ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೈಸೂರು: ಪೊಲೀಸರೊಂದಿಗೆ ಪ್ರತಿಭಟನಾ ನಿರತ ರೈತರ ವಾಗ್ವಾದ

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ನವೆಂಬರ್ 2: ರೈತರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಮೈಸೂರಿನಲ್ಲಿ ರೈತರು ಪ್ರತಿಭಟನೆ ನಡೆಸುತ್ತಿದ್ದು, ಮೈಸೂರು ಜಿಲ್ಲಾಧಿಕಾರಿಗಳ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದ ಘಟನೆ ನಡೆದಿದೆ.

ಮೈಸೂರು ಜಿಲ್ಲಾಧಿಕಾರಿ ಕಚೇರಿ ಬಳಿ ಜಮಾಯಿಸಿದ ರೈತರು ಜಿಲ್ಲಾಧಿಕಾರಿಗಳ ಕಚೇರಿ ಮುಂದಿನ ರಸ್ತೆಯಲ್ಲೇ ಮಲಗಿ ಪ್ರತಿಭಟನೆಗೆ ಮುಂದಾದರು. ಈ ನಡುವೆ ರೈತರ ಪ್ರತಿಭಟನೆ ತೀವ್ರ ಸ್ವರೂಪ ಪಡೆದು ಜಿಲ್ಲಾಧಿಕಾರಿಗಳ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದರು. ಈ ವೇಳೆ ಪೊಲೀಸರು ತಡೆ ಹಿಡಿದಿದ್ದು, ಪೊಲೀಸರು ಹಾಗೂ ರೈತರ ನಡುವೆ ಮಾತಿನ ಚಕಮಕಿ ತಳ್ಳಾಟ ನಡೆಯಿತು.

ಸರಳ ದಸರಾದಲ್ಲೂ ದುಂದು ವ್ಯಯ: ಸಾರ್ವಜನಿಕ ಆರೋಪಸರಳ ದಸರಾದಲ್ಲೂ ದುಂದು ವ್ಯಯ: ಸಾರ್ವಜನಿಕ ಆರೋಪ

ಈ ಸಮಯದಲ್ಲಿ ಪೊಲೀಸ್ ವಿರುದ್ಧವೇ ರೈತರು ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ನಮ್ಮನ್ನು ಬಿಡಿ ನಾವು ಜಿಲ್ಲಾಧಿಕಾರಿಗಳ ಜೊತೆ ಮಾತನಾಡಬೇಕು ಎಂದು ರೈತರು ಪಟ್ಟು ಹಿಡಿದರು. ಆದರೆ ಇದಕ್ಕೆ ಒಪ್ಪದ ಪೊಲೀಸರು, ಯಾವುದೇ ಕಾರಣಕ್ಕೂ ಜಿಲ್ಲಾಧಿಕಾರಿಗಳ ಕಚೇರಿ ಒಳಗಡೆ ಬಿಡುವುದಿಲ್ಲ ಎಂದು ವಾದ ಮಾಡಿದರು.

Mysuru: Farmers Protesting Infront Of DC Office To Fulfil Various Demands

ಈ ವಿಚಾರ ತಿಳಿಯುತ್ತಿದ್ದಂತೆ ಕೂಡಲೇ ರೈತರ ಪ್ರತಿಭಟನಾ ಸ್ಥಳಕ್ಕೆ ಅಪರ ಜಿಲ್ಲಾಧಿಕಾರಿ ಮಂಜುನಾಥ ಸ್ವಾಮಿ ಭೇಟಿ ನೀಡಿದರು. ಈ ವೇಳೆ ಅಪರ ಜಿಲ್ಲಾಧಿಕಾರಿ ಮಂಜುನಾಥ ಸ್ವಾಮಿ ಅವರ ಮುಂದೆಯೇ ರೈತರು ವಾಗ್ವಾದಕ್ಕಿಳಿದ ದೃಶ್ಯ ಕಂಡುಬಂತು.

ರೈತರ ಕೊರಳ ಪಟ್ಟಿ ಹಿಡಿದು ಪೊಲೀಸರು ಮಾತನಾಡುತ್ತಾರೆ. ಪೊಲೀಸರು ಮೊದಲು ಕ್ಷಮೆ ಕೇಳಬೇಕು ಎಂದು ಅಪರ ಜಿಲ್ಲಾಧಿಕಾರಿ ಮಂಜುನಾಥ ಸ್ವಾಮಿ ಅವರ ಮುಂದೆ ರೈತರು ಒತ್ತಾಯಿಸಿದರು.

