ಇಳೀರಿ ಕೆಳಗೆ : ಸಿದ್ದುಗೆ ರೈತರ ಮಾತಿನ ಗುದ್ದು

ಸಿದ್ದರಾಮಯ್ಯ ವೇದಿಕೆ ಹತ್ತುತ್ತಿದ್ದಂತೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ ರೈತರು ಅವರನ್ನು ವೇದಿಕೆಯಿಂದ ಕೆಳಗಿಳಿಸಲು ವೇದಿಕೆಯತ್ತ ನುಗ್ಗಿದರು. ಆ ಸಮಯದಲ್ಲಿ ರೈತರು ಮತ್ತು ರಾಜಕಾರಿಣಿಗಳ ನಡುವೆ ವಾಗ್ಯುದ್ದವೇ ನಡೆದು ಹೋಯಿತು. ಪರಿಸ್ಥಿತಿ ನಿಯಂತ್ರಣಕ್ಕೆ ತರಲು ಪೊಲೀಸರು ಲಾಠಿಚಾರ್ಜ್ ನಡೆಸಿದರು.
ಪೊಲೀಸರು ಹರಸಾಹಸ ಪಟ್ಟು ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದರು. ಸುಮಾರು 30ನಿಮಿಷಕ್ಕೂ ಹೆಚ್ಚು ಹೊತ್ತು ಮಾದೇಗೌಡರ ಜೊತೆ ವೇದಿಕೆಯಲ್ಲಿದ್ದ ಸಿದ್ದರಾಮಯ್ಯ ರೈತರ ಪ್ರತಿಭಟನೆ ಮತ್ತೆ ಮುಗಿಲು ಮುಟ್ಟುತ್ತಿದ್ದಂತೆ ವೇದಿಕೆಯಿಂದ ಬೇರೆ ದಾರಿಯಿಲ್ಲದೆ ಕೆಳಗಿಳಿದರು.
ವೇದಿಕೆಯಿಂದ ಕೆಳಗಿಳಿದ ಸಿದ್ದು ಮುಂದಿನ ಸಾಲಿನಲ್ಲಿ ಕೂತರು. ರೈತರು ಅದಕ್ಕೂ ಪ್ರತಿಭಟಿಸಿದರು. ನಾವು ರೈತರು ನಡೆಸುತ್ತಿರುವ ಹೋರಾಟವಿದು, ರಾಜಕಾರಿಣಿಗಳಿಗೆ ಇಲ್ಲಿ ಪ್ರವೇಶವಿಲ್ಲ. ರಾಜಕೀಯದವರಿಂದಲೇ ಕಾವೇರಿ ಸಮಸ್ಯೆ ಇನ್ನೂ ಪರಿಹಾರವಾಗದೆ ಉಳಿದಿರುವುದು. ಸಿದ್ದರಾಮಯ್ಯ ಇಲ್ಲಿಂದ ತೊಲಗಲೇಬೇಕೆಂದು ಮತ್ತೆ ಸಿದ್ದರಾಮಯ್ಯನವರತ್ತ ರೈತರು ನುಗ್ಗಿದರು.
ಮತ್ತೆ ಮಧ್ಯೆ ಪ್ರವೇಶಿಸಿದ ಪೊಲೀಸರು ರೈತರನ್ನು ಸಮಾಧಾನಗೊಳಿಸಿ ಸಿದ್ದರಾಮಯ್ಯ ಅವರನ್ನು ಭದ್ರತೆಯೊಂದಿಗೆ ಅಲ್ಲಿಂದ ಕಳುಹಿಸಿಕೊಟ್ಟರು.
ಜನ ಸಹನೆ ಕಳೆದುಕೊಂಡಿದ್ದಾರೆ, ಈ ಕೂಡಲೇ ತಮಿಳುನಾಡಿಗೆ ನೀರು ಬಿಡುವುದನ್ನು ನಿಲ್ಲಿಸಿ ಎಂದು ಅಲ್ಲಿಂದ ಹೋರಾಟ ನಂತರ ಮಾಧ್ಯಮದವರಿಗೆ ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ.












Click it and Unblock the Notifications