ನೊಗಕ್ಕೆ ಹೆಗಲು ಕೊಟ್ಟ ಈ ಯುವಕರ ಬದುಕಿನ ಪಾಠ ನಮಗೂ ಒಂದಿಷ್ಟಿರಲಿ
ಮನುಷ್ಯನ ಹೆಗಲಲ್ಲಿ ನೊಗ ಕಂಡರೆ ಸಾಕು ಅನೇಕ ಸೂಕ್ಷ್ಮ ವಿಚಾರಗಳು ಮೈ ಕೊಡವಿಕೊಂಡು ಸುದ್ದಿ ಮನೆಗಳಲ್ಲಿ ಸಂಚಲನ ಉಂಟು ಮಾಡಿಬಿಡುತ್ತದೆ. ಸುದ್ದಿ, ವಿಶ್ಲೇಷಣೆ, ವಿಮರ್ಶೆ, ಜೀತಪದ್ಧತಿ, ರೈತ ಬದುಕಿನ ದಾರುಣ ಸ್ಥಿತಿ, ಯಾರಿಗೆ ಬಂತು ಸ್ವಾತಂತ್ರ್ಯ ಎಂಬಿತ್ಯಾದಿ ವಿಚಾರಗಳ ಪ್ರವಾಹ ಉಕ್ಕುತ್ತದೆ.
ಆದರೆ, ಇಲ್ಲಿ ಈ ಯಾವುದಕ್ಕೂ ಅವಕಾಶವಿಲ್ಲ. ಈ ಯುವಕರು ತಮ್ಮಲ್ಲಿ ಸಬಲ ಎತ್ತುಗಳಿದ್ದರೂ ಹೊಲದಲ್ಲಿ ಹೀಗೆ ಕೃಷಿ ಕಾಯಕದಲ್ಲಿ ನಿರತರಾಗಿದ್ದಾರೆ. ಇದರ ಹಿಂದೆ ಆದರ್ಶವೂ ಇದೆ. ಮಾನವೀತೆಯೂ ಇದೆ.
ಇವರದು ಹತ್ತು ಎಕರೆಗಳ ಬೇಸಾಯ ಯೋಗ್ಯ ಭೂಮಿಯ ಒಡೆತನದ ಕುಟುಂಬ. ತರಿ ಭೂಮಿಯಲ್ಲಿ ಕೊಳವೆಬಾವಿ ನೀರಾವರಿ ಆಧಾರಿತ ಬತ್ತ ಬೆಳೆದರೆ, ಖುಷ್ಕಿ ನೆಲದಲ್ಲಿ ಮಳೆ ಆಶ್ರಿತ ಬೆಳೆಗಳನ್ನು ಬೆಳೆಯುತ್ತಾರೆ. ಹೀಗಿದ್ದೂ ಈ ಯುವಕರು ಹೆಗಲಲ್ಲಿ ಗುಂಟವೆಯ ನೊಗ ಹೊತ್ತು ಗುಂಟವೆ ಹಾಕುತ್ತಿರುವುದೇಕೆ ಎಂಬ ಪ್ರಶ್ನೆ ಏಳುವುದು ಸಹಜ.

ಗುಂಟವೆಯ ಮೇಣಿ (ಮೇಟಿ) ಹಿಡಿದಿರುವಾತ ಹತ್ತನೇ ತರಗತಿ ಪಾಸು ಮಾಡಿ, ಬೇಸಾಯದ ಬದುಕನ್ನು ಆರಿಸಿಕೊಂಡ ಸುಧಾಕರ. ಗುಂಟವೆ ಎಳೆಯುತ್ತಿರುವ ನವೀನ್ ಕುಮಾರ ಮತ್ತು ರೆಡ್ಡಿ ಶೇಖರ್ ಬಿ.ಕಾಂ., ವಿದ್ಯಾರ್ಥಿಗಳು. ನವೀನ್ ಕುಮಾರ್ ಕೋಲಾರದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದರೆ, ರೆಡ್ಡಿ ಶೇಖರ್ ಚಿಂತಾಮಣಿಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿ.
ಈ ಮೂವರೂ ಸೋದರರು. ನರಸಿಂಹಪ್ಪ ತಂದೆ, ನಾರಾಯಣಮ್ಮ ತಾಯಿ. ಈ ಕುಟುಂಬ ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಮುದಿಮಡುಗು ಸಮೀಪದ ಆನೆಪಲ್ಲಿಯಲ್ಲಿದೆ.

