ನಕಲಿ ಬಿತ್ತನೆ ಬೀಜದಿಂದ ನಷ್ಟವಾದರೆ ರೈತರಿಗೆ ಪರಿಹಾರವಿಲ್ಲ
ದಾವಣಗೆರೆ, ಮೇ 31: ದಾವಣಗೆರೆ ಜಿಲ್ಲೆಯಲ್ಲಿ ಉತ್ತಮ ಮಳೆಯಾಗಿದ್ದು ರೈತರು ಕೃಷಿ ಚಟುವಟಿಕೆ ಆರಂಭಿಸಿದ್ದಾರೆ. ಬಿತ್ತನೆಗೆ ತಯಾರಿ ನಡೆಸುತ್ತಿದ್ದು, ನಕಲಿ ಬಿತ್ತನೆ ಬೀಜದ ಕುರಿತು ಎಚ್ಚರಿಕೆಯಿಂದ ಇರುವಂತೆ ಸೂಚನೆ ನೀಡಲಾಗಿದೆ.
ಉತ್ತಮ ಇಳುವರಿಯನ್ನು ಪಡೆಯಲು ಬಿತ್ತನೆ ಬೀಜಗಳು ಸಹ ಬಹುಮುಖ್ಯ ಪಾತ್ರವಹಿಸುತ್ತವೆ. ಒಂದು ವೇಳೆ ನಕಲಿ ಬಿತ್ತನೆ ಬೀಜವನ್ನು ಖರೀದಿಸಿ ಬೆಳೆ ನಷ್ಟವಾದರೆ ರೈತರಿಗೆ ಸರ್ಕಾರದಿಂದ ಪರಿಹಾರ ಸಹ ಸಿಗುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.
ಕೃಷಿ ಇಲಾಖೆಯಿಂದ ಜಿಲ್ಲೆಯ ರೈತ ಸಂಪರ್ಕ ಕೇಂದ್ರಗಳಲ್ಲಿ ಹಾಗೂ ಕೆಲವು ಸಹಕಾರಿ ಸಂಘಗಳಲ್ಲಿ ರಿಯಾಯಿತಿ ದರದಲ್ಲಿ ವಿವಿಧ ಬಿತ್ತನೆ ಬೀಜಗಳನ್ನು ವಿತರಣೆ ಮಾಡಲಾಗುತ್ತಿದೆ. ಕೃಷಿ ಪರಿಕರ ಮಾರಾಟ ಮಳಿಗೆಗಳಲ್ಲಿ ದೃಢೀಕೃತ ಬಿತ್ತನೆ ಬೀಜಗಳು ಲಭ್ಯವಿದೆ.

ಕೆಲವು ವ್ಯಕ್ತಿಗಳು ವಿವಿಧ ಕಂಪನಿಗಳ ಕ್ಷೇತ್ರ ಸಹಾಯಕರು ಎಂದು ಹಳ್ಳಿಗಳಿಗೆ ಭೇಟಿ ನೀಡುತ್ತಿದ್ದಾರೆ. ಕಳಪೆ ಮತ್ತು ಬಿಡಿ ಬಿತ್ತನೆ ಬೀಜಗಳನ್ನು ರೈತರಿಗೆ ನೇರವಾಗಿ ಮಾರಾಟ ಮಾಡುತ್ತಿರುವ ಪ್ರಕರಣಗಳು ಸಹ ಕಂಡುಬಂದಿದೆ.
ರೈತರು ಬಿಡಿ ಬೀಜಗಳನ್ನು ಖರೀದಿಸಿ, ಬಿತ್ತನೆ ಮಾಡಿ ನಷ್ಟ ಅನುಭವಿಸಿದಲ್ಲಿ ಯಾವುದೇ ದಾಖಲೆಗಳು ಇಲ್ಲದ ಕಾರಣದಿಂದ ಪರಿಹಾರ ಪಡೆಯಲು ಅರ್ಹರಾಗಿರುವುದಿಲ್ಲ. ಈ ನಷ್ಟಕ್ಕೆ ರೈತರು ನೇರ ಹೊಣೆಯಾಗುತ್ತಾರೆ.
ರೈತರು ಬಿಡಿ ಬಿತ್ತನೆ ಬೀಜ ಮಾರಾಟ ಜಾಲಕ್ಕೆ ಸಿಲುಕಿಕೊಳ್ಳದೇ ಕೃಷಿ ಇಲಾಖೆ/ಅಧಿಕೃತ ಮಾರಾಟಗಾರರಿಂದಲೇ ಬೀಜ ಖರೀದಿಸಿ ಬಿತ್ತನೆ ಮಾಡಬೇಕು. ಯಾವುದೇ ಕಾರಣಕ್ಕೂ ಬಿಡಿ ಬೀಜಗಳನ್ನು ಅನಧಿಕೃತ ಮೂಲಗಳಿಂದ ಖರೀದಿಸಬಾರದು ಎಂದು ಸೂಚಿಸಲಾಗಿದೆ.
ನಕಲಿ, ಅನಧಿಕೃತ ಲೂಸ್ ಬಿತ್ತನೆ ಬೀಜಗಳನ್ನು ದಾಸ್ತಾನು ಹಾಗೂ ಮಾರಾಟ ಮಾಡುವವರು ಕಂಡುಬಂದರೆ ಸ್ಥಳೀಯ ರೈತ ಸಂಪರ್ಕ ಕೇಂದ್ರಕ್ಕೆ ಮಾಹಿತಿ ನೀಡಲು ಮನವಿ ಮಾಡಲಾಗಿದೆ.












Click it and Unblock the Notifications