ಗಣೇಶ ಚತುರ್ಥಿ ದಿನವೇ ಚಿಕ್ಕಬಳ್ಳಾಪುರ ಜಿಲ್ಲೆ ರೈತರಿಗೆ ಸಿಹಿಸುದ್ದಿ
ಚಿಕ್ಕಬಳ್ಲಾಪುರ, ಸೆಪ್ಟೆಂಬರ್ 07: ಚಿಕ್ಕಬಳ್ಳಾಪುರ ಜಿಲ್ಲೆಯ ಜನರಿಗೆ, ಹೂವಿನ ಬೆಳೆಗಾರರು ಮತ್ತು ವ್ಯಾಪಾರಿಗಳಿಗೆ ಗೌರಿ-ಗಣೇಶ ಹಬ್ಬದ ದಿನವೇ ಸಿಹಿಸುದ್ದಿಯೊಂದನ್ನು ನೀಡಲಾಗಿದೆ. ಜಿಲ್ಲೆಯ ವಿಶೇಷವಾಗಿ ಶಿಡಘಟ್ಟ ತಾಲೂಕಿನ ರೇಷ್ಮೆ ಬೆಳೆಗಾರರು ಮತ್ತು ವ್ಯಾಪಾರಿಗಳಿಗೆ ಹಬ್ಬದ ಶುಭಾಶಯಗಳು ತಿಳಿಸುತ್ತಾ ಉನ್ನತ ಶಿಕ್ಷಣ ಸಚಿವ ಡಾ. ಎಂ. ಸಿ. ಸುಧಾಕರ್ ಸಿಹಿ ಸುದ್ದಿಯನ್ನು ಕೊಟ್ಟಿದ್ದಾರೆ.
ಈ ಕುರಿತು ಸಚಿವರು ಫೇಸ್‌ಬುಕ್ ಪೋಸ್ಟ್ ಹಾಕಿದ್ದಾರೆ. ಶಿಡ್ಲಘಟ್ಟದಲ್ಲಿ ಹೈಟೆಕ್ ರೇಷ್ಮೆ ಮಾರುಕಟ್ಟೆ ನಿರ್ಮಾಣ ಮಾಡಲು ಆಡಳಿತಾತ್ಮಕ ಅನುಮೋದನೆ ನೀಡಲು ಆರ್ಥಿಕ ಇಲಾಖೆ ಸಹಮತಿ ಸೂಚಿಸಿದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ. ಇನ್ನು ಕೆಲವೇ ತಿಂಗಳುಗಳಲ್ಲಿ ಟೆಂಡರ್ ಪ್ರಕ್ರಿಯೆ ಪೂರೈಸಿ, ಕಾಮಗಾರಿಗೆ ಅಧಿಕೃತವಾಗಿ ಚಾಲನೆಯನ್ನು ನೀಡಲಾಗುವುದು ಎಂದು ಸಚಿವರು ಹೇಳಿದ್ದಾರೆ.

ಸಚಿವರ ಪೋಸ್ಟ್: ಚಿಕ್ಕಬಳ್ಳಾಪುರ ಜಿಲ್ಲೆಯ ಮತ್ತು ವಿಶೇಷವಾಗಿ ಶಿಡಘಟ್ಟ ತಾಲೂಕಿನ ರೇಷ್ಮೆ ಬೆಳೆಗಾರರು ಮತ್ತು ವ್ಯಾಪಾರಸ್ಕರಿಗೆ ಗೌರಿ-ಗಣೇಶ ಹಬ್ಬದ ಶುಭಾಶಯಗಳು ತಿಳಿಸುತ್ತಾ ಸಿಹಿ ಸುದ್ದಿ ಕೊಡುತ್ತಿದ್ದೇನೆ. ಈ ಭಾಗದ ರೇಷ್ಮೆ ಬೆಳೆಗಾರರಿಗೆ ಶಿಡ್ಲಘಟ್ಟದಲ್ಲಿ ಹೈಟೆಕ್ ರೇಷ್ಮೆ ಮಾರುಕಟ್ಟೆ ನಿರ್ಮಾಣ ಮಾಡಲು ಘನ ಸರ್ಕಾರದ ಮಾನ್ಯ ಮುಖ್ಯಮಂತ್ರಿಗಳಾದ ಸಿದ್ಧರಾಮಯ್ಯರವರು 2023-24 ಮತ್ತು 2024-25ರ ಆಯ-ವ್ಯಯದಲ್ಲಿ ಘೋಷಿಸಿರುತ್ತಾರೆ.
