ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಾವೆಲ್ಲರೂ ಸೇರಿ ಸೆ.27ರ ಭಾರತ್ ಬಂದ್ ಯಶಸ್ವಿಗೊಳಿಸೋಣ: ಎಚ್. ಆರ್. ಬಸವರಾಜಪ್ಪ

|
Google Oneindia Kannada News

ಸೆ.27 ರಂದು ರೈತರು ಕರೆ ನೀಡಿರುವ ಭಾರತ್ ಬಂದ್ ತಯಾರಿ ಬಗ್ಗೆ ಒನ್ ಇಂಡಿಯಾ ಕನ್ನಡ ರೈತ ಮುಖಂಡರನ್ನು ಮಾತನಾಡಿಸಿದಾಗ...

ಎಚ್. ಆರ್. ಬಸವರಾಜಪ್ಪ, ಹಿರಿಯ ರೈತ ಮುಖಂಡರು
"ಸಂಯುಕ್ತ ಕಿಸಾನ್ ಮೋರ್ಚಾ, ದಿಲ್ಲಿ ಗಡಿಯಲ್ಲಿ ಕಳೆದ ಹತ್ತು ತಿಂಗಳಿನಿಂದ ರೈತ ಚಳುವಳಿ ನಡೆಸಿದೆ. ಸೆಪ್ಟೆಂಬರ್ 27ನೇ ತಾರೀಖಿಗೆ ಈ ಮೂರೂ ಕೃಷಿ ಕಾಯಿದೆಗಳಿಗೆ ರಾಷ್ಟ್ರಪತಿಗಳು ಅಂಕಿತ ಹಾಕಿ ಒಂದು ವರ್ಷ ಮುಗೀತು. ಆ ಹಿನ್ನೆಲೆಯಲ್ಲಿ ಸಂಯುಕ್ತ ಕಿಸಾನ್ ಮೋರ್ಚಾ ಭಾರತ್ ಬಂದ್‌ಗೆ ಕರೆ ಕೊಟ್ಟಿದೆ."

ಸೆಪ್ಟೆಂಬರ್ 27ರಂದು ಭಾರತ್ ಬಂದ್; ರೈತ ಮುಖಂಡರ ಅಭಿಪ್ರಾಯಸೆಪ್ಟೆಂಬರ್ 27ರಂದು ಭಾರತ್ ಬಂದ್; ರೈತ ಮುಖಂಡರ ಅಭಿಪ್ರಾಯ

"ಈ ಮೂರೂ ಕಾಯಿದೆಗಳು ರೈತರಿಗೆ ಸಂಬಂಧಪಟ್ಟಿದ್ದು ಮಾತ್ರ ಎಂದು ಯಾರೂ ಕೂಡಾ ಭಾವಿಸಬಾರದು. ಈ ಕಾಯಿದೆಗಳ ಪರಿಣಾಮಗಳು ದುಡಿಯುವ ವರ್ಗದ ಜನರ ಮೇಲೆ ಮತ್ತು ಜನಸಾಮಾನ್ಯರ ಮೇಲೆ ಆಗುತ್ತದೆ ಅನ್ನುವುದನ್ನು ಅರ್ಥಮಾಡಿಕೊಳ್ಳಬೇಕು. ಹೇಗೆ ಅಂತ ಹೇಳಿದರೆ, ಈ ಮೂರೂ ಕಾಯಿದೆಗಳಿಗೆ ಒಂದಕ್ಕೊಂದು ಸಂಭಂದ ಇದೆ. ಎಪಿಎಂಸಿ ಕಾಯಿದೆ, ಗುತ್ತಿಗೆ ಕೃಷಿ ಕಾಯಿದೆ ಮತ್ತು ಅಗತ್ಯ ವಸ್ತುಗಳ ಕಾಯಿದೆ. ಜೊತೆಗೆ ಈ ಕಾಯಿದೆಗಳಿಗೆ ಕರ್ನಾಟಕ ಸರ್ಕಾರ ತಂದಿರುವ ತಿದ್ದುಪಡಿಗಳಿಗೆ ಇನ್ನೂ ಹತ್ತಿರದ ಸಂಬಂಧವಿದೆ. ಭೂ ಸುಧಾರಣೆ ಕಾಯಿದೆಗೆ ತಿದ್ದುಪಡಿ ತಂದು ಯಾರು ಎಷ್ಟು ಬೇಕಾದರೂ ಜಮೀನು ಖರೀದಿ ಮಾಡಬಹುದದು. ಕಂಪನಿಗಳು 130 ಎಕರೆ ತನಕ ಜಮೀನು ಖರೀದಿ ಮಾಡಿ ಅವರ ಕೃಷಿಯೇತರ ಉದ್ದೇಶಕ್ಕೂ ಕೂಡಾ ಬಳಸಬಹುದು ಅಂಥಾ ಏನು ಕಾಯಿದೆ ಮಾಡಿದಾರೆ ಇವೆಲ್ಲವೂ ಅಪಾಯಕಾರಿ."

