
ಜಮಖಂಡಿ: ಕಬ್ಬು ಸಾಗಿಸಲು ಬೋಟ್ ಉಪಯೋಗಿಸುವ ಕಂಕನವಾಡಿ ರೈತರು
ಬಾಗಲಕೋಟೆ, ಅಕ್ಟೋಬರ್, 27: ತುಂಬಿ ಹರಿಯುತ್ತಿರುವ ಕೃಷ್ಣಾ ನದಿಯಲ್ಲಿ ರೈತರು ಬೋಟ್ ಮೂಲಕ ಕಬ್ಬಿನ ಟ್ರ್ಯಾಕ್ಟರ್ ಸಾಗಿಸುವ ಮೂಲಕ ಗಮನ ಸೆಳೆದಿದ್ದಾರೆ. ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಕಂಕನವಾಡಿ ಗ್ರಾಮದ ಬಳಿ ಗುಹೇಶ್ವರ ನಡುಗಡ್ಡೆ ಇದ್ದು, ಈ ದಡದಿಂದ ಆ ಕಡೆಗೆ ಬೋಟ್‌ನಲ್ಲಿಯೇ ಕಬ್ಬಿನ ಟ್ರ್ಯಾಕ್ಟರ್ ಸಾಗಿಸಲಾಗಿದೆ.
ಕಬ್ಬಿಗೆ ದರ ನಿಗದಿ ಮಾಡುವಂತೆ ಮೈಸೂರಿನಲ್ಲಿ ಹೆದ್ದಾರಿ ತಡೆದು ಉರುಳು ಸೇವೆ
ಬೋಟ್‌ಗಳ ಮೂಲಕ ಕಬ್ಬು ಸಾಗಾಟ
ಪ್ರತಿ ವರ್ಷ ಕೃಷ್ಣಾ ನದಿಯಲ್ಲಿ 6 ತಿಂಗಳುಗಳ ಕಾಲ ಅಪಾರ ಪ್ರಮಾಣದಲ್ಲಿ ನೀರು ಸಂಗ್ರಹವಾಗಿರುತ್ತದೆ. ಆದ್ದರಿಂದ ಈ ಪ್ರದೇಶ ನಡುಗಡ್ಡೆಯಾಗಿ ಪರಿವರ್ತಿತವಾಗುತ್ತದೆ. ಅದಕ್ಕಾಗಿ ಕಾರ್ಖಾನೆಗೆ ಕಬ್ಬು ಸಾಗಿಸಲು ರೈತರು ಪ್ರತಿ ವರ್ಷವೂ ಕೂಡ ಹರಸಾಹಸ ಪಡುತ್ತಲೇ ಇದ್ದಾರೆ. ಎರಡು ಬೋಟ್‌ಗಳ ಮೂಲಕ ಕಬ್ಬಿನ ಟ್ರ್ಯಾಕ್ಟರ್ ಸಾಗಿಸಿರುವ ರೈತರ ಸಾಹಸಕ್ಕೆ ಇದೀಗ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಸುಮಾರು 5 ಟನ್ ಭಾರದ ಟ್ರ್ಯಾಕ್ಟರ್‌ನಲ್ಲಿ ಕಬ್ಬನ್ನು ತುಂಬಿದ್ದಾರೆ. ನಂತರ ಎರಡು ಬೋಟ್ ಬಳಸಿ ಕಬ್ಬಿಣದ ಎಂಗಲ್ ಹಾಕಿ ಅದರ ಮೇಲೆ ಟ್ರ್ಯಾಕ್ಟರ್ ಅನ್ನು ನಿಲ್ಲಿಸಿದ್ದಾರೆ. ನಡುಗಡ್ಡೆಯಲ್ಲಿ ಸುಮಾರು 300 ಕುಟುಂಬಗಳದ್ದು 700 ಹೆಕ್ಟೇರ್ ಜಮೀನು ಇದೆ. ಪ್ರತಿ ವರ್ಷ ಬೋಟ್‌ನಲ್ಲಿಯೇ ಲೋಡ್ ಮಾಡಿಕೊಂಡು ಕಬ್ಬು ಸಾಗಿಸುವುದು ಅನಿವಾರ್ಯ ಆಗಿದೆ.
