ಬೇಸಿಗೆ ಅರಂಭ, ಕೃಷಿ ಪಂಪ್‌ಸೆಟ್‌ಗಳಿಗೆ ವಿದ್ಯುತ್: ರೈತರಿಗೆ ವಿಶೇಷ ಮನವಿ
ಬೆಂಗಳೂರು, ಫೆಬ್ರವರಿ 18: ಬೇಸಿಗೆ ಆರಂಭವಾಗಿದ್ದು ಕೃಷಿ ಚಟುವಟಿಕೆಗಳಿಗೆ ವಿದ್ಯುತ್ ಬಳಕೆ ಹೆಚ್ಚಾಗುತ್ತಿದೆ. ಸರ್ಕಾರ ರೈತರಿಗೆ 7 ಗಂಟೆಗಳ ವಿದ್ಯುತ್ ನೀಡುವುದಾಗಿ ಭರವಸೆ ಕೊಟ್ಟಿದೆ. ಕಳೆದ ವರ್ಷ ನೈಋತ್ಯ ಮುಂಗಾರು ಮಳೆ ಉತ್ತಮವಾಗಿ ಸುರಿದಿದ್ದು, ಡ್ಯಾಂಗಳು ಭರ್ತಿಯಾಗಿವೆ. ಆದ್ದರಿಂದ ವಿದ್ಯುತ್ ಉತ್ಪಾದನೆ, ಪೂರೈಕೆಗೆ ಯಾವುದೇ ಸಮಸ್ಯೆ ಆಗುವುದಿಲ್ಲ ಎಂದು ಅಂದಾಜಿಸಲಾಗಿದೆ. ಬೇಸಿಗೆಯಲ್ಲಿ ರಾಜ್ಯಕ್ಕೆ ಪ್ರತಿದಿನ 19,000 ಮೆಗಾವಾಟ್ ವಿದ್ಯುತ್ ಬೇಕಾಗಬಹುದು ಎಂದು ಅಂದಾಜಿಸಲಾಗಿದೆ.
ಕೃಷಿ ಚಟುವಟಿಕೆ ನಡೆಯುವ ರೈತರಿಗೆ ವಿದ್ಯುತ್ ಬಳಕೆ ಕುರಿತು ವಿದ್ಯುತ್ ಸರಬರಾಜು ಕಂಪನಿಗಳು ಮನವಿಯೊಂದನ್ನು ಮಾಡಿವೆ. ರೈತರು ಸಂಜೆ 6 ರಿಂದ ಬೆಳಗ್ಗೆ 6ರ ತನಕ ಸಿಂಗಲ್ ಫೇಸ್ ಕೃಷಿ ಪಂಪ್‍ಗಳನ್ನು ಬಳಸದಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ.

ರೈತರು ರಾತ್ರಿ ವೇಳೆ ಸಿಂಗಲ್ ಫೇಸ್ ವಿದ್ಯುತ್ ಅನ್ನು ಕೃಷಿ ಪಂಪ್‍ಸೆಟ್‍ಗಳಿಗೆ ಬಳಸುತ್ತಿರುವುದರಿಂದ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗುತ್ತಿದೆ. ಹೀಗಾಗಿ ರೈತರು ಸಂಜೆ 6 ರಿಂದ ಬೆಳಗ್ಗೆ 6ರ ಅವಧಿಯಲ್ಲಿ ಸಿಂಗಲ್ ಫೇಸ್ ಕೃಷಿ ಪಂಪ್‍ಗಳನ್ನು ಬಳಸಬಾರದು ಎಂದು ಸೂಚಿಸಲಾಗಿದೆ.
ರೈತರಿಗೆ ಎಷ್ಟು ವಿದ್ಯುತ್ ಲಭ್ಯ?; ರೈತರ ಪಂಪ್ ಸೆಟ್‍ಗಳಿಗೆ ಹಗಲಿನ ವೇಳೆ 4 ಗಂಟೆ ಮತ್ತು ರಾತ್ರಿ ವೇಳೆ 3 ಗಂಟೆಗಳ ಕಾಲ ಮೂರು ಫೇಸ್ ವಿದ್ಯುತ್ ಹಾಗೂ ಗ್ರಾಮಾಂತರ ಪ್ರದೇಶದಲ್ಲಿನ ಮನೆಗಳಿಗೆ ನಿರಂತರ ಜ್ಯೋತಿ ಫೀಡರ್ ಮೂಲಕ ದಿನದ 24 ಗಂಟೆಗಳ ಕಾಲ ವಿದ್ಯುತ್ ಸರಬರಾಜು ಮಾಡಲು ರಾಜ್ಯ ಸರ್ಕಾರ ಬದ್ಧವಾಗಿದೆ ಎಂದು ಹೇಳಿದೆ.
