ಸಂಸತ್ತಿನತ್ತ ಲಕ್ಷಾಂತರ ರೈತರ ನಡಿಗೆ, ತಡೆಯಲು ಸಾವಿರಾರು ಪೊಲೀಸರ ನಿಯೋಜನೆ
ನವದೆಹಲಿ, ನವೆಂಬರ್ 30: ಲಕ್ಷಾಂತರ ರೈತರು ದೆಹಲಿಯಲ್ಲಿ ಒಟ್ಟುಗೂಡಿ ಸಂಸತ್ತಿಗೆ ಮುತ್ತಿಗೆ ಹಾಕಲು ಹೆಜ್ಜೆ ಹಾಕಿದ್ದಾರೆ. ಅವರನ್ನು ತಡೆಯಲು 3500 ಸಾವಿರ ಪೊಲೀಸರನ್ನು ಸಂಸತ್ತಿನ ಬಳಿ ನಿಯೋಜಿಸಲಾಗಿದೆ.
ದೇಶದ ನಾನಾ ಭಾಗಗಳಿಂದ ಬಂದಿರುವ ರೈತರು ನಿನ್ನೆಯೇ ದೆಹಲಿ ತಲುಪಿ ರಾಮಲೀಲಾ ಮೈದಾನದಲ್ಲಿ ಬಿಡಾರ ಹೂಡಿದ್ದರು. ಇಂದು ಬೆಳಿಗ್ಗೆ ಎಲ್ಲರೂ ಸಂಸತ್ತಿಗೆ ಮುತ್ತಿಗೆ ಹಾಕುತ್ತಿದ್ದಾರೆ.
ರೈತರಿಗಾಗಿ ವಿಶೇಷ ಅಧಿವೇಶನ, ಸಾಯಿನಾಥ ವರದಿ ಅನುಷ್ಟಾನ, ಬೆಳೆ ವಿಮೆಯಲ್ಲಿನ ನ್ಯೂನತೆಗಳನ್ನು ಸರಿಪಡಿಸುವುದು, ಸಾಲ ಮನ್ನಾ, ರೈತರ ತಲಾ ಆದಾಯ ಹೆಚ್ಚಳಕ್ಕೆ ಕ್ರಮ ಹೀಗೆ ಹಲವು ಬೇಡಿಕೆಗಳ ಈಡೇರಿಕೆಗೆ ಉದ್ದೇಶಿಸಿ ರೈತರು ದೆಹಲಿಯಲ್ಲಿ ಭಾರಿ ಪ್ರತಿಭಟನೆ ಮಾಡುತ್ತಿದ್ದಾರೆ.

ರೈತರು ಅರೆಬೆತ್ತಲೆಯಾಗಿ, ಹಸಿರು ಶಾಲು ಹೊದ್ದು, ಕೆಂಪು ಧ್ವಜ ಹಿಡಿದು, ಮಹಿಳೆಯರು, ನೇಣಿಗೆ ಶರಣಾದ ಗಂಡಂದಿರ ಕುಟುಂಬ ಸದಸ್ಯರ ಚಿತ್ರಗಳನ್ನು ಹಿಡಿದು ಪ್ರತಿಭಟನಾ ಮೆರವಣಿಗೆ ಮಾಡುತ್ತಿದ್ದಾರೆ.
ಪ್ರತಿಭಟನಾ ನಿರತ ರೈತರು ಕೇಂದ್ರದ ವಿರುದ್ಧ ಘೋಷಣೆಗಳನ್ನು ಕೂಗುತ್ತಿದ್ದಾರೆ. ಅಯೋಧ್ಯೆ ಬೇಡ , ರಾಮ ಬೇಡ , ನಮ್ಮ ಜೀವನ ನಮಗೆ ಕೊಡಿ ಎಂಬ ಘೋಷಣೆಗಳು ಪ್ರತಿಭಟನೆಯಲ್ಲಿ ಕೇಳಿಬರುತ್ತಿವೆ.

ರೈತರ ಪ್ರತಿಭಟನಾ ಯಾತ್ರೆಯಿಂದ ದೆಹಲಿಯ ಸಂಚಾರ ವ್ಯವಸ್ಥೆ ಅಸ್ಥವ್ಯವಸ್ಥವಾಗಿದೆ. 1500 ಸಾವಿರ ಹೆಚ್ಚುವರಿ ಟ್ರಾಫಿಕ್ ಪೊಲೀಸರನ್ನು ರಾಮಲೀಲಾ ಮೈದಾನ ಮತ್ತು ಪಾರ್ಲಿಮೆಂಟ್ ನಡುವೆ ನಿಯೋಜಿಸಲಾಗಿದೆ. 850 ಕ್ಕೂ ಹೆಚ್ಚು ಎಸ್‌ಐಗಳು, ಮೂರು ಮಹಿಳಾ ಪೊಲೀಸ್ ತುಕಡಿಗಳು, 12 ಕಾನ್ಸ್ಟೇಬಲ್ ತುಕಡಿಗಳು ಸಂಸತ್ತಿನ ಬಳಿ ಕಾವಲು ನಿಂತಿವೆ.
ದೆಹಲಿಯ ಟ್ರಾಫಿಕ ಪೊಲೀಸ್ ಇಲಾಖೆಯು ರೈತರ ಪ್ರತಿಭಟನಾ ಮೆರವಣಿಗೆಯ ಕ್ಷಣ-ಕ್ಷಣದ ಮಾಹಿತಿಯನ್ನು ಟ್ವಿಟ್ಟರ್‌ನಲ್ಲಿ ನೀಡುತ್ತಿದೆ. ಪ್ರಯಾಣಿಕರಿಗೆ ಸಮಸ್ಯೆ ಆಗದಂತೆ ಮುನ್ನೆಚ್ಚರಿಕೆ ತೆಗೆದುಕೊಂಡಿದೆ.












Click it and Unblock the Notifications