ಕಡಿಮೆ ಖರ್ಚಿನಲ್ಲಿ ಕಬ್ಬು ಸಾಗಾಟಕ್ಕೆ ಪ್ಲಾನ್
ಕಡಿಮೆ ಹಣದಲ್ಲಿ ಹೆಚ್ಚು ಕಬ್ಬು ಸಾಗಿಸುವುದಕ್ಕೆ ರೈತರು ಯೋಚನೆ ಮಾಡಿ ಇಂತಹ ಹರಸಾಹಸಕ್ಕೆ ಕೈ ಹಾಕಿದ್ದಾರೆ. ನಡುಗಡ್ಡೆ ಪ್ರದೇಶದಲ್ಲಿ 700 ಹೆಕ್ಟೇರ್ ಕಬ್ಬು ಬೆಳೆದಿರುವ ರೈತರು, ನದಿ ದಡದ ಆಚೆ ಇರುವ ಹಿನ್ನೆಲೆ ಯಾವುದೇ ವಾಹನ ಹೋಗಲು ಅವಕಾಶವಿರಲಿಲ್ಲ. ಮೊದಲು ಒಂದೊಂದು ಬೋಟ್ ಮೂಲಕ ಕಬ್ಬು ತುಂಬಿಕೊಂಡು ನಡುಗಡ್ಡೆಯಿಂದ ತರುತ್ತಿದ್ದರು. ಇದರಿಂದ ರೈತರಿಗೆ ಹೆಚ್ಚು ಖರ್ಚಿನ ಹೊರೆ ಆಗುತ್ತಿತ್ತು. ಒಂದು ಟನ್‌ಗೆ 900 ಖರ್ಚು ಬರುತ್ತಿತ್ತು. ಇದೀಗ ಒಂದು ಟನ್‌ಗೆ 200 ರೂಪಾಯಿ ಖರ್ಚು ಬರುತ್ತಿದ್ದು, ಇನ್ನು ನಿರಂತರವಾಗಿ ಟ್ರ್ಯಾಕ್ಟರ್‌ಗಳನ್ನು ಬೋಟ್ ಮೂಲಕ ಸಾಗಿಸಲು ರೈತರು ಮುಂದಾಗಿದ್ದಾರೆ. ಒಂದು ಟ್ರ್ಯಾಕ್ಟರ್‌ನಲ್ಲಿ 11 ಟನ್ ಕಬ್ಬು ಸಾಗಿಸಿ ಗಮನ ಸೆಳೆದಿದ್ದಾರೆ.

ಯುಟ್ಯೂಬ್ ವೀಕ್ಷಣೆಯಿಂದ ಪ್ರೇರಣೆ
ರೈತರಿಗೆ ಇಂತಹ ಯೋಚನೆ ಹೊಳೆದಿದ್ದೇ ಯುಟ್ಯೂಬ್ ನೋಡಿ. ಕಂಕನವಾಡಿ ರೈತರು ಮೊಬೈಲ್‌ನಲ್ಲಿ ಯುಟ್ಯೂಬ್ ವೀಕ್ಷಣೆ ಮೂಲಕ ಇಂತಹ ಉಪಾಯ ಕಂಡುಕೊಂಡಿದ್ದಾರೆ. ಕಜಕಿಸ್ತಾನದಲ್ಲಿನ ಇಂತಹ ಪ್ರಯೋಗವನ್ನು ರೈತರು ಯುಟ್ಯೂಬ್ ಮೂಲಕ ವೀಕ್ಷಿಸಿದ್ದರು. ಇದೇ ರೀತಿ ನಾವು ಯಾಕೆ ಮಾಡಬಾರದು ಎಂದು ಯೋಚಿಸಿದ ರೈತರು ಎಲ್ಲರೂ ಸೇರಿ ಹಣ ಕೂಡಿಸಿ ಇಂತಹ ಕಬ್ಬಿಣದ ಪೈರಿ ಮಾಡಿಸಿ ಬೋಟ್ ಮೂಲಕ ಕಬ್ಬು ಸಾಗಿಸುವಲ್ಲಿ ಯಶಸ್ವಿಯಾಗಿದ್ದಾರೆ.