ಇದನ್ನು ಹೊರತುಪಡಿಸಿ ನೀರಾವರಿ ಫೀಡರ್‌ಗಳ ಮೂಲಕ ತೋಟದ ಮನೆಗಳಿಗೆ ಗೃಹಪಯೋಗಿ ಬಳಕೆಗೆ ಮಾತ್ರ ಹಾಗೂ ಅಲ್ಲಿ ವಾಸಿಸುವ ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ಸಿಂಗಲ್ ಫೇಸ್ ವಿದ್ಯುತ್ ಅನ್ನು ಸಂಜೆ 6 ರಿಂದ ಬೆಳಗ್ಗೆ 6ರ ತನಕ (ಮೂರು ಗಂಟೆಗಳ ಮೂರು ಫೇಸ್ ವಿದ್ಯುತ್ ಹೊರತಾಗಿ) ಫೀಡರ್‌ಗಳಿಗೆ ಓಪನ್ ಡೆಲ್ಟಾ ಮೂಲಕ ನೀಡಲಾಗುತ್ತದೆ.
ಆದರೆ ರಾತ್ರಿ ವೇಳೆ ಕೆಲವರು ಸಿಂಗಲ್ ಫೇಸ್ ಕೃಷಿ ಪಂಪ್‍ಸೆಟ್‍ಗಳನ್ನು ಫೀಡರ್ ಮೂಲಕ ಬಳಸುತ್ತಿರುವುದರಿಂದ, ವಿದ್ಯುತ್ ಪೂರೈಕೆಯಲ್ಲಿ ತೊಂದರೆ ಉಂಟಾಗುತ್ತಿದೆ. ಹೀಗಾಗಿ ರೈತರು ಈ ಅವಧಿಯಲ್ಲಿ ಸಿಂಗಲ್ ಫೇಸ್ ಕೃಷಿ ಪಂಪ್‍ಗಳನ್ನು ಬಳಸಬಾರದು. ವಿದ್ಯುತ್ ಸರಬರಾಜು ಕಂಪನಿಗಳ ಜೊತೆ ಸಹಕಾರ ನೀಡಬೇಕು ಎಂದು ಮನವಿ ಮಾಡಲಾಗಿದೆ.
ಕೃಷಿ ಚಟುವಟಿಕೆಗೆ ವಿದ್ಯುತ್ ಪೂರೈಕೆ ಬಗ್ಗೆ ಇಂಧನ ಸಚಿವ ಕೆ. ಜೆ. ಜಾರ್ಜ್ ಮಾತನಾಡಿದ್ದಾರೆ, "ರಾಜ್ಯ ಸರ್ಕಾರ ರೈತರ ಪರವಾಗಿದೆ. ಪ್ರತಿದಿನ 7 ತಾಸು ಕರೆಂಟ್ ಕೊಡಲು ವ್ಯವಸ್ಥೆ ಮಾಡಿದ್ದೇವೆ. ನಿರಂತರ ಜ್ಯೋತಿ ಮಾಡಿರುವುದರಿಂದ ಹಲವು ಕಡೆ ವೋಲ್ಟೇಜ್ ಸಮಸ್ಯೆ ಆಗುತ್ತಿದೆ" ಎಂದು ಹೇಳಿದ್ದಾರೆ.
"ವಿದ್ಯುತ್ ಟ್ರಾನ್ಸ್‌ಫಾರ್ಮರ್ 500 ಮೀಟರ್ ಒಳಗಡೆ ಇದ್ದರೆ ಇಲಾಖೆಯೇ ಕಂಬ, ತಂತಿ ಸೌಲಭ್ಯವನ್ನು ನೀಡಲಿದೆ. 500 ಮೀಟರ್‌ಗಿಂತ ದೂರವಿದ್ದರೆ ಕುಸುಮ್-ಬಿ ಯೋಜನೆಯಡಿ ಕೇಂದ್ರ ಸರ್ಕಾರದ ಪಾಲು 50, ರಾಜ್ಯ ಸರ್ಕಾರ ಪಾಲು ಶೇ 30 ಹಾಗೂ ರೈತರ ಪಾಲು ಶೇ 20ರಷ್ಟು ವಂತಿಕೆ ಪಾವತಿಸಿದರೆ ಸೌಲಭ್ಯ ಕಲ್ಪಿಸಲಾಗುತ್ತದೆ" ಎಂದು ಸಚಿವರು ತಿಳಿಸಿದ್ದಾರೆ.












Click it and Unblock the Notifications