ಸೆ.5ರ ಕರ್ನಾಟಕ ಬಂದ್, ರೈತರ ಬೇಡಿಕೆಗಳೇನು?
ಧಾರವಾಡ, ಸೆಪ್ಟೆಂಬರ್, 03 : ರೈತರ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಸೆ.5ರಂದು ಕರ್ನಾಟಕ ಬಂದ್ ನಡೆಸಲಾಗುತ್ತದೆ ಎಂದು ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಹೇಳಿದ್ದಾರೆ. ಸೆ.7ರಂದು ಬೆಂಗಳೂರಿನಲ್ಲಿ ರೈತರು ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲು ನಿರ್ಧರಿಸಿದ್ದಾರೆ.
ಧಾರವಾಡದಲ್ಲಿ ಬುಧವಾರ ಪತ್ರಿಕಾಗೋಷ್ಠಿ ನಡೆಸಿದ ಕುರಬೂರು ಶಾಂತಕುಮಾರ್ ಅವರು, 'ಸೆ.5ರ ಶನಿವಾರ ಪ್ರತಿ ಜಿಲ್ಲಾ ಮತ್ತು ತಾಲೂಕು ಕೇಂದ್ರಗಳಲ್ಲಿ ರೈತರು ಪ್ರತಿಭಟನೆ ನಡೆಸಲಿದ್ದಾರೆ. ರಸ್ತೆಗಳ ಮೇಲೆ ಜಾನುವಾರುಗಳನ್ನು ಕಟ್ಟಿಹಾಕಿ ರಸ್ತೆ ಬಂದ್ ಮಾಡಿ ಪ್ರತಿಭಟನೆ ನಡೆಸಲಿದ್ದಾರೆ' ಎಂದು ತಿಳಿಸಿದರು. [ಸೆ.2ರ ಭಾರತ ಬಂದ್ ಚಿತ್ರಗಳು]

ಸೆ.7ರಂದು ಬೆಂಗಳೂರಲ್ಲಿ ಪ್ರತಿಭಟನೆ : ರಾಜ್ಯ ರೈತ ಸಂಘ, ರಾಜ್ಯ ಕಬ್ಬುಬೆಳೆಗಾರರ ಸಂಘ, ಹಸಿರು ಸೇನೆ ಜಂಟಿಯಾಗಿ ಸೆ.5ರ ಕರ್ನಾಟಕ ಬಂದ್‌ಗೆ ಕರೆ ನೀಡಿದ್ದೇವೆ. ಬಂದ್‌ಗೆ ಸರ್ಕಾರ ಸ್ಪಂದಿಸಿ ರೈತರ ಬೇಡಿಕೆಗಳನ್ನು ಈಡೇರಿಸದಿದ್ದರೆ ಸೆ.7ರ ಸೋಮವಾರ ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗುತ್ತದೆ' ಎಂದು ಕುರಬೂರು ಶಾಂತಕುಮಾರ್ ಎಚ್ಚರಿಕೆ ನೀಡಿದರು. [ಭೂಸ್ವಾಧೀನ ಕಾಯ್ದೆಗೆ ತಿದ್ದುಪಡಿ ಮಾಡೋಲ್ಲ : ಮೋದಿ]
ಕಳಸಾ-ಬಂಡೂರಿ ಹೋರಾಟಕ್ಕೂ ಬೆಂಬಲವಿದೆ : 'ಕಳಸಾ-ಬಂಡೂರಿ ಯೋಜನೆ ಜಾರಿಗೆ ಒತ್ತಾಯಿಸಿ ಹುಬ್ಬಳ್ಳಿ-ಧಾರವಾಡ, ಗದಗದಲ್ಲಿ ನಡೆಯುತ್ತಿರುವ ರೈತರ ಹೋರಾಟಕ್ಕೆ ನಮ್ಮ ಬೆಂಬಲವಿದೆ' ಎಂದು ಕುರುಬೂರು ಶಾಂತಕುಮಾರ್ ಹೇಳಿದರು.
ಸೆ.26ಕ್ಕೆ ಮತ್ತೆ ಕರ್ನಾಟಕ ಬಂದ್ : 'ಕಳಸಾ ಬಂಡೂರಿ ಯೋಜನೆ ಸೇರಿದಂತೆ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ವಾಟಾಳ್ ನಾಗರಾಜ್ ಅವರು ಸೆ.26ರ ಶನಿವಾರ ಕರ್ನಾಟಕ ಬಂದ್‌ಗೆ ಕರೆ ನೀಡಿದ್ದಾರೆ. ಆದ್ದರಿಂದ ಈ ಸೆಪ್ಟೆಂಬರ್ ತಿಂಗಳಿನಲ್ಲಿ ಎರಡು ಬಾರಿ ಕರ್ನಾಟಕ ಬಂದ್ ಆಗುವ ಸಾಧ್ಯತೆ ಇದೆ.
ಬೇಡಿಕೆಗಳು
* ಕಬ್ಬಿನ ಬಾಕಿ ಹಣ ಪಾವತಿಗೆ ಕ್ರಮ ಕೈಗೊಳ್ಳಬೇಕು
* ರೈತರ ಎಲ್ಲಾ ಬ್ಯಾಂಕ್‌ಗಳ ಬೆಳೆ ಸಾಲವನ್ನು ಮನ್ನಾ ಮಾಡಬೇಕು
* ಬ್ಯಾಂಕ್ ಸಾಲ ನೀತಿಯನ್ನು ಬದಲಾವಣೆ ಮಾಡಬೇಕು
* ಡಾ.ಸ್ವಾಮಿನಾಥನ್ ವರದಿಯಂತೆ ಕನಿಷ್ಠ ಬೆಂಬಲ ಬೆಲೆ ನಿಗದಿಪಡಿಸಬೇಕು











Click it and Unblock the Notifications