ಸಾಲಮನ್ನಾ ಮಾಡಿಯೂ ಮಂಡ್ಯದಲ್ಲಿ ಮುಂದುವರೆದ ರೈತರ ಆತ್ಮಹತ್ಯೆ
ಮಂಡ್ಯ, ಜನವರಿ 24: ಒಂದು ಕಡೆ ಸರ್ಕಾರದ ವತಿಯಿಂದ ಸಾಧನಾ ಸಮಾವೇಶ ನಡೆಯುತ್ತಿದ್ದರೆ, ಮತ್ತೊಂದೆಡೆ ವಿರೋಧಪಕ್ಷ ಬಿಜೆಪಿ ಪರಿವರ್ತನಾಯಾತ್ರೆ ನಡೆಸುತ್ತಿದೆ. ಆದರೆ ಸಾಲಬಾಧೆಯಿಂದ ರೈತ ಸರಣಿ ಆತ್ಮಹತ್ಯೆ ಮಾಡಿಕೊಳ್ಳುವುದು ಮಾತ್ರ ನಿಲ್ಲದೆ ಮುಂದುವರೆದಿದೆ.
ಈಗಾಗಲೇ ಮಂಡ್ಯ ಜಿಲ್ಲೆಯಲ್ಲಿ ಅತಿ ಹೆಚ್ಚು ರೈತರು ಆತ್ಮಹತ್ಯೆಗೆ ಶರಣಾಗಿರುವುದು ಆತಂಕ ಸೃಷ್ಠಿಸಿದೆ. ಇದೀಗ ಪಾಂಡವಪುರ ಬಳಿ ಮತ್ತೊಂದು ಆತ್ಮಹತ್ಯೆ ನಡೆದಿದೆ. ಬಸವರಾಜು(30) ಎಂಬಾತನೇ ಆತ್ಮಹತ್ಯೆಗೆ ಶರಣಾದ ರೈತ.
ಮೃತ ಬಸವರಾಜು ತಮ್ಮ ಮೂವರು ಸಹೋದರರ ಜತೆ ಒಂದೇ ಮನೆಯಲ್ಲಿ ವಾಸವಾಗಿದ್ದರು. ಆದರೆ, ಕಳೆದ ಮೂರ್ನಾಲ್ಕು ವರ್ಷದಿಂದ ಬಸವರಾಜು ಬೇಸಾಯವನ್ನು ಪ್ರತ್ಯೇಕವಾಗಿ ಮಾಡುತ್ತಿದ್ದರು ಎನ್ನಲಾಗಿದೆ.

ಬಸವರಾಜು ಹೆಸರಿನಲ್ಲಿ ಯಾವುದೇ ಜಮೀನು ಇಲ್ಲದ ಹಿನ್ನೆಲೆಯಲ್ಲಿ ಬೇಸಾಯಕ್ಕಾಗಿ ಸುಮಾರು 3 ಲಕ್ಷ ರೂ. ಹಣವನ್ನು ಕೈಸಾಲ ಮಾಡಿದ್ದರು. ಆದರೆ ಕಳೆದೆರಡು ವರ್ಷದಿಂದ ಬರಗಾಲದ ಹಿನ್ನೆಲೆಯಲ್ಲಿ ಯಾವುದೇ ಬೆಳೆಯೂ ಕೈಸೇರಿರಲಿಲ್ಲ.
ಇತ್ತೀಚಿನ ದಿನಗಳಲ್ಲಿ ಸಾಲಗಾರರ ಹಾವಳಿ ಹೆಚ್ಚಾದ ಹಿನ್ನೆಲೆಯಲ್ಲಿ ಬಸವರಾಜು ಸೋಮವಾರ ಸಂಜೆ ತಮ್ಮ ಜಮೀನಿನ ಬಳಿ ಕ್ರಿಮಿನಾಶಕ ಸೇವಿಸಿದ್ದಾರೆ. ತಕ್ಷಣ ಅವರನ್ನು ಚಿಕಿತ್ಸೆಗಾಗಿ ಪಾಂಡವಪುರಕ್ಕೆ ಕರೆತಂದಿದ್ದು ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಬಸವರಾಜು ಮೃತಪಟ್ಟಿದ್ದಾರೆ.
ಮೃತರಿಗೆ ಪತ್ನಿ, ಇಬ್ಬರು ಪುತ್ರಿಯರಿದ್ದಾರೆ. ಈ ಸಂಬಂಧ ಮೃತ ರೈತ ಬಸವರಾಜು ಸೋದರ ಸಿದ್ದಲಿಂಗಸ್ವಾಮಿ ನೀಡಿದ ದೂರಿನ ಮೇರೆಗೆ ಪಾಂಡವಪುರ ಪಟ್ಟಣ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.












Click it and Unblock the Notifications