ಚಿಕ್ಕಬಳ್ಳಾಪುರದಲ್ಲಿನ ಅಭಿವೃದ್ಧಿ ಯೋಜನೆಗಳ ಬಗ್ಗೆ ಮಾಹಿತಿ ಬಿಚ್ಚಿಟ್ಟ ಡಾ.ಕೆ. ಸುಧಾಕರ್; ಇಲ್ಲಿದೆ ವಿವರ
ಚಿಕ್ಕಬಳ್ಳಾಪುರದಲ್ಲಿನ ಅಭಿವೃದ್ಧಿ ಯೋಜನೆಗಳ ಬಗ್ಗೆ ಸಚಿವ ಕೆ.ಸುಧಾಕರ್ ವಿವರಣೆ ನೀಡಿದ್ದಾರೆ. ಹಾಗಾದರೆ ಯಾವೆಲ್ಲ ಅಭಿವೃದ್ಧಿ ಯೋಜನೆಗಳ ಬಗ್ಗೆ ಮಾಹಿತಿ ನೀಡಿದ್ದಾರೆ ಅನ್ನುವ ವಿವರವನ್ನು ನೋಡೋಣ ಬನ್ನಿ.
ಚಿಕ್ಕಬಳ್ಳಾಪುರ, ಫೆಬ್ರವರಿ, 19: ಎತ್ತಿನಹೊಳೆ ಯೋಜನೆ ಮೊದಲ ಹಂತ ಪೂರ್ಣಗೊಂಡಿದ್ದು, ಮಾರ್ಚ್ ವೇಳೆಗೆ ತುಮಕೂರಿನವರೆಗೂ ನೀರು ಹರಿಯಲಿದೆ. 2024ಕ್ಕೆ ಈ ಭಾಗದ ಎಲ್ಲ ಕೆರೆಗಳಿಗೂ ಎತ್ತಿನಹೊಳೆ ನೀರು ತುಂಬಿಸುವ ಕೆಲಸ ನಡೆಯಲಿದೆ ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಚಿಕ್ಕಬಳ್ಳಾಪುರದಲ್ಲಿ ವಿಶ್ವಾಸ ವ್ಯಕ್ತಪಡಿಸಿದರು.
ನಗರದ ಪತ್ರಕರ್ತರ ಭವನದಲ್ಲಿ ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾರ್ಚ್‌ನಲ್ಲಿ ತುಮಕೂರು ಜಿಲ್ಲೆಯವರೆಗೂ ನೀರು ಹರಿಸಲಾಗುವುದು. ಪಂಪ್ ಮಾಡಿ ನೀರು ಹರಿಸುವ ಕಾರ್ಯ ಮಾರ್ಚ್ 2ನೇ ವಾರದಲ್ಲಿ ನಡೆಯಲಿದೆ. ಅಲ್ಲದೆ ಕೋಲಾರ, ಶ್ರೀನಿವಾಸಪುರ ಫೀಡರ್ ಕಾಲುವೆಗಳ ನಿರ್ಮಾಣಕ್ಕೆ ಈಗಾಗಲೇ ಟೆಂಡರ್ ಕರೆಯಲಾಗಿದ್ದು, 2024ಕ್ಕೆ ಈ ಭಾಗದ ಎಲ್ಲ ಕೆರೆಗಳಿಗೆ ಎತ್ತಿನಹೊಳೆ ನೀರು ಹರಿಯಲಿದೆ ಎಂದರು.
ಹಾಗೆಯೇ ಕೋಲಾರ, ಚಿಕ್ಕಬಳ್ಳಾಪುರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಿಗೆ ಸಂಸ್ಕರಿಸಿದ ತ್ಯಾಜ್ಯ ನೀರು ಈವರೆಗೂ ಎರಡು ಹಂತದಲ್ಲಿ ಸಂಸ್ಕರಿಸಿ ನೀಡುತ್ತಿದ್ದು, ಕೆಲವರು ಮೂರನೇ ಹಂತದ ಸಂಸ್ಕರಣೆ ಆದರೆ ಉತ್ತಮ ಎಂಬ ಬೇಡಿಕೆ ಇಟ್ಟಿದ್ದಾರೆ. ಇದಕ್ಕೆ ಸರ್ಕಾರ ಇದಕ್ಕೆ ಒಪ್ಪಿ ಪ್ರಸ್ತುತ ಬಜೆಟ್‌ನಲ್ಲಿ ಸೇರಿಸಿದೆ. ಎತ್ತಿನಹೊಳೆ ಶುದ್ಧ ನೀರಿನ ಜೊತೆಗೆ ಮುಂದಿನ ದಿನಗಳಲ್ಲಿ ಮೂರನೇ ಹಂತದ ಸಂಸ್ಕರಣೆಯಾದ ನೀರು ಜಿಲ್ಲೆಯ ಕೆರೆಗಳಿಗೆ ಹರಿಯಲಿದೆ ಎಂದರು.

