ಸಕ್ಕರೆ ಕಾರ್ಖಾನೆಗಳ ಬಾಕಿ ಮೊತ್ತ 26 ಕೋಟಿ ರೂ. ವಸೂಲಿ: ಸಕ್ಕರೆ ಸಚಿವ ಮುನೇನಕೊಪ್ಪ

ಬೆಂಗಳೂರು, ಅ. 05: ಕಬ್ಬು ಬೆಳೆಗಾರರಿಗೆ ಸಕ್ಕರೆ ಕಾರ್ಖಾನೆಗಳು ಪಾವತಿ ಮಾಡಬೇಕಿದ್ದ ಬಾಕಿ ಮೊತ್ತವನ್ನು ಕೊಡಿಸಲು ಸಕ್ಕರೆ ಹಾಗೂ ಜವಳಿ ಮತ್ತು ಕೈಮಗ್ಗ ಸಚಿವರಾದ ಶಂಕರ್ ಪಾಟೀಲ ಮುನೇನಕೊಪ್ಪ ಹಾಕಿದ ಪ್ರಾಮಾಣಿಕ ಪ್ರಯತ್ನ ಫಲ ಕೊಟ್ಟಿದೆ. ಏಳು ಕಾರ್ಖಾನೆಗಳಿಂದ ರೈತರಿಗೆ ಬರಬೇಕಿದ್ದ 47.17 ಕೋಟಿ ರೂ. ಮೊತ್ತದಲ್ಲಿ 26.26 ಕೋಟಿ ರೂ. ಹಣವನ್ನು ಸಕ್ಕರೆ ಕಾರ್ಖಾನೆಗಳಿಂದ ರಿಕವರಿ ಮಾಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಹದಿನೈದು ಕೋಟಿ ರೂ. ಬಾಕಿ ಉಳಿಸಿಕೊಂಡಿರುವ ಎರಡು ಸಕ್ಕರೆ ಕಾರ್ಖಾನೆಗಳಿಗೆ ಕಾನೂನು ಪ್ರಕಾರ ನೋಟಿಸ್ ಕೊಟ್ಟು ಗಡುವು ನೀಡಿದ್ದಾರೆ. ಕಬ್ಬು ಬೆಳೆ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಕಬ್ಬು ಬೆಳೆಗಾರರು ಮಂಗಳವಾರ ಪ್ರತಿಭಟನೆ ಹಮ್ಮಿಕೊಂಡಿದ್ದು, ಹೋರಾಟಕ್ಕೂ ಮುನ್ನವೇ ಸಕ್ಕರೆ ಬೆಳೆಗಾರರಿಗೆ ಅಲ್ಪ ಸಿಹಿ ಸುದ್ದಿ ಕೊಟ್ಟಿದ್ದಾರೆ.

ಕಬ್ಬು ಬೆಳೆಗಾರರಿಗೆ ಬಾಕಿ ಮೊತ್ತ ಪಾವತಿ ಸಂಬಂಧ ತುರ್ತು ಸುದ್ದಿಗೋಷ್ಠಿ ಕರೆದ ಸಕ್ಕರೆ ಸಚಿವ ಶಂಕರ ಪಾಟೀಲ ಮುನೇನಕೊಪ್ಪ, ಕಬ್ಬು ಬೆಳೆಗಾರರಿಗೆ ದುಡ್ಡು ಕೊಡಲಿಲ್ಲ ಅಂತ ನೋವಿತ್ತು. ನಾನು ಸಚಿವ ಆದ ಮೇಲೆ ಬೆಳಗಾವಿ ಮತ್ತು ಬೆಂಗಳೂರಿನಲ್ಲಿ ಸಭೆ ಮಾಡಿದ್ದೇನೆ. ಎಲ್ಲಾ ಕಾರ್ಖಾನೆ ಮಾಲೀಕರ ಜತೆ ಸಭೆ ಮಾಡಿದ್ದೆ. ಬಾಕಿ ಹಣ ನೀಡುವಂತೆ ಸೂಚನೆ ನೀಡಿದ್ದೆ. ಒಟ್ಟು 47.17 ಕೋಟಿ ಬಾಕಿ ಇತ್ತು. 3 ದಿನಗಳ ಒಳಗೆ 26.26 ಕೋಟಿ ಹಣ ಸರ್ಕಾರಕ್ಕೆ ತುಂಬಿದ್ದಾರೆ ಎಂದು ತಿಳಿಸಿದರು.

