ಸಿದ್ದರಾಮಯ್ಯ ಸರಕಾರದಿಂದ 50,000 ರೂ.ವರೆಗಿನ ರೈತರ ಸಾಲ ಮನ್ನಾ
ಬೆಂಗಳೂರು, ಜೂನ್ 21: ಕೊನೆಗೂ ರಾಜ್ಯದ ಸಿದ್ದರಾಮಯ್ಯ ಸರಕಾರ ರೈತರ ಸಾಲ ಮನ್ನಾ ಮಾಡಲಿದೆ. ಇದಕ್ಕಾಗಿ ಶೀಘ್ರ ಆದೇಶ ಹೊರಡಿಸಲಿರುವುದಾಗಿ ಎಂದು ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಎಲ್ಲಾ ಸಹಕಾರಿ ಬ್ಯಾಂಕುಗಳಲ್ಲಿನ ಜೂನ್ 20ರವರೆಗೆ ಪಡೆದಿರುವ ಸಾಲದಲ್ಲಿ ರೂ. 50,000 ಮೊತ್ತವನ್ನು ಕರ್ನಾಟಕ ಸರಕಾರ ಮನ್ನಾ ಮಾಡಲಿದೆ. ಇದರಿಂದ ಕರ್ನಾಟಕ ಸರಕಾರದ ಬೊಕ್ಕಸಕ್ಕೆ ಒಟ್ಟು 8,167 ಕೋಟಿ ಹೆಚ್ಚುವರಿ ಹೊರೆ ಬೀಳಲಿದೆ.

ಸಾಲ ಮನ್ನಾದಿಂದ ಕರ್ನಾಟಕದಲ್ಲಿನ 22,27,506 ರೈತರಿಗೆ ಅನುಕೂಲವಾಗಲಿದೆ. ಸಿದ್ದರಾಮಯ್ಯ 2017-18ರ ಬಜೆಟ್ ಮಂಡಿಸಿದಂದಿನಿಂದ ರೈತರ ಸಾಲ ಮನ್ನಾ ಮಾಡುವಂತೆ ಒತ್ತಾಯ ಕೇಳಿ ಬಂದಿತ್ತು. ಈ ಸಂದರ್ಭ ಸಿದ್ದರಾಮಯ್ಯನವರು ಕೇಂದ್ರ ಸರಕಾರ ರಾಷ್ಟ್ರೀಕೃತ ಬ್ಯಾಂಕ್ ಗಳ ಸಾಲ ಮನ್ನಾ ಮಾಡಿದರೆ ತಾನು ಸಾಲ ಮನ್ನಾ ಮಾಡುವುದಾಗಿ ಹೇಳಿದ್ದರು.
ಇದೀಗ ಸಿದ್ದರಾಮಯ್ಯ ರಾಜ್ಯ ಸರಕಾರ ಸಾಲ ಮನ್ನಾ ಮಾಡುವುದಾಗಿ ಘೋಷಿಸಿದ್ದಾರೆ. ಸಾಲ ಮನ್ನಾ ಮಾಡಿದ ಸಿದ್ದರಾಮಯ್ಯನವರಿಗೆ ಕಾಂಗ್ರೆಸ್ ನಾಯಕರು ಅಭಿನಂದನೆ ಸಲ್ಲಿಸಿದ್ದಾರೆ. ಮಾತ್ರವಲ್ಲ ವಾಣಿಜ್ಯ ಬ್ಯಾಂಕುಗಳಲ್ಲಿನ ಸಾಲ ಮನ್ನಾ ಮಾಡುವಂತೆ ಕೇಂದ್ರ ಸರಕಾರವನ್ನು ಕಾಂಗ್ರೆಸ್ ನಾಯಕರು ಒತ್ತಾಯಿಸಿದ್ದಾರೆ.
