ಕೊಪ್ಪಳ; ರೈತರಿಗಾಗಿ ಆಗಸ್ಟ್ 15ರಿಂದ ಸಸ್ಯಸಂತೆ
ಕೊಪ್ಪಳ, ಆಗಸ್ಟ್ 09; ತೋಟಗಾರಿಕೆ ಇಲಾಖೆ ರೈತರ ಉಪಯೋಗಕ್ಕಾಗಿ ಕೊಪ್ಪಳದಲ್ಲಿ ಆಗಸ್ಟ್ 15ರಿಂದ 20ರ ತನಕ ಸಸ್ಯಸಂತೆ ಮತ್ತು ತೋಟಗಾರಿಕೆ ಅಭಿಯಾನ-2023 ಆಯೋಜನೆ ಮಾಡಿದೆ. ಇಲಾಖೆ ಯೋಜನೆಗಳ ಬಗ್ಗೆ ರೈತರಿಗೆ ಮಾಹಿತಿ ನೀಡುವುದು ಇದರ ಉದ್ದೇಶವಾಗಿದೆ.
ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಕೃಷ್ಣ ಉಕ್ಕುಂದ ಈ ಕುರಿತು ಮಾಹಿತಿ ನೀಡಿದ್ದಾರೆ. "ತೋಟಗಾರಿಕೆ ಇಲಾಖೆಯಿಂದ 2023-24ನೇ ಸಾಲಿನಲ್ಲಿ ಸಸ್ಯಸಂತೆ ಮತ್ತು ತೋಟಗಾರಿಕೆ ಅಭಿಯಾನ-2023 ಅನ್ನು ಆಯೋಜಿಸಲಾಗುತ್ತಿದ್ದು, ಜಿಲ್ಲೆಯ ಸಮಸ್ತ ರೈತರು, ಸಾರ್ವಜನಿಕರು ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳಬೇಕು" ಎಂದರು.

ಆರು ದಿನಗಳ ಕಾಲ ತೋಟಗಾರಿಕೆ ಇಲಾಖೆ ಕಚೇರಿ ಆವರಣದಲ್ಲಿ ಈ ಅಭಿಯಾನ ನಡೆಯಲಿದೆ. ತೋಟಗಾರಿಕೆ ಇಲಾಖೆಯಿಂದ ಪ್ರಸಕ್ತ ಸಾಲಿನಲ್ಲಿ ಅನೇಕ ರೈತಪರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು, ತೋಟಗಾರಿಕೆ ಬೆಳೆಗಳ ಪ್ರದೇಶ ವಿಸ್ತರಣೆ ಅಲ್ಲದೇ ಸರ್ವತೋಮುಖ ಅಭಿವೃದ್ದಿಗಾಗಿ ಸಸ್ಯಸಂತೆ ಮತ್ತು ತೋಟಗಾರಿಕೆ ಅಭಿಯಾನ ಆಯೋಜನೆ ಮಾಡಲಾಗಿದೆ.
ಅಭಿಯಾನದ ವಿಶೇಷತೆಗಳು; ಈ ಅಭಿಯಾನದಲ್ಲಿ ಕೊಪ್ಫಳ ಜಿಲ್ಲೆಯ ರೈತರಿಗೆ ಹಾಗೂ ತೋಟಗಾರಿಕೆ ಬೆಳೆಗಳಲ್ಲಿ ಆಸಕ್ತಿ ಇರುವ ಜನರಿಗೆ ಒಂದೇ ಸೂರಿನಡಿ ತೋಟಗಾರಿಕೆ ಕ್ಷೇತ್ರಗಳಲ್ಲಿ ಉತ್ಪಾದಿಸಿದ ಮಾವು, ತೆಂಗು, ಪೇರಲ, ಚಿಕ್ಕು, ಅಂಜೂರ, ಕರಿಬೇವು, ನುಗ್ಗೆ, ದ್ರಾಕ್ಷಿ ತಳಿಗಳಲ್ಲದೇ ಅನೇಕ ವಿಧದ ಕಸಿ-ಸಸಿಗಳು, ಅಲಂಕಾರಿಕ ಸಸ್ಯಗಳು, ಹೂವಿನ, ತರಕಾರಿ, ಔಷಧೀಯ, ಸಾಂಬಾರು ಸಸ್ಯಗಳು ಇದಲ್ಲದೇ ಅಪ್ರಧಾನ ಹಣ್ಣಗಳಾದ ನೇರಳೆ, ಸೀತಾಫಲ, ಬೀಜ ರಹಿತ ಸೀಬೆ, ಡ್ರ್ಯಾಗನ್ ಹಣ್ಣು, ಮೆಕಡೋನಿಯಾ, ಮಿಯಾ ಜಾಕಿ ಮಾವು, ಮುಂತಾದ ಸಸ್ಯಗಳನ್ನು ಇಲಾಖೆಯ ಯೋಗ್ಯ ದರದಲ್ಲಿ ಪೂರೈಕೆ ಮಾಡಲಾಗುತ್ತದೆ.