3ನೇ ಹಂತದ ಶುದ್ಧೀಕರಣಕ್ಕೆ ತಗಲುವ ವೆಚ್ಚ
ಕೇವಲ ಕೆರೆಗಳನ್ನು ತುಂಬಿಸಲು ಮಾತ್ರವಲ್ಲದೆ ಮುಂದಿನ ದಿನಗಳಲ್ಲಿ ಮನೆಗಳಲ್ಲಿ ಬಳಕೆ ಮಾಡುವುದಕ್ಕೆ ಈ ನೀರನ್ನು ಬಳಸಬಹುದು. 3ನೇ ಹಂತದ ಶುದ್ಧೀಕರಣಕ್ಕಾಗಿ ಪ್ರತಿ ವರ್ಷ 500 ಕೋಟಿ ರೂಪಾಯಿ ಹೆಚ್ಚುವರಿ ವೆಚ್ಚವಾದರೂ ಇಲ್ಲಿಗೆ ಸುರಕ್ಷಿತ ನೀರು ನೀಡುವ ಉದ್ಧೇಶದಿಂದ ಸರ್ಕಾರ ಇಂತಹ ನಿರ್ಧಾರ ಕೈಗೊಂಡಿದೆ. ಎರಡು ಹಂತದಲ್ಲಿ ಸಂಸ್ಕರಿಸಿದ ನೀರು ಅಪಾಯವಿಲ್ಲ. ಆದರೆ ಕೆಲವರಲ್ಲಿ 3ನೇ ಹಂತ ಸಂಸ್ಕರಣೆ ಮಾಡಿದರೆ ಒಳ್ಳೆಯದು ಎಂಬ ಅಭಿಪ್ರಾಯ ಇದ್ದು, ಇದಕ್ಕೆ ಸರ್ಕಾರ ಸ್ಪಂಧಿಸಿದೆ ಎಂದರು.

ಚಿಕ್ಕಬಳ್ಳಾಪುರದಲ್ಲಿ ಬೆಳೆಯುವ ಬೆಳೆಗಳ ವಿವರ
ರಾಜ್ಯದಲ್ಲಿ ಅತಿ ಹೆಚ್ಚು ಹೂ ಬೆಳೆಯುವ ಜಿಲ್ಲೆಯಾಗಿ ಚಿಕ್ಕಬಳ್ಳಾಪುರ ಖ್ಯಾತಿ ಗಳಿಸಿದ್ದು, ದ್ರಾಕ್ಷಿ ಸೇರಿದಂತೆ ಇತರೆ ಬೆಳೆಗಳಿಗಿಂತ ಹೂವಿನ ಬೆಳೆಗಳತ್ತ ರೈತರು ಆಕರ್ಷಿತರಾಗಿದ್ದಾರೆ. ಆದರೆ ಅವರಿಗೆ ಸೂಕ್ತ ಮಾರುಕಟ್ಟೆ ವ್ಯವಸ್ಥೆ ಇಲ್ಲದೆ ಸಮಸ್ಯೆ ಎದುರಾಗಿತ್ತು. ಇದನ್ನು ಅರಿತು ಕಳೆದ ತಿಂಗಳು 9 ಹೆಕ್ಟೇರ್ ಜಮೀನನ್ನು ಮಾರುಕಟ್ಟೆಗಾಗಿ ನೀಡಲಾಗಿದೆ. ಅದಕ್ಕೆ ಹಣ ಒದಗಿಸುವ ಭರವಸೆಯನ್ನೂ ನೀಡಲಾಗಿತ್ತು.
