ಸರ್ಕಾರ ಅಕ್ಕಿ ಗಿರಣಿಯಲ್ಲ; ಏಕಾಏಕಿ ಯೂಟರ್ನ್ ಹೊಡೆದ ತೆಲಂಗಾಣ ಸಿಎಂ
ಅಮರಾವತಿ, ಡಿಸೆಂಬರ್ 28: "ರೈತರ ಕೃಷಿ ಉತ್ಪನ್ನಗಳನ್ನು ರಾಜ್ಯ ಸರ್ಕಾರ ಖರೀದಿಸುವ ಅಗತ್ಯವಿಲ್ಲ. ದೇಶಾದ್ಯಂತ ಹೊಸ ಕೃಷಿ ಕಾಯ್ದೆಗಳನ್ನು ಜಾರಿಗೊಳಿಸುತ್ತಿರುವುದರಿಂದ ರೈತರು ತಮ್ಮ ಬೆಳೆಗಳನ್ನು ತಾವು ಎಲ್ಲಿ ಬೇಕಾದರೂ ಮಾರಾಟ ಮಾಡಿಕೊಳ್ಳಬಹುದಾಗಿದೆ" ಎಂದು ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಹೇಳಿಕೆ ನೀಡಿದ್ದಾರೆ.
ಕೇಂದ್ರದ ಈ ಕೃಷಿ ಕಾಯ್ದೆಗಳ ಕುರಿತು ಈಚೆಗೆ ಸದನದಲ್ಲಿ ವಿರೋಧ ವ್ಯಕ್ತಪಡಿಸಿದ್ದ ಕೆಸಿಆರ್ ದೆಹಲಿಯಲ್ಲಿ ಪ್ರಧಾನಿ ಮೋದಿ ಹಾಗೂ ಕೇಂದ್ರ ಸಚಿವ ಅಮಿತ್ ಶಾ ಅವರನ್ನು ಭೇಟಿಯಾದ ಬೆನ್ನಲ್ಲೇ ಹೀಗೆ ಹೇಳಿಕೆ ನೀಡಿದ್ದಾರೆ. ಕೃಷಿ ಉತ್ಪನ್ನಗಳ ಮಾರಾಟ ಹಾಗೂ ಖರೀದಿ ಪ್ರಕ್ರಿಯೆ ರೈತರ ಮಾರುಕಟ್ಟೆಗೆ ಬಿಟ್ಟಿದ್ದು ಎಂಬ ನಿರ್ಧಾರವನ್ನು ಭಾನುವಾರ ಕೈಗೊಂಡಿದ್ದ ಉನ್ನತ ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಸಿಎಂ ತಿಳಿಸಿದ್ದಾರೆ. ಮುಂದೆ ಓದಿ...

"ಸರ್ಕಾರ ಅಕ್ಕಿ ಗಿರಣಿಯಲ್ಲ"
"ಇನ್ನು ರಾಜ್ಯ ಸರ್ಕಾರ ಬೆಳೆ ಖರೀದಿ ಪ್ರಕ್ರಿಯೆಯನ್ನು ಕೈಗೊಳ್ಳಲು ಸಾಧ್ಯವಿಲ್ಲ. ಸರ್ಕಾರ ವ್ಯಾಪಾರ ನಡೆಸುವ ಸಂಸ್ಥೆಯಲ್ಲ, ಅಕ್ಕಿ ಗಿರಣಿಯಲ್ಲ. ಕೃಷಿ ಉತ್ಪನ್ನಗಳ ಮಾರಾಟ ಅಥವಾ ಖರೀದಿ ಸರ್ಕಾರದ ಜವಾಬ್ದಾರಿಯಲ್ಲ. ಮುಂದಿನ ವರ್ಷದಿಂದ ಗ್ರಾಮಗಳಲ್ಲಿ ಕೃಷಿ ಉತ್ಪನ್ನ ಖರೀದಿ ಕೇಂದ್ರಗಳನ್ನು ತೆರೆಯಲು ಸಾಧ್ಯವಿಲ್ಲ" ಎಂದು ಸಿಎಂ ಕಚೇರಿಯ ಅಧೀಕೃತ ಹೇಳಿಕೆಯಲ್ಲಿ ತಿಳಿಸಲಾಗಿದೆ.

ರೈತರಿಗೆ ಕೆಸಿಆರ್ ಸಲಹೆ
ಆದರೆ ಕೃಷಿ ಮಾರುಕಟ್ಟೆಯಲ್ಲಿ ಮಾರಾಟ ಹಾಗೂ ಖರೀದಿ ಪ್ರಕ್ರಿಯೆಯನ್ನು ಸೂಕ್ತವಾಗಿ ನಿರ್ವಹಿಸುವಂತೆ ನಿರ್ದೇಶಿಸಿದ್ದಾರೆ. ರೈತರು ತಮ್ಮೆಲ್ಲಾ ಕೃಷಿ ಉತ್ಪನ್ನಗಳನ್ನು ಮಾರುಕಟ್ಟೆಗೆ ಒಂದೇ ಸಮಯದಲ್ಲಿ ತರುವುದು ಬೇಡ. ಹಂತ ಹಂತಗಳಲ್ಲಿ ಮಾರಾಟ ಮಾಡಿದರೆ ಉತ್ತಮ ಬೆಲೆ ಸಿಗಬಹುದು ಎಂದು ಸಲಹೆ ನೀಡಿದ್ದಾರೆ.

