ಮುಂಗಾರು ಆರ್ಭಟ ಮುಗಿಯಿತು; ಹಿಂಗಾರು ಸಾಮಾನ್ಯ
ಬೆಂಗಳೂರು, ಅ. 8: ಎರಡು ದಿನಗಳಿಂದ ಬಿರುಬಿಸಿಲು ಕಂಡ ರಾಜ್ಯದ ಒಳನಾಡು ಪ್ರದೇಶಗಳು ಇಂದು ಕೊಂಚ ತಂಪಾಗಿವೆ. ಮಂಗಳವಾರ ಮುಂಜಾನೆ ಮೂರು ಗಂಟೆಯಲ್ಲಿ ಶುರುವಿಟ್ಟುಕೊಂಡ ಮಳೆ ಆರ್ಭಟ ಇನ್ನೂ ಮೂರು ದಿನ ಮುಂದುವರಿಯುವ ಸಾಧ್ಯತೆಯಿದೆ.
ಬೆಂಗಳೂರು ಸುತ್ತಮುತ್ತಲ ಜಿಲ್ಲೆಗಳು ಕೊಂಚ ಮಳೆ ಕಾಣಲಿದೆ. ತಮಿಳುನಾಡು ಮತ್ತು ಆಂಧ್ರ ಪ್ರದೇಶದಲ್ಲಿ ಹೆಚ್ಚು ಮಳೆಯಾಗಿವ ಅಂದಾಜಿದೆ. ಸೆಪ್ಟೆಂಬರ್ ತಿಂಗಳ ಮೊದಲ ವಾರದಲ್ಲಿ ಸುರಿದ ಮಳೆಯಿಂದ ಈ ಬಾರಿ ಉತ್ತಮ ಬೆಳೆ ಕೈಗೆ ಸಿಗಲಿದೆಯೆಂದು ಬಹಳ ನಿರೀಕ್ಷೆ ಹೊಂದಿದ್ದ ರೈತನಿಗೆ ಕಳೆದ 20 ದಿನಗಳಿಂದ ಮಳೆ ಬಾರದೆ ನಿರಾಸೆ ಮೂಡಿತ್ತು.
ಬೆಳೆ ಕೈಗೆ ಸಿಗುವುದು ಕನಸಿನ ಮಾತಾದೀತು ಎಂಬ ಚಿಂತೆ ರೈತನಿಗೆ ಕಾಡಲಾರಂಭಿಸಿತ್ತು. ಆದರೆ ಫಸಲು (ತೆನೆ ಕಟ್ಟುವ ಸಮಯ) ಬಿಡುವ ವೇಳೆಯಲ್ಲಿ ಈಗ ಮಳೆಯಾಗುತ್ತಿರುವುದು ಆಶಾದಾಯಕವಾಗಿದೆ.

ಸಾಲು ಸಾಲು ರಜೆ ಮಧ್ಯೆ ರೈತರಿಗೆ ಆಸರೆಯಾಗಲು ನಿರ್ಧರಿಸಿರುವ ಸರಕಾರ, ಸರಕಾರಿ ನೌಕರರು ರಜೆಯ ಹೊರತಾಗಿಯೂ ರೈತರಿಗೆ ನೆರವಾಗಬೇಕು. ಬಿತ್ತನೆಬೀಜ ಮುಂತಾದ ಪರಿಕರಗಳು ಸಕಾಲದಲ್ಲಿ ರೈತರಿಗೆ ಸಿಗುವಂತೆ ನೋಡಿಕೊಳ್ಳಬೇಕು ಎಂದು ನೌಕರರಿಗೆ ಸರಕಾರ ಕಿವಿಮಾತು ಹೇಳಿದೆ.
ಹಿತ-ಮಿತ ಮುಂಗಾರು ನಂತರ...