ಇನ್ನು 15.91 ಕೋಟಿ ಮಾತ್ರ ಬಾಕಿ ಉಳಿದಿದೆ. ಬಸವೇಶ್ವರ ಶುಗರ್, ಕೋರ್ ಬೀನ್ ಶುಗರ್ಸ್ ಬಾಕಿ ಹಣ ಕೊಟ್ಟಿಲ್ಲ. ಹೀಗಾಗಿ ಎರಡು ಕಾರ್ಖಾನೆಗೆ ರಿಕವರಿ ನೊಟೀಸ್ ನೀಡಿದ್ದೇವೆ. ಆದಷ್ಟು ಬೇಗ ಅವ್ರು ಕೂಡಾ ಬಾಕಿ ಹಣ ನೀಡುತ್ತಾರೆ. ಮುಂದಿನ ದಿನಗಳಲ್ಲಿ ಹೀಗೆ ಆಗದಂತೆ ಕ್ರಮವಹಿಸುತ್ತೇವೆ. 2020-21 ನೇ ಸಾಲಿನಲ್ಲಿ ಮಾತ್ರ ಹಣ ಬಾಕಿ ಇತ್ತು. ಹಿಂದಿನ ಯಾವುದೇ ಕಾರ್ಖಾನೆ ಬಾಕಿ ಉಳಿಸಿಕೊಂಡಿಲ್ಲ. ರೈತ ಕಬ್ಬು ಕೊಟ್ಟಾಗ ಕಾರ್ಖಾನೆಗಳು ಹಣ ಕೊಡಬೇಕು. ರೈತರ ಹಿತ ಕಾಪಾಡೋದು ನಮ್ಮ ಸರ್ಕಾರದ ಉದ್ದೇಶ ಎಂದು ಹೇಳಿದರು.

ಕಬ್ಬಿನ ದರ ಹೆಚ್ಚಳ

ಕಬ್ಬಿನ ದರ ಹೆಚ್ಚಳ

ಕಬ್ಬಿನ ದರ ಹೆಚ್ಚಳ ವಿಚಾರ ಕೇಂದ್ರದ ಮಂತ್ರಿಗಳ ಜತೆ ಎರಡು ಬಾರಿ ಭೇಟಿಯಾಗಿ ಮಾತಾಡಿದ್ದೇನೆ. ಈ ಬಗ್ಗೆ ಕೇಂದ್ರದ ಜೊತೆ ಚರ್ಚೆ ಮಾಡಿ ಹೆಚ್ವಳ ಬಗ್ಗೆ ನಿರ್ಧಾರ ಮಾಡ್ತೀವಿ. ರೈತರ ಪ್ರತಿಭಟನೆ ವಿಚಾರಕ್ಕೆ ಬಂದಾಗ ನಾವು ನಾವು ರೈತರ ಪ್ರತಿಭಟನೆಯನ್ನ ನಾವು ಹತ್ತಿಕ್ಕೋದಿಲ್ಲ. ರೈತರು ತಮ್ಮ ಕಷ್ಟವನ್ನು ಹೋರಾಟದ ಮೂಲಕ ಸರ್ಕಾರದ ಗಮನಕ್ಕೆ ತರವು ಪ್ರಯತ್ನ ಮಾಡುತ್ತಿದ್ದಾರೆ. ವಿಧಾನಸೌಧಕ್ಕೆ ಬಂದರೆ ನಾನೇ ಸರ್ಕಾರದ ಪರ ಹೋಗಿ ಮನವಿ ಸ್ವೀಕರಿಸಿ ಸಮಸ್ಯೆ ಪರಿಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ರೈತ ಪರ ಸರ್ಕಾರ ನಮ್ಮದು. ಅವರಿಗೆ ಅನುಕೂಲ ಮಾಡಿಕೊಡುವುದೇ ನಮ್ಮ ಮೊದಲ ಆದ್ಯತೆ ಎಂದು ಭರವಸೆ ನೀಡಿದರು.

