ತುಂಬಿದ ಭದ್ರಾ ಅಣೆಕಟ್ಟು, ಭದ್ರಾ ನಾಲೆಗೆ ನೀರು ಬಿಡಲು ಆಗ್ರಹ
ದಾವಣಗೆರೆ, ಜೂನ್ 14: ಚಿಕ್ಕಮಗಳೂರು ಜಿಲ್ಲೆಯ ಕಳಸ, ಹೊರನಾಡು, ಬಾಳೇಹೊನ್ನೂರು ಭಾಗದಲ್ಲಿ ಮಳೆ ಚೆನ್ನಾಗಿ ಆಗುತ್ತಿರುವುದರಿಂದ ಭದ್ರಾ ಆಣೆಕಟ್ಟೆಯಲ್ಲಿ ನೀರಿನ ಪ್ರಮಾಣ ಹೆಚ್ಚುತ್ತಿದ್ದು, ಭದ್ರಾ ಅಚ್ಚುಕಟ್ಟು ಪ್ರದೇಶದ ರೈತರ ಅನುಕೂಲಕ್ಕಾಗಿ ಭದ್ರಾ ನಾಲೆಯಲ್ಲಿ ಜುಲೈ ವೊದಲ ವಾರದಲ್ಲಿ ನೀರು ಬಿಡುಗಡೆ ಮಾಡಬೇಕೆಂದು ಭಾರತೀಯ ರೈತ ಒಕ್ಕೂಟದ ಗೌರವಾಧ್ಯಕ್ಷರೂ, ಶಾಸಕರಾದ ಎಸ್.ಎ. ರವೀಂದ್ರನಾಥ್ ಕಾಡಾ ಸಮಿತಿಯನ್ನು ಒತ್ತಾಯಿಸಿದ್ದಾರೆ.
ಭದ್ರಾ ಅಣೆಕಟ್ಟೆಯಲ್ಲಿ ನೀರಿನ ಹರಿವು ಹೆಚ್ಚಾಗುತ್ತಿದ್ದು, ನೀರಿನ ಮಟ್ಟ 122 ಅಡಿ ದಾಟುತ್ತಿದೆ. ಜುಲೈ ತಿಂಗಳ ವೊದಲ ವಾರದ ವೇಳೆಗೆ 150 ಅಡಿ ದಾಟುವ ನಿರೀಕ್ಷೆಯೂ ಇದೆ.

ಹೀಗಾಗಿ ರೈತರ ಹಿತದೃಷ್ಠಿಯಿಂದ ನೀರನ್ನು ಬಿಡಲು ಕಾಡಾ ಸಮಿತಿ ನಿರ್ಧಾರ ಕೈಗೊಳ್ಳಬೇಕು ಎಂದು ಆಗ್ರಹಪಡಿಸಿದರು. ಶೀಘ್ರದಲ್ಲಿಯೇ ಕಾಡಾ ಸಮಿತಿ ಸಭೆ ಕರೆದು, ಭದ್ರಾ ಅಚ್ಚುಕಟ್ಟು ರೈತರ ಜಮೀನಿಗೆ ನೀರು ತಲುಪುವಂತೆ ಮಾಡಲು ಜುಲೈ ವೊದಲ ವಾರದಲ್ಲಿ ನೀರು ಬಿಡಬೇಕೆಂದು ಭಾರತೀಯ ರೈತ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಶಾಮನೂರು ಲಿಂಗರಾಜ್ ಒತ್ತಾಯಿಸಿದ್ದಾರೆ.
ಭದ್ರಾ ಜಲಾಶಯಕ್ಕೆ ಕೇವಲ 4 ದಿನಗಳಲ್ಲಿ 12 ಅಡಿ ನೀರು ಹರಿದು ಬಂದಿದ್ದು, ಬುಧವಾರ ಜಲಾಶಯದ ನೀರಿನ ಮಟ್ಟ 126 ಅಡಿ, 5 ಇಂಚು ಆಗಿದೆ. ಮಂಗಳವಾರ 22,231 ಕ್ಯೂಸೆಕ್ಸ್ ಇದ್ದ ನೀರಿನ ಒಳಹರಿವು, ಬುಧವಾರ 21968 ಕ್ಯೂಸೆಕ್ಸ್ಗೆ ಇಳಿಕೆಯಾಗಿದೆ. ಮಲೆನಾಡು ಪ್ರದೇಶ ದಲ್ಲಿ ಮಳೆ ಪ್ರಮಾಣ ಕಡಿಮೆಯಾಗಿದ್ದರಿಂದ ಜಲಾಶಯಕ್ಕೆ ಬರುವ ನೀರಿನ ಒಳಹರಿವೂ ಸಹ ಇಳಿಮುಖವಾಗಿದೆ.
ಕಳಸ-ಹೊರನಾಡು ಮಧ್ಯೆ ಸೇತುವೆ ಮೇಲೆ ತುಂಬಿ ಹರಿದ ಭದ್ರಾ ನದಿಯ ನೀರಿನ ಪ್ರಮಾಣ ಇಂದು ಕಡಿಮೆಯಾಗಿದೆ ಎಂದು ತಿಳಿದು ಬಂದಿದೆ. ಆದರೂ ಕಳೆದ ಒಂದು ವಾರದಲ್ಲಿ ಜಲಾಶಯಕ್ಕೆ ಗಣನೀಯ ವಾಗಿ ನೀರು ಹರಿದು ಬಂದಿದ್ದು, ಅಚ್ಚುಕಟ್ಟಿನ ರೈತರಲ್ಲಿ ಆಶಾಭಾವನೆ ಮೂಡಿಸಿದೆ.
ಜುಲೈ-ಆಗಸ್ಟ್‌ತಿಂಗಳಲ್ಲಿ ಆಗುವ ಮಳೆಗಳಿಂದಾಗಿ ಜಲಾಶಯಕ್ಕೆ ನಿರೀಕ್ಷೆಯಂತೆ ಸಾಕಷ್ಟು ನೀರು ಹರಿದು ಬರುವ ಸಾಧ್ಯತೆ ಇದ್ದು, ಮಳೆಗಾಲದ ಬೆಳೆಗೆ ಭದ್ರಾ ನೀರು ಸಿಗಲಿದೆ ಎಂಬ ವಿಶ್ವಾಸದಲ್ಲಿ ಅಚ್ಚುಕಟ್ಟಿನ ರೈತರಿದ್ದಾರೆ.
ಕಳೆದ ವರ್ಷ ಈ ದಿನ ಜಲಾಶಯದಯಲ್ಲಿ 103 ಅಡಿ ಮಾತ್ರ ನೀರಿತ್ತು. ಕಳೆದ ವರ್ಷಕ್ಕೆ
ಹೋಲಿಸಿದರೆ ಈ ಬಾರಿ 23 ಅಡಿ ನೀರು ಹೆಚ್ಚು ದಾಖಲಾಗಿದೆ. ಜಲಾಶಯ ಭರ್ತಿಯಾಗಲು
ಇನ್ನೂ 60 ಅಡಿ ಬಾಕಿ ಇದೆ. ಜಲಾಶಯದ ಗರಿಷ್ಠ ಮಟ್ಟ 186 ಅಡಿ.












Click it and Unblock the Notifications