ಸರ್ಕಾರಕ್ಕೆ 7,500 ಕೋಟಿ ರೂಪಾಯಿ ನಷ್ಟ!
ಕಳೆದ ಬಾರಿ, ರೈತರಿಗೆ ಕೃಷಿ ಉತ್ಪನ್ನಗಳ ಖರೀದಿಗೆ ಗ್ರಾಮಗಳಲ್ಲಿ ಖರೀದಿ ಕೇಂದ್ರಗಳನ್ನು ತೆರೆದು ಮಾನವೀಯ ನೆಲೆಯಲ್ಲಿ ರೈತರಿಂದ ಸರ್ಕಾರ ಈ ಬೆಳೆಗಳನ್ನು ಖರೀದಿಸುವುದಾಗಿ ತಿಳಿಸಲಾಗಿತ್ತು. ಇದರಿಂದ ರೈತರಿಗೆ ನಷ್ಟವಾಗುವುದು ತಪ್ಪುತ್ತದೆ ಎಂದು ಕೆಸಿಆರ್ ಹೇಳಿದ್ದರು. ಆದರೆ ಭತ್ತ, ಮೆಕ್ಕೆ ಜೋಳ, ಸೂರ್ಯಕಾಂತಿ, ಬೇಳೆ ಬೆಳೆಗಳ ಖರೀದಿಯಿಂದ ಸರ್ಕಾರಕ್ಕೆ 7,500 ಕೋಟಿ ರೂಪಾಯಿ ನಷ್ಟವಾಗಿದೆ ಎಂದು ತಿಳಿಸಿದ್ದು, ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ನಿಗದಿಪಡಿಸಿದ್ದರೂ, ಈ ಬೆಳೆಗಳನ್ನು ಮಾರುಕಟ್ಟೆಯಲ್ಲಿ ಬೇಡಿಕೆಯಿಲ್ಲದ್ದರಿಂದ ಅತಿ ಕಡಿಮೆ ಬೆಲೆಗೆ ಮಾರಾಟವಾಗಿ ನಷ್ಟ ಸಂಭವಿಸಿದೆಎ ಎನ್ನಲಾಗಿದೆ.

ಕಾಯ್ದೆಗೆ ವಿರೋಧ ವ್ಯಕ್ತಪಡಿಸಿದ್ದ ಕೆಸಿಆರ್
ಇದುವರೆಗೂ ಈ ಕೃಷಿ ಕಾಯ್ದೆಗಳು ರೈತರ ಹಿತಾಸಕ್ತಿಗೆ ಮಾರಕವಾಗಿವೆ ಎಂದಿದ್ದ ಕೆಸಿಆರ್, ಸೆಪ್ಟೆಂಬರ್ ನಲ್ಲಿ ಈ ಕಾಯ್ದೆಗಳನ್ನು ಪರಿಚಯಿಸಿದಾಗಲೂ, ಕಾಯ್ದೆಗಳ ವಿರುದ್ಧ ಮತ ಹಾಕಬೇಕೆಂದು ಸೂಚಿಸಿದ್ದರು. ಈ ಕಾಯ್ದೆಗಳಡಿಯಲ್ಲಿ ದೇಶದ ಯಾವುದೇ ಕಡೆ ರೈತರು ತಮ್ಮ ಬೆಳೆಗಳನ್ನು ಮಾರಾಟ ಮಾಡುವ ಅನುಕೂಲ ನೀಡುವುದಾದರೂ, ವಾಸ್ತವದಲ್ಲಿ ಇದು ಕಾರ್ಪೊರೇಟ್ ಲಾಬಿಗೆ ಕಾರಣವಾಗುತ್ತದೆ ಎಂದು ದೂರಿದ್ದರು. ಈ ಕಾಯ್ದೆಗಳ ವಿರುದ್ಧ ರೈತರು ನೀಡಿದ್ದ ಭಾರತ್ ಬಂದ್ ಗೂ ಕೆಸಿಆರ್ ಬೆಂಬಲ ವ್ಯಕ್ತಪಡಿಸಿದ್ದರು. ಕೆಸಿಆರ್ ಪುತ್ರ ರಾಮ ರಾವ್ ಬಂದ್ ನಲ್ಲಿ ಭಾಗವಹಿಸಿ ಬೆಂಬಲ ಸೂಚಿಸಿದ್ದರು. ಡಿಸೆಂಬರ್ ಮೂರನೇ ವಾರದಲ್ಲಿ ಈ ಕಾಯ್ದೆ ರದ್ದತಿಗೆ ಒತ್ತಾಯಿಸುವುದಾಗಿ ತಿಳಿಸಿದ್ದರು.
ಇದೀಗ, "ಪ್ರಸ್ತುತ ನಾವು ಕೇಂದ್ರದ ವಿರುದ್ಧ ಹೋಗಲು ಸಾಧ್ಯವಿಲ್ಲ. ಇದು ರಾಜ್ಯದ ಹಿತಾಸಕ್ತಿ ಮೇಲೆ ಪರಿಣಾಮ ಬೀರುತ್ತದೆ" ಎಂದು ಹೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಬಿಜೆಪಿ ರಾಜ್ಯಾಧ್ಯಕ್ಷ ಸಂಜಯ್, ಕೃಷಿ ಕಾಯ್ದೆ ಕುರಿತು ಟಿಆರ್ ಎಸ್ ಸರ್ಕಾರದ ಬದಲಾವಣೆ ಸ್ವಾಗತಾರ್ಹ. ಈಗಲಾದರೂ ಕಾಯ್ದೆಗಳ ಪ್ರಯೋಜನದ ವಾಸ್ತವವನ್ನು ತಿಳಿದುಕೊಂಡಿದ್ದಾರೆ ಎಂದು ಹೇಳಿದ್ದಾರೆ.












Click it and Unblock the Notifications