• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಪೊಲೀಸರ ತಡೆಗೆ ಬೆದರದ ರೈತರು: ನದಿಗೆ ಬ್ಯಾರಿಕೇಡ್ ಎಸೆದು ಪ್ರತಿಭಟನೆ, ಉದ್ವಿಗ್ನ ಸ್ಥಿತಿ

|

ನವದೆಹಲಿ, ನವೆಂಬರ್ 26: ನೂತನ ಕೃಷಿ ಕಾಯ್ದೆಗಳನ್ನು ವಿರೋಧಿಸಿ ರೈತರು ಆಯೋಜಿಸಿರುವ 'ದೆಹಲಿ ಚಲೋ' ಪ್ರತಿಭಟನಾ ಮೆರವಣಿಗೆ ಹಿಂಸಾಚಾರ ಸ್ವರೂಪ ಪಡೆದುಕೊಳ್ಳುತ್ತಿದೆ. ಗುರುವಾರ ಬೆಳಿಗ್ಗೆ ದೆಹಲಿಯತ್ತ ತೆರಳುತ್ತಿದ್ದ ಪ್ರತಿಭಟನಾಕಾರರನ್ನು ತಡೆಯಲು ಹರಿಯಾಣ ಪೊಲೀಸರು ಬ್ಯಾರಿಕೇಡ್‌ಗಳನ್ನು ಅಡ್ಡಲಾಗಿ ಹಾಕಿದ್ದರು. ಆದರೆ ದೊಣ್ಣೆ ಮತ್ತು ಕತ್ತಿಗಳನ್ನು ಹಿಡಿದ ಸಾವಿರಾರು ಪ್ರತಿಭಟನಾಕಾರರು ಪೊಲೀಸರ ಬ್ಯಾರಿಕೇಡ್‌ಗಳ ಮೇಲೆ ದಾಳಿ ನಡೆಸಿ ಅವುಗಳನ್ನು ಕಿತ್ತು ನದಿಗೆ ಎಸೆದಿದ್ದಾರೆ.

ರೈತರನ್ನು ತಡೆಯಲು ಹರಿಯಾಣ ಪೊಲೀಸರು ಅಶ್ರುವಾಯು ಮತ್ತು ಜಲಫಿರಂಗಿಗಳನ್ನು ಬಳಸಿದರು. ಇದರಿಂದ ರೈತರನ್ನು ಕೊಂಚ ಮಟ್ಟಿಗೆ ತಡೆಯಲು ಸಾಧ್ಯವಾಯಿತಾದರೂ, ಮತ್ತಷ್ಟು ಸಂಖ್ಯೆಯಲ್ಲಿ ಮುನ್ನುಗ್ಗಿದ ರೈತರು, ಹರಿಯಾಣದ ಹೊರಭಾಗದಲ್ಲಿನ ಸೇತುವೆ ಬಳಿ ಪೊಲೀಸರೊಂದಿಗೆ ಸಂಘರ್ಷಕ್ಕೆ ಇಳಿದರು. ಪೊಲೀಸರ ಅಶ್ರುವಾಯು ಪ್ರಯೋಗಕ್ಕೆ ಪ್ರತಿಯಾಗಿ, ಕಲ್ಲು ಮತ್ತು ಇಟ್ಟಿಗೆಗಳನ್ನು ತೂರಿದರು.

ದೆಹಲಿಗೆ ಮುತ್ತಿಗೆ ಹಾಕಲು ಹೊರಟ ಲಕ್ಷಾಂತರ ರೈತರು: ತೀವ್ರ ಸಂಘರ್ಷ ಸಾಧ್ಯತೆ

ಕಾಂಗ್ರೆಸ್ ಸರ್ಕಾರವಿರುವ ಪಂಜಾಬ್‌ನಿಂದ ಸಾವಿರಾರು ರೈತರು ದೆಹಲಿ ಚಲೋ ಪ್ರತಿಭಟನೆ ನಡೆಸುತ್ತಿದ್ದು, ಅವರನ್ನು ಬಿಜೆಪಿ ಆಡಳಿತವಿರುವ ಹರಿಯಾಣದ ಗಡಿ ಒಳಗೆ ಪ್ರವೇಶಿಸದಂತೆ ತಡೆಯಲಾಗುತ್ತಿದೆ. ತಾವು ರಾಜಧಾನಿ ದೆಹಲಿಗೆ ಹೋಗುವುದನ್ನು ತಡೆಯಲಾಗದು ಎಂದಿರುವ ರೈತರು, ಹರಿಯಾಣ ಪ್ರವೇಶಿಸುವುದರಿಂದ ಹಿಂದೆ ಸರಿಯಲು ನಿರಾಕರಿಸಿದ್ದಾರೆ. ಮುಂದೆ ಓದಿ.

