ಭತ್ತದ ಬೆಳೆಗೆ ಗಂಧಿಬಗ್ ತಿಗಣೆ ಕಾಟ: ಇದರ ನಿಯಂತ್ರಣ ಹೇಗೆ?
ಮೈಸೂರು, ಅಕ್ಟೋಬರ್ 28: ಮುಂಗಾರು ಉತ್ತಮವಾಗಿದ್ದ ಕಾರಣದಿಂದಾಗಿ ಈ ಬಾರಿ ಭತ್ತ ಬೆಳೆಯುವ ರೈತರು ಖುಷಿಯಿಂದಲೇ ಭತ್ತವನ್ನು ಬೆಳೆದಿದ್ದರು. ಬೆಳೆ ಕೂಡ ಹುಲುಸಾಗಿ ಬೆಳೆದಿದ್ದು ಇದೀಗ ಫಸಲಿಗೆ ಬಂದಿದ್ದು, ರೈತರ ಶ್ರಮಕ್ಕೆ ಪ್ರತಿಫಲ ಸಿಗುವ ಸಮಯ ಹತ್ತಿರವಾಗುತ್ತಿದೆ. ಹಿಂಗಾರು ಮಳೆಯ ಆತಂಕದ ನಡುವೆ ಜಿಲ್ಲೆಯ ಕೆಲವು ತಾಲೂಕುಗಳಲ್ಲಿ ಭತ್ತದ ಬೆಳೆಯನ್ನು ಗಂಧಿಬಗ್ ತಿಗಣೆ ಬಾಧಿಸಲು ಆರಂಭಿಸಿದ್ದು, ರೈತರನ್ನು ಆತಂಕಕ್ಕೆ ತಳ್ಳುವಂತೆ ಮಾಡಿದೆ.
ಸಾಮಾನ್ಯವಾಗಿ ಈ ಸಮಯದಲ್ಲಿ ಭತ್ತದ ಬೆಳೆಯನ್ನು ಕ್ರಿಮಿ, ಕೀಟಗಳು ಕಾಡುವುದು ಸಹಜವೇ ಬೆಂಕಿರೋಗ, ಸೈನಿಕ ಹುಳುವಿನ ಕಾಟ ಹೀಗೆ ಪ್ರತಿವರ್ಷವೂ ಒಂದಲ್ಲ ಒಂದು ರೀತಿಯ ತೊಂದರೆಗಳು ಇದ್ದೇ ಇರುತ್ತವೆ. ಆದರೆ ಇದೀಗ ಕೆಲವು ಕಡೆಗಳಲ್ಲಿ ಅದರಲ್ಲೂ ಕೆ.ಆರ್.ನಗರ ವ್ಯಾಪ್ತಿಯಲ್ಲಿ ಗಂಧಿಬಗ್ ತಿಗಣೆ ಬಾಧೆ ಭತ್ತವನ್ನು ಕಾಡುತ್ತಿರುವುದು ರೈತರಿಗೆ ನಿರಾಸೆ ತಂದಿದ್ದು, ಇದನ್ನು ನಿಗ್ರಹಿಸುವ ಸಲುವಾಗಿ ಶ್ರಮಪಡುವುದು ಎದ್ದು ಕಾಣಿಸುತ್ತಿದೆ.

ಮುಂಗಾರಿನಲ್ಲಿ ನಾಟಿ ನೆಟ್ಟು, ಗೊಬ್ಬರ ಹಾಕಿ ಬೆಳೆಸಿದ್ದ ಭತ್ತದ ಬೆಳೆ ಇನ್ನು ಒಂದೆರಡು ತಿಂಗಳಲ್ಲಿ ಕೊಯ್ಲುಗೆ ಬರಲಿದೆ. ಆದರೆ ಈ ಸಮಯದಲ್ಲಿಯೇ ತಿಗಣೆ ಬಾಧೆ ವ್ಯಾಪಿಸಿರುವುದು ರೈತರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಈ ಬಾರಿ ಜಿಲ್ಲೆಯ ಕೃಷ್ಣರಾಜನಗರ ಮತ್ತು ಸಾಲಿಗ್ರಾಮ ತಾಲೂಕಿನಲ್ಲಿ ರೈತರು ಭತ್ತವನ್ನು ಹೆಚ್ಚಿನ ಪ್ರದೇಶದಲ್ಲಿ ಬೆಳೆದಿದ್ದಾರೆ. ಆದರೆ ಈ ಪ್ರದೇಶದಲ್ಲಿಯೇ ಗಂಧಿಬಗ್ ತಿಗಣೆಬಾಧೆ ಕಾಣಿಸಿಕೊಂಡಿದೆ.
