ಮೇಕೆ ಮೇಯಿಸುತ್ತಿದ್ದಾಗ ಆನೆ ದಾಳಿ; ರಾಮನಗರದಲ್ಲಿ ರೈತನಿಗೆ ಗಂಭೀರ ಗಾಯ
ರಾಮನಗರ, ಜುಲೈ 17: ಮೇಕೆಗಳನ್ನು ಮೇಯಿಸಲು ಜಮೀನಿಗೆ ಹೋಗಿದ್ದ ಸಂದರ್ಭ ಹಠಾತ್ ಎದುರಾದ ಆನೆಯೊಂದು ತುಳಿದು ರೈತರೊಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಬುಧವಾರ ರಾಮನಗರ ಜಿಲ್ಲೆಯ ಕನಕಪುರ ತಾಲ್ಲೂಕಿನ ಕೆಂಚೇಗೌಡನ ದೊಡ್ಡಿಯಲ್ಲಿ ನಡೆದಿದೆ.
ಲಿಂಗರಾಜು (45) ಗಂಭೀರ ಗಾಯಗೊಂಡಿರುವ ರೈತ. ಬೆಳಗ್ಗಿನ ಜಾವ ಮೇಕೆಗಳನ್ನು ಜಮೀನಿನ ಬಳಿ ಮೇಯಿಸಲು ಹೋಗಿದ್ದ ಸಂದರ್ಭ ಇದ್ದಕ್ಕಿದ್ದಂತೆ ಆನೆ ಪ್ರತ್ಯಕ್ಷವಾಗಿದೆ. ಲಿಂಗರಾಜು ಮೇಲೆ ದಾಳಿ ನಡೆಸಿದ್ದು, ಅವರು ಗಾಯಗೊಂಡಿದ್ದಾರೆ. ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸಾತನೂರು ಅರಣ್ಯ ಇಲಾಖೆ ಅಧಿಕಾರಿಗಳು ಪರಿಶೀಲಿಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.

ನಿನ್ನೆಯಷ್ಟೇ ಚನ್ನಪಟ್ಟಣ ತಾಲ್ಲೂಕಿನ ಸುಳ್ಳೇರಿ ಗ್ರಾಮದ ಕೆರೆಯಲ್ಲಿ 7 ಕಾಡಾನೆಗಳ ತಂಡ ಬೀಡುಬಿಟ್ಟು, ಗ್ರಾಮದಲ್ಲಿ ಭಯದ ವಾತಾವರಣ ಉಂಟು ಮಾಡಿದ್ದವು. ನೀರು ಮತ್ತು ಮೇವನ್ನು ಅರಸಿ ಕಾಡಂಚಿನ ಗ್ರಾಮಗಳಲ್ಲಿ ಕಾಣಿಸಿಕೊಳ್ಳುತ್ತಿರುವ ಆನೆಗಳು ಜನರಲ್ಲಿ ಆತಂಕ, ಭಯ ಮನೆ ಮಾಡುವಂತೆ ಮಾಡಿವೆ.












Click it and Unblock the Notifications