ಬ್ಯಾರಿಕೇಡ್ ನದಿಗೆಸೆದ ರೈತರು

ಸುಮಾರು 48 ಗಂಟೆಗಳ ಕಾಲ ಪೊಲೀಸರು ಕಾರ್ಯಾಚರಣೆ ನಡೆಸಿ ಅಂಬಾಲ ಸಮೀಪದ ಶಂಭು ಗಡಿಯಲ್ಲಿ ಸೇತುವೆ ಮೇಲೆ ಅಡ್ಡಲಾಗಿ ನಿರ್ಮಿಸಿದ್ದ ಬ್ಯಾರಿಕೇಡ್‌ಗಳ ತಡೆಗೋಡೆಯನ್ನು ರೈತರ ಗುಂಪು ಕ್ಷಣಮಾತ್ರದಲ್ಲಿ ಕಿತ್ತು ನದಿಗೆ ಎಸೆದಿದೆ. ಈ ಘಟನೆ ವಿಡಿಯೋದಲ್ಲಿ ಸೆರೆಯಾಗಿದೆ. ಜಯಘೋಷಗಳನ್ನು ಮೊಳಗಿಸಿದ ರೈತರು ಬಾವುಟಗಳನ್ನು ಹಾರಿಸಿ ಪ್ರತಿಭಟಿಸಿದರು.

ಕಾಂಗ್ರೆಸ್, ಎಡಪಕ್ಷಗಳ ಪ್ರತಿಭಟನೆ

ಕಾಂಗ್ರೆಸ್, ಎಡಪಕ್ಷಗಳ ಪ್ರತಿಭಟನೆ

ಪೊಲೀಸರು ಅನೇಕ ಕಡೆ ಮರಳು ಮುಂತಾದ ಸರಕುಗಳನ್ನು ತುಂಬಿದ ಲಾರಿಗಳನ್ನು ರಸ್ತೆಗಳಿಗೆ ಅಡ್ಡಲಾಗಿ ನಿಲ್ಲಿಸಿದ್ದು, ರೈತರು ಅವುಗಳನ್ನು ದಾಟಿ ಹೋಗದಂತೆ ತಡೆದಿದ್ದಾರೆ. ರೈತರ ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿ ಕಾಂಗ್ರೆಸ್ ಮತ್ತು ಎಡಪಕ್ಷಗಳು ದೇಶದ ಅನೇಕ ಭಾಗಗಳಲ್ಲಿ ಪ್ರತಿಭಟನೆ, ಬಂದ್‌ಗಳಿಗೆ ಕರೆ ನೀಡಿವೆ.

ಕೇಂದ್ರದ ಮೇಲೆ ಕೇಜ್ರಿವಾಲ್ ಕಿಡಿ

ಕೇಂದ್ರದ ಮೇಲೆ ಕೇಜ್ರಿವಾಲ್ ಕಿಡಿ

ದೆಹಲಿ ಸರ್ಕಾರ ಕೂಡ ತನ್ನ ಗಡಿಗಳಲ್ಲಿ ಬಿಗಿ ಭದ್ರತೆ ನಿಯೋಜಿಸಿದ್ದು, ರೈತರು ಪ್ರವೇಶಿಸದಂತೆ ತಡೆಗೋಡೆಗಳನ್ನು ನಿರ್ಮಿಸಿದೆ. ಆದರೆ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ರೈತರ ಪರ ಧ್ವನಿ ಎತ್ತಿದ್ದಾರೆ. 'ಕೃಷಿ ಕಾಯ್ದೆಗಳನ್ನು ಹಿಂದಕ್ಕೆ ಪಡೆದುಕೊಳ್ಳುವ ಬದಲು ಶಾಂತಿಯುತ ಪ್ರತಿಭಟನೆ ನಡೆಸಲು ಮುಂದಾಗಿರುವ ರೈತರನ್ನು ತಡೆಯಲಾಗುತ್ತಿದೆ. ಅವರ ಮೇಲೆ ಜಲಫಿರಂಗ ಬಳಸಲಾಗುತ್ತಿದೆ. ಶಾಂತಿಯುತ ಪ್ರತಿಭಟನೆ ನಡೆಸುವುದು ಸಾಂವಿಧಾನಿಕ ಹಕ್ಕು' ಎಂದು ಕೇಜ್ರಿವಾಲ್ ಹೇಳಿದ್ದಾರೆ.

ಉದ್ವಿಗ್ನ ಪರಿಸ್ಥಿತಿ ನಿರ್ಮಾಣ

ಪಾಟಿಯಾಲ-ಅಂಬಾಲ ಹೆದ್ದಾರಿಯಲ್ಲಿ ದೆಹಲಿಯತ್ತ ತೆರಳಲು ಪ್ರಯತ್ನಿಸುತ್ತಿರುವ ರೈತರನ್ನು ಪೊಲೀಸರು ತಡೆಯುತ್ತಿದ್ದು, ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ದೆಹಲಿ-ಫರೀದಾಬಾದ್ ಗಡಿಯಲ್ಲಿ ಹೆಚ್ಚಿನ ಭದ್ರತಾ ಪಡೆಗಳನ್ನು ನಿಯೋಜಿಸಲಾಗಿದ್ದು, ಪ್ರತಿಭಟನಾಕಾರರ ಮೇಲೆ ನಿಗಾ ಇರಿಸಲು ಡ್ರೋನ್ ಕ್ಯಾಮೆರಾಗಳನ್ನು ಬಳಸಲಾಗುತ್ತಿದೆ. ದೆಹಲಿಗೆ ಬರಲು ಐದು ಹೆದ್ದಾರಿಗಳಿದ್ದು, ಎಲ್ಲಾ ಕಡೆ ಬಿಗಿ ಬಂದೋಬಸ್ತ್ ಮಾಡಲಾಗಿದೆ.

English summary
Haryana police used water cannons and tear gas to disperse Punjab farmers at border who are marching towards Delhi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X