ಭತ್ತದ ಕಾಳಿನಂತೆ ಹಸಿರಾಗಿರುವ ಕೀಟ
ಈ ವ್ಯಾಪ್ತಿಯ ಚುಂಚನಕಟ್ಟೆ, ಸಾಲಿಗ್ರಾಮ, ಮಿರ್ಲೆ, ಹೆಬ್ಬಾಳು, ಹೊಸಅಗ್ರಹಾರ, ಕಸಬಾ ಹೋಬಳಿಗಳಲ್ಲಿ ಸುಮಾರು ಹತ್ತೊಂಬತ್ತು ಸಾವಿರಕ್ಕೂ ಹೆಚ್ಚು ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬೆಳೆದಿದ್ದು ಇದೀಗ ಸಮೃದ್ಧವಾಗಿ ಬೆಳೆದ ಭತ್ತದ ಬೆಳೆಯು ತೆನೆ ಬಂದಿದ್ದು ಹಾಲು ತುಂಬುತ್ತಿದೆ. ಈ ಸಮಯದಲ್ಲಿ ಬೆಳೆಯನ್ನು ಕಾಡುವ ಕೀಟ, ರೋಗಗಳಿಂದ ಕಾಪಾಡಿಕೊಳ್ಳುವುದು ರೈತರಿಗೆ ಸವಾಲ್ ಆಗಿದೆ. ಅದರಲ್ಲೂ ಗಂಧಿಬಗ್ ತಿಗಣೆಯನ್ನು ನಾಶ ಮಾಡಿ ಫಸಲು ರಕ್ಷಿಸುವುದಂತು ಸುಲಭವಲ್ಲ. ಈ ಕೀಟ ಭತ್ತದ ತೆನೆಯಲ್ಲಿ ಹಾಲು ತುಂಬುವ ಸಮಯದಲ್ಲಿಯೇ ಹೆಚ್ಚಾಗಿ ಕಾಡುತ್ತದೆ.

ಈ ಹುಳಗಳು ಸೂಕ್ಷ್ಮವಾಗಿದ್ದು, ತೆನೆಯಲ್ಲಿರುವ ಭತ್ತದ ಕಾಳಿನಂತೆ ಹಸಿರಾಗಿರುತ್ತವೆ. ಹೀಗಾಗಿ ಅವುಗಳು ಮೇಲ್ನೋಟಕ್ಕೆ ಗೊತ್ತೇ ಆಗುವುದಿಲ್ಲ. ಈ ಹುಳುಗಳು ಹಾಲು ತುಂಬುವ ಸಮಯದಲ್ಲಿ ಭತ್ತದ ಮೇಲೆ ದಾಳಿ ಮಾಡಿ ಭತ್ತದ ಕಾಳಿನ ಹಾಲನ್ನು ಹೀರುತ್ತವೆ. ಇದರಿಂದ ಭತ್ತದ ಕಾಳು ಜೊಳ್ಳು ಆಗಲಿದ್ದು ಇಳುವರಿ ಮೇಲೆ ಪರಿಣಾಮ ಬೀರಲಿದೆ. ಈ ಗಂಧಿಬಗ್ ತಿಗಣೆ ಭತ್ತದ ಪ್ರದೇಶವನ್ನು ತೀವ್ರಗತಿಯಲ್ಲಿ ವ್ಯಾಪಿಸಲು ಕಾರಣವಿದೆ. ಇದರ ಸಂತನೋತ್ಪತ್ತಿಯೂ ತ್ವರಿತವಾಗಿಯೇ ನಡೆಯುತ್ತದೆ.
ತೀವ್ರಗತಿಯಲ್ಲಿ ವ್ಯಾಪಿಸುವ ಗಂಧಿಬಗ್ ಕೀಟ
ಗಂಧಿಬಗ್ ತಿಗಣೆಯು ಮೊಟ್ಟೆ ಒಡೆದು ಮರಿ ಹೊರ ಬರಲು ಸುಮಾರು ಮೂರರಿಂದ ಐದು ದಿನಗಳು ಬೇಕಾಗುತ್ತದೆ. ಜತೆಗೆ ಈ ಹುಳುಗಳು 22ರಿಂದ 28 ದಿನಗಳ ಅವಧಿಯಲ್ಲಿ ಐದು ಹಂತಗಳ ರೂಪದಲ್ಲಿ ಬೆಳೆಯುತ್ತಿದ್ದು. ಒಂದು ಪ್ರೌಢ ಕೀಟವು ಸುಮಾರು 75ರಿಂದ 135 ಮೊಟ್ಟೆಗಳನ್ನು ಇಡುವ ಸಾಮರ್ಥ್ಯ ಹೊಂದಿರುವುದರಿಂದ ಸಂತನೋತ್ಪತ್ತಿ ತೀವ್ರಗತಿಯಲ್ಲಿ ನಡೆಯುತ್ತದೆ. ಹೀಗಾಗಿ ನೋಡ ನೋಡುತ್ತಿದ್ದಂತೆಯೇ ಭತ್ತದ ಗದ್ದೆಯನ್ನು ವ್ಯಾಪಿಸಿ ಬಿಡುತ್ತವೆ.
