ಮಾ.31ರಂದು ಬೆಳಗಾವಿಯಲ್ಲಿ ರೈತ ಮಹಾ ಪಂಚಾಯತ್ ಸಮಾವೇಶ
ಬೆಳಗಾವಿ, ಮಾರ್ಚ್ 27: ಬೆಳಗಾವಿಯಲ್ಲಿ ಮಾ.31ರಂದು ರೈತ ಮಹಾ ಪಂಚಾಯತ್ ಸಮಾವೇಶ ನಡೆಯಲಿದ್ದು, ಈ ಸಮಾವೇಶದಲ್ಲಿ 50 ಸಾವಿರ ಜನರು ಸೇರಲಿದ್ದಾರೆ ಎಂದು ರೈತ ಮುಖಂಡ ಬಾಬಾಗೌಡ ಪಾಟೀಲ್ ತಿಳಿಸಿದ್ದಾರೆ.
ಬೆಳಗಾವಿಯಲ್ಲಿ ಮಾ.31ರಂದು ರೈತ ಮಹಾ ಪಂಚಾಯತ ಸಮಾವೇಶ ಹಿನ್ನೆಲೆ, ಕೇಂದ್ರದ ಮಾಜಿ ಸಚಿವ ಬಾಬಾಗೌಡ ಪಾಟೀಲ, ಕೆ.ಟಿ ಗಂಗಾಧರ್, ಚುಕ್ಕಿ ನಂಜುಂಡಸ್ವಾಮಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರೈತ ಮುಖಂಡ ಕೆ.ಟಿ ಗಂಗಾಧರ್, ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಭಾರತ ಮಾತೆಯನ್ನೇ ಮಾರಾಟಕ್ಕಿಟ್ಟು ಭಾರತ್ ಮಾತಾ ಕೀ ಜೈ ಅಂದ್ರೆ ಹೇಗೆ? ಎಂದು ಕೆ.ಟಿ ಗಂಗಾಧರ್ ಪ್ರಶ್ನಿಸಿದ ಅವರು, ರೈತರ ಸಂವಿಧಾನ ಬದ್ಧವಾದ ಹಕ್ಕನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲವೆಂದರು.

ಪ್ರಧಾನಿ ಮೋದಿ, ಸಿಎಂ ಬಿಎಸ್‌ವೈ ಎಚ್ಚರಿಕೆಯಿಂದ ವರ್ತಿಸಬೇಕು, ತಕ್ಷಣವೇ ಈ ಮೂರು ರೈತ ವಿರೋಧಿ ಮಸೂದೆ ಹಿಂಪಡೆಯಬೇಕು. ಶಿವಮೊಗ್ಗ, ಹಾವೇರಿ ರೀತಿ ಬೆಳಗಾವಿಯಲ್ಲೂ ರೈತ ಮಹಾ ಪಂಚಾಯತ್ ಸಮಾವೇಶ ನಡೆಯಲಿದ್ದು, ಈ ರೈತ ಸಮಾವೇಶಕ್ಕೆ ಅಡ್ಡಿಪಡಿಸದಂತೆ ಎಚ್ಚರಿಕೆ ನೀಡಿದರು.
ಸಂಯುಕ್ತ ಕಿಸಾನ್ ಮಂಚ್ ಹೋರಾಟ ಈಗ ಜನಾಂದೋಲನ ಆಗಿದೆ, ಇದಕ್ಕೆ ಸಮಾಜದ ಎಲ್ಲಾ ವಲಯದ ಸಂಘಟನೆಗಳು ಬೆಂಬಲಿಸುತ್ತಿವೆ. ಕೇಂದ್ರ ಸರ್ಕಾರದ ಖಾಸಗೀಕರಣ ನೀತಿ ಮಾರಕವಾಗಿದ್ದು, ಅನ್ನ ಬೆಳೆಯುವ ರೈತನ ಭೂಮಿಯನ್ನು ಖಾಸಗೀಕರಣ ಮಾಡಲು ಹೊರಟಿದೆ ಎಂದು ಕೆ.ಟಿ ಗಂಗಾಧರ್ ಆರೋಪಿಸಿದರು.
