ಪರಿಹಾರ ಸಿಗಲಿಲ್ಲವೆಂದು ಆತ್ಮಹತ್ಯೆ ಮಾಡಿಕೊಂಡ ಮೂಡಿಗೆರೆ ರೈತ
ಚಿಕ್ಕಮಗಳೂರು, ಅಕ್ಟೋಬರ್ 3: ಪ್ರವಾಹದಿಂದಾಗಿ ಆಸ್ತಿ ಪಾಸ್ತಿ ಕಳೆದುಕೊಂಡು, ಹಾನಿಯಾದ ಬೆಳೆಗೆ ಸೂಕ್ತ ಪರಿಹಾರ ದೊರಕದ್ದಕ್ಕೆ ಮನನೊಂದು ರೈತರೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮೂಡಿಗೆರೆ ತಾಲೂಕಿನ ಕಳಸ ಸಮೀಪದ ಎಸ್.ಕೆ.ಮೇಗಲ್ ಗ್ರಾಮದಲ್ಲಿ ನಡೆದಿದೆ.
ಚಂದ್ರೇಗೌಡ (55) ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ರೈತ. ಆಗಸ್ಟ್ ನಲ್ಲಿ ಸಂಭವಿಸಿದ್ದ, ಮಳೆ ಪ್ರವಾಹದಿಂದ ಅವರ ಅರ್ಧ ಎಕರೆ ಭತ್ತದ ಗದ್ದೆ, ಅರ್ಧ ಎಕರೆ ಕಾಫಿ ತೋಟ ಸಂಪೂರ್ಣ ಹಾಳಾಗಿತ್ತು. ಸರ್ಕಾರದ ಬೆಳೆ ಹಾನಿ ಪರಿಹಾರವನ್ನೇ ನಂಬಿ, ಈ ತೋಟವನ್ನು ಸರಿಪಡಿಸಲೆಂದು ಚಂದ್ರೇಗೌಡ ಕೈ ಸಾಲ ಮಾಡಿಕೊಂಡಿದ್ದರು. ಆದರೆ ಸರ್ಕಾರದಿಂದ ಪರಿಹಾರ ಸಿಗದಿದ್ದರಿಂದ ಬೇಸರಗೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.

ಕಳಸ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ. ಸೆಪ್ಟೆಂಬರ್ ನಲ್ಲೂ ಮೂಡಿಗೆರೆಯ ಕಳಸ ಬಳಿಯ ಕಾರಗದ್ದೆ ಎಂಬಲ್ಲಿ ಚನ್ನಪ್ಪಗೌಡ (65) ಎಂಬುವವರು ಇದೇ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದರು. ನೆರೆಯಿಂದಾಗಿ ಬೆಟ್ಟ-ಗುಡ್ಡ ಕುಸಿದು ಇವರ ಐದು ಎಕರೆ ಕಾಫಿ ತೋಟ ಹಾಳಾಗಿ ಬೆಳೆಯೂ ನೀರುಪಾಲಾಗಿದ್ದರಿಂದ ತಮ್ಮ ತೋಟದಲ್ಲಿ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಇದೀಗ ಮತ್ತೆ ಅಂಥದ್ದೇ ಪ್ರಕರಣ ನಡೆದಿದೆ.












Click it and Unblock the Notifications