ರೈತರು ಗಂಧಿಬಗ್ ತಿಗಣೆ ಕಾಣಿಸಿಕೊಂಡ ತಕ್ಷಣವೇ ನಿಯಂತ್ರಿಸುವ ಕೆಲಸವನ್ನು ಮಾಡಬೇಕಾಗುತ್ತದೆ. ಇಲ್ಲದೆ ಹೋದರೆ ಅವು ಉಲ್ಭಣಗೊಳ್ಳುವ ಎಲ್ಲ ಸಾಧ್ಯತೆಗಳಿರುತ್ತವೆ. ಆದ್ದರಿಂದ ಮೊದಲ ಹಂತದಲ್ಲಿಯೇ ರೈತ ಸಂಪರ್ಕ ಕೇಂದ್ರಗಳನ್ನು ಸಂಪರ್ಕಿಸಿ ಸೂಕ್ತ ಕೀಟ ನಾಶಕಗಳನ್ನು ಪಡೆದು ಅವರ ಸಲಹೆಯಂತೆ ಸಿಂಪಡಣೆ ಮಾಡಬೇಕಾಗುತ್ತದೆ.
ಇದರ ನಿಯಂತ್ರಣಕ್ಕೆ ಮೆಲಾಥಿಯಾನ್ ಇಸಿ 2ಎಂ ಎಲ್ನ್ನು ಪ್ರತಿ ಲೀಟರ್ ನೀರಿಗೆ ಹಾಕಿ ಸಿಂಪಡಣೆ ಮಾಡಬಹುದು, ಬುಪ್ರೆಫೆಜಿನ್ 1.4ಎಂ ಎಲ್ನ್ನು ಪ್ರತಿ ಲೀಟರ್ ನೀರಿಗೆ ಹಾಕಿ ಸಿಂಪಡಣೆ ಮಾಡುವುದು, ಬೈ ಪೆಂಥ್ರಿನ್ 2.ಎಂಎಲ್ ನ್ನು ಪ್ರತಿಲೀಟರ್ ನೀರಿಗೆ ಹಾಕಿ ಸಿಂಪಡಣೆ ಮಾಡುವುದರಿಂದಲೂ ತಡೆಗಟ್ಟಬಹುದಾಗಿದೆ.
ಭತ್ತಕ್ಕೆ ಕೇವಲ ಗಂಧಿಬಗ್ ತಿಗಣೆ ಬಾಧೆ ಮಾತ್ರವಲ್ಲದೆ, ಇನ್ನಿತರ ಕೀಟಗಳು, ರೋಗಬಾಧೆಗಳು ಕಂಡು ಬರಬಹುದು. ಇಂತಹ ಸಂದರ್ಭಗಳಲ್ಲಿ ರೈತರು ಸ್ವಯಂ ಕೀಟೋಪಚಾರ ಮಾಡುವ ಬದಲು ಸಮೀಪದ ರೈತ ಸಂಪರ್ಕ ಕೇಂದ್ರಗಳಿಗೆ ತೆರಳಿ ಭತ್ತಕ್ಕೆ ತಗುಲಿರುವ ರೋಗದ ಬಗ್ಗೆ ಮಾಹಿತಿ ನೀಡಿ ಕೃಷಿ ಅಧಿಕಾರಿಗಳಿಂದ ಸೂಕ್ತ ಕೀಟ ನಾಶಕ ಮತ್ತು ಸಲಹೆಗಳನ್ನು ಪಡೆದು ಅದರಂತೆ ಬೆಳೆಗೆ ಕೀಟನಾಶಕಗಳನ್ನು ಮಾಡುವುದು ಬಹುಮುಖ್ಯವಾಗಿದೆ.












Click it and Unblock the Notifications