Mango Mela: ಮೈಸೂರಿನಲ್ಲಿ 3 ದಿನಗಳ ಕಾಲ ಅದ್ಧೂರಿಯಾಗಿ ನಡೆಯಿತು ಮಾವು ಮೇಳ, ತಳಿಗಳು, ದರ ಇದ್ದಿದ್ದು ಮಾತ್ರ ಹೀಗೆ?
ಮೈಸೂರು, ಮೇ, 28: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಮೇ 26ರಿಂದ ಇಂದಿನವರೆಗೂ ಮೂರು ದಿನಗಳ ಕಾಲ ಮಾವು ಮೇಳ ಅದ್ಧೂರಿಯಾಗಿ ನೆರವೇರಿತು. ಒಂದೇ ಸೂರಿನಡಿ 40 ವಿವಿಧ ತಳಿಯ ಮಾವಿನ ಹಣ್ಣುಗಳನ್ನು ಮೇಳದಲ್ಲಿ ಇಡಲಾಗಿದ್ದು, ಇವುಗಳನ್ನು ಕೊಳ್ಳಲು ಸಾರ್ವಜನಿಕರು ಉತ್ಸಾಹದಿಂದಲೇ ಆಗಮಿಸಿ ಮೇಳ ಭರ್ಜರಿಯಾಗಿ ನಡೆಯಲು ಸಾಕ್ಷಿಯಾದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ತೋಟಗಾರಿಕೆ ಇಲಾಖೆ ಸಹಯೋಗದಲ್ಲಿ ಹಾರ್ಡಿಂಜ್ ವೃತ್ತದ ಬಳಿ ಇರುವ ಕುಪ್ಪಣ್ಣ ಪಾರ್ಕ್‌ನಲ್ಲಿ ಮೂರು ದಿನ ಆಯೋಜಿಸಿದ್ದ ಮಾವು ಮೇಳಕ್ಕೆ ಸಾರ್ವಜನಿಕರಿಂದ ಭರ್ಜರಿ ಪ್ರತಿಕ್ರಿಯೆ ಕಂಡುಬಂತು. ಮೇ 26ರಂದು ಶಾಸಕ ಕೆ.ಹರೀಶ್ ಗೌಡ ಮಾವು ಮೇಳಕ್ಕೆ ಚಾಲನೆ ನೀಡಿದರು. ನಂತರ ಮಾತನಾಡಿದ್ದ ಅವರು, ಮಾವು ಎಲ್ಲರಿಗೂ ಪ್ರಿಯವಾದ ಹಣ್ಣು. ಉತ್ಪಾದಕರಿಂದ ನೇರವಾಗಿ ಗ್ರಾಹಕರಿಗೆ ತಲುಪಿಸುವ ಸಲುವಾಗಿ ಪ್ರತಿವರ್ಷದಂತೆ ಈ ವರ್ಷವೂ ಮಾವು ಮೇಳ ಆಯೋಜಿಸಲಾಗಿದೆ ಎಂದಿದ್ದರು.

ಹಾಗೆಯೇ ಮಾವು ಮೇಳದಲ್ಲಿ ವಿವಿಧ ಜಿಲ್ಲೆಗಳ ರೈತರು ಭಾಗವಹಿಸಿದ್ದರು. ಮತ್ತೊಂದೆಡೆ ಹಣ್ಣುಗಳನ್ನು ನೈಸರ್ಗಿಕವಾಗಿ ಮಾಗಿಸಿರುವುದರಿಂದ ಆರೋಗ್ಯಕ್ಕೂ ಒಳ್ಳೆಯದು. ಹೆಚ್ಚು ಸಾರ್ವಜನಿಕರು ಭಾಗವಹಿಸುವುದರಿಂದ ಎರಡು ಮೂರು ದಿನ ವಿಸ್ತರಿಸಿದರೆ ಒಳ್ಳೆಯದು ಎಂದು ಅಲ್ಲಿಗೆ ಬಂದಿದ್ದ ವಿವಿಧ ಜಿಲ್ಲೆಗಳ ರೈತರು ಅಭಿಪ್ರಾಯವನ್ನು ವ್ಯಕ್ತಪಡಿಸಿದರು.
ಮಧ್ಯವರ್ತಿಗಳ ಹಾವಳಿ ತಪ್ಪಿಸಿ ರೈತರಿಂದ ನೇರವಾಗಿ ಸಾರ್ವಜನಿಕರಿಗೆ ರಾಸಾಯನಿಕ ಮುಕ್ತ ಮಾವಿನಹಣ್ಣುಗಳನ್ನು ತಲುಪಿಸುವ ಸಲುವಾಗಿ ಮೂರು ದಿನಗಳ ಮಾವು ಮೇಳವನ್ನು ಹಮ್ಮಿಕೊಳ್ಳಲಾಗಿದ್ದು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ತಮಗೆ ಇಷ್ಟವಾದ ಹಣ್ಣುಗಳನ್ನು ಖರೀದಿಸಿ ಮೇಳಕ್ಕೆ ಕಳೆ ಬರುವಂತೆ ಮಾಡಿದರು.
28 ಮಳಿಗೆಗಳ ಸ್ಥಾಪನೆ
ಶ್ರೀರಂಗಪಟ್ಟಣ, ಮೈಸೂರು, ಮಂಡ್ಯ, ರಾಮನಗರ, ಮಾಗಡಿ, ಕನಕಪುರದ ರೈತರು ಮೇಳದಲ್ಲಿ ಭಾಗವಹಿಸಿದ್ದರು. ಮೇಳದಲ್ಲಿ ಒಟ್ಟು 28 ಮಳಿಗೆಗಳನ್ನು ತೆರೆಯಲಾಗಿದ್ದು, ರೈತರಿಗೆ ಉಚಿತವಾಗಿ ಮಳಿಗೆಗಳನ್ನು ನೀಡಲಾಗಿದೆ. ಬಾದಾಮಿ, ರಸಪುರಿ, ಮಲಗೋವ, ಚೈತ್ರಪೈರಿ, ಸೇಲಂ, ಶಿರಸಿ ಲೋಕಲ್, ರತ್ನಗಿರಿ (ಆಲ್ಫನ್ಸ್), ಮಲ್ಲಿಕಾ, ಸೇಂದೂರಾ, ತೋತಾಪುರಿ, ಬಾಗನಪಲ್ಲಿ, ದಶೇರಿ, ಕಾಲಾಪ ಹಾಡ್, ಕೇಶರ್, ಸಕ್ಕರೆ ಗುತ್ತಿ, ಅಮ್ರಪಾಲಿ, ದಿಲ್ಪಸಂದ್ ಮೊದಲಾದ ಹಣ್ಣುಗಳನ್ನು ಪ್ರದರ್ಶನ ಮತ್ತು ಮಾರಾಟಕ್ಕಿಡಲಾಗಿತ್ತು.