ಅದರಂತೆ ರೇಷ್ಮೆ, ಮತ್ತು ಪಶುಸಂಗೋಪನೆ ಸಚಿವರಾದ ಕೆ. ವೆಂಕಟೇಶ್ ಅವರ ಅವಿರತ ಶ್ರಮ ಮತ್ತು ಕಾಳಜಿಯ ಫಲವಾಗಿ ಸರ್ಕಾರದ ಆರ್ಥಿಕ ಇಲಾಖೆ ಶಿಡ್ಲಘಟ್ಟದಲ್ಲಿ ಹೈಟೆಕ್ ರೇಷ್ಮೆ ಮಾರುಕಟ್ಟೆಯ ಮೊದಲನೇ ಮತ್ತು ಎರಡನೇ ಹಂತದ ಯೋಜನೆಗೆ ರೂ. 200 ಕೋಟಿಗಳನ್ನು ನಬಾರ್ಡ್ ಆರ್.ಎಫ್.ಐ.ಡಿ ಯೋಜನೆಯ ಟ್ರಾಂಚ್ - 30ರಡಿ ರೂ. 75 ಕೋಟೆಗಳನ್ನು ಮತ್ತು ಉಳಿದ 125 ಕೋಟಿಯನ್ನು ನಬಾರ್ಡಯೇತರ ಲೆಕ್ಕಶೀರ್ಷಿಕೆಯಲ್ಲಿ 3 ವರ್ಷಗಳಲ್ಲಿ ಬಳಸಲು ಆಡಳಿತಾತ್ಮಕ ಅನುಮೋದನೆ ನೀಡಲು ಆರ್ಥಿಕ ಇಲಾಖೆ ಸಹಮತಿಸಿದೆ ಎಂದು ಸಚಿವರು ಹೇಳಿದ್ದಾರೆ.
ಈ ನನ್ನ ಎಲ್ಲಾ ಪ್ರಯತ್ನಗಳಿಗೆ ಸಹಕರಿಸಿದ ಮಾನ್ಯ ಮುಖ್ಯಮಂತ್ರಿಗಳು ಸಿದ್ಧರಾಮಯ್ಯ ಅವರಿಗೆ, ಮಾನ್ಯ ಉಪಮುಖ್ಯ ಮಂತ್ರಿಗಳು ಡಿ. ಕೆ. ಶಿವಕುಮಾರ್ ಅವರಿಗೆ, ಮತ್ತು ಮಾನ ರೇಷ್ಮೆ ಮತ್ತು ಪಶುಸಂಗೋಪನೆ ಸಚಿವರಾದ ಕೆ. ವೆಂಕಟೇಶ್ ಅವರಿಗೆ, ಆರ್ಥಿಕ ಇಲಾಖೆಯ ಹೆಚ್ಚುವರಿ ಅವರ ಮುಖ್ಯ ಕಾರ್ಯದರ್ಶಿಗಳು ಎಲ್. ಕೆ. ಅತಿಕ್ ಸೇರಿದಂತೆ ವಿವಿಧ ಅಧಿಕಾರಿಗಳಿಗೆ ಸಚಿವರು ವೈಯಕ್ತಿಕವಾಗಿ ಹಾಗೂ ಶಿಡ್ಲಘಟ್ಟ ತಾಲೂಕಿನ ರೇಷ್ಮೆ ಬೆಳೆಗಾರರ ಮತ್ತು ವ್ಯಾಪಾರಸ್ಥರ ಪರವಾಗಿ ಧನ್ಯವಾದಗಳನ್ನು ತಿಳಿಸಿದ್ದಾರೆ.
ಈ ಯೋಜನೆಗೆ ಸೂಕ್ತವಾದಂತಹ ಸ್ಥಳವನ್ನು ತ್ವರಿತಗತಿಯಲ್ಲಿ ಗುರುತಿಸಲು ಸಹಕರಿಸಿರುವ ಶಾಸಕ ಬಿ. ಎನ್. ರವಿಕುಮಾರ್, ಶಿಡ್ಲಘಟ್ಟ ತಾಲೂಕಿನ ತಹಶೀಲ್ದಾರ್ ಸ್ವಾಮಿ ಅವರಿಗೆ ಹಾಗೂ ಮೋಜಿಣಿದಾರರಿಗೆ ಮತ್ತು ಆ ಜಮೀನಿನಲ್ಲಿ ಉಳುಮೆ ಮಾಡುತ್ತಿದ್ದು, ಜಮೀನನ್ನು ಬಿಟ್ಟುಕೊಟ್ಟ ರೈತರಿಗೆ, ಜಿಲ್ಲೆಯ ಹಾಗೂ ಶಿಡ್ಲಘಟ್ಟದ ರೇಷ್ಮೆ ಬೆಳೆಗಾರರು ಮತ್ತು ವ್ಯಾಪಾರಸ್ಥರ ಪರವಾಗಿ ನನ್ನ ಧನ್ಯವಾದಗಳನ್ನು ತಿಳಿಸಲು ಬಯಸುತ್ತೇನೆ ಎಂದು ಡಾ. ಎಂ. ಸಿ. ಸುಧಾಕರ್ ಪೋಸ್ಟ್ ಹಾಕಿದ್ದಾರೆ.