ಗದ್ದೆಗೆ ನೀರು ಹರಿಸಿದಾಗ ನೀರು ಈ ರಾಗಿ ಬೆಳೆಯಿಟ್ಟ ಭೂಮಿಗೂ ಹರಿದು ತೇವ ಜಾಸ್ತಿಯಾಗಿ, ಕಳೆಗೆ ಹುಲುಸಾಗಿ ಬೆಳೆಯಲು ಅನುಕೂಲ ಮಾಡಿತ್ತು. ಎತ್ತುಗಳನ್ನು ಕಟ್ಟಿ ಗುಂಟವೆ ಹೂಡಿದರೆ ಎತ್ತುಗಳ ಕಾಲುಗಳು ಹೂತು ಹೋಗಿ ಅವಕ್ಕೆ ಕಷ್ಟವಾಗುವುದಲ್ಲದೆ, ತುಳಿತಕ್ಕೆ ಸಿಕ್ಕಿ ಪೈರು ನಾಶವಾಗುವುದು. ನೆಲ ಹದವಾಗಿ ಒಣಗುವವರೆಗೆ ಬಿಟ್ಟರೆ ಕಳೆ ಬಲಿತು, ಪೈರು ಏಳಿಗೆಯಾಗದು ಹಾಗೂ ಇಳುವರಿಗೂ ಖೋತ! ಇದನ್ನರಿತ ಹುಡುಗರು ಗುಂಟವೆಗೆ ಹೆಗಲು ಕೊಟ್ಟರು.
ಅವರ ಮಾತಿನಂತೆ ಯಾವಾಗಲೂ ದುಡಿವ ಎತ್ತುಗಳಿಗೆ ಕೊಂಚ ವಿಶ್ರಾಂತಿ ಕೊಡುವುದು. ಇದು ಪ್ರಾಣಿ ದಯೆಯ ಇನ್ನೊಂದು ರೂಪ. ಇವತ್ತೇ ಅಲ್ಲ, ಕಾಲೇಜಿಗೆ ರಜೆ ಇದ್ದ ದಿನಗಳಲ್ಲಿ ಇವರನ್ನು ಹೊಲಗದ್ದೆಗೆ ಇಳಿಸುತ್ತೇವೆ. ಕಾಲೇಜಿಗೆ ಹೋದ ಮಾತ್ರಕ್ಕೇ ಹೊಲಗದ್ದೆಗಳಿಂದ ದೂರವಿರಬೇಕಿಲ್ಲ. ರೈತರಾದ ನಾವು ಮಕ್ಕಳನ್ನು ಭೂಮಿ ತಾಯಿಯಿಂದ ದೂರ ಮಾಡಬಾರದು. ಮುಂದೆ ಇವರು ಏನೇ ಆಗಲಿ, ತಾವು ರೈತರೆಂದು ಹೆಮ್ಮೆ ಪಡಬೇಕು.

ಮಣ್ಣಿನ ಸಂಬಂಧದಿಂದಲೇ ಇವರ ಬಾಳು ಬಂಗಾರವಾಗುವುದು. ಮುಂದೆ ಇವರು 'ಸಂಬಳ'ದವರಾದರೆ ಅದು ಈ ನೆಲದ ಪ್ರಸಾದ ಎಂದು ನೆನಪಿರಬೇಕು ಎಂಬುದು ತಾಯಿಯ ಅಪೇಕ್ಷೆ. ಇದನ್ನು ಈ ಸೋದರರು ಗೌರವಿಸಿ, ತಂದೆ-ತಾಯಿಯ ಇಚ್ಛೆಯಂತೆ ನಡೆಯುತ್ತಿದ್ದಾರೆ. ಮೊಬೈಲು ಹೊಂದಿಯೂ ಅದರಲ್ಲಿ ಕಳೆದು ಹೋಗದಿರುವ ಈ ಹುಡುಗರು ಯಾರಿಗಾದರೂ ಅನುಕರಣೀಯರು.
ದೈಹಿಕ ದುಡಿಮೆಯನ್ನು ಲೋಕೋತ್ತರ ಮಹಾನುಭಾವರು ಸಾರಿದ್ದಾರೆ. ಬಸವಣ್ಣನ ಕಾಯಕ ತತ್ವದ ವರ್ತಮಾನದ ಜೀವಂತ ರೂಪಕಗಳಾಗಿ ಈ ಯುವ ಸೋದರರು ಕಾಣುತ್ತಿರುವುದು ಕೃಷಿ ಜೀವನವನ್ನು ಅವನತಿಯತ್ತ ಕೊಂಡೊಯ್ಯುತ್ತಿರುವವರ ಕಣ್ಣು ತೆರೆಸುವಂತಿದೆ.












Click it and Unblock the Notifications