ಕಬ್ಬಿನ ಎಫ್.ಆರ್.ಪಿ ದರ ಅವೈಜ್ಞಾನಿಕ, ಎಫ್.ಎ.ಪಿ ಬೆಲೆ ನಿಗದಿಪಡಿಸಲು ಒತ್ತಾಯಿಸಿ ರಾಜ್ಯ ಕಬ್ಬು ಬೆಳೆಗಾರರ ಸಂಘದ ವತಿಯಿಂದ ಪ್ರತಿಭಟನಾ ಧರಣಿ ನಡೆದಿದ್ದು, ಮನವಿ ಪತ್ರ ಸಲ್ಲಿಸಿದರು.

ಬಣ್ಣಾರಿ ಸಕ್ಕರೆ ಕಾರ್ಖಾನೆ ಕಬ್ಬಿನಿಂದ ಬರುವ ಸಕ್ಕರೆ ಇಳುವರಿ ಕಡಿಮೆ ತೋರಿಸುತ್ತಿರುವ ಕಾರಣ, ಕಬ್ಬಿನ ಎಫ್.ಆರ್.ಪಿ ದರ ನಿಗದಿ ಹಿಂದಿನ ವರ್ಷಕ್ಕಿಂತ ಪ್ರಸಕ್ತ ಸಾಲಿಗೆ ಕಡಿಮೆ ಆಗಿದೆ. ರಾಜ್ಯದಲ್ಲಿ ಎಸ್.ಎ.ಪಿ ಕಾಯ್ದೆ ಜಾರಿಗೆ ಬಂದ ಮೇಲೆ ಕಳೆದ ಮೂರು ವರ್ಷಗಳಿಂದ ಸಕ್ಕರೆ ಕಾರ್ಖಾನೆಗಳು ಸಕ್ಕರೆ ಇಳುವರಿ ಕಡಿಮೆ ತೋರಿಸಿ ರೈತರಿಗೆ ಅನ್ಯಾಯ ಮಾಡುತ್ತಿವೆ ಎಂದರು.

ಅಕ್ಟೋಬರ್ 15ರಂದು ನಡೆದ ಕಬ್ಬು ಖರೀದಿ ಮಂಡಳಿ ಸಭೆಯಲ್ಲಿ ಈ ಬಗ್ಗೆ ಚರ್ಚಿಸಿರುವಂತೆ ಸಕ್ಕರೆ ಸಚಿವ ಶಿವರಾಮ್ ಹೆಬ್ಬಾರ್ ಅವರು ಮುಖ್ಯಮಂತ್ರಿಗಳ ಜೊತೆ ಚರ್ಚಿಸಿ 10 ದಿನದ ಒಳಗಾಗಿ ರಾಜ್ಯದಲ್ಲಿ ಎಸ್.ಎ.ಪಿ ಬೆಲೆ ನಿಗದಿ ಮಾಡುವುದಾಗಿ ಒಪ್ಪಿ 15 ದಿನಗಳಾದರೂ ಯಾವುದೇ ತೀರ್ಮಾನ ಪ್ರಕಟಿಸದೆ ನಿರ್ಲಕ್ಷಿಸಿದ್ದಾರೆಂದು ರೈತರು ಆರೋಪಿಸಿದರು.

ಮೈಸೂರು ಜಿಲ್ಲೆಯಾದ್ಯಂತ ಫಸಲ್ ಭೀಮಾ ಹಣ ಕಟ್ಟಿರುವ ರೈತರಿಗೆ ನಷ್ಟ ಪರಿಹಾರದ ಹಣ ಪಾವತಿಯಾಗಿಲ್ಲ. ಹೆಸರು, ಉದ್ದು, ಹಲಸಂದಿ ಮತ್ತಿತರ ಬೆಳೆಗಳಿಗೆ ರೈತರಿಗೆ ಎರಡು ವರ್ಷವಾದರೂ ನಷ್ಟ ಪರಿಹಾರ ಪಾವತಿಸಿಲ್ಲ. ಕೂಡಲೇ ಪರಿಹಾರ ಹಣ ಬಿಡುಗಡೆ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ರೈತ ಮುಖಂಡರಾದ ಕುರುಬೂರು ಶಾಂತಕುಮಾರ್, ಅತ್ತಹಳ್ಳಿ ದೇವರಾಜ್ ಒತ್ತಾಯಿಸಿದರು.

English summary
The farmers have been protesting in Mysuru demanding the fulfillment of various demands of the farmers.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X