ಏಕ ಕಾಲಕ್ಕೆ ಕಬ್ಬು ಕಾರ್ಖಾನೆ ಆರಂಭ ಆಗಬೇಕು: ಇನ್ಮುಂದೆ ರಾಜ್ಯದಲ್ಲಿ ಏಕ ಕಾಲಕ್ಕೆ ಕಬ್ಬಿನ ಕಾರ್ಖಾನೆ ಪ್ರಾರಂಭ ಮಾಡಬೇಕು. ಈ‌ ಬಗ್ಗೆ ಈಗಾಗಲೇ ಎಲ್ಲಾ ಕಬ್ಬು ಕಾರ್ಖಾನೆ ಮಾಲೀಕರ ಜೊತೆ ಮಾತಾಡಿದ್ದೇನೆ. ಕೆಲವರು ತಮಗೆ ಬೇಕಾದ ಸಮಯದಲ್ಲಿ ಕಾರ್ಖಾನೆ ಪ್ರಾರಂಭ ಮಾಡ್ತಾರೆ. ಇದ್ರೀಂದ ಅನೇಕ ಸಮಸ್ಯೆ ಆಗ್ತಿದೆ. ಹೀಗಾಗಿ ಎಲ್ಲಾ ಕಾರ್ಖಾನೆಗಳಿಗೆ ಏಕ ಕಾಲಕ್ಕೆ ಪ್ರಾರಂಭ ಮಾಡಲು ಸೂಚನೆ ನೀಡಲಾಗಿದೆ.ಆದಷ್ಟು ಬೇಗ ಮತ್ತೊಂದು ಸಭೆ ಮಾಡಿ ಈ ಬಗ್ಗೆ ನಿರ್ಧಾರ ಮಾಡ್ತೀವಿ ಎಂದರು.

ಆತಂಕ ಬೇಡ ಎಂದು ಮನವಿ

ಆತಂಕ ಬೇಡ ಎಂದು ಮನವಿ

ಕಬ್ಬು ಬೆಳೆಗಾರರು ಆತಂಕಕ್ಕೆ ಒಳಗಾಗೋದು ಬೇಡ. ಇವತ್ತು ಪ್ರತಿಭಟನೆ ನಡೆಸುತ್ತಿರುವ ರೈತರನ್ನು ಭೇಟಿ ಮಾಡ್ತೇನೆ. ರೈತರೊಂದಿಗೆ ಮಾತುಕತೆ ನಡೆಸಿ ಅವರ ಸಮಸ್ಯೆ ಪರಿಹರಿಸುವ ಕೆಲಸ ಮಾಡ್ತೇನೆ. ಎಫ್ ಆರ್ ಪಿ ದರ ಹೆಚ್ಚಳದ ಬಗ್ಗೆ ಕೇಂದ್ರ ಸರ್ಕಾರದ ಜೊತೆ ಚರ್ಚೆ ಮಾಡಬೇಕಾಗುತ್ತದೆ. ನಾನು ಸಚಿವನಾದ ಮೇಲೆ ಎರಡು ಬಾರಿ ಕೇಂದ್ರ ಸಕ್ಕರೆ ಸಚಿವರೊಂದಿಗೆ ಮಾತುಕತೆ ಮಾಡಿದ್ದೇನೆ. ನಾನು ಸಚಿವನಾದ ಮೇಲೆ ಮೊದಲ ಹೆಜ್ಜೆ ಇಟ್ಟಿದ್ದೇನೆ, ದಿಟ್ಟ ನಿರ್ಧಾರ ತೆಗೆದುಕೊಂಡಿದ್ದೇನೆ. ಸರ್ಕಾರ ನೊಟೀಸ್ ಕೊಟ್ಟ ಮೇಲೆ 5 ಫ್ಯಾಕ್ಟರಿಗಳು ಬಾಕಿ ಹಣ ಪೂರ್ತಿ ನೀಡಿವೆ. ಸಕ್ಕರೆ ಉದ್ಯಮ ನಷ್ಟದಲ್ಲೇನೂ ಇಲ್ಲ. ಇದರ ಅನುಕೂಲ ರೈತರಿಗೆ ಆಗುವಂತೆ ಮಾಡುವುದು ಸಕ್ಕರೆ ಸಚಿವನಾಗಿ ನನ್ನ ಜವಾಬ್ದಾರಿ ಎಂದು ಇದೇ ವೇಳೆ ತಿಳಿಸಿದರು.