ಈ ಮಾರುಕಟ್ಟೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ನಿರ್ಮಾಣವಾಗಲಿದ್ದು, ಇದಕ್ಕೆ ಸುಮಾರು 100 ಕೋಟಿ ರೂಪಾಯಿ ವೆಚ್ಚ ಆಗಲಿದೆ. ಹೈಟೆಕ್ ಮಾರುಕಟ್ಟೆ ನಿರ್ಮಾಣಕ್ಕಾಗಿ ಈಗಾಗಲೇ ಡಿಪಿಆರ್ ಮಾಡಿಸಲಾಗಿದೆ. ಶೀಘ್ರವೇ ಟೆಂಡರ್ ಮಾಡಿಸಿ, ಅನುದಾನ ಕೊಡಿಸಿ, ಮುಂದಿನ ಎಂಟು ತಿಂಗಳಿನಲ್ಲಿ ಮಾರುಕಟ್ಟೆ ಸಿದ್ಧವಾಗಲಿದೆ ಎಂದು ಭರವಸೆ ನೀಡಿದರು.

ಮಾರುಕಟ್ಟೆ ನಿರ್ಮಾಣದಿಂದ ವಹಿವಾಟು ಹೆಚ್ಚಳ
ಮಾರುಕಟ್ಟೆ ನಿರ್ಮಾಣದಿಂದ ವಹಿವಾಟು ಹೆಚ್ಚಾಗಲಿದೆ. ಪ್ರಾದೇಶಿಕ ಮಾತ್ರವಲ್ಲದೆ, ಹೊರ ರಾಜ್ಯ ಮತ್ತು ಹೊರ ದೇಶಗಳಿಗೆ ಹೂವು ರಫ್ತು ಮಾಡಲು ಅವಕಾಶವನ್ನು ಕಲ್ಪಿಸಲಾಗುವುದು. ಅಲ್ಲದೆ ದ್ರಾಕ್ಷಿಯನ್ನೂ ಅಷ್ಟೇ ಪ್ರಮಾಣದಲ್ಲಿ ಬೆಳೆಯಲಾಗುತ್ತಿದ್ದು, ಬೆಲೆ ಇದ್ದರೆ ಲಾಭ, ಇಲ್ಲವಾದರೆ ನಷ್ಟ ಎಂಬ ಪರಿಸ್ಥಿತಿ ಇದೆ. ಇಂತಹ ಸಮಸ್ಯೆಯನ್ನು ತಪ್ಪಿಸಲು ಪ್ರಸ್ತುತ ಬಜೆಟ್‌ನಲ್ಲಿ 100 ಕೋಟಿ ರೂಪಾಯಿ ಅನುದಾನ ನೀಡಲಾಗಿದೆ. ಇದರಲ್ಲಿ ದ್ರಾಕ್ಷಾ ರಸ ಮಾಡುವ ವ್ಯವಸ್ಥೆಯನ್ನು ವಿಜಯಪುರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಮಾಡಲಾಗುತ್ತಿದೆ ಎಂದರು.

ಮಾರುಕಟ್ಟೆ ನಿರ್ಮಾಣಕ್ಕೆ ಮಂಜೂರಾದ ಅನುದಾನ
ಏಷ್ಯಾದಲ್ಲಿಯೇ 2ನೇ ಅತಿ ದೊಡ್ಡ ರೇಷ್ಮೇ ಗೂಡಿನ ಮಾರುಕಟ್ಟೆ ಎಂಬ ಖ್ಯಾತಿ ಶಿಡ್ಲಘಟ್ಟ ಮಾರುಕಟ್ಟೆಗಿದೆ. ಕಳೆದ ಎರಡು ತಿಂಗಳ ಹಿಂದೆ ಅವರಿಗೆ ಭರವಸೆ ನೀಡಿದಂತೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಿ, 75 ಕೋಟಿ ರೂಪಾಯಿ ಅನುದಾನವನ್ನು ಮಂಜೂರು ಮಾಡಿಸಲಾಗಿದೆ. ಇದರಿಂದ ಶಿಡ್ಲಘಟ್ಟದಲ್ಲಿ ಹೈಟೆಕ್ ರೇಷ್ಮೇ ಗೂಡಿನ ಮಾರುಕಟ್ಟೆ ನಿರ್ಮಾಣವಾಗಲಿದೆ. ಇದರಿಂದ ರೇಷ್ಮೇ ಬೆಳೆಗಾರರು ಹೆಚ್ಚಾಗಿ ಕೃಷಿಯಲ್ಲಿ ತೊಡಗಿಸಿಕೊಳ್ಳಲು ಸಹಕಾರಿಯಾಗಲಿದೆ ಎಂದು ಹೇಳಿದರು.

