ಸಿರಿಧಾನ್ಯ ಬೆಳೆಯುವ ಕುರಿತು ರೈತರಿಗೆ ಸಲಹೆಗಳು
ಬಳ್ಳಾರಿ, ಜನವರಿ 22: "ಬಳ್ಳಾರಿ ಜಿಲ್ಲೆಯಲ್ಲಿ ತುಂಗಭದ್ರಾ ಅಚ್ಚುಕಟ್ಟು ಪ್ರದೇಶದಲ್ಲಿ ರೈತರು ಹೆಚ್ಚಾಗಿ ಭತ್ತ ಬೆಳೆಯುತ್ತಿದ್ದಾರೆ. ಭತ್ತದ ಜತೆಗೆ ಸಿರಿಧಾನ್ಯ ಬೆಳೆಗಳಾದ ಸಜ್ಜೆ, ನವಣೆ, ರಾಗಿ ಸೇರಿದಂತೆ ವಿವಿಧ ಬೆಳೆಗಳನ್ನು ಸಹ ಬೆಳೆಯಬೇಕು" ಎಂದು ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಕರೆ ನೀಡಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ ಹಾಗೂ ಕೃಷಿ ಇಲಾಖೆ ಸಂಯುಕ್ತಾಶ್ರಯದಲ್ಲಿ ಬಳ್ಳಾರಿ ನಗರದ ಡಾ. ರಾಜ್ ಕುಮಾರ್ ರಸ್ತೆಯ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಮಂಗಳವಾರ ಆಯೋಜಿಸಿದ್ದ ಜಿಲ್ಲಾ ಮಟ್ಟದ ಸಿರಿಧಾನ್ಯಗಳ ಕಾರ್ಯಾಗಾರವನ್ನು ಅವರು ಉದ್ಘಾಟಿಸಿದರು.

ಸಿರಿಧಾನ್ಯಗಳ ರಾಶಿಗೆ ಪೂಜೆ ನೆರವೇರಿಸುವ ಮೂಲಕ ಕಾರ್ಯಾಗಾರ ಉದ್ಘಾಟಿಸಿದ ಜಿಲ್ಲಾಧಿಕಾರಿಗಳು, "ಮುಂದಿನ ದಿನಗಳಲ್ಲಿ ಜಿಲ್ಲೆಯ ರೈತರು ಸಿರಿಧಾನ್ಯ ಬೆಳೆಯಲು ಆಸಕ್ತಿ ವಹಿಸಬೇಕು. ಸಿರಿಧಾನ್ಯ ಬೆಳೆಗಳಿಗೆ ಮಾರುಕಟ್ಟೆ ವ್ಯವಸ್ಥೆ, ಸಂಸ್ಕರಣಾ ಘಟಕಗಳ ಸ್ಥಾಪನೆ ಸೇರಿದಂತೆ ಎಲ್ಲ ಸಹಕಾರವನ್ನು ಜಿಲ್ಲಾಡಳಿತದಿಂದ ನೀಡಲಾಗುವುದು" ಎಂದು ಹೇಳಿದರು.
ಸಿರಿಧಾನ್ಯವನ್ನು ರೈತರು ಬೆಳೆಯಬೇಕು: ಪ್ರಶಾಂತ್ ಕುಮಾರ್ ಮಿಶ್ರಾ ಮಾತನಾಡಿ, "ಸಿರಿಧಾನ್ಯಗಳ ಬಗ್ಗೆ ಮಹಾನಗರಗಳಲ್ಲಿನ ಸಾರ್ವಜನಿಕರು ಹೆಚ್ಚು ಅರಿವು ಹೊಂದಿದ್ದಾರೆ. ಸಿರಿಧಾನ್ಯಗಳ ಬಳಕೆಯಿಂದ ಆರೋಗ್ಯಯುತ ಜೀವನಕ್ಕೆ ಸಾಕಷ್ಟು ಪ್ರಯೋಜನೆಗಳು ಇವೆ" ಎಂದರು.
ಮಹಾನಗರ ಪಾಲಿಕೆಯ ಮೇಯರ್ ಮುಲ್ಲಂಗಿ ನಂದೀಶ್ ಮಾತನಾಡಿ, "ಮೊದಲೇ ನಮ್ಮ ಪೂರ್ವಜರು ಸಿರಿಧಾನ್ಯಗಳ ಮಹತ್ವ ಅರಿತುಕೊಂಡಿದ್ದರು. ಹಾಗಾಗಿ ಅವರು ಸಿರಿಧಾನ್ಯಗಳ ಸೇವನೆಯಿಂದ ಗಟ್ಟಿ ಮುಟ್ಟಾಗಿ ಸದೃಢ ಆರೋಗ್ಯವಂತರಾಗಿರುತ್ತಿದ್ದರು. ಆದರೆ ಈಗ ಕಲಬೆರಕೆ ಆಹಾರ ಸೇವನೆಯಿಂದ ಅನೇಕ ರೀತಿಯ ರೋಗಗಳು ಬರುತ್ತಿವೆ. ದೈನಂದಿನ ಆಹಾರ ಪದ್ಧತಿಯಲ್ಲಿ ನಾವೆಲ್ಲರೂ ಸಿರಿಧಾನ್ಯಗಳ ಬಳಸಿಕೊಂಡು ಆರೋಗ್ಯವಂತರಾಗೋಣ" ಎಂದು ಕರೆ ನೀಡಿದರು.