ಈ ಹಿಂದೆ ಕಾಂಗ್ರೆಸ್ ಆಡಳಿತವಿರುವ ಪಂಜಾಬ್ ಸರಕಾರ ರೈತರ ಸಾಲ ಮನ್ನಾ ಮಾಡುತ್ತಿದ್ದಂತೆ ಕರ್ನಾಟಕದಲ್ಲೂ ಸಾಲ ಮನ್ನಾ ಮಾಡುವಂತೆ ತೀವ್ರ ಒತ್ತಡ ಕೇಳಿ ಬಂದಿತ್ತು. ಇದೀಗ ಕೊನೆಗೂ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸಾಲ ಮನ್ನಾ ಮಾಡಿದ್ದಾರೆ.
ಈ ಹಿಂದೆ ಉತ್ತರ ಪ್ರದೇಶ, ಪಂಜಾಬ್ ಗಳಲ್ಲಿ ರೈತರ ಸಾಲ ಮನ್ನಾ ಮಾಡಲಾಗಿತ್ತು. ಇನ್ನು ಮಹಾರಾಷ್ಟ್ರ, ತಮಿಳುನಾಡು ಮತ್ತು ಮಧ್ಯ ಪ್ರದೇಶದಲ್ಲಿಯೂ ಸಾಲಮನ್ನಾ ಬೇಡಿಕೆ ತೀವ್ರವಾಗಿದೆ. ಕಳೆದ ಋತುವಿನಲ್ಲ ದೇಶದಾದ್ಯಂತ ಬರಗಾಲ ತಾಂಡವವಾಡಿತ್ತು. ಹೀಗಾಗಿ ದೇಶದಾದ್ಯಂತ ಸಾಲ ಮನ್ನಾ ಬೇಡಿಕೆ ಕೇಳಿ ಬಂದಿತ್ತು. ಇದೀಗ ಒಂದೊಂದಾಗಿ ರಾಜ್ಯಗಳು ಸಾಲ ಮನ್ನಾ ಮಾಡುತ್ತಿವೆ.
ಹೊರೆ ಉಳಿಸಿ ಹೋಗುವುದು ಬೇಡ - ಶೆಟ್ಟರ್
ಸಿದ್ದರಾಮಯ್ಯ ಸರಕಾರದ ಸಾಲ ಮನ್ನಾಕ್ಕೆ ಪ್ರತಿಕ್ರಿಯೆ ನೀಡಿರುವ ವಿಪಕ್ಷ ನಾಯಕ ಜಗದೀಶ್ ಶೆಟ್ಟರ್, "ಮುಂದಿನ ಸರಕಾರಕ್ಕೆ ಹೊರೆ ಹೊರಿಸಿ ಹೋಗುವುದು ಬೇಡ. ಈ ಸರಕಾರದ ಅವಧಿಯಲ್ಲೇ ಬ್ಯಾಂಕುಗಳಿಗೆ ಹಣ ಪಾವತಿಸಲಿ," ಎಂದು ಹೇಳಿದ್ದಾರೆ.
"ರಾಜ್ಯದಲ್ಲಿ ಅತೀ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ, ಈ ಹಿನ್ನಲೆಯಲ್ಲಿ ನಾವು ಸಾಲ ಮನ್ನಾಕ್ಕೆ ಒತ್ತಾಯಿಸಿದ್ದೆವು. ರೈತರ ಸಾಲ ಮನ್ನಾ ನಿರ್ಧಾರ ತೆಗೆದುಕೊಂಡಿರುವುದ ಸ್ವಾಗತಾರ್ಹ. ಆದರೆ ಇದಕ್ಕಾಗಿ ಸರಕಾರ ಹಿಗ್ಗುವ ಅಗತ್ಯವಿಲ್ಲ. ನಾವು ಸಾಲ ಮನ್ನಾಕ್ಕೆ ಒತ್ತಾಯಿಸಿದ್ದೆವು. ನಮ್ಮ ಒತ್ತಾಯಗಳಿಗೆ ಸಿದ್ದರಾಮಯ್ಯ ಮಣಿದಿದ್ದಾರೆ," ಎಂದು ಅವರು ಹೇಳಿದ್ದಾರೆ.
