ವಾಣಿ ವಿಲಾಸ ಸಾಗರವನ್ನು ತುಂಬಿಸಿಕೊಡುವಂತೆ ಪ್ರಧಾನಿಗೆ ಮನವಿ
ಭದ್ರಾ ಜಲಾಶಯವನ್ನು ಮತ್ತು ವಾಣಿ ವಿಲಾಸ ಸಾಗರವನ್ನು ತುಂಬಿಸಿಕೊಡುವಂತೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿ ಸಿದ್ಧರಾಮಯ್ಯರಲ್ಲಿ ರೈತ ಮುಖಂಡರ ಮನವಿ.
ಚಿತ್ರದುರ್ಗ, ಜೂನ್ 9: ಭದ್ರಾ ಜಲಾಶಯವನ್ನು ಮತ್ತು ವಾಣಿ ವಿಲಾಸ ಸಾಗರವನ್ನು ತುಂಬಿಸಿಕೊಡುವಂತೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಲ್ಲಿ ಕರ್ನಾಟಕ ಪ್ರದೇಶ ರೈತ ಸಂಘದ ಅಧ್ಯಕ್ಷ ಎಂ.ಎಸ್. ಕೆ. ಶಾಸ್ತ್ರಿ ಮನವಿ ಮಾಡಿದ್ದಾರೆ. ಈ ಎರಡು ಜಲಾಶಯ ತುಂಬಿಸಲು ಉಡುಪಿ ಪಕ್ಕದ ಸಮುದ್ರದ ಉಪ್ಪು ನೀರನ್ನು ಸಿಹಿ ನೀರನ್ನಾಗಿ ಮಾಡಿ ಎಂದು ಸಲಹೆ ಕೂಡಾ ನೀಡಿದ್ದಾರೆ.
ಉಡುಪಿಯಿಂದ ಸುಮಾರು 155 ಕಿ.ಮೀ. ದೂರದಲ್ಲಿರುವ ಅಣೆಕಟ್ಟಿಗೆ ನೀರು ತುಂಬಿಸುವ ಈ ಬೃಹತ್ ಯೋಜನೆ ಕೈಗೊಳ್ಳಲು 1000 ರೂ. ಎನ್.ಎಸ್.ಸಿ. ಬಾಂಡ್ ಕೊಳ್ಳಲು ರೈತರು ಸಿದ್ಧರಿದ್ದಾರೆ ಎಂದು ಹೇಳಿದರು.

ಪ್ರಕೃತಿಯ ಮುನಿಸಿನಿಂದ ಪ್ರತಿ ವರ್ಷ ಮಳೆ ಕಡಿಮೆಯಾಗುತ್ತಾ ಹೋಗುತ್ತಿದೆ. ಓಝೋನ್ ಪದರ ಹರಿದು ರಂಧ್ರದ ಗಾತ್ರ ಹೆಚ್ಚಿಗೆಯಾಗಿ, ಬಿಸಿಲಿನ ತಾಪ ಕೂಡ ಹೆಚ್ಚಾಗುತ್ತಿದೆ. ರೈತರು ಬರಗಾಲವನ್ನು ಪ್ರತಿ ವರ್ಷವೂ ಎದುರಿಸುವಂತಾಗಿದೆ ಎಂದರು.
ಇಂಜಿನಿಯರ್ ವಿದ್ಯಾರ್ಥಿಗಳು ಕೂಡ ಸಮುದ್ರದ ಉಪ್ಪು ನೀರನ್ನು ಸಿಹಿ ನೀರನ್ನಾಗಿ ಪರಿವರ್ತಿಸುವ ಕಡೆ ಚಿಂತನೆ ಮಾಡುವ ಮೂಲಕ ಮೇಕ್ ಇನ್ ಇಂಡಿಯಾಕ್ಕೆ ಒತ್ತು ನೀಡಬೇಕೆಂದು ಕರೆ ನೀಡಿದರು.
ಬೆಂಗಳೂರಿನ ಇಂಜಿನಿಯರ್ ಎಸ್.ಎಂ. ದೇಸಾಯಿ : ಇತ್ತೀಚಿನ ದಿನಗಳಲ್ಲಿ ಅಂತರ್ಜಲ ಮಟ್ಟ ಕುಸಿಯುತ್ತಿದ್ದು, ಕೊಟ್ಯಂತರ ರೂ.ಗಳನ್ನು ವ್ಯಯಿಸಿ, ಭೂಮಿ ಕೊರೆದು ನೀರು ಪ್ರಯತ್ನ ಮಾಡಿದದೂ ಫಲ ದೊರಕದಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ವಿಷಾದಿಸಿದರು.
ಈ ಹಿಂದೆ ಕಾಂಗ್ರೆಸ್ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿದ್ದ ಎಸ್.ಎಂ. ಕೃಷ್ಣ ಅವರು ಮಾಡಿದ ಮೋಡ ಬಿತ್ತನೆ ಕಾರ್ಯ ಫಲ ಕೊಡಲಿಲ್ಲ. ಶಾಶ್ವತವಾಗಿ ದೊರೆಯುವ ನೀರಿನ ಬಗ್ಗೆ ಚಿಂತನೆ ನಡೆಸಿ, ಸಮುದ್ರದ ನೀರನ್ನು ಸಿಹಿ ನೀರನ್ನಾಗಿ ಪರಿವರ್ತಿಸಿ ಭದ್ರಾ ಜಲಾಶಯ ಮತ್ತು ವಾಣಿ ವಿಲಾಸ ಸಾಗರಕ್ಕೆ ಹರಿಸಬೇಕೆಂದು ಒತ್ತಾಯಿಸಿದರು.












Click it and Unblock the Notifications