ರೋಪ್ ವೇಗೆ ನಿರ್ಮಾಣಕ್ಕೆ ತಗಲುವ ವೆಚ್ಚ
ನಂದಿ ಗಿರಿಧಾಮದಲ್ಲಿ 93 ಕೋಟಿ ರೂಪಾಯಿ ವೆಚ್ಚದಲ್ಲಿ ರೋಪ್ ವೇ ನಿರ್ಮಾಣಕ್ಕೆ ಟೆಂಡರ್ ಆಗಿದ್ದು, ಮುಂದಿನ 10 ದಿನದಲ್ಲಿ ಇದಕ್ಕೆ ಭೂಮಿಪೂಜೆ ನೆರವೇರಿಸಲಾಗುವುದು. ಮುಂದಿನ ಆರು ತಿಂಗಳಿನಲ್ಲಿ ರೋಪ್ ವೇ ಸಿದ್ಧವಾಗಲಿದೆ. ಈಗಾಗಲೇ ಇಶಾ ಫೌಂಡೇಷನ್‌ಗೆ ಅತ್ಯಧಿಕ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಿದ್ದು, ರೋಪ್ ವೇ ಆದ ನಂತರ ನಂದಿ ಭಾಗ ಪ್ರವಾಸೋದ್ಯಮಕ್ಕೆ ಪ್ರಸಿದ್ಧಿ ಪಡೆಯಲಿದೆ ಎಂಬ ವಿಶ್ವಾವನ್ನು ವ್ಯಕ್ತಪಡಿಸಿದರು.

ಪ್ರವಾಸೋದ್ಯಮಕ್ಕೆ ಪುಷ್ಟಿ ನೀಡಿದಂತಾಗಲಿದೆ
ಇನ್ನು ಪುರಾಣ ಪ್ರಸಿದ್ಧ ನಂದಿ ಗ್ರಾಮದ ಭೋಗ ನಂದೀಶ್ವರ ದೇವಾಲಯಕ್ಕೆ ವಿಶೇಷ ಅನುದಾನ ಮಂಜೂರು ಮಾಡಲಾಗಿದೆ. ಈ ಅನುದಾನದಲ್ಲಿ ದೇವಾಲಯದ ಸುತ್ತಲಿನ ಕೋಟೆ ಅಭಿವೃದ್ಧಿ, ದೇವಾಲಯದಲ್ಲಿ ಅತ್ಯಾಧುನಿಕ ಬೆಳಕಿನ ವ್ಯವಸ್ಥೆ ಶಾಶ್ವತವಾಗಿ ಇರುವ ರೀತಿಯಲ್ಲಿ ಅಳವಡಿಸಲಾಗುವುದು. ತ್ರಿಡಿ ಪ್ರೊಜೆಕ್ಷನ್ ಮ್ಯಾಪಿಂಗ್ ಮಾಡಲಾಗುವುದು. ಇದರಿಂದಲೂ ಪ್ರವಾಸೋದ್ಯಮಕ್ಕೆ ಪುಷ್ಟಿ ನೀಡಿದಂತಾಗಲಿದೆ.
ಈ ಎಲ್ಲ ಅಭಿವೃದ್ಧಿಗಳಿಂದಾಗಿ ಚಿಕ್ಕಬಳ್ಳಾಪುರ ನವ ಬೆಂಗಳೂರು ಮಾದರಿಯಲ್ಲಿ ಅಭಿವೃದ್ಧಿ ಹೊಂದಲಿದೆ. ಹಾಗೆಯೇ ಇಂಟಿಗ್ರೇಟೆಡ್ ಟೌನ್ ಶಿಪ್ ಮಾಡಲು ಘೋಷಣೆ ಮಾಡಲಾಗಿದ್ದು, ಹೊಸ ಉಪಗ್ರಹ ನಗರವಾಗಿ, ಬೆಂಗಳೂರಿಗೆ ಸಮಾನವಾಗಿ ಚಿಕ್ಕಬಳ್ಳಾಪುರವನ್ನು ಅಬಿವೃದ್ಧಿಪಡಿಸಲು ತಯಾರಿ ನಡೆಸಲಾಗಿದೆ ಎಂದರು.