"ಆಮೇಲೆ ಭೂಸ್ವಾಧೀನ ಕಾಯಿದೆ. ಯುಪಿಎ ಸರ್ಕಾರದಲ್ಲಿ ಶೇ.80 ರೈತರು ಒಪ್ಪಿಗೆ ಕೊಡಬೇಕಿತ್ತು. ಆಮೇಲೆ 3 ವರ್ಷದೊಳಗೆ ಬಳಸದೇ ಹೋದರೆ ಪುನಃ ರೈತರಿಗೆ ವಾಪಸ್ ಕೊಡಬೇಕಿತ್ತು. ಅವೆಲ್ಲವನ್ನೂ ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದಾಗ ತೆಗೆದುಹಾಕಿದರು. ಅದನ್ನು ಯಡಿಯೂರಪ್ಪನವರು ಮುಂದುವರೆಸಿದರು."

Farmer Leaders HR Basavarajappa And Anasuyamma Reaction To Bharat Bandh On September 27

"ಎಪಿಎಂಸಿ ಮಂಡಿ ಕಾಯಿದೆಯು ರೈತರೇ ಅಧಿಕಾರದಲ್ಲಿರುವಂಥ ವ್ಯವಸ್ಥೆಯನ್ನು ಸಂಪೂರ್ಣ ಅಧಿಕಾರ ಕಸಿದುಕೊಂಡು ಎಪಿಎಂಸಿ ಮುಚ್ಚುವ ಸ್ಥಿತಿಗೆ ತರುತ್ತಿದ್ದಾರೆ. ಎಪಿಎಂಸಿ ಹೊರಗಡೆ ತೆರಿಗೆ ಇಲ್ಲ, ಎಪಿಎಂಸಿ ಒಳಗಡೆ ತೆರಿಗೆ ಇದೆ ಅಂದ್ರೆ ಅರ್ಥ ಏನು? ಜೊತೆಗೆ ರೈತರು ಎಪಿಎಂಸಿ ಒಳಗಡೆನೇ ಮಾರಾಟ ಮಾಡಬೇಕು ಅನ್ನುವ ಕಡ್ಡಾಯ ಇಲ್ಲ ಅಂದ್ಮೇಲೆ ಇವತ್ತು ಕಂಪನಿಗಳಿಗೆ ಎಲ್ಲಿ ಬೇಕಾದರೂ ವ್ಯವಹಾರ ಮಾಡುವುದಕ್ಕೆ ಅವಕಾಶ ಮಾಡಿಕೊಡುತ್ತಿರುವ ಕಾಯಿದೆ ಅಂದಂಗಾಯ್ತು."

"ಈಗ ಒಟ್ಟಾರೆ ಒಕ್ಕಲುತನ, ಕೃಷಿ ಏನಿದೆ, ನಮ್ಮ ಪೂರ್ವಜರಿಂದ ಬಂದಿರುವ ಕೃಷಿ ಜ್ಞಾನ ಸಂಪೂರ್ಣವಾಗಿ ಕೈತಪ್ಪಿ ಹೋಗುತ್ತದೆ. ಬೀಜ ಸ್ವಾತಂತ್ರ್ಯ ಕೈ ತಪ್ಪುತ್ತದೆ, ಭೂಮಿ ಕೈ ತಪ್ಪುತ್ತದೆ, ಮಾರುಕಟ್ಟೆ ಕೈ ತಪ್ಪುತ್ತದೆ. ಕ್ರಮೇಣ ಇವೆಲ್ಲವೂ ಕಂಪನಿಗಳ ಪಾಲಾಗುತ್ತವೆ. ಕಂಪನಿಯವರು ಯಾವ ಬೀಜ ಕೊಡ್ತಾರೆ, ಯಾವ ಬೆಳೆ ಬೆಳೀ ಅಂಥಾ ಹೇಳ್ತಾರೆ ಆ ಬೆಳೆ ಬೆಳೆಯುವಂಥ ದುಸ್ಥಿತಿಗೆ ನಾವು ತಲುಪುತ್ತೇವೆ. ಒಕ್ಕಲುತನ ಸಂಪೂರ್ಣ ನಾಶ ಆಗುತ್ತದೆ."