ವಿವಿಧ ತಳಿಯ ಮಾವಿನ ಹಣ್ಣುಗಳು, ದರಗಳ ವಿವರ
1. ಬಾದಾಮಿ - 80
2. ರಸಪುರಿ - 70
3. ಮಲ್ಲಿಕಾ - 70
4. ಸೇಂದುರ - 50
5. ಮಲಗೋವಾ - 80
6. ತೋತಾಪುರಿ - 30
7. ಬಾಗನಪಲ್ಲಿ- 45
ಅಲ್ಲದೆ ಮೇಳದಲ್ಲಿ ದರ ಪಟ್ಟಿಯಂತೆ ಮಾವಿನ ಹಣ್ಣುಗಳನ್ನು ಮಾರಾಟ ಮಾಡಬೇಕೆಂದು ರೈತರಿಗೆ ಸೂಚಿಸಲಾಗಿತ್ತು. ಅಲ್ಲದೆ ತೋಟಗಾರಿಕೆ ಬೆಳೆಗಳನ್ನು ಪ್ರೋತ್ಸಾಹಿಸಲು ರೂಪಿಸಿರುವ ಕಾರ್ಯಕ್ರಮಗಳ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಕುಪ್ಪಣ್ಣ ಪಾರ್ಕ್‌ನಲ್ಲಿ ವಿವಿಧ ತೋಟಗಾರಿಕಾ ಕ್ಷೇತ್ರ ನರ್ಸರಿಗಳ ಸಸ್ಯ ಸಂತೆ ಏರ್ಪಡಿಸಲಾಗಿತ್ತು.
ತೆಂಗು, ಸಪೋಟ, ಪಪ್ಪಾಯಿ, ಅಡಿಕೆ, ಮಾವು, ನುಗ್ಗೆ, ಸೀಬೆ, ನೇರಳೆ, ನಿಂಬೆ, ಕರಿಬೇವು, ಹಿರಳಿ, ಹುಣಸೆ, ಸೀತಾಲ, ಚಕ್ರಮುನಿ, ವೀಳ್ಯದೆಲೆ, ಬೆಟ್ಟದ ನೆಲ್ಲಿ, ಬೆಣ್ಣೆಹಣ್ಣು, ಹಲಸು ಸಸ್ಯಗಳನ್ನು ಪ್ರದರ್ಶಿಸಲಾಗಿದೆ. ಹಾಗೆಯೆ ಯೂಕ, ಸ್ನೇಕ್ ಪ್ಲಾಂಟ್, ಫೈಕಸ್ ರ್ಸ್ಟಾ ಲೈಟ್, ಡ್ರಸೀನಾ, ಕ್ರೋಟಾನ್, ಸಂಪಿಗೆ, ಕುಫಿಯಾ, ಲೆಮನ್ ಗ್ರಾಸ್ ಸೇರಿದಂತೆ ಹಲವು ಸಸ್ಯಗಳ ಪ್ರದರ್ಶನದ ಜೊತೆಗೆ ಅವುಗಳನ್ನು ರಿಯಾಯಿತಿ ದರದಲ್ಲಿ ಮಾರಾಟವನ್ನೂ ಮಾಡಲಾಗುತ್ತಿದೆ.
ಇನ್ನು ಮನ್ರೇಗಾ, ತೋಟಗಾರಿಕೆ ಇಲಾಖೆ ವತಿಯಿಂದ ಸಿಗುವ ಪ್ರೋತ್ಸಾಹಧನದ ಬಗ್ಗೆ ಮಾಹಿತಿಯನ್ನು ಕಲೆ ಹಾಕಲಾಗಿದೆ. ಈ ವೇಳೆ ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಎಂ.ರುದ್ರೇಶ್, ಹಿರಿಯ ಸಹಾಯಕ ನಿರ್ದೇಶಕ ಶಶಿರ್ಧ, ಸಹಾಯಕ ನಿರ್ದೇಶಕರಾದ ಅಶ್ವಿನಿ, ಶಬೀನಾ ಸೇರಿದಂತೆ ಹಲವರು ಭಾಗವಹಿಸಿದ್ದರು.












Click it and Unblock the Notifications