ಈ ಬಾರಿ ಮುಂಗಾರು ಋತುವಿನಲ್ಲಿ ಇಡೀ ನಾಲ್ಕು ತಿಂಗಳು ಅಬ್ಬರಿಸಿದೆ. ಯಾವುದೇ ಅತಿವೃಷ್ಟಿ ಅವಾಂತರ ಉಂಟುಮಾಡದೆ ಹಿತ-ಮಿತವಾಗಿ ಮುಂಗಾರು ಆಗಿದೆ. ಅದಾದ ಬಳಿಕ ಈಗ ಹಿಂಗಾರು ಋತು. ಇದೇ ಅಕ್ಟೋಬರ್ ನಿಂದ ಆರಂಭವಾಗಿ ಡಿಸೆಂಬರ್ ತನಕ ಹಿಂಗಾರು ಮಳೆ ಸುರಿಯಲಿದೆ. ಆದರೆ ಇದು ಹೆಚ್ಚು ಆರ್ಭಟಿಸದೆ, ಸಾಮಾನ್ಯವಾಗಿರಲಿದೆ. ಇದು ಹವಾಮಾನ ಇಲಾಖೆಯ ಮಳೆ ಭವಿಷ್ಯ.
ತಮಿಳುನಾಡು, ಆಂಧ್ರ ಪ್ರದೇಶದ ಕರಾವಳಿ, ರಾಯಲಸೀಮ, ಕೇರಳ ಮತ್ತು ಕರ್ನಾಟಕದ ಕರಾವಳಿ ಮತ್ತು ಒಳ ನಾಡಿನಲ್ಲಿ ಅಕ್ಟೋಬರ್ - ಡಿಸೆಂಬರ್ ಅವಧಿಯಲ್ಲಿ ಹಿಂಗಾರು ಮಳೆಯಾಗುತ್ತದೆ. ಸಾಮಾನ್ಯವಾಗಿ ಮುಂಗಾರಿಗಿಂತಲೂ ಹಿಂಗಾರು ಮಳೆಯೇ ಜೋರು. ಆದರೆ ಈ ಸಲ ಮಾತ್ರ ಹಿಂಗಾರು ಋತುವಿನಲ್ಲಿ ಸಾಮಾನ್ಯ ಮಳೆಯಾಗಲಿದೆ. ಸರಾಸರಿ ಶೇ. 89ರಿಂದ ಶೇ. 111ರ ತನಕ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ತಮಿಳುನಾಡಿಗೆ ಹಿಂಗಾರು ಮಳೆ ಬಹಳ ಮುಖ್ಯ. ಇಲ್ಲಿನ ಹೆಚ್ಚಿನ ಬೆಳೆ ಹಿಂಗಾರು ಮಳೆಯನ್ನು ಅವಲಂಬಿಸಿದೆ. ಈಶಾನ್ಯದ ರಾಜ್ಯಗಳನ್ನು ಹೊರತುಪಡಿಸಿ ಉಳಿದ ರಾಜ್ಯಗಳಲ್ಲಿ ಉತ್ತಮ ಮುಂಗಾರು ಮಳೆಯಾಗಿರುವುದರಿಂದ ಚಿಂತೆ ಪಡಬೇಕಾದ ಅಗತ್ಯವಿಲ್ಲ ಎಂದು ಹವಾಮಾನ ಇಲಾಖೆ ಭರವಸೆ ಹೇಳಿದೆ.
ಬುಧವಾರ ಮುಂಜಾನೆವರೆಗಿನ ಮುನ್ಸೂಚನೆ:
ಬುಧವಾರ ಮುಂಜಾನೆವರೆಗಿನ ಹವಾಮಾನ ಮುನ್ಸೂಚನೆಯಂತೆ ಕರಾವಳಿಯ ಕೆಲವೆಡೆ ಹಾಗೂ ಒಳನಾಡಿನ ಒಂದೆರಡು ಕಡೆಗಳಲ್ಲಿ ಮಳೆಯಾಗಲಿದೆ. ಧರ್ಮಸ್ಥಳದಲ್ಲಿ ಭಾನುವಾರ-ಸೋಮವಾರ ರಾಜ್ಯದಲ್ಲೇ ಅಧಿಕವೆನಿಸಿದ 4 ಸೆಂ.ಮೀ. ಮಳೆ ಸುರಿದಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.












Click it and Unblock the Notifications