"ಇನ್ನು ಅಗತ್ಯ ವಸ್ತುಗಳ ತಿದ್ದುಪಡಿ ಕಾಯಿದೆ ತಂದಾದ ಮೇಲೆ ಕಾಳಸಂತೆಕೋರರಿಗೆ ಅಡ್ಡಿ ಆತಂಕಗಳಿಲ್ಲ. ಮೊದಲು ಇಷ್ಟೇ ದಾಸ್ತಾನಿಡಬೇಕೆಂಬ ಮಿತಿ ಇತ್ತು. ಇವತ್ತು ದಾಸ್ತಾನು ಮಿತಿಯನ್ನು ತೆಗೆದುಹಾಕಿದಾರೆ, ಯಾವ ಆತಂಕವೂ ಇಲ್ಲ. ಕಂಪನಿಗಳು ಸುಗ್ಗಿಕಾಲದಲ್ಲಿ ತಮಗೆಷ್ಟು ಬೇಕೋ ಅಷ್ಟು ಕೊಂಡು ದಾಸ್ತಾನಿಡಬಹುದು. ಅದಕ್ಕೆ ಬೇಕಾದ ಗೋದಾಮುಗಳು, ಶೈತ್ಯಾಗಾರಗಳನ್ನು ಕಟ್ಟಿಕೊಳ್ಳಬಹುದು. ಅದಕ್ಕೆ ಎಷ್ಟು ಬೇಕಾದರೂ ಬ್ಯಾಂಕ್‌ಗಳು ಲೋನ್ ಕೊಡುತ್ತವೆ. ಇನ್ನು ಎಷ್ಟು ಬೇಕೋ ಅಷ್ಟು ಸ್ಟಾಕ್ ಮಾಡಿಕೊಂಡು ಮಾರುಕಟ್ಟೆಯಲ್ಲಿ ಅಭಾವ ಸೃಷ್ಟಿಸಿ ಇಚ್ಛೆ ಬಂದ ಬೆಲೆಗೆ ಮಾರಾಟ ಮಾಡಿಕೊಳ್ಳಬಹುದು."

"ಆ ಹಿನ್ನೆಲೆಯಲ್ಲಿ ದುಡಿಯುವ ವರ್ಗದ ಜನಕ್ಕೆ ತೊಂದರೆ ಆಗುತ್ತದೆ. ಮಾಲ್‌ಗಳು ಬಂದ್ಮೇಲೆ ಬೀದಿ ಬದಿ ಚಪ್ಪಲಿ ಅಂಗಡಿ, ಬಟ್ಟೆ ಅಂಗಡಿಯವರು ಹೋದಂಗೆ ಉದ್ಯೋಗ ನಷ್ಟ ಆಗುತ್ತದೆ. ಕೊಳ್ಳುವ ಶಕ್ತಿ ಕಳೆದೋಗುತ್ತದೆ. ಹೀಗೆ ಶಕ್ತಿ ಕಳಕೊಂಡ ಜನ ದುಬಾರಿ ಬೆಲೆಯ ಆಹಾರ ಉತ್ಪನ್ನಗಳನ್ನು ಕೊಳ್ಳುವುದಕ್ಕಾಗದೆ ಹಸಿವಿನಿಂದ ಸಾಯುವ ಪರಿಸ್ಥಿತಿ ನಿರ್ಮಾಣ ಆಗುತ್ತೆ. ಹಾಗಾಗಿ ಇದು ರೈತ ಚಳುವಳಿ ಅಷ್ಟೇ ಅಲ್ಲ ಯಾರ್ಯಾರು ಊಟ ಮಾಡುತ್ತಾರೋ ಅವರ ಚಳವಳಿ ಆಗಬೇಕಿದು. ಅವರೆಲ್ಲರೂ ಬೆಂಬಲ ಕೊಡಬೇಕು. ಆ ನಿಟ್ಟಿನಲ್ಲಿ ಸ್ವಯಂಪ್ರೇರಿತವಾಗಿ ಕರ್ನಾಟಕ ಬಂದ್ ಆಗಬೇಕು, ಭಾರತ್ ಬಂದ್ ಆಗಬೇಕು."