ತೋಟಗಾರಿಕಾ ಇಲಾಖೆ ಯೋಜನೆಗಳ ಬಗ್ಗೆ ರೈತರಿಗೆ ಮಾಹಿತಿ ನೀಡಲಾಗುತ್ತದೆ. ಇಲಾಖೆಯ ತೋಟಗಾರಿಕೆ ಕ್ಷೇತ್ರಗಳಲ್ಲಿ ಉತ್ಪಾದಿಸಿದ ಗುಣ ಮಟ್ಟದ ಸಸಿಗಳು, ಎರೆಹುಳು ಗೊಬ್ಬರ, ಎರೆಜಲ ಹಾಗೂ ಜೈವಿಕ ಗೊಬ್ಬರ, ನೀಮಾಸ್ತ್ರ, ಜೀವಾಮೃತ, ಗೋಕೃಪಾಮೃತ ಮಾರಾಟ. ವಿವಿಧ ಬ್ಯಾಂಕುಗಳಿಂದ ರೈತರಿಗೆ ದೊರೆಯುವ ಸಾಲ ಸೌಲಭ್ಯಗಳ ಮಾಹಿತಿ ನೀಡಲಾಗುತ್ತದೆ.
ಸಮಗ್ರ ಖುಷ್ಕಿ ಒಣ ಬೇಸಾಯ, ಅಪ್ರಧಾನ ಹಣ್ಣುಗಳು, ವಿದೇಶಿ ಹಣ್ಣುಗಳು, ಅಲ್ಪಾವಧಿ, ಮಧ್ಯಾಮವಧಿ ಮತ್ತು ದೀರ್ಘಾವಧಿ ತೋಟಗಾರಿಕೆ ಬೆಳೆಗಳು ಹಾಗೂ ಸಮುದಾಯ ತೋಟಗಾರಿಕೆಯಿಂದ ಆಗುವ ಲಾಭಗಳ ಮಾಹಿತಿ ನೀಡಲಾಗುತ್ತದೆ. ನೀರಿನ ಮಿತವಾದ ಬಳಕೆಗೆ ಹನಿ ನೀರಾವರಿ ಮತ್ತು ರಸಾವರಿ ತಾಂತ್ರಿಕತೆ, ಇಸ್ರೇಲ್ ಮಾದರಿ ತಾಂತ್ರಿಕತೆ ಹಾಗೂ ತೋಟಗಾರಿಕೆಯಲ್ಲಿ ನವೀನ ತಾಂತ್ರಿಕತೆಗಳ ಬಗ್ಗೆ ಮಾಹಿತಿ ಕೊಡಲಾಗುತ್ತದೆ.
ತೋಟಗಾರಿಕೆ ಆಧಾರಿತ ಉಪಕಸುಬುಗಳಾದ ಜೇನು ಸಾಕಾಣಿಕೆ, ಅಣಬೆ ಬೇಸಾಯ, ಮೌಲ್ಯವರ್ಧನೆ ಬಗ್ಗೆ ಮಾಹಿತಿ. ತೋಟಗಾರಿಕೆ ಬೆಳೆ ವಿಮಾ ಬಗ್ಗೆ ಜಾಗೃತಿ, ಕೈ ತೋಟ, ತಾರಸಿ ತೋಟ, ವರ್ಟಿಕಲ್ ತೋಟ ಬಹುಮಹಡಿ ಪದ್ಧತಿಯಲ್ಲಿ ತೋಟಗಾರಿಕೆ ಬೆಳೆಗಳ ಪ್ರಾತ್ಯಕ್ಷತೆ. ತೋಟಗಾರಿಕೆ ಬೆಳೆಗಳ ಸಂಸ್ಕರಣೆ ಮೌಲ್ಯವರ್ಧನೆ ಮತ್ತು ಮಾರುಕಟ್ಟೆ ಮಾಹಿತಿಯನ್ನು ರೈತರಿಗೆ ನೀಡಲಾಗುತ್ತದೆ.
ಆಸಕ್ತ ರೈತರು ಹೆಚ್ಚಿನ ಮಾಹಿತಿಗಾಗಿ, ಜಿಲ್ಲಾ ತೋಟಗಾರಿಕೆ ಇಲಾಖೆ, ಸಹಾಯಕ ತೋಟಗಾರಿಕೆ ನಿರ್ದೇಶಕರು (ರಾ. ವ.) ಕೊಪ್ಪಳ ಇವರನ್ನು ಸಂಪರ್ಕಿಸಬಹುದು. ಮೊಬೈಲ್ ಸಂಖ್ಯೆ 7406504120.












Click it and Unblock the Notifications