ಚೌಡಹಳ್ಳಿಯಲ್ಲಿ ಮತ್ತೆ ಹುಲಿ ದಾಳಿ; ತಿಂಗಳಲ್ಲೇ ಮತ್ತೊಬ್ಬ ರೈತ ಬಲಿ
ಗುಂಡ್ಲುಪೇಟೆ, ಅಕ್ಟೋಬರ್ 8: ಇಡೀ ನಾಡು ನವರಾತ್ರಿ ಸಂಭ್ರಮದಲ್ಲಿರುವಾಗಲೇ ಚೌಡಹಳ್ಳಿಯಲ್ಲಿ ರೈತನೊಬ್ಬನ ಮೇಲೆ ಹುಲಿ ದಾಳಿ ನಡೆಸಿ ಬಲಿ ಪಡೆದುಕೊಂಡಿದೆ. ಗೋಪಾಲ ಸ್ವಾಮಿ ಬೆಟ್ಟ ವಲಯದ ಚೌಡಹಳ್ಳಿ ಗ್ರಾಮದ ಬಳಿ ಜಮೀನಿನಲ್ಲಿ ಹಸುಗಳನ್ನು ಮೇಯಿಸುತ್ತಿದ್ದಾಗ ಶಿವಲಿಂಗಪ್ಪ (60) ಎಂಬುವರ ಮೇಲೆ ಹುಲಿ ದಾಳಿ ಮಾಡಿ ಕೊಂದು ಹಾಕಿದೆ.
ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಹುಲಿ ದಾಳಿಗೆ ರೈತನೊಬ್ಬ ಪ್ರಾಣ ಕಳೆದುಕೊಂಡು ತಿಂಗಳು ಕಳೆಯುವುದರೊಳಗೆ ಮತ್ತೊಬ್ಬ ರೈತನನ್ನು ಹುಲಿ ಕೊಂದು ಹಾಕಿರುವುದು ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ.
ಹುಲಿ ದಾಳಿಯ ಸುದ್ದಿ ತಿಳಿದ ಗ್ರಾಮಸ್ಥರ ಗದ್ದಲಕ್ಕೆ ಸ್ಥಳದಲ್ಲೇ ಅಡಗಿದ್ದ ಹುಲಿ ಜನರ ಮಧ್ಯೆ ಘರ್ಜಿಸುತ್ತ ಕಾಡಿನತ್ತ ಓಡಿದೆ. ಹುಲಿ ಕಾಣಿಸಿಕೊಂಡದ್ದರಿಂದ ಜನರು ಭಯಭೀತರಾಗಿ ಓಡಿದ್ದಾರೆ.

ಸ್ಥಳಕ್ಕೆ ಬಂಡೀಪುರ ಅರಣ್ಯಾಧಿಕಾರಿಗಳು ಹಾಗೂ ಸಿಬ್ಬಂದಿ ತಡವಾಗಿ ಭೇಟಿ ನೀಡಿದ್ದಾರೆ ಮತ್ತು ಹುಲಿ ದಾಳಿಯಿಂದ ಗ್ರಾಮಸ್ಥರ ರಕ್ಷಣೆಗೆ ಸೂಕ್ತ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು. ಅಧಿಕಾರಿಗಳು ಕಾಟಾಚಾರದ ಶೋಧ ಕಾರ್ಯಾಚರಣೆ ಮಾಡುತ್ತಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.











Click it and Unblock the Notifications