ಸರ್ವ ಸ್ಪರ್ಶಿ ಬಜೆಟ್ ಇದಾಗಿದೆ
ನಿಮ್ಹಾನ್ಸ್ ಜೊತೆ ಸೇರಿ ಜಿಲ್ಲೆಯಲ್ಲಿ ಮಾನಸಿಕ ಆರೋಗ್ಯಕ್ಕೆ ವಿಶೇಷ ಆದ್ಯತೆ ನೀಡಲು ಸಿದ್ಧತೆಗಳು ನಡೆಯುತ್ತಿವೆ. ಅದೇ ರೀತಿಯಲ್ಲಿ ಜಯದೇವ ಆಸ್ಪತ್ರೆಯೊಂದಿಗೆ ಸೇರಿ ಜಿಲ್ಲೆಯ ಎಲ್ಲ ತಾಲೂಕು ಆಸ್ಪತ್ರೆಗಳಿಗೆ ಸಂಪರ್ಕ ಕಲ್ಪಿಸಿ, ಹೃದ್ರೋಗ ಸಂಬಂಧಿ ಕಾಯಿಲೆಗಳನ್ನು ತಾಲೂಕು ಮಟ್ಟದಲ್ಲಿಯೇ ನಿವಾರಿಸಲು ಕ್ರಮ ವಹಿಸಲಾಗಿದೆ. ಇದು ಜಿಲ್ಲೆಗೆ ಅಭಿವೃದ್ಧಿಯ ಟಾನಿಕ್ ಸಿಕ್ಕಿದಂತಾಗಿದೆ ಎಂದರು. ಕರ್ತವ್ಯ ಕಾಲದಲ್ಲಿ ಮುಖ್ಯಮಂತ್ರಿಗಳು ಎಲ್ಲ ವರ್ಗದ ಜನರಿಗೆ ಅಭಿವೃದ್ದಿಯ ಅಮೃತ ಹಂಚಿದ್ದಾರೆ. ಅಲ್ಲದೆ ಆರೋಗ್ಯ ಕ್ಷೇತ್ರಕ್ಕೂ ಹೆಚ್ಚಿನ ಕಾಳಜಿ ವಹಿಸಿದ್ದಾರೆ. ಸರ್ವ ವ್ಯಾಪಿ, ಸರ್ವ ಸ್ಪರ್ಶಿ ಮತ್ತು ಎಲ್ಲಾ ಜನರಿಗೆ ತಲುಪುವ ಬಜೆಟ್ ಮಂಡಿಸಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.

ಯುವ ಪೀಳಿಗೆಗೆ ಉದ್ಯೋಗ ಸಿಗುವಂತಾಗಬೇಕು
ನೀರಾವರಿ ಹೋರಾಟಗಾರರು ಆರಂಭದಿಂದ ಅದೇ ಧೋರಣೆಯಲ್ಲಿ, ಅದೇ ಹೋರಾಟ ಮಾಡುತ್ತಿದ್ದಾರೆ. ನೀರು ಬರಬಾರದು ಎಂಬುದು ಅವರ ಉದ್ಧೇಶವಾಗಿದೆ. ಇಲ್ಲಿ ನೀರೇ ಇಲ್ಲದಿದ್ದರೆ ಅವರು ಚಾಲ್ತಿಯಲ್ಲಿರುತ್ತಾರೆ, ಆದರೆ ಈಗ ಎಲ್ಲ ಕೆರೆಗಳು ತುಂಬಿವೆ. ಹಾಗಾಗಿ ಅವರು ಎಲ್ಲಿದ್ದಾರೆ ಎಂದು ಪ್ರಶ್ನಿಸಿದರು. ಜಿಲ್ಲೆಯಲ್ಲಿ ಮುಂದಿನ ಸಾಲಿನಲ್ಲಿ ಹೊಸ ಕೈಗಾರಿಕಾ ನೀತಿ, ಹೊಸ ಕೈಗಾರಿಕಾ ಕ್ರಾಂತಿ ಆರಂಭವಾಗಲಿದೆ. ಕೈಗಾರಿಕೆಗಳನ್ನು ತಂದು ಬೆಂಗಳೂರಿಗೆ ಸಮೀಪದಲ್ಲಿರುವ ಚಿಕ್ಕಬಳ್ಳಾಪುರದ ಯುವಕರಿಗೆ ಚೈತನ್ಯ ತುಂಬಲಾಗುವುದು. ಯುವ ಪೀಳಿಗೆ ಸ್ವಾಭಿಮಾನದಿಂದ ಬದುಕಬೇಕಾದರೆ ಅವರಿಗೆ ಉದ್ಯೋಗ ನೀಡಬೇಕು ಎಂದರು.
