ವಿಜಾಪುರದಲ್ಲಿ ಶೀಘ್ರ ವೈನ್ ಪಾರ್ಕ್ ಆರಂಭ
ಬೆಂಗಳೂರು, ಫೆ. 5 : ದ್ರಾಕ್ಷಿ ಬೆಳೆಗಾರರಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ವಿಜಾಪುರದಲ್ಲಿ ಶೀಘ್ರವೇ ವೈನ್ ಪಾರ್ಕ್ ಆರಂಭಿಸಲಾಗುವುದು ಎಂದು ತೋಟಗಾರಿಕಾ ಸಚಿವ ಉಮೇಶ್ ಕತ್ತಿ ತಿಳಿಸಿದರು.
ನಗರದ ಹಡ್ಸನ್ ವೃತ್ತದಲ್ಲಿರುವ ಹಾಪ್ ಕಾಮ್ಸ್ ಮಳಿಗೆಯಲ್ಲಿ ದ್ರಾಕ್ಷಿ ಮೇಳವನ್ನು ಉದ್ಘಾಟಿಸಿ ಮಾತನಾಡಿದ ಅವರು, ರಾಜ್ಯದಲ್ಲಿ 12 ಸಾವಿರ ಹೆಕ್ಟೇರು ಪ್ರದೇಶದಲ್ಲಿ ಎರಡು ಲಕ್ಷ ಟನ್ ದ್ರಾಕ್ಷಿಯನ್ನು ಬೆಳೆಯಲಾಗುತ್ತಿದ್ದು, ತೊಟಗಾರಿಕಾ ಬೆಳೆಗಳಿಗೆ ಹೆಚ್ಚಿನ ಒತ್ತು ನೀಡಲಾಗುವುದು ಎಂದರು. ದ್ರಾಕ್ಷಿ ಬೆಳೆಗಾರರಿಗೆ ಯೋಗ್ಯ ಬೆಲೆ ಸಿಗಬೇಕು ಹಾಗೂ ಗ್ರಾಹಕರಿಗೂ ಯೋಗ್ಯ ದರದಲ್ಲಿ ದ್ರಾಕ್ಷಿ ಸಿಗಬೇಕು ಎಂಬ ದೃಷ್ಟಿಯಿಂದ ಮೇಳವನ್ನು ಬೆಂಗಳೂರಿನಲ್ಲಿ ಆಯೋಜಿಸಲಾಗಿದೆ. ರಾಜ್ಯದ ಬೇರೆ ಬೇರೆ ಜಿಲ್ಲೆಗಳಲ್ಲಿ ಇದೇ ರೀತಿಯ ಮೇಳವನ್ನು ಏರ್ಪಡಿಸಲಾಗುವುದು ಎಂದು ಹೇಳಿದರು.
ರಾಜ್ಯದ ಪ್ರಮುಖ ದ್ರಾಕ್ಷಿ ತಳಿಗಳಾದ ಥಾಮ್ಸನ್ ಸೀಡ್ ಲೆಸ್, ಸೊನಾಕಾ, ಶರದ್, ಪ್ಲೇಮ್ ಸೀಡ್ ಲೆಸ್, ಮಾಣಿಕ್ ಚಮನ್, ಬೆಂಗಳೂರು ನೀಲಿ ಮೊದಲಾದವು ಮೇಳದಲ್ಲಿದ್ದು, ಗ್ರಾಹಕರಿಗೆ ಶೇ. 10 ರಷ್ಟು ರಿಯಾಯಿತಿ ದರದಲ್ಲಿ ದೊರೆಯಲಿದೆ. ಬುಧವಾರ ದ್ರಾಕ್ಷಿ ಮೇಳ ಆರಂಭವಾಗಿದ್ದು, ಎರಡೂವರೆ ತಿಂಗಳ ಕಾಲ ಮೇಳ ನಡೆಯಲಿದೆ.
(ದಟ್ಸ್ ಕನ್ನಡ ವಾರ್ತೆ)
ಪೂರಕ ಓದಿಗೆ:ಆಲ್ಕೋಹಾಲ್ ರಹಿತ ವೈನ್ ಕುಡಿರಿ, ರೈತರ ಕಾಪಾಡಿ












Click it and Unblock the Notifications