ರೈತ ನಾಯಕಿ ಚುಕ್ಕಿ ನಂಜುಂಡಸ್ವಾಮಿ ಮಾತನಾಡಿ, ಇವತ್ತು ದೇಶದಲ್ಲಿ ನಡೆಯುತ್ತಿರುವುದು ರೈತ ಚಳವಳಿ ಅಲ್ಲ, ದೇಶದ ಸ್ವಾತಂತ್ರ್ಯಕ್ಕಾಗಿ ನಡೆಯುತ್ತಿರುವ ಚಳವಳಿ ಇದು. ಈ ಮೂರು ಕಾಯ್ದೆಗಳು ಜಾರಿಗೆ ಬಂದರೆ ರೈತರ ಜೊತೆಗೆ ಮಧ್ಯಮ ವರ್ಗದ ಜನತೆಯ ಮೇಲೂ ಪರಿಣಾಮ ಬೀರಲಿದೆ. ಬೆಳಗಾವಿಯಲ್ಲಿನ ರೈತ ಮಹಾ ಪಂಚಾಯತಗೆ ಹೆಚ್ಚಿನ ಸಂಖ್ಯೆಯಲ್ಲಿ ಜನ ಭಾಗವಹಿಸಬೇಕು ಎಂದು ಮನವಿ ಮಾಡಿದರು.
ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಬಾಬಾಗೌಡ ಪಾಟೀಲ್ ಆಕ್ರೋಶ ವ್ಯಕ್ತಪಡಿಸಿ, ದೇಶದಲ್ಲಿ ರೈತ ವಿರೋಧಿ ಮಸೂದೆ ವಿರೋಧಿಸಿ ಹೋರಾಟ ಮಾಡುತ್ತಿದ್ದೇವೆ. ಹೀಗಿರುವಾಗ ರೈತ ಮುಖಂಡ ಯುದವೀರ್ ಸಿಂಗ್ ಬಂಧಿಸಿದ್ದನ್ನು ಬಲವಾಗಿ ಖಂಡಿಸುವೆ ಎಂದರು.
ಇದೇ ಪ್ರಜಾಪ್ರಭುತ್ವವೋ ಎಂದು ಪ್ರಶ್ನಿಸಿದ ಬಾಬಾಗೌಡ ಪಾಟೀಲ್, ರೈತರ ಮಹಾ ಪಂಚಾಯತ್ ಸಮಾವೇಶ ಹತ್ತಿಕ್ಕಲು ಹುನ್ನಾರ ನಡೆಯುತ್ತಿದೆ. ಕೇಂದ್ರ ಸರ್ಕಾರ ಹಸಿವು ನಿಗಿಸುವ ಕೆಲಸ ಮಾಡಬೇಕು, ಇದನ್ನು ಹೊರತುಪಡಿಸಿ ಏರ್‌ಪೋರ್ಟ್ ಮಾಡುವುದಲ್ಲ ಎಂದು ಕಿಡಿಕಾರಿದರು.
ಮೊದಲು ಕೈಯಲ್ಲಿ ಉದ್ಯೋಗವಿಲ್ಲದ ಯುವಕರಿಗೆ ಕೆಲಸ ಕೊಡಿ, ಈ ರೈತರ ಹೋರಾಟ ಯುವಕರ ಹೋರಾಟ ಆಗಬೇಕು. ಬೆಳಗಾವಿಯಲ್ಲಿ ದೊಡ್ಡ ಸಮಾವೇಶ ಮಾಡುತ್ತೇವೆ, 50 ಸಾವಿರ ಜನರು ಸೇರುತ್ತಾರೆ ಎಂದು ಕೇಂದ್ರದ ಮಾಜಿ ಸಚಿವ, ರೈತ ಮುಖಂಡ ಬಾಬಾಗೌಡ ಪಾಟೀಲ್ ಹೇಳಿದರು.












Click it and Unblock the Notifications