗಿ ಕೈಕೊಟ್ಟಿವೆ. ವಾಡಿಕೆ ಮಳೆಗಿಂತ ನಾಲ್ಕು ಪಟ್ಟು ಹೆಚ್ಚು ಮಳೆ ಸುರಿದಿದ್ದು, ಇದರಿಂದ ರೈತರು ಸಂಕಷ್ಟ ಪಡುವಂತಾಗಿದೆ. ಹೊಲಗಳಲ್ಲಿ ತೆನೆ ಹೊತ್ತು ತೂಗುತ್ತಿದ್ದ ರಾಗಿ ಬೆಳೆ ಚಾಪೆ ಹಾಸಿದಂತೆ ನೆಲಕ್ಕೆ ಬಾಗಿ ಮಲಗಿದೆ. ಇದರಿಂದ ಕೊಯ್ಲು ಮಾಡುವುದು ಕಷ್ಟವಾಗಿದ್ದು, ಎಲ್ಲವೂ ಹುಟ್ಟಿ ಬರುತ್ತಿರುವುದರಿಂದ ಕೊಯ್ಲು ಮಾಡಿ ಏನು ಪ್ರಯೋಜನ ಎಂಬ ಚಿಂತೆ ರೈತರದ್ದಾಗಿದೆ.

ಆಗೊಮ್ಮೆ, ಈಗೊಮ್ಮೆ ಕಾಣಿಸುತ್ತಿರುವ ಬಿಸಿಲು, ಸದಾ ಮೋಡ ಕವಿದ ವಾತಾವರಣ, ರಾತ್ರಿಯಾಗುತ್ತಿದ್ದಂತೆಯೇ ಧಾರಾಕಾರವಾಗಿ ಸುರಿಯುವ ಮಳೆಯಿಂದ ರಾಗಿ ಕೊಯ್ಲು ಮಾಡಲು ಹೆದರುವಂತಾಗಿದೆ. ಇದರಿಂದ ಹೊಲದೊಳಗೆ ಇಲಿಗಳು ಸೇರಿ ತೆನೆಯಲ್ಲೇ ತುಂಡರಿಸಿ ತಿಂದು ಹಾಳು ಮಾಡುತ್ತಿವೆ.

 ಮುಂದೇನು ಎಂಬುದೇ ರೈತರ ಚಿಂತೆಯಾಗಿದೆ

ಮುಂದೇನು ಎಂಬುದೇ ರೈತರ ಚಿಂತೆಯಾಗಿದೆ

ರಾಗಿ ಬೆಳೆದ ಕೆಲವು ರೈತರು ತಮ್ಮ ನೋವುಗಳನ್ನು ಹಂಚಿಕೊಂಡಿದ್ದು, ಮಳೆಯಿಂದ ರಾಗಿ ಬೆಳೆ ಹುಲುಸಾಗಿ ಬೆಳೆದಿದ್ದು, ಉತ್ತಮ ಇಳುವರಿಯೂ ಬಂದಿದೆ. ಆದರೆ, ಮಳೆ ವಾಡಿಕೆಗಿಂತ ಹೆಚ್ಚು ಸುರಿದಿದ್ದರಿಂದ ಬೆಳೆ ಎತ್ತರಕ್ಕೆ ಬೆಳೆದಿದೆ ಜತೆಗೆ ತೆನೆಯ ಭಾರ ತಡೆಯಲಾರದೆ ಬೆಳೆ ನೆಲಕ್ಕೆ ಬಿದ್ದಿದೆ. ಇದರಿಂದ ಇಲಿಗಳ ಕಾಟ ಹೆಚ್ಚಾಗಿದೆ. ಇನ್ನೊಂದೆಡೆ ಮಣ್ಣಿಗೆ ತೆನೆಗಳು ಅಂಟಿಕೊಂಡು ಮೊಳಕೆಯೊಡೆದು ಪೈರಾಗುತ್ತಿದೆ. ಈ ಬಾರಿ ಹೆಚ್ಚು ಮಳೆ ಬಿದ್ದಿದೆ. ರಾಗಿ ಬೆಳೆ 3ರಿಂದ 4 ಅಡಿ ಎತ್ತರಕ್ಕೆ ಬೆಳೆದಿದೆ. ಇನ್ನೇನು ಕೊಯ್ಲು ಮಾಡಿ ಮನೆಗೆ ತುಂಬಿಸಿಕೊಳ್ಳಬೇಕು ಎನ್ನುವಷ್ಟರಲ್ಲಿ ಮಳೆ ಸುರಿದು ಎಲ್ಲವೂ ನಾಶವಾಗುವಂತಾಗಿದೆ. ಮುಂದೇನು ಎಂಬುದೇ ರೈತರ ಚಿಂತೆಯಾಗಿದೆ.

English summary
Due to untimely rains in Mysore district, the millet crop has been damaged and the farmers have suffered a loss.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X