ಧಾರವಾಡ: ಮಾವು ಬೆಳೆಗಾರ ರೈತರಿಗೆ ಮಾಹಿತಿ
ಧಾರವಾಡ, ಮೇ 01: ಮಳೆಗಾಲ ಕೈಕೊಟ್ಟು, ಸುಡು ಬೇಸಿಗೆಯ ಪರಿಣಾಮ ಮಾವಿನ ಬೆಳೆಯಲ್ಲಿ ಭಾರೀ ಕುಸಿತವಾಗಿದೆ. ಮಾರುಕಟ್ಟೆಯಲ್ಲಿ ಸದ್ದು ಮಾಡಬೇಕಿದ್ದ ಮಾವು ಈ ಬಾರಿ ಅಷ್ಟಾಗಿ ಕಂಡುಬರುತ್ತಿಲ್ಲ. ತಡವಾಗಿ ಬೆಳೆ ಕೈಗೆ ಬಂದ ಕಾರಣ ಈಗ ಮಾವು ಮಾರಾಟ ಮೇಳಗಳು ಆರಂಭವಾಗಿವೆ.
ಈಗ ತೋಟಗಾರಿಕಾ ಇಲಾಖೆ ಧಾರವಾಡದಲ್ಲಿ ಮಾವು ಬೆಳೆಯುವ ರೈತರಿಗೆ ಸಲಹೆಯೊಂದನ್ನು ನೀಡಿದೆ. ತೋಟಗಾರಿಕೆ ಇಲಾಖೆ ಆವರಣದಲ್ಲಿ ಮೇ 14 ರಿಂದ 16, 2024 ರವರೆಗೆ ಪ್ರಸಕ್ತ ಸಾಲಿನ ಮಾವು ಪ್ರದರ್ಶನ ಮತ್ತು ಮಾರಾಟ ಮೇಳವನ್ನು ಆಯೋಜಿಸಲಾಗಿದ್ದು, ಮಳಿಗೆ ಹಾಕಲು ಇಚ್ಚಿಸುವ ಮಾವು ಬೆಳೆಗಾರರಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ಹೇಳಿದೆ.

ಆಸಕ್ತ ಮಾವು ಬೆಳೆಗಾರ ರೈತರು ನಿಗದಿತ ಅರ್ಜಿಯನ್ನು ಆಯಾ ತಾಲೂಕಿನ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಕಛೇರಿಯಿಂದ ಪಡೆದು, ಬೆಳೆ ದೃಡೀಕರಣ, ಎಫ್‍ಐಡಿ ಸಂಖ್ಯೆ ಹಾಗೂ ಪಹಣಿಯೊಂದಿಗೆ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು (ಜಿಪಂ) ಧಾರವಾಡ ಇವರ ಕಛೇರಿಗೆ ಮೇ 9, 2024 ರೊಳಗಾಗಿ ಸಲ್ಲಿಸಬೇಕು.
ರೈತರು ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 0836-2746334 ಗೆ ಸಂಪರ್ಕಿಸಬಹುದು ಎಂದು ತೋಟಗಾರಿಕೆ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಆಸಕ್ತ ರೈತರು ಮೇಳದ ಸದುಪಯೋಗ ಪಡೆದುಕೊಳ್ಳಬಹುದು.
ಮೇಳದಲ್ಲಿ ಭಾಗವಹಿಸಲು ನೋಂದಣಿ ಮಾಡಿಕೊಂಡ ರೈತರಿಗೆ ಸ್ಟಾಲ್‌ಗಳನ್ನು ನಿರ್ಮಿಸಿ ಹಂಚಿಕೆ ಮಾಡಲಾಗುತ್ತದೆ. ಮಾವಿನ ಹಣ್ಣಿನ ಜೊತೆಗೆ ತೋಟಗಾರಿಕೆ ಉತ್ಪನ್ನಗಳ ಕಂಪನಿಗಳು ಸಹ ಮೇಳದಲ್ಲಿ ಪಾಲ್ಗೊಳ್ಳಲಿವೆ.
ರೈತರು ತಾವು ಬೆಳೆದ ಮಾವಿನ ಹಣ್ಣುಗಳ್ನು ಸ್ಟಾಲ್‌ಗಳ ಮೂಲಕ ನೇರವಾಗಿ ಮಾರಾಟ ಮಾಡುವುದರಿಂದ ಜನರು ರೈತರಿಂದ ನೇರವಾಗಿ ಕಣ್ಣುಗಳನ್ನು ಖರೀದಿ ಮಾಡಬಹುದಾಗಿದೆ. ಇದರಿಂದ ಮೇಳದಲ್ಲಿ ನೇರವಾಗಿ ಭಾಗವಹಿಸಿದ ರೈತರಿಗೂ ಅನುಕೂಲವಾಗಿ ಯೋಗ್ಯ ಬೆಲೆ ಸಿಗುವಂತಾಗಿದೆ.
ಪ್ರತಿ ವರ್ಷವೂ ಮೇಳ ಆಯೋಜನೆ: ಧಾರವಾಡ, ಕೊಪ್ಪಳ, ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಕರ್ನಾಟಕ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮವು ತೋಟಗಾರಿಕೆ ಇಲಾಖೆಯ ಸಹಕಾರದೊಂದಿಗೆ ಮಾವು ಮತ್ತು ಹಲಸು ಹಣ್ಣುಗಳ ಪ್ರದರ್ಶನ ಹಾಗೂ ಮಾರಾಟ ಮೇಳವನ್ನು ಆಯೋಜನೆ ಮಾಡುತ್ತದೆ. ಲಕ್ಷಾಂತರ ರೂಪಾಯಿ ವಹಿವಾಟು ನಡೆಯುತ್ತದೆ.
2023ರಲ್ಲಿ ತೋಟಗಾರಿಕೆ ಇಲಾಖೆಯಿಂದ ಮೇ 23ರಿಂದ 31ರವರೆಗೆ ಕೊಪ್ಪಳ ನಗರದ ತೋಟಗಾರಿಕೆ ಉಪ ನಿರ್ದೇಶಕರ ಕಚೇರಿ ಆವರಣದಲ್ಲಿ 'ಕೊಪ್ಪಳ ಮಾವು ಮೇಳ-2023' ಆಯೋಜನೆ ಮಾಡಲಾಗಿತ್ತು, ಅದು ಯಶಸ್ವಿಯಾಗಿತ್ತು.
ಮಾವು ಮೇಳದಲ್ಲಿ ಅಂದಾಜು 25 ಸಾವಿರಕ್ಕೂ ಹೆಚ್ಚು ಜನರು ಪಾಲ್ಗೊಂಡಿದ್ದರು. 1.75 ಕೋಟಿ ರೂ. ಗೂ ಹೆಚ್ಚಿನ ವಹಿವಾಟು ನಡೆದಿತ್ತು. 2022ರಲ್ಲಿ ನಡೆದ ಮೇಳಕ್ಕಿಂತ ಅತ್ಯಂತ ಯಶಸ್ವಿಯಾಗಿ ಮೇಳ ನಡೆದು, ಗ್ರಾಹಕರು ಹೆಚ್ಚು ಮಾವು ಖರೀದಿಸಿ ದಾಖಲೆ ನಿರ್ಮಿಸಿದ್ದರು.











Click it and Unblock the Notifications