ಮೈ ಶುಗರ್ ಹಿತ ರಕ್ಷಣೆ

ಮೈ ಶುಗರ್ ಹಿತ ರಕ್ಷಣೆ

ಮೈಶುಗರ್ ಸಕ್ಕರೆ ಕಾರ್ಖಾನೆ ವಿಚಾರದಲ್ಲಿ ರೈತರ ಹಿತ ಕಾಪಾಡುತ್ತೇವೆ ಕೆಲವರಿಗೆ ಮೈಶುಗರ್ ಸಕ್ಕರೆ ಕಾರ್ಖಾನೆ ವಿಚಾರದಲ್ಲಿ ಪ್ರತಿಷ್ಠೆಗೆ ಬಿದ್ದಿದ್ದಾರೆ. ಕೆಲವರು ಖಾಸಗಿಯವರಿಗೆ ಕೊಡಿ ಅಂತ ಒತ್ತಾಯ ಮಾಡಿದ್ದಾರೆ. ಮತ್ತೆ ಕೆಲವರು ಸರ್ಕಾರವೇ ನಡೆಸಲಿ ಅಂತ ಒತ್ತಾಯ ಮಾಡಿದ್ದಾರೆ. ಇದುವರೆಗೆ ಮೈಶುಗರ್ ಸಕ್ಕರೆ ಕಾರ್ಖಾನೆಗೆ 550 ಕೋಟಿ ಹಣ ನೀಡಲಾಗಿದೆ. ಅದೆಲ್ಲ ಲೆಕ್ಕ ಬರಬೇಕು. ಕ್ಯಾಬಿನೆಟ್‌ನಲ್ಲಿ ಇಟ್ಟು ಚರ್ಚೆ ಮಾಡಿ ನಿರ್ಧಾರ ಮಾಡಬೇಕಿದೆ. ಕೆಲವು ಆಂತರಿಕ ವಿಚಾರ ಚರ್ಚೆ ಮಾಡಿ ಮುಂದೆ ಕ್ಯಾಬಿನೆಟ್ ನಲ್ಲಿ ನಿರ್ಧಾರ ಮಾಡಬೇಕಿದೆ. ಕುಮಾರಸ್ವಾಮಿ ಸೇರಿದಂತೆ ಎಲ್ಲಾ ಸಿಎಂಗಳು ಹಣ ನೀಡಿದ್ದಾರೆ. ಆದ್ರು ರೈತರ ಹಿತಕ್ಕಾಗಿ ನಾವು ಕೆಲಸ ಮಾಡ್ತೀವಿ. ಕೆಲ ರಾಜಕೀಯ ನಾಯಕರು ಪ್ರತಿಷ್ಠೆಗೆ ಬಿದ್ದಿದ್ದಾರೆ. ಇದನ್ನ ಮೊದಲು ಬಿಡಬೇಕು. ಶೀಘ್ರವೇ ಸಿಎಂ ಜೊತೆ ಸಭೆ ಮಾಡಿ ಈ ಬಗ್ಗೆ ನಿರ್ಧಾರ ಮಾಡ್ತೀವಿ ಎಂದು ಸಚಿವರು ಇದೇ ವೇಳೆ ಸ್ಪಷ್ಟನೆ ನೀಡಿದರು.

ಕಬ್ಬು ಬೆಳೆಗಾರರ ಪ್ರತಿಭಟನೆ

ಕಬ್ಬು ಬೆಳೆಗಾರರ ಪ್ರತಿಭಟನೆ

ಕಬ್ಬು ಬೆಳೆಯ ಎಫ್‌ಆರ್‌ಪಿ ದರ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜ್ಯ ಕಬ್ಬು ಬೆಳೆಗಾರರು ಮಂಗಳವಾರ ಪ್ರತಿಭಟನೆ ಹಮ್ಮಿಕೊಂಡಿದ್ದಾರೆ. ನಗರದ ಫ್ರೀಡಂ ಪಾರ್ಕ್‌ನಲ್ಲಿ ಹೋರಾಟ ಹಮ್ಮಿಕೊಂಡಿದ್ದು, ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ಮುಂದಾಗಿದ್ದಾರೆ. ಇದರ ನಡುವೆಯೇ ಕಬ್ಬು ಬೆಳೆಗಾರರಿಗೆ ಪಾವತಿಯಾಗಬೇಕಿದ್ದ ಬಾಕಿ ಹಣ ಬಿಡುಗಡೆ ಮಾಡುವ ಸಂಬಂಧ 26 ಕೋಟಿ ರೂ.ಗಳನ್ನು ಸಕ್ಕರೆ ಕಾರ್ಖಾನೆಗಳು ಪಾವತಿ ಮಾಡಿವೆ. ಬಾಕಿ ಹದಿನೈದು ಕೋಟಿ ವಸೂಲಿಗೆ ಸರ್ಕಾರ ಮುಂದಾಗಿದೆ. ಇದರ ನಡುವೆ ಕಬ್ಬು ಬೆಳೆಗಾರರು ಹೋರಾಟ ಹಮ್ಮಿಕೊಂಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+