ಜಿಲ್ಲಾ ಪಂಚಾಯತ್ ಸಿಇಒ ರಾಹುಲ್ ಶರಣಪ್ಪ ಸಂಕನೂರು ಮಾತನಾಡಿ, "2023ರ ವರ್ಷವನ್ನು ಸಿರಿಧಾನ್ಯಗಳ ವರ್ಷ ಎಂದು ಘೋಷಿಸಲಾಯಿತು. ಸಿರಿಧಾನ್ಯಗಳ ಮಹತ್ವವನ್ನು ಸಾರ್ವಜನಿಕರಲ್ಲಿ ಇನ್ನು ಹೆಚ್ಚು ಹೆಚ್ಚು ಮೂಡಿಸಬೇಕು. ಇತ್ತೀಚಿನ ದಿನಗಳಲ್ಲಿ ಜಂಕ್ ಫುಡ್ ಸೇವನೆಯಿಂದ ರೋಗ-ರುಜಿನಗಳು ಹೆಚ್ಚಾಗಿ ಕಂಡು ಬರುತ್ತಿವೆ. ಸಿರಿಧಾನ್ಯಗಳ ಸೇವನೆಯಿಂದ ಆರೋಗ್ಯದಲ್ಲಿ ಸಮತೋಲನ ಕಾಪಾಡಿಕೊಳ್ಳ್ಳಬಹುದು" ಎಂದು ಹೇಳಿದರು.
ಜಂಟಿ ಕೃಷಿ ನಿರ್ದೇಶಕ ಸೋಮಸುಂದರ ಕೆ. ಎಂ. ಮಾತನಾಡಿ, "ಸಿರಿ ಎಂದರೆ ಸಂಪತ್ತು. ಅಂತಹ ಸಿರಿಧಾನ್ಯಗಳಾದ ಸಾಮೆ, ನವಣೆ, ರಾಗಿ, ಸಜ್ಜೆ, ಊದಲು ಪೌಷ್ಠಿಕಯುಕ್ತವಾಗಿದೆ. ರಕ್ತದೊತ್ತಡ, ಹೃದಯ ಸಂಬಂಧಿ ಕಾಯಿಲೆಗಳಿಗೆ ಹೆಚ್ಚು ಉಪಯುಕ್ತವಾಗಿವೆ. ಸಿರಿಧಾನ್ಯ ಬೆಳೆ ಬೆಳೆಯಲು ಕೇಂದ್ರ ಮತ್ತು ರಾಜ್ಯ ಸರ್ಕಾರವು ಎಲ್ಲಾ ರೀತಿಯ ಸೌಲಭ್ಯಗಳನ್ನು ನೀಡುತ್ತಿದೆ, ರೈತರು ಉಪಯೋಗಿಸಿಕೊಳ್ಳಬೇಕು" ಎಂದರು.
"ದೇಶದಲ್ಲಿ 142 ಕೋಟಿ ಜನಸಂಖ್ಯೆ ಇದೆ. 332 ಮಿಲಿಯನ್ ಟನ್‌ನಷ್ಟು ಆಹಾರ ಉತ್ಪಾದನೆ ಮಾಡುವ ಮೂಲಕ ಸ್ವಾವಲಂಬನೆ ಆಗಿದ್ದೇವೆ. ಮುಂದಿನ 5 ವರ್ಷಗಳವರೂ ಪ್ರತಿಯೊಬ್ಬರಿಗೆ ಒದಗಿಸುವಷ್ಟು ಆಹಾರ ನಮ್ಮಲ್ಲಿದೆ. ಆದರೆ ಪೋಷಕಾಂಶಯುಕ್ತ ಆಹಾರ ಸಿಗುತ್ತಿಲ್ಲ" ಎಂದು ತಿಳಿಸಿದರು.
ಈ ಮೇಳದಲ್ಲಿ ಸಿರಿಧಾನ್ಯ ಬೆಳೆಗಳ ಉತ್ಪಾಧನಾ ತಾಂತ್ರಿಕತೆ ಮತ್ತು ಅವುಗಳ ಮೌಲ್ಯವರ್ಧನೆ ಕುರಿತ ಮಾಹಿತಿ ಕೈಪಿಡಿ ಬಿಡುಗಡೆ ಮಾಡಲಾಗಿದೆ. ಅಂತರಾಷ್ಟ್ರೀಯ ಸಾವಯವ ಮತ್ತು ಸಿರಿಧಾನ್ಯ ಮೇಳದ ಅಂಗವಾಗಿ ಸಿರಿಧಾನ್ಯಗಳಿಂದ ತಯಾರಿಸಿದ ಉತ್ಪನ್ನಗಳ ಮಳಿಗೆ, ಕೃಷಿ, ತೋಟಗಾರಿಕೆ, ಮೀನುಗಾರಿಕೆ ಹಾಗೂ ವಿವಿಧ ಕೃಷಿ ಪರಿಕರಗಳ ಮಳಿಗೆಗಳು ಸೇರಿದಂತೆ ಒಟ್ಟು 40 ಮಳಿಗೆಗಳು ಹಾಕಲಾಗಿತ್ತು.











Click it and Unblock the Notifications