ಕೇಂದ್ರವೂ ಸಾಲ ಮನ್ನಾ ಮಾಡಲಿ - ಕುಮಾರಸ್ವಾಮಿ
ಇದೇ ವೇಳೆ ಸಾಲ ಮನ್ನಾ ಸ್ವಾಗತಿಸಿರುವು ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ, ಕೇಂದ್ರವೂ ಸಾಲ ಮನ್ನಾ ಮಾಡುವಂತೆ ಒತ್ತಾಯಿಸಿದ್ದಾರೆ.
ಬೆಳಗಾವಿ ಜಿಲ್ಲೆಯ ಅಥಣಿಯಲ್ಲಿ ಈ ಕುರಿತು ಪ್ರತಿಕ್ರಿಯೆ ನೀಡಿದ ಕುಮಾರಸ್ವಾಮಿ, "ರೈತರ ಸಾಲಮನ್ನಾ ಸ್ವಾಗತಾರ್ಹ. ಆದರೆ ಬೇರೆ ಬೇರೆ ರಾಜ್ಯಗಳಲ್ಲಿ 1-2 ಲಕ್ಷವರೆಗಿನ ಸಾಲ ಮನ್ನಾ ಮಾಡಿದ್ದರೆ ನಮ್ಮಲ್ಲಿ ಕೇವಲ 50,000 ರೂಪಾಯಿವರೆಗಿನ ಸಾಲ ಮಾತ್ರ ಮನ್ನಾ ಮಾಡಲಾಗಿದೆ. ಸರಕಾರ ಸಾಲ ಮನ್ನಾದ ಮಿತಿ ಹೆಚ್ಚಿಸಲಿ," ಎಂದಿದ್ದಾರೆ. ಕರ್ನಾಟದಲ್ಲಿ ಸಹಕಾರಿ ಬ್ಯಾಂಕುಗಳ ಸಾ ಮಾತ್ರ ಮನ್ನಾ ಮಾಡಲಾಗಿದೆ. ಕೇಂದ್ರ ಸರಕಾರವೂ ರಾಷ್ಟ್ರೀಕೃತ ಬ್ಯಾಂಕುಗಳ ಸಾಲ ಮನ್ನಾ ಮಾಡಬೇಕು ಎಂದು ಅವರು ಇದೇ ಸಂದರ್ಭದಲ್ಲಿ ಒತ್ತಾಯಿಸಿದ್ದಾರೆ.
'ನೀವು ಸಾಲ ಮನ್ನಾ ಮಾಡಿ' ಕೇಂದ್ರಕ್ಕೆ ಸಿಎಂ ಒತ್ತಾಯ
ಸಾಲಮನ್ನಾ ಘೋಷಣೆ ಬೆನ್ನಿಗೆ ಟ್ವೀಟ್ ಮಾಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ , "ರಾಜ್ಯ ಸರ್ಕಾರವು ಸಹಕಾರ ಸಂಸ್ಥೆಗಳಿಂದ ಪಡೆದ ಸಾಲಮನ್ನಾ ಮಾಡಿರುವುದರಿಂದ ವಾಣಿಜ್ಯ ಬ್ಯಾಂಕುಗಳಿಂದ ಪಡೆದ ಸಾಲವನ್ನು ಕೇಂದ್ರ ಮನ್ನಾ ಮಾಡಲಿ. ರಾಜ್ಯದ ರೈತರ ಪರವಾಗಿ ಬರವನ್ನು ಗಮನದಲ್ಲಿಟ್ಟುಕೊಂಡು ಪ್ರಧಾನಿಗಳು ಸಾಲ ಮನ್ನಾ ಮಾಡುವಂತೆ ಒತ್ತಾಯಿಸುತ್ತೇನೆ," ಎಂದು ಟ್ವೀಟ್ ಮಾಡಿದ್ದಾರೆ.
On behalf of our farmers, I request @PMOIndia to consider the acute drought & waive farmer loans from commercial banks. #EmpoweringKtaka
— CM of Karnataka (@CMofKarnataka) June 21, 2017












Click it and Unblock the Notifications