ಆರ್ಥಿಕ ಇಲಾಖೆ ಆದೇಶವೇನು?: ಹೈಟೆಕ್ ರೇಷ್ಮೆ ಮಾರುಕಟ್ಟೆ ಸ್ಥಾಪನೆ ಕುರಿತು ಸರ್ಕಾರದ ಕಾರ್ಯದರ್ಶಿ, ಆರ್ಥಿಕ ಇಲಾಖೆ (ಆ ಮತ್ತು ಸಂ) ಅವರಿಂದ ಅನುಮೋದಿಸಲ್ಪಟ್ಟ ಆದೇಶವನ್ನು ಸರ್ಕಾರದ ಅಧೀನ ಕಾರ್ಯದರ್ಶಿ ಆರ್ಥಿಕ ಇಲಾಖೆ ಕೆ. ಎಸ್. ನಾಗರತ್ನ ಹೊರಡಿಸಿದ್ದಾರೆ.
ಆದೇಶದಲ್ಲಿ ಯೋಜನಾ ಪ್ರಸ್ತಾವನೆಯನ್ನು ಪರಿಶೀಲಿಸಲಾಗಿದೆ. ನಬಾರ್ಡ್‌ನ ಆರ್.ಐ.ಡಿ.ಎಫ್ ಯೋಜನೆಯ ಟ್ರಾಂಚ್-30ರಡಿ ರೂ.75 ಕೋಟಿ ವೆಚ್ಚದ ಶಿಡ್ಲಘಟ್ಟ ಹೈಟೆಕ್ ಮಾರುಕಟ್ಟೆಯ ಮೊದಲ ಹಂತದ ಕಾಮಗಾರಿಯು ಮಾನ್ಯ ಮುಖ್ಯಮಂತ್ರಿಯವರಿಂದ ಅನುಮೋದಿತವಾಗಿದೆ.
2024-25ರ ಸಾಲಿನ ಆಯವ್ಯಯ ಭಾಷಣದ ಘೋಷಣೆಯಂತೆ ಶಿಡ್ಲಘಟ್ಟ ಹೈಟೆಕ್ ರೇಷ್ಮೆ ಗೂಡು ಮಾರುಕಟ್ಟೆಯ ಮೊದಲ ಮತ್ತು ಎರಡನೇ ಹಂತದ ವೆಚ್ಚವು ರೂ. 200 ಕೋಟಿಗಳದ್ದಾಗಿದ್ದು, ಯೋಜನೆಯ ಅನುಷ್ಠಾನಕ್ಕಾಗಿ ಅಗತ್ಯವಿರುವ ಹೆಚ್ಚುವರಿ ರೂ. 125 ಕೋಟಿಯನ್ನು ನಬಾರ್ಡ್‌ಯೇತರ ಲೆಕ್ಕಶೀರ್ಷಿಕೆಯಡಿಯಲ್ಲಿ 2025- 26ನೇ ಸಾಲಿನ ಕೊನೆಯ ತ್ರೈಮಾಸಿಕ ಹಾಗೂ 2026-27, 2027-28ರ ಸಾಲಿನ ತ್ರೈಮಾಸಿಕ ಕಂತುಗಳಲ್ಲಿ ಪಡೆಯುವ ಷರತ್ತಿಗೊಳಪಟ್ಟು ಸದರಿ ಯೋಜನೆಗೆ ಆಡಳಿತಾತ್ಮಕ ಅನುಮೋದನೆಯನ್ನು ನೀಡಲು ಆರ್ಥಿಕ ಇಲಾಖೆಯು ಸಹಮತಿಸಿದೆ ಎಂದು ಹೇಳಿದ್ದಾರೆ.












Click it and Unblock the Notifications