"ನಮ್ಮ ಶಿವಮೊಗ್ಗ ಜಿಲ್ಲೆಯಲ್ಲೂ ಪ್ರಯತ್ನ ನಡೆದಿದೆ. ಎಲ್ಲಾ ಸಂಘಟನೆಗಳು ರೈತ ಸಂಘ, ದಲಿತ ಸಂಘ, ಪ್ರಗತಿಪರ ಸಂಘಟನೆಗಳು ಕರೆ ಕೊಟ್ಟಿದ್ದೀವಿ. ಎಲ್ಲಾ ಸಂಘಗಳನ್ನು ಭೇಟಿ ಮಾಡಿದ್ದೀವಿ. ಶಿವಮೊಗ್ಗ ಬಂದ್ ಸಂಪೂರ್ಣ ಯಶಸ್ವಿ ಆಗುತ್ತದೆ. ಎಲ್ಲಾ ವರ್ಗದ ಜನರೂ ಕೂಡಾ ಸ್ವಯಂಪ್ರೇರಿತವಾಗಿ ಸಹಕರಿಸಬೇಕು. ಈ ಹಿನ್ನೆಲೆಯಲ್ಲಿ ಬಂದ್ ಅನ್ನು ನಾವೆಲ್ಲರೂ ಸೇರಿ ಯಶಸ್ವಿ ಮಾಡೋಣ. ಎಲ್ಲರೂ ಬೆಂಬಲ ಕೊಡಬೇಕು ಅಂತೇಳಿ ವಿನಂತಿ ಮಾಡ್ತೀನಿ," ಎಂದು ರೈತ ಮುಖಂಡ ಎಚ್. ಆರ್. ಬಸವರಾಜಪ್ಪ ಅಭಿಪ್ರಾಯ ತಿಳಿಸಿದರು.

ಅನುಸೂಯಮ್ಮ, ರೈತ ಮುಖಂಡರು
"ಭಾರತ್ ಬಂದ್ ಎಷ್ಟರ ಮಟ್ಟಿಗೆ ಸಕ್ಸಸ್ ಆಗುತ್ತದೆ ಅಂತಾ ನನಗೆ ಗೊತ್ತಿಲ್ಲ. ಆದರೆ ಆಗ್ಬೇಕು. ನವೆಂಬರ್ 26 ರಿಂದ ರೈತರು ದಿಲ್ಲಿಯಲ್ಲಿ ಕೂತಿದ್ದಾರೆ. ನಾನು ಮೊನ್ನೆ ಉತ್ತರಪ್ರದೇಶಕ್ಕೆ ಹೋಗಿದ್ದೆ. ಯುಪಿನಲ್ಲಿ ಮಹಾಪಂಚಾಯತ್ ಸಭೆಯಲ್ಲಿ ಹದಿನೈದಿಪ್ಪತ್ತು ಲಕ್ಷ ಜನ ಸೇರಿದ್ದರು. ಅದೆಷ್ಟು ಒಗ್ಗಟ್ಟಿದೆ, ಪ್ರತಿಯೊಬ್ಬರಿಗೂ ಎಷ್ಟು ಬದ್ಧತೆ ಇದೆ. ರಾಕೇಶ್ ಟಿಕಾಯತ್ ಒಂದು ಹೇಳಿಕೆಗೆ ಬಂದಂತಹ ಎಲ್ಲರಿಗೂ ಊಟ, ವಸತಿ, ಕುಡಿಯೋ ನೀರು, ಹೋದವರನ್ನೆಲ್ಲಾ ಎಷ್ಟು ಚನ್ನಾಗಿ ನೋಡಿಕೊಂಡರು ನೋಡಿ. ನವೆಂಬರ್ 26ನೇ ತಾರೀಖಿನಿಂದ ಅಚರು ಯಾರೂ ಮನೆಗೆ ಹೋಗಿಲ್ಲ. ಪ್ರತಿಜ್ಞೆ ಮಾಡಿದ್ದಾರೆ. ಮೂರು ಕಾಯಿದೆ ವಾಪಸ್ ತಗೋಳಿ ನಾವು ಮನೆಗೆ ಹೋಗ್ತೀವಿ ಅಂತಾ ಹೇಳಿದಾರೆ."