ಈ ಸಂದರ್ಭದಲ್ಲಿ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ಅಧ್ಯಕ್ಷ ಕೆ.ವಿ. ನಾಗರಾಜ್, ಬಿಎಂಟಿಸಿ ಅಧ್ಯಕ್ಷ ಕೆ.ವಿ. ನವೀನ್ ಕಿರಣ್, ನಗರಸಭೆ ಅಧ್ಯಕ್ಷ ಆನಂದರೆಡ್ಡಿ, ಕೃಷ್ಣಮೂರ್ತಿ, ನಗರಸಭಾ ಸದಸ್ಯರು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
-
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
March 29 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
New Railway Line: ಗದಗ-ಹೊಟಗಿ ರೈಲು ಡಬ್ಲಿಂಗ್ ಪೂರ್ಣ, ಮಹಾರಾಷ್ಟ್ರವರೆಗೂ ಸಂಚಾರ ಸುಧಾರಣೆ -
"ಜೈಲಲ್ಲಿ ನಮಗೆ ಮೊಬೈಲ್ ಕೊಟ್ಟಿದ್ದು ಡಿಜಿಪಿ ಅಲೋಕ್ ಕುಮಾರ್" ಎಂದ ಕೈದಿಗಳು, ವಿಡಿಯೋ ವೈರಲ್ -
Bengaluru: 19 ಸಾವಿರಕ್ಕೆ 2BHK ಮನೆ ಸಿಕ್ಕಿದ್ದೇಗೆ? 4 ವರ್ಷದಲ್ಲಿ 3 ಮನೆ ಬದಲಾಯಿಸಿದ ದಂಪತಿ ಹೇಳಿದ ಬಾಡಿಗೆ ಸೀಕ್ರೆಟ್ Viral -
ಆರ್ಸಿಬಿ ಗೆಲ್ಲಿಸಿದ ಕೊಹ್ಲಿ ಕಂಡು ಗ್ಯಾಲರಿಯಲ್ಲೇ ಕುಣಿದು ಕುಪ್ಪಳಿಸಿದ ಅನನ್ಯಾ ಬಿರ್ಲಾ: ಭಾರೀ ವೈರಲ್ -
ದುಬೈನ ಬುರ್ಜ್ ಖಲೀಫಾ ಎದುರು ತಾಯಿಯ ಸಂಭ್ರಮ: ಅಮ್ಮನ ಆಸೆ ಈಡೇರಿಸಿದ ಮಗಳ Video Viral -
NWKRTC: ದಾಂಡೇಲಿ-ಬೆಂಗಳೂರು ಮಧ್ಯೆ ಪಲ್ಲಕ್ಕಿ ವೈಭವ: ಬಸ್ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್, ಡಿಟೇಲ್ಸ್ -
Bengaluru: ಲಂಬೋರ್ಗಿನಿ ಪ್ರಕರಣ; ಕಾರೇ ರಿಜಿಸ್ಟರ್ ಆಗಿಲ್ಲ ಎಂದ RTO, ಸ್ಟಂಟ್ ಅಲ್ಲ ಬ್ರೇಕ್ ಸ್ಕಿಡ್ ಎಂದ ರಿಕ್ಕಿ ರೈ












Click it and Unblock the Notifications