ಬೈಕ್ ನಲ್ಲೇ ಉಳುಮೆ ಮಾಡಿದ ದಾವಣಗೆರೆ ರೈತ
ದಾವಣಗೆರೆ, ಆಗಸ್ಟ್ 3: ಈಗ ಅಲ್ಲಲ್ಲಿ ಮಳೆಯಾಗುತ್ತಿದೆ. ಉಳುಮೆಗೆ ಇದು ಸೂಕ್ತ ಕಾಲ. ಆದರೆ ಹೊಲ ಉಳುಮೆ ಮಾಡಲು ಎತ್ತುಗಳು, ಕೂಲಿ ಕಾರ್ಮಿಕರೇ ಸಿಗುತ್ತಿಲ್ಲ.
ಈ ಸಮಸ್ಯೆಗೆ ತಾವೇ ಒಂದು ಪರಿಹಾರ ರೂಪಿಸಿಕೊಂಡಿದ್ದಾರೆ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಅಜ್ಜಿಹಳ್ಳಿಯ ನೀಲಪ್ಪ. ಕೂಲಿ ಕಾರ್ಮಿಕರು, ಎತ್ತುಗಳು ಇರದಿದ್ದರಿಂದ ತಮ್ಮ ಬೈಕ್ ಗೆ ಕುಂಟೆ ಕಟ್ಟಿ ಉಳುಮೆ ಮಾಡಿದ್ದಾರೆ ಇವರು.
ಬೆಳೆದ ಬೆಳೆಗೆ ಎಡೆಕುಂಟೆ ಹೊಡೆಯಬೇಕಿತ್ತು. ಆದರೆ ಎಡೆಕುಂಟೆ ಹೊಡೆಯಲು ಎತ್ತುಗಳು ಸಿಗಲಿಲ್ಲ. ಕಳೆದ ಒಂದು ವಾರದಿಂದ ಗ್ರಾಮದಲ್ಲಿ ಎಷ್ಟು ಹುಡುಕಾಡಿದರೂ ಎತ್ತುಗಳು ಬಾಡಿಗೆಗೆ ಸಿಗಲಿಲ್ಲ. ಸಿಕ್ಕಿದರೂ ಎರಡು ಮೂರು ಸಾವಿರ ಬಾಡಿಗೆ ಕೊಡಬೇಕಿತ್ತು.

ಇದರಿಂದ ರೋಸಿ ಹೋಗಿದ್ದ ನೀಲಪ್ಪ, ಮುಂದೇನು ಮಾಡಬೇಕು ಎಂದು ತೋಚದೆ ಇದ್ದರು. ಆಗ ಇವರ ಆಲೋಚನೆಗೆ ಬಂದಿದ್ದು ಬೈಕ್. ತನ್ನ ಮಗನ ಬೈಕ್ ಗೆ ಎಡೆಕುಂಟೆ ಕಟ್ಟಿ ಉಳುಮೆ ಮಾಡಲು ಮುಂದಾದರು. ತಮ್ಮ ಅರ್ಧ ಎಕರೆ ಹೊಲವನ್ನು ಬೈಕ್ ನಲ್ಲೆ ಉಳುಮೆ ಮಾಡಿ ಸೈ ಎನಿಸಿಕೊಂಡರು.












Click it and Unblock the Notifications