"ಅಲ್ಲಿ ಬಂದಂತವರಿಗೆ ವ್ಯವಸ್ಥಿತವಾಗಿ ಎಲ್ಲಾ ನೋಡ್ಕೊಂಡ್ರು. ನಮ್ಮಲ್ಲಾದ್ರೆ ಆ ಪಕ್ಷ, ಈ ಪಕ್ಷ. ಆ ಮನೇವ್ರು, ಈ ಮನೇವ್ರು ಅಂತಾರೆ. ಒಂದು ಹೆಣ್ಮಗಳನ್ನು ಮಾತನಾಡಿಸಿದರೆ ನಾನು ದೊಡ್ಡವಳಾದ್ಮೇಲೆ ರೈತ ಸಂಘಟನೆಗೆ ಸೇರ್ತೀನಿ, ಈಗ ಒದುತ್ತಾ ಇದ್ದೀನಿ ಅಂತಾಳೆ. ಎಲ್ಲರೂ ದಾಸೋಹ ಮಾಡುತ್ತಿದ್ದರು. ಕರ್ನಾಟಕದಿಂದ ನಾವು 8 ಮಂದಿ ಕೇರಳದಿಂದ ಮತ್ತು ತಮಿಳುನಾಡಿನಿಂದ ಇಬ್ಬಿಬ್ಬರು ಬಂದಿದ್ರು. ನಮ್ಮನ್ನು ಒಂದು ಮನೇಲಿ ಇರಿಸಿದ್ರು. ನಮ್ಮನೆಲೇ ಇದ್ದೀವೇನೋ ಅನ್ನುವ ಹಾಗಿತ್ತು. ಚಳವಳಿ ದಿನೇ ದಿನೇ ಗಟ್ಟಿ ಆಗುತ್ತಿದೆ. ಪ್ರಭುತ್ವದ ವಿರುದ್ಧ ಸಿಡಿದೆದ್ದಿದೆ."

"ಬಿಜೆಪಿ ಸರ್ಕಾರಕ್ಕೆ ಸಾಮಾಜಿಕ ಕಳಕಳಿ ಇಲ್ಲ. ಪ್ರತಿಯೊಂದೂ ಹೇರುವುದೇ ಕೆಲಸ ಅವ್ರಿಗೆ. ಸಂವಿಧಾನನೇ ಗೊತ್ತಿಲ್ಲ. ಯಾವುದಕ್ಕೂ ಜನಾಭಿಪ್ರಾಯ ತಗೊಳಲ್ಲ. ಹಿಟ್ಲರ್ ಕೂಡಾ ಈ ಮಟ್ಟಿಗೆ ಮಾಡಿದ್ನೋ ಇಲ್ವೋ! ಇಲ್ಲಿ ಕಾರ್ಮಿಕರು, ಮಹಿಳೆಯರು, ರೈತರು, ಅಲ್ಪಸಂಖ್ಯಾತರು ಎಲ್ಲರಿಗೂ ಸ್ವಾಭಿಮಾನಕ್ಕೆ ಧಕ್ಕೆ ಉಂಟಾಗ್ತಿದೆ. ಉದ್ಯೋಗ ಸೃಷ್ಟಿ ಮಾಡ್ತೀನಿ ಅಂದ್ರು. ಇರುವ ಕೆಲಸಗಳನ್ನೇ ಕಳೆದರು. ಸ್ವಾತಂತ್ರ್ಯ ಹೋರಾಟಗಾರರ ಸಮಾಧಿ ಮೇಲೆ ನಾವು ಬದುಕ್ತಿದ್ದೀವಿ."

"ಭಾಜಪ ಮಂದಿ ಯಾರೂ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದವರಲ್ಲ. ಅವರು ಫ್ರೆಂಚರ ಆಡಳಿತದಲ್ಲಿ ಫ್ರೆಂಚ್ ಬಾಷೆ ಕಲಿತು ಒಳ್ಳೊಳ್ಳೆ ಕೆಲಸ ಗಿಟ್ಟಿಸಿಕೊಂಡರು. ಬ್ರಿಟೀಷರ ಆಡಳಿತದಲ್ಲಿ ಇಂಗ್ಲೀಷ್ ಕಲಿತು ನಮ್ಮ ಮೇಲೆ ಕತ್ತಿ ಮಸೆದರು. ಹಂಗಾಗಿ ನಿಜವಾದ ಸ್ವಾತಂತ್ರ್ಯ ಏನು ಅನ್ನೋದು ಇವರಿಗೆ ಗೊತ್ತಿಲ್ಲ. ಸ್ವಾವಲಂಬಿ, ಸ್ವಾಭಿಮಾನದ ಜೀವನದ ಬಗ್ಗೆ ಇವರಿಗೆ ಅರಿವಿಲ್ಲ. ಇಷ್ಟೊತ್ತಿಗೆ ಕ್ರಾಂತಿ ಆಗ್ಬೇಕಿತ್ತು. ಜನಗಳು ನರಸತ್ತವರು ಅನ್ನಬೇಕಾಗುತ್ತೆ. ಆ ಪದ ಉಪಯೋಗಿಸಬಾರ್ದೇನೋ, ನಮಗೇನೇ ರಕ್ತ ಕುದಿಯುತ್ತೆ. ಜಾತಿ, ಧರ್ಮ, ದೇವರು ಇಟ್ಟುಕೊಂಡು ರಾಜಕೀಯ ನಡೀತಿದೆ. ಧರ್ಮ ರಾಜಕೀಯಕ್ಕೆ ಬರಬಾರದು. ಅದು ಮನೇಲಿರೋ ವಿಷಯ. ಕುವೆಂಪು ಅಂದು ಮಠ, ಮಂದಿರ, ಮಸೀದಿಗಳ ಬಿಟ್ಟು ಹೊರಬನ್ನಿ ಅಂದಿದ್ದರು. ಇವರು ಅದರಲ್ಲೇ ರಾಜಕಾರಣ ಮಾಡುವವರು."

"ಮೊನ್ನೆ ನಾವು ಉತ್ತರಪ್ರದೇಶಕ್ಕೆ ಹೋದಾಗ ಬಿಹಾರ್ ರಾಜ್ಯದ ಮಂತ್ರಿಗಳು ರಾಜೀನಾಮೆ ಕೊಟ್ಟು ಬಂದಿದ್ದರು. ಯಾಕೆ ಅಂದ್ರೆ ಅಲ್ಲಿ ಪಠ್ಯಕ್ರಮದಲ್ಲಿ ಜೆ.ಪಿ, ಲೋಹಿಯಾ ಅವರನ್ನೆಲ್ಲಾ ತೆಗೆದು ಹಾಕಿದಾರೆ. ಅವನ್ಯಾರೋ ಜನಸಂಘ ಕಟ್ಟಿದವನನ್ನು ಅಳವಡಿಸಿಕೊಂಡಿದ್ದಾರೆ. ಇತಿಹಾಸದ ಬಗ್ಗೆ ಮಕ್ಕಳಿಗೆ ಹೇಳಿಕೊಡುತ್ತಿಲ್ಲ ಅಂತಾ ಅವರು ರಾಜೀನಾಮೆ ಕೊಟ್ಟದ್ದು. ಇವರ ಮೂಗಿನ ನೇರಕ್ಕೆ ಪಠ್ಯ ಮಾಡುವುಕ್ಕಾಗ್ತದಾ? ಇಷ್ಟೆಲ್ಲಾ ನಡೀತಿರೋ ದೇಶದಲ್ಲಿ ಈಗ ಭಾರತ್ ಬಂದ್‌ಗೆ ಎಲ್ಲರೂ ಜೊತೆಯಾಗಬೇಕು. ಹಂಗಾದ್ರೂ ಸರ್ಕಾರ ಎಚ್ಚೆತ್ಕೊಳ್ಳುತ್ತಾ ನೋಡ್ಬೇಕು. ಭಾರತ್ ಬಂದ್ ಯಶಸ್ವಿ ಆಗ್ಲಿ ಅಂತಾ ಹಾರೈಸ್ತೀನಿ," ಎಂದು ರೈತ ಮುಖಂಡೆ ಅನಸೂಯಮ್ಮ ಹೇಳಿದರು.

English summary
Oneindia Kannada has spoken to Karnataka farmer leaders HR Basavarajappa And Anasuyamma about the Bharat Bandh on September 27